ಜಪಾನ್‌ ಮಹಿಳೆಯರಿಗೆ ಸಾಟಿಯಿಲ್ಲ... ಕುಸ್ತಿ ಸ್ಪರ್ಧೆಗೆ ಶತಮಾನಗಳ ಇತಿಹಾಸವಿದೆಯಾದರೂ, ಮಹಿಳೆಯರ ಕುಸ್ತಿಗೆ ಒಲಿಂಪಿಕ್ಸ್‌ನಲ್ಲಿ ಇತ್ತೀಚೆಗಷ್ಟೆ ಅವಕಾಶ ಲಭಿಸಿತ್ತು. 2004ರ ಅಥೆನ್ಸ್‌ ಕೂಟದಲ್ಲಿ ಮೊದಲ ಬಾರಿಗೆ ಮಹಿಳಾ ಕುಸ್ತಿಪಟುಗಳು ಪೈಪೋಟಿ ನಡೆಸಿದ್ದರು. ಆದರೆ ವಿಶ್ವಚಾಂಪಿಯನ್‌ಪಿಪ್‌ ಮತ್ತು ಏಷ್ಯನ್‌ ಚಾಂಪಿಯನ್‌ಷಿಪ್‌ಗಳಲ್ಲಿ ಮಹಿಳೆಯರು ಹಿಂದಿನಿಂದಲೂ ಛಾಪು ಮೂಡಿಸಿದ್ದಾರೆ. ಮಹಿಳಾ ಕುಸ್ತಿಯಲ್ಲಿ ಜಪಾನ್‌ ಪ್ರಮುಖ ಶಕ್ತಿ ಎನಿಸಿದ್ದು, ಏಷ್ಯಾ ಮಾತ್ರವಲ್ಲ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಸಾಕ್ಷಿ ಮಲಿಕ್‌ ರಿಯೊದಲ್ಲಿ ಮಾಡಿದ ಸಾಧನೆ ಭಾರತದ ಮಟ್ಟಿಗೆ ಮಹತ್ವದ್ದಾಗಿದೆ. ಆದರೆ ವಿಶ್ವದ ಇತರ ದೇಶಗಳು ಮಹಿಳಾ ಕುಸ್ತಿಯಲ್ಲಿ ಭಾರತಕ್ಕಿಂತ ಎಷ್ಟೋ ಹೆಜ್ಜೆಗಳನ್ನು ಮುಂದಿಟ್ಟಿವೆ. ಜಪಾನ್‌ ಅಲ್ಲದೆ ರಷ್ಯಾ, ಚೀನಾ, ಅಮೆರಿಕ, ಉಕ್ರೇನ್‌ ಮತ್ತು ಕೆನಡಾದ ಕುಸ್ತಿಪಟುಗಳು ಜಾಗತಿಕಮಟ್ಟದಲ್ಲಿ ಮಿಂಚು ಹರಿಸಿದ್ದಾರೆ. ಜಪಾನ್‌, ಚೀನಾ ಪ್ರಾಬಲ್ಯ ಏಷ್ಯನ್‌ ಚಾಂಪಿಯನ್‌ಷಿಪ್‌ಗಳಲ್ಲಿ ಜಪಾನ್‌ ಮತ್ತು ಚೀನಾ ಪ್ರಾಬಲ್ಯ ಸಾಧಿಸಿವೆ. 2005 ರ ಬಳಿಕ ನಡೆದಿರುವ 12 ಏಷ್ಯನ್‌ ಚಾಂಪಿಯನ್‌ಷಿಪ್‌ಗಳಲ್ಲಿ ಮಹಿಳೆಯರ ಫ್ರೀಸ್ಟೈಲ್‌ ಕುಸ್ತಿಯಲ್ಲಿ ಜಪಾನ್‌ ಮತ್ತು ಚೀನಾದ ತಂಡಗಳು ತಲಾ ಆರು ಸಲ ಪ್ರಶಸ್ತಿ ಗೆದ್ದುಕೊಂಡಿವೆ. 2005ರ ನಂತರ ನಡೆದ 11 ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಜಪಾನ್‌ ತಂಡ 9 ರಲ್ಲಿ ಚಾಂಪಿಯನ್‌ ಆಗಿದೆ. ಕ್ಯೋಕೊ ಹಮಗುಚಿ, ಕವೊರಿ ಇಚೊ ಮತ್ತು ಸೊವೊರಿ ಯೊಶಿದಾ ಅವರು ಜಪಾನ್‌ನ ಕೀರ್ತಿ ಹೆಚ್ಚಿಸಿದ್ದಾರೆ. ಈ ಹಿಂದಿನ ಮೂರು ಒಲಿಂಪಿಕ್ಸ್‌ಗಳಲ್ಲಿ ಮಹಿಳೆಯರಿಗೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದವು. ಈ ಬಾರಿ ಎರಡು ವಿಭಾಗಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿತ್ತು. ರಿಯೊದಲ್ಲಿ ನಡೆದ ಆರು ಸ್ಪರ್ಧೆಗಳಲ್ಲಿ ನಾಲ್ಕರಲ್ಲೂ ಜಪಾನ್‌ ಕುಸ್ತಿಪಟುಗಳು ಚಿನ್ನ ಗೆದ್ದಿದ್ದಾರೆ. ಕುಸ್ತಿ ಅಂಗಳದಲ್ಲಿ ಏಷ್ಯಾದ ಈ ಪುಟ್ಟ ದೇಶದ ಶಕ್ತಿ ಎಷ್ಟಿದೆ ಎಂಬುದಕ್ಕೆ ಇದು ಸಾಕ್ಷಿ. ಕವೊರಿ ‘ಕಮಾಲ್‌’ ಜಪಾನ್‌ನ ಕವೊರಿ ಇಚೊ ಜಗತ್ತಿನ ಶ್ರೇಷ್ಠ ಮಹಿಳಾ ಕುಸ್ತಿಪಟುಗಳ ಸಾಲಿನಲ್ಲಿ ನಿಲ್ಲುತ್ತಾರೆ. ಅವರು ರಿಯೊ ಕೂಟದಲ್ಲಿ 58 ಕೆ.ಜಿ. ವಿಭಾಗದಲ್ಲಿ ಚಿನ್ನ ಗೆದ್ದು ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆದಿದ್ದಾರೆ. ಎಲ್ಲ ನಾಲ್ಕೂ ಒಲಿಂಪಿಕ್ಸ್‌ಗಳಲ್ಲಿ ಅವರು ಚಿನ್ನದ ನಗು ಬೀರಿದ್ದಾರೆ. ಅಥೆನ್ಸ್‌, ಬೀಜಿಂಗ್‌ ಮತ್ತು ಲಂಡನ್‌ನಲ್ಲಿ 63 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಇಚೊ ರಿಯೊದಲ್ಲಿ 58 ಕೆ.ಜಿ. ವಿಭಾಗದಲ್ಲಿ ಪೈಪೋಟಿ ನಡೆಸಿದ್ದರು. ಜಪಾನ್‌ನ ಈ ಕುಸ್ತಿಪಟು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ 10 ಚಿನ್ನದ ಪದಕ ಬಗಲಿಗೆ ಹಾಕಿಕೊಂಡಿದ್ದಾರೆ. ಇದರಲ್ಲಿ ಎಂಟು ಚಿನ್ನದ ಪದಕಗಳು 63 ಕೆ.ಜಿ. ವಿಭಾಗದಲ್ಲಿ ಬಂದಿದ್ದರೆ, ಇನ್ನೆರಡು ಪದಕಗಳು 58 ಕೆ.ಜಿ. ವಿಭಾಗದಲ್ಲಿ ಬಂದಿವೆ. ಹೆಲೆನ್‌ ಮಿಂಚು ರಿಯೊ ಒಲಿಂಪಿಕ್ಸ್‌ನಲ್ಲಿ ಜಪಾನ್‌ನ ಕುಸ್ತಿಪಟುಗಳ ಪ್ರಾಬಲ್ಯದ ನಡುವೆಯೂ ಅಮೆರಿಕದ ಹೆಲೆನ್‌ ಲೂಯಿಸ್‌ ಮೆರೋಲಿಸ್‌ ಎಲ್ಲರ ಗಮನ ಸೆಳೆದದ್ದು ವಿಶೇಷ. ಒಲಿಂಪಿಕ್ಸ್‌ನ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ಅಮೆರಿಕಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟ ಗೌರವ ಹೆಲೆನ್‌ಗೆ ಸಂದಿದೆ. 53 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಜಪಾನ್‌ನ ಸೊವೊರಿ ಯೊಶಿದಾ ಅವರನ್ನು 4–1 ರಲ್ಲಿ ಮಣಿಸಿ ಐತಿಹಾಸಿಕ ಸಾಧನೆ ಮಾಡಿದ್ದರು. ಸತತ ನಾಲ್ಕನೇ ಚಿನ್ನ ಗೆಲ್ಲಬೇಕೆಂಬ ಯೊಶಿದಾ ಅವರ ಕನಸನ್ನು ಹೆಲೆನ್‌ ನುಚ್ಚುಮೂರು ಮಾಡಿದ್ದರು. ಯೊಶಿದಾ ಒಲಿಂಪಿಕ್ಸ್‌ನಲ್ಲಿ 3 ಚಿನ್ನ ಅಲ್ಲದೆ ವಿಶ್ವಚಾಂಪಿಯನ್‌ಷಿಪ್‌ಗಳಲ್ಲಿ ಒಟ್ಟು 13 ಚಿನ್ನದ ಪದಕ ಜಯಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಅವರು ಎರಡು ಸಲ ಮಾತ್ರ ಸೋಲು ಅನುಭವಿಸಿದ್ದರು. ಇಂತಹ ಅನುಭವಿ ಸ್ಪರ್ಧಿಯನ್ನು ಮಣಿಸುವ ಮೂಲಕ ಹೆಲೆನ್‌ ಅವರು ಮಹಿಳಾ ಕುಸ್ತಿಯಲ್ಲಿ ಅಮೆರಿಕದ ಬಲ ಹೆಚ್ಚುತ್ತಿದೆ ಎಂಬುದರ ಸೂಚನೆ ನೀಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.