ಕೃಷಿ ವಿಜ್ಞಾನದಲ್ಲಿ ಕಲಿಕೆಯ ಅವಕಾಶ ಕೃಷಿ ಈಗ ಕೇವಲ ವೃತ್ತಿಯಾಗಿ ಉಳಿದಿಲ್ಲ. ವಿಜ್ಞಾನವಾಗಿ ಬೆಳೆದಿದೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಅಧ್ಯಯನ ಕೈಗೊಳ್ಳುವವರ ಸಂಖ್ಯೆ ಹೆಚ್ಚುತ್ತಲಿದೆ. ಕೃಷಿ ಚಟುವಟಿಕೆಗಳ ಜೊತೆಗೆ ಸಸ್ಯಶಾಸ್ತ್ರ, ಬೆಳೆ ಅಧ್ಯಯನ, ಆಹಾರ ಮತ್ತು ಬೀಜ ವಿಜ್ಞಾನ, ಜೀವವೈವಿಧ್ಯಗಳ ಅಧ್ಯಯನ, ಹೈನುಗಾರಿಕೆ, ಮೀನುಗಾರಿಕೆ ಈ ಎಲ್ಲವನ್ನೂ ಒಳಗೊಂಡು `ಕೃಷಿ ವಿಜ್ಞಾನ~ ಬೆಳೆದಿದೆ. ಕೃಷಿ ವಿಜ್ಞಾನ ಇವತ್ತಿನ ಪ್ರಮುಖ ಅಧ್ಯಯನ ವಿಷಯಗಳಲ್ಲಿ ಒಂದು. ವ್ಯವಸಾಯ ಸಂಬಂಧಿ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವವರು ಮಾತ್ರವಲ್ಲದೆ ಮೂಲ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವವರು ಸಹ ಈ ವಿಷಯಗಳ ಅಭ್ಯಾಸದಲ್ಲಿ ತೊಡಗಿಕೊಳ್ಳಬಹುದು. ಪಿಯುಸಿ ನಂತರ ಮುಂದೇನು? ಎಂದು ಯೋಚಿಸುವರಿಗೆ, ಭಿನ್ನ ಬಗೆಯ ಕೋರ್ಸುಗಳ ಹುಡುಕಾಟದಲ್ಲಿ ಇರುವವರಿಗೆ ಇಲ್ಲಿ ಅವಕಾಶಗಳು ಕೈಬೀಸಿ ಕರೆಯುತ್ತವೆ. ಕರ್ನಾಟಕದಲ್ಲಿ ಕೃಷಿ ವಿಜ್ಞಾನದ ಅಧ್ಯಯನಕ್ಕೆ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ. ಅನೇಕ ವಿಶ್ವವಿದ್ಯಾಲಯಗಳು ಆಸಕ್ತರಿಗೆ ಈ ವಿಜ್ಞಾನದ ಪಾಠ ಹೇಳಿಕೊಡುತ್ತಿವೆ. ಪದವಿ, ಸ್ನಾತಕೋತ್ತರ ಪದವಿ. ಡಿಪ್ಲೊಮಾ, ಸರ್ಟಿಫೀಕೆಟ್ ಹಾಗೂ ಪಿಎಚ್‌ಡಿ ಕೋರ್ಸುಗಳ ಮೂಲಕ ಕೃಷಿ ವಿಜ್ಞಾನವನ್ನು ಅರಿಯಬಹುದಾಗಿದೆ. ಈ ವಿಷಯವನ್ನು ಕಲಿಸುವ ವಿಶ್ವವಿದ್ಯಾಲಯಗಳು, ಲಭ್ಯವಿರುವ ಕೋರ್ಸುಗಳ ಕುರಿತು ಮಾಹಿತಿ ಇಲ್ಲಿದೆ. ಜೂನ್ ತಿಂಗಳಿನಿಂದ ಈ ಸಾಲಿನ ಪ್ರವೇಶ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ: ರಾಜಧಾನಿ ಬೆಂಗಳೂರು ಅನ್ನು ಕೇಂದ್ರವಾಗಿರಿಸಿಕೊಂಡು 1963ರಲ್ಲಿ ಕಾರ್ಯಾರಂಭ ಮಾಡಿದ ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ಪ್ರಸ್ತುತ 6 ಜಿಲ್ಲೆಗಳಲ್ಲಿ ತನ್ನ ಕ್ಯಾಂಪಸ್ ಹೊಂದಿದೆ. ಬಿಎಸ್‌ಸಿ, ಡಿಪ್ಲೊಮಾ, ಎಂ.ಎಸ್ಸಿ ಕ್ರಮದಲ್ಲಿ ಪದವಿ ನೀಡುತ್ತಿದೆ. ಇದಲ್ಲದೆ ರೈತ ವಿಜ್ಞಾನ ಕೇಂದ್ರ, ರೈತರ ತರಬೇತಿ ಕೇಂದ್ರ, ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ ಮೊದಲಾದವುಗಳ ಮೂಲಕ ಕೃಷಿ ಅಧ್ಯಯನ, ಮಾಹಿತಿ ಮತ್ತು ಸಂಶೋಧನೆಗೆ ನೆರವು ನೀಡುತ್ತಿದೆ. ಕೃಷಿ ಪದವೀಧರರಿಗೆ ಉದ್ಯೋಗ ಮಾಹಿತಿಯನ್ನೂ ನೀಡುತ್ತಿದೆ. ಪದವಿ ಕೋರ್ಸುಗಳು: ಬಿ.ಎಸ್ಸಿ: ಒಟ್ಟು ಏಳು ವಿಷಯಗಳಲ್ಲಿ ಪದವಿಯನ್ನು ಅಭ್ಯಸಿಸುವ ಅವಕಾಶವಿದೆ. ಕೃಷಿ ವಿಷಯದಲ್ಲಿ ಬಿಎಸ್ಸಿ ಪದವಿಯನ್ನು ಬೆಂಗಳೂರು, ಹಾಸನ, ಮಂಡ್ಯ, ಶಿವಮೊಗ್ಗ ಹಾಗೂ ಚಿಂತಾಮಣಿ ಕ್ಯಾಂಪಸ್‌ಗಳಲ್ಲಿ ಅಭ್ಯಸಿಸಬಹುದು. ಬೆಂಗಳೂರು ಕ್ಯಾಂಪಸ್‌ನಲ್ಲಿ ಕೃಷಿ ಮಾರುಕಟ್ಟೆ ಮತ್ತು ಸಹಕಾರ ವಿಷಯದಲ್ಲಿ ಬಿಎಸ್ಸಿ ಪದವಿ ಲಭ್ಯ. ಪೊನ್ನಂಪೇಟೆ ಕ್ಯಾಂಪಸ್‌ನಲ್ಲಿ ಫಾರೆಸ್ಟ್ರಿ ಕುರಿತು ಹಾಗೂ ಚಿಂತಾಮಣಿ ಕಾಲೇಜಿನಲ್ಲಿ ರೇಷ್ಮೆ ಕುರಿತು ಪದವಿ ಇದೆ. ಹಾಸನ ಕಾಲೇಜಿನಲ್ಲಿ ಅಗ್ರಿಕಲ್ಚರಲ್ ಬಯೋಟೆಕ್ನಾಲಜಿ ಹಾಗೂ ಆಹಾರ ವಿಜ್ಞಾನ ವಿಷಯಗಳಲ್ಲಿ ಪದವಿ ಹಾಗೂ ಬೆಂಗಳೂರು ಕ್ಯಾಂಪಸ್‌ನಲ್ಲಿ ಅಗ್ರಿಕಲ್ಚರಲ್ ಎಂಜಿನಿಯರಿಂಗ್ ವಿಷಯದಲ್ಲಿ ಬಿ.ಟೆಕ್ ಪದವಿ ಅಭ್ಯಸಿಸಬಹುದು. ಡಿಪ್ಲೊಮಾ: ಐದು ವಿಷಯಗಳಲ್ಲಿ ಅಧ್ಯಯನ ಅವಕಾಶವಿದೆ. ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ನರ್ಸರಿ ಮ್ಯಾನೇಜ್‌ಮೆಂಟ್, ಅಗ್ರಿ ಕಲ್ಚರಲ್ ಎಕ್ಸ್‌ಟೆನ್ಶನ್ ಸರ್ವೀಸ್, ರೇಷ್ಮೆ ಅಧ್ಯಯನ ವಿಷಯಗಳಲ್ಲಿ ಡಿಪ್ಲೊಮಾ ಕೈಗೊಳ್ಳಬಹುದು. ಎಂಎಸ್ಸಿ: ಒಟ್ಟು 22 ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಅವಕಾಶವಿದೆ. ಬೆಂಗಳೂರು, ಶಿವಮೊಗ್ಗ ಹಾಗೂ ಪೊನ್ನಂಪೇಟೆ ಕ್ಯಾಂಪಸ್‌ಗಳಲ್ಲಿ ಅಧ್ಯಯನಕ್ಕೆ ಅವಕಾಶವಿದೆ. ಜೆನೆಟಿಕ್ಸ್ ಅಂಡ್ ಪ್ಲಾಂಟ್ ಬ್ರೀಡಿಂಗ್, ಸೀಡ್ ಸೈನ್ಸ್ ಅಂಡ್ ಟೆಕ್ನಾಲಜಿ, ಕ್ರಾಪ್ ಸೈಕಾಲಜಿ, ಪ್ಲಾಂಟ್ ಬಯೋಕೆಮಿಸ್ಟ್ರಿ, ಪ್ಲಾಂಟ್ ಬಯೋಟೆಕ್ನಾಲಜಿ, ಸಾಯಿಲ್ ಸೈನ್ಸ್, ಅಗ್ರಿಕಲ್ಚರಲ್ ಕೆಮಿಸ್ಟ್ರಿ, ಅಗ್ರಿಕಲ್ಚರಲ್ ಮೈಕ್ರೋ ಬಯೋಲಜಿ, ಪ್ಲಾಂಟ್ ಪ್ಯಾಥಾಲಜಿ, ರೇಷ್ಮೆ ಅಧ್ಯಯನ ವಿಷಯಗಳಲ್ಲಿ ಸ್ನಾತಕೋತ್ತರ ವಿಜ್ಞಾನ ಪದವಿ ಅಭ್ಯಸಿಸಬಹುದು. ಕೃಷಿ - ವಾಣಿಜ್ಯ ನಿರ್ವಹಣೆ ವಿಷಯದಲ್ಲಿ ಎಂಬಿಎ ಪದವಿ ಸಹ ಕಲಿಯಬಹುದು. ವಿವರಗಳಿಗೆ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು-560065 ಅನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳು- 080-23330984, 2330153. ವೆಬ್ ವಿಳಾಸ: ... ಕೃಷಿ ವಿಜ್ಞಾನ ವಿವಿ, ಧಾರವಾಡ: ಉತ್ತರ ಕರ್ನಾಟಕ ಭಾಗದ ಪ್ರತ್ಯೇಕ ಕೃಷಿ ವಿಶ್ವವಿದ್ಯಾಲಯವಾಗಿ 1986ರಲ್ಲಿ ಸ್ವಾಯತ್ತತೆ ಪಡೆದ ಧಾರವಾಡ ಕೃಷಿ ವಿಶ್ವವಿದ್ಯಾಲಯವು ಉತ್ತರ ಕರ್ನಾಟಕದ ಭಾಗದ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಬಿಎಸ್ಸಿ: ಒಟ್ಟು ನಾಲ್ಕು ಕ್ಯಾಂಪಸ್‌ಗಳಲ್ಲಿ ಪದವಿ ಕಲಿಕೆಗೆ ಅವಕಾಶವಿದೆ. ಧಾರವಾಡ ಹಾಗೂ ವಿಜಾಪುರ ಕಾಲೇಜುಗಳಲ್ಲಿ ಕೃಷಿ ವಿಷಯದಲ್ಲಿ ಪದವಿ, ಧಾರವಾಡ ಕ್ಯಾಂಪಸ್‌ನಲ್ಲಿ ಕೃಷಿ ಮಾರುಕಟ್ಟೆ ಮತ್ತು ಸಹಕಾರ ವಿಷಯದಲ್ಲಿ ಪದವಿ ಹಾಗೂ ಬಿಎಚ್. ಎಸ್ಸಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ಕಾಲೇಜಿನಲ್ಲಿ ಫಾರೆಸ್ಟ್ರಿ ವಿಷಯದಲ್ಲಿ ಪದವಿ ಕಲಿಕೆಗೆ ಅವಕಾಶವಿದೆ. ಎಂ.ಎಸ್ಸಿ: ಕೃಷಿ ವಿಜ್ಞಾನ, ಕೃಷಿ ಅರ್ಥಶಾಸ್ತ್ರ, ಕೀಟಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ, ಬೀಜ ವಿಜ್ಞಾನ, ಬೇಸಾಯ ಶಾಸ್ತ್ರ, ಗೃಹ ವಿಜ್ಞಾನ ನಿರ್ವಹಣೆ, ಆಹಾರ ಪೋಷಣೆ ಶಾಸ್ತ್ರ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಅವಕಾಶವಿದೆ. ಡಿಪ್ಲೊಮಾ: ಸಾವಯವ ಕೃಷಿ, ಬೀಜೋತ್ಪಾದನೆ, ಫ್ಯಾಷನ್ ಮತ್ತು ಉಡುಪು ವಿನ್ಯಾಸ ವಿಷಯಗಳಲ್ಲಿ 1 ವರ್ಷದ ಡಿಪ್ಲೊಮಾ ಪದವಿ. ವಿಳಾಸ: ಧಾರವಾಡ ಕೃಷಿ ವಿಶ್ವವಿದ್ಯಾಲಯ, ಕೃಷಿ ನಗರ, ಧಾರವಾಡ-58005. ದೂರವಾಣಿ ಸಂಖ್ಯೆಗಳು- 0836-2747958, 2448512. .. ಕೃಷಿ ವಿಶ್ವವಿದ್ಯಾಲಯ, ರಾಯಚೂರು: ಹೈದರಾಬಾದ್ ಕರ್ನಾಟಕಕ್ಕೊಂದು ಕೃಷಿ ವಿಶ್ವವಿದ್ಯಾಲಯದ ಬೇಡಿಕೆಯಿಂದಾಗಿ 1984ರಲ್ಲಿ ರಾಯಚೂರಿನಲ್ಲಿ ಕಾರ್ಯಾರಂಭ ಮಾಡಿದ ವಿಶ್ವವಿದ್ಯಾಲಯವು ರಾಯಚೂರು, ಬಿ.ಗುಡಿ ಕ್ಯಾಂಪಸ್ ಸೇರಿದಂತೆ ಒಟ್ಟು ಮೂರು ಕಾಲೇಜುಗಳನ್ನು ಹೊಂದಿದೆ. ಕೋರ್ಸುಗಳು: ಪದವಿ ಮಟ್ಟದಲ್ಲಿ ಕೃಷಿ, ಕೃಷಿ ಮಾರುಕಟ್ಟೆ ಮತ್ತು ಸಹಕಾರ, ಅರಣ್ಯಗಾರಿಕೆ ಹಾಗೂ ಬಿಎಚ್. ಎಸ್ಸಿ ವಿಷಯಗಳನ್ನು ಅಭ್ಯಸಿಸಬಹುದು. ಎಂ.ಎಸ್ಸಿ ವಿಭಾಗದಲ್ಲಿ ಅಗ್ರೋನಮಿ, ಎಂಟೋಮಾಲಜಿ ಜೆನೆಟಿಕ್ಸ್ ಅಂಡ್ ಬ್ರೀಡಿಂಗ್ ಆರ್ಟಿಕಲ್ಚರ್, ಪ್ಲಾಂಟ್ ಪ್ಯಾಥಾಲಜಿ, ಸಾಯಿಲ್ ಸೈನ್ಸ್, ಅಗ್ರಿಕಲ್ಚರಲ್ ಕೆಮಿಸ್ಟ್ರಿ, ಅಗ್ರಿಕಲ್ಚರಲ್ ಎಕಾನಾಮಿಕ್ಸ್, ಸೀಡ್ ಸೈನ್ಸ್ ಅಂಡ್ ಟೆಕ್ನಾಲಜಿ ವಿಷಯಗಳು ಅಧ್ಯಯನಕ್ಕೆ ಲಭ್ಯ. ಇದಲ್ಲದೆ ಎಂಬಿಎ, ಎಂಎಚ್‌ಎಸ್ಸಿ ವಿಷಯಗಳು ಸಹ ಅಧ್ಯಯನ ಮಾಡಬಹುದು. ವಿಳಾಸ: ಕೃಷಿ ವಿಶ್ವವಿದ್ಯಾಲಯ, ರಾಯಚೂರು-584102. ದೂರವಾಣಿ. 08532-220041. ವೆಬ್ ವಿಳಾಸ: ... ಬೀದರ್ ವಿಶ್ವವಿದ್ಯಾಲಯ : ಹೈನುಗಾರಿಕೆ, ಮೀನುಗಾರಿಕೆ ಕ್ಷೇತ್ರಗಳಲ್ಲಿನ ಮಹತ್ವ ಅರಿತು 2004ರಲ್ಲಿ ಬೀದರ್‌ನಲ್ಲಿ ಸ್ಥಾಪನೆಯಾಯಿತು ಕರ್ನಾಟಕ ಪಶು ಸಂಗೋಪನೆ, ಪ್ರಾಣಿ ಹಾಗೂ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ. ರಾಜ್ಯದ ಎಲ್ಲ ಜಿಲ್ಲೆಗಳೂ ಈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುತ್ತವೆ. ಬೀದರ್‌ನ ಜೊತೆಗೆ ಬೆಂಗಳೂರು, ಶಿವಮೊಗ್ಗ, ಹಾಸನ, ಗುಲ್ಬರ್ಗಾ, ಮಂಗಳೂರುಗಳಲ್ಲಿ ಕ್ಯಾಂಪಸ್‌ಗಳಿವೆ. ಪದವಿ ವಿಭಾಗದಲ್ಲಿ ಬಿ.ವಿ.ಎಸ್ಸಿ ಹಾಗೂ ಬ್ಯಾಚುಲರ್ ಡೈರಿ ಟೆಕ್ನಾಲಜಿ, ಬಿ.ಟೆಕ್ ಹಾಗೂ ಬ್ಯಾಚುಲರ್ ಆಫ್ ಫಿಶರಿಸ್ ಸೈನ್ಸ್ ವಿಷಯಗಳು ಲಭ್ಯ. ಸ್ನಾತಕೋತ್ತರ ವಿಭಾಗದಲ್ಲಿ ವೆಟರ್ನಿಟಿ ಮೆಡಿಸನ್, ಸೈಕಾಲಜಿ. ಡೈರಿ ಕೆಮಿಸ್ಟ್ರಿ, ಮೈಕ್ರೋ ಬಯಾಲಜಿ, ಟೆಕ್ನಾಲಜಿ ಸೇರಿದಂತೆ 20ಕ್ಕೂ ಹೆಚ್ಚು ವಿಷಯಗಳ ಆಯ್ಕೆ ಲಭ್ಯವಿದೆ. ವಿಳಾಸ: ಕರ್ನಾಟಕ ಪಶು ಸಂಗೋಪನೆ , ಪ್ರಾಣಿ ಹಾಗೂ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ನಂದಿನಗರ, ಬೀದರ್-585401. ದೂ. ಸಂಖ್ಯೆ: 08482-245313 ಹಾಗೂ 245241. ವೆಬ್ ವಿಳಾಸ: .... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.