ಪ್ರವಾಸೋದ್ಯಮ ಕೋರ್ಸ್: ಭರವಸೆಯ ಭವಿಷ್ಯ ಶೈಕ್ಷಣಿಕ ಜೀವನದ ತಿರುವುಗಲ್ಲುಗಳಾದ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಕುತೂಹಲಕ್ಕೆ ತೆರೆ ಬಿದ್ದಿದೆ. ಸೂಕ್ತ ಕೋರ್ಸ್ ಆಯ್ಕೆ ಈಗ ಪಾಸಾದವರ ಮುಂದಿರುವ ಸವಾಲು. ವಿದ್ಯಾರ್ಥಿಗಳು ಕಲಿಕಾ ಸಾಮರ್ಥ್ಯ, ಆಸಕ್ತಿ, ಅಭಿರುಚಿ ಆಧರಿಸಿ ಸೂಕ್ತ ಕೋರ್ಸ್ ಆಯ್ದುಕೊಂಡು ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು. ಹದಿಹರೆಯ, ಕುದಿ ಮನಸ್ಸು, ಗೊಂದಲ, ಅಸಂಖ್ಯ ಕೋರ್ಸ್‌ಗಳ ನಡುವೆ ವಿದ್ಯಾರ್ಥಿಗಳ ಮುಂದೇನು? ಎಂಬ ಪ್ರಶ್ನೆಗೆ ಸರಿಯಾದ ಮಾರ್ಗದರ್ಶನ ಅಗತ್ಯ. ಸೂಕ್ತ ಕೋರ್ಸ್ ಆಯ್ಕೆಯಲ್ಲಿ ಪೋಷಕರ ಪಾತ್ರವೂ ಮಹತ್ವದ್ದು. ಆಸಕ್ತಿ, ಪ್ರತಿಭೆಗೆ ತಕ್ಕ ವಿಷಯ ಆಯ್ದುಕೊಂಡು ಅಧ್ಯಯನ ಕೈಗೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇಂದಿನ ಸ್ಪರ್ಧಾ ಯುಗದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಸಾಂಪ್ರದಾಯಿಕ ಪದವಿ ಹೊರತುಪಡಿಸಿ ವೃತ್ತಿಪರ ಕೋರ್ಸ್ ಅಧ್ಯಯನಕ್ಕೆ ಸಾಕಷ್ಟು ಅವಕಾಶಗಳಿವೆ. ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಅವುಗಳಲ್ಲಿ ಒಂದು. ಜ್ಞಾನದೆಡೆಗೆ ಪಯಣ, ಅತಿಥಿ ದೇವೋ ಭವ ಇದರ ಮೂಲಮಂತ್ರ. ವಿಶ್ವದಾದ್ಯಂತ ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಉದ್ದಿಮೆ ಪ್ರವಾಸೋದ್ಯಮ. ಆದಾಯ, ಗಳಿಕೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಟೂರಿಸಂಗೆ ಎರಡನೇ ಸ್ಥಾನ. ಪ್ರಪಂಚ ಪರ್ಯಟನೆ ಹಾಗೂ ಪ್ರವಾಸೋದ್ಯಮ ಪರಿಷತ್ ( ) ಪ್ರಕಾರ 2009ರಲ್ಲಿ ವಿಶ್ವ ಪ್ರವಾಸೋದ್ಯಮ ವಹಿವಾಟು 1877 ಬಿಲಿಯನ್ ಡಾಲರ್ ದಾಟಿದೆ. ಜಗತ್ತಿನ 25 ಕೋಟಿಗೂ ಅಧಿಕ ಮಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ವಲಯ ಉದ್ಯೋಗ ಒದಗಿಸಿದೆ. ಈ ಕ್ಷೇತ್ರ ವಿಶ್ವದ ಒಟ್ಟು ನಿವ್ವಳ ಉತ್ಪನ್ನಕ್ಕೆ ಶೇ 9.4 ಕೊಡುಗೆ ನೀಡಿದೆ. ಪ್ರತಿ 13 ಉದ್ಯೋಗಗಳಲ್ಲಿ ಒಂದು ಉದ್ಯೋಗ ಪ್ರವಾಸೋದ್ಯಮದ್ದಾಗಿರುತ್ತದೆ. ಬಹುತೇಕ ರಾಷ್ಟ್ರಗಳ ವಿದೇಶಿ ವಿನಿಮಯದ ಆಧಾರಸ್ತಂಭ ಈ ಕೈಗಾರಿಕೆ. ಮುಂದಿನ 25 ವರ್ಷಗಳಲ್ಲಿ ಚೀನಾ ಪ್ರವಾಸೋದ್ಯಮದಲ್ಲಿ ವಿಶ್ವದ ನಂ.1 ಸ್ಥಾನ ಪಡೆಯಲಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ಟೂರಿಸಂ ಅಭಿವೃದ್ಧಿಗೆ 11ನೇ ಪಂಚವಾರ್ಷಿಕ ಯೋಜನೆಯಲ್ಲಿ ರೂ 9230 ಕೋಟಿ ಮೀಸಲಿಡಲಾಗಿದೆ. ಸಂಸ್ಕೃತಿ-ಪರಂಪರೆ ಪ್ರತಿಬಿಂಬ ಮತ್ತು ವರಮಾನ ಗಳಿಕೆ ಮೂಲವಾಗಿರುವ ಈ ಕ್ಷೇತ್ರದ ಸರ್ವಾಂಗೀಣ ಬೆಳವಣಿಗೆಗೆ ಸರ್ಕಾರ ಆದ್ಯತೆ ನೀಡಿದೆ. ಇದನ್ನು ಮತ್ತಷ್ಟು ಆಕರ್ಷಣೀಯವಾಗಿಸಲು, ವೃತ್ತಿಪರಿಣತರ ತಯಾರಿಕೆಗೆ ಗಮನ ಹರಿಸಿದೆ. ಸರ್ಕಾರ ಮೈಸೂರಿನ ಪೂಜಾ ಭಾಗವತ್ ಸ್ಮಾರಕ ಮಹಾಜನ ಸ್ನಾತಕೋತ್ತರ ವಿದ್ಯಾಲಯ, ಶಿವಮೊಗ್ಗ, ಧಾರವಾಡ ಹಾಗೂ ಗುಲ್ಬರ್ಗ ಸೇರಿದಂತೆ ಐದು ಕಾಲೇಜುಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದೆ. ಬ್ಯಾಚಲರ್ ಆಫ್ ಟೂರಿಸಂ ಅಂಡ್ ಹಾಸ್ಪಿಟಾಲಿಟಿ ಸ್ನಾತಕ ಪದವಿ, ಮಾಸ್ಟರ್ ಆಫ್ ಟೂರಿಸಂ (ಎಂಟಿಎ) ಸ್ನಾತಕೋತ್ತರ ಪದವಿ ಆರಂಭಿಸಲಾಗಿದೆ. ಪಿಯುಸಿ ಯಾವುದೇ ವಿಭಾಗದಲ್ಲಿ ತೇರ್ಗಡೆ ಹೊಂದಿದವರು ಬಿಟಿಎಚ್ ಸ್ನಾತಕ ಪದವಿಗೆ ದಾಖಲಾಗಬಹದು. ಪಿಯುಸಿ ಯಾವುದೇ ವಿಭಾಗದಲ್ಲಿ ಶೇ 50 ಅಂಕ ಗಳಿಸಿದವರು ಎಂಟಿಎ ಸೇರಬಹುದು. ಇದು 5 ವರ್ಷದ ಸಂಯೋಜಿತ (ಇಂಟಿಗ್ರೇಟೆಡ್) ಕೋರ್ಸ್. ವಾಕ್ ಕೌಶಲ್ಯ, ದೇಶ ಸುತ್ತುವ ಕುತೂಹಲ, ಪ್ರವಾಸಿ ತಾಣಗಳ ಅಭಿವೃದ್ಧಿ ಹುಮ್ಮಸ್ಸು, ವಿಶ್ವಪರಂಪರ ಸಂರಕ್ಷಣೆ ಹಂಬಲ, ವಿವಿಧ ಸಂಸ್ಕೃತಿ -ಇತಿಹಾಸ ವಿವರಿಸುವ ಚಾಕಚಕ್ಯತೆ, ಕೊಂಚ ಇಂಗ್ಲಿಷ್ ಭಾಷೆ ಪ್ರಭುತ್ವ, ಎಲ್ಲರಿಗೂ ಒಗ್ಗಿಕೊಳ್ಳುವ ಸ್ಮಾರ್ಟ್‌ನೆಸ್, ಕ್ರಿಯಾಶೀಲತೆ ಇವಿಷ್ಟಿದ್ದರೆ ಟೂರಿಸಂ ಕಲಿಕೆ ಸುಲಭ. ವಿವಿಧ ದೇಶಗಳಲ್ಲಿನ ಭೌಗೋಳಿಕ-ಜೈವಿಕ- ಸಾಂಸ್ಕೃತಿಕ ವೈವಿಧ್ಯತೆ, ಪ್ರವಾಸಿ ತಾಣಗಳು, ಪರಿಸರ, ಕಾನೂನು, ಸಂವಿಧಾನ, ಆಹಾರ ಪದ್ಧತಿ, ಮಾರುಕಟ್ಟೆ ವ್ಯವಸ್ಥೆ, ವ್ಯಾವಹಾರಿಕ ಜ್ಞಾನ, ನಿರ್ವಹಣೆ ಅಧ್ಯಯನ, ಕಾಲಮಾನ ಅರಿವು, ವಿಶ್ವ-ಭಾರತ-ಕರ್ನಾಟಕ ಪ್ರವಾಸೋದ್ಯಮ, ಇ-ಕಲಿಕೆ, ಪ್ರವಾಸ ಯೋಜನೆ ಸಿದ್ಧಪಡಿಸುವುದು ಇತರ ವಿಷಯಗಳು ಸೈದ್ಧಾಂತಿಕ ತರಗತಿಗಳ ಪಠ್ಯವಾದರೆ, ದೇಶ- ವಿದೇಶ ಪ್ರವಾಸ ಪ್ರಾಯೋಗಿಕ ಕಲಿಕೆ ಭಾಗವಾಗಿರುತ್ತದೆ. ಯಶಸ್ವಿಯಾಗಿ ಕೋರ್ಸ್ ಮುಗಿಸಿದವರು ಕೇಂದ್ರ, ರಾಜ್ಯಗಳ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಇನ್ಫೋಸಿಸ್, ವಿಪ್ರೊ, ಎಚ್‌ಪಿ, ಐಬಿಎಂ, ಮುಂತಾದ ಸಾಫ್ಟ್‌ವೇರ್ ಕಂಪೆನಿಗಳು, ವಿಮಾನಯಾನ, ಟ್ರಾವೆಲ್ ಏಜೆನ್ಸಿ, ಪ್ರವಾಸಿ ತಾಣ ಅಭಿವೃದ್ಧಿ ಸಂಸ್ಥೆಗಳು, ಪ್ರತಿಷ್ಠಿತ ಹೊಟೇಲ್‌ಗಳಲ್ಲಿ ಕೆಲಸ ಗಿಟ್ಟಿಸಬಹದು. ಸಂಬಳ ರೂ. 15 ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ಪಡೆಯಬಹದು. ವಿದ್ಯಾರ್ಥಿಯ ಕೌಶಲ ಆಧರಿಸಿ ಕಂಪೆನಿಗಳು ಸಂಬಳ ನಿರ್ಧರಿಸುತ್ತವೆ. ಇನ್ನು ಟ್ರಾವೆಲ್ ಏಜೆನ್ಸಿ, ಹೊಟೇಲ್ ಉದ್ಯಮ... ಇತ್ಯಾದಿ ಸ್ವಂತ ಉದ್ದಿಮೆ ಆರಂಭಿಸಿ ಉದ್ಯೋಗದಾತರೂ ಆಗಬಹದು. ಪ್ರವಾಸಿಗರು ಇಷ್ಟ ಪಡುವ ವಿಶ್ವದ 4ನೇ ನಗರ, ವರ್ಷಪೂರ್ತಿ ಪ್ರವಾಸಿಗರಿಂದ ಗಿಜಿಗುಡುವ ದಕ್ಷಿಣ ಭಾರತದ ಪ್ರಸಿದ್ಧ ಪ್ರವಾಸಿ ತಾಣ ಮೈಸೂರಿನ ಕೆಆರ್‌ಎಸ್ ರಸ್ತೆಯ ಮಹಾಜನ ಸ್ನಾತಕೋತ್ತರ ಕೇಂದ್ರದಲ್ಲಿ ಎಂಟಿಎ ಮತ್ತು ಬಿಟಿಎಚ್ ಎರಡೂ ಇವೆ. ಎಂಟಿಎನವರಿಗೆ ಪ್ರತಿ ಸೆಮಿಸ್ಟರ್‌ನಲ್ಲೂ ಪ್ರವಾಸ, ಬಿಟಿಎಚ್‌ನವರಿಗೆ ಮಧ್ಯಾಹ್ನ ದಾಸೋಹ ಇಲ್ಲಿನ ವಿಶೇಷತೆ. ವಿದ್ಯಾರ್ಥಿಗಳಿಗೆ ಉದ್ಯೋಗ ಬೇಟೆಗೆ ಅನುಕೂಲವಾಗುವಂತೆ ವಿವಿಧ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಕ್ಯಾಂಪಸ್ ಸಂದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಮಲೇಷ್ಯಾದ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅಲ್ಲಿನ ವಿದ್ಯಾರ್ಥಿಗಳು ಇಲ್ಲಿ ಮತ್ತು ಇಲ್ಲಿನ ವಿದ್ಯಾರ್ಥಿಗಳು ಅಲ್ಲಿ ಒಂದು ತಿಂಗಳು ಕಲಿಯಲು ವ್ಯವಸ್ಥೆ ಮಾಡಲಾಗಿದೆ. ಎಂಟಿಎಗೆ ವರ್ಷಕ್ಕೆ ರೂ. 40 ಸಾವಿರ (ಸಮವಸ್ತ್ರ, ಪ್ರವಾಸ, ದಾಸೋಹ ಇತ್ಯಾದಿ ಒಳಗೊಂಡಂತೆ) ಬಿಟಿಎಚ್‌ಗೆ ರೂ. 38 ಸಾವಿರ ಶುಲ್ಕ ನಿಗದಿ ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ . ದೂರವಾಣಿ: 0821-2414271 ಸಂಪರ್ಕಿಸಬಹದು ಟೂರಿಸಂ ಅಧ್ಯಯನ ಹೊಸ ವಿಷಯವಾಗಿದೆ. ಇಂತಹದೊಂದು ಕೋರ್ಸ್ ಇದೆ ಮತ್ತು ಇದನ್ನು ಕಲಿತರೆ ಉತ್ತಮ ಉದ್ಯೋಗಾವಕಾಶಗಳಿವೆ ಎಂಬ ಕುರಿತಂತೆ ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ಇಲ್ಲ. ಈಗಾಗಲೇ ಈ ಕೋರ್ಸ್ ಮುಗಿಸಿದ ಬಹಳಷ್ಟು ಮಂದಿ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿ ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಪ್ರೊ. ಕೆ.ಎಸ್.ನಾಗಪತಿ ನಿರ್ದೇಶಕರು, ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಕೇಂದ್ರ ಪರಂಪರೆ ರಕ್ಷಣೆಗೆ ಎಲ್ಲ ದೇಶಗಳು ಪ್ರಾಧಾನ್ಯತೆ ನೀಡುತ್ತಿವೆ. ಒಟ್ಟಿನಲ್ಲಿ ಶರವೇಗದಲ್ಲಿ ಬೆಳೆಯುತ್ತಿರುವ ಕ್ಷೇತ್ರವಿದು. ಹೊಟೇಲ್ ಉದ್ಯಮದಲ್ಲಿ ವೃತ್ತಿ ಆರಂಭಿಸಬೇಕು ಎನ್ನುವುದು ನನ್ನ ಕನಸು. ಶಿವಸಂಜಯ್ ಎಂಟಿಎ ವಿದ್ಯಾರ್ಥಿ, ಸಕಲೇಶಪುರ ಕ್ರಿಯಾಶೀಲತೆ ಮೆರೆಯಲು ಸೂಕ್ತ ಕ್ಷೇತ್ರ ಇದು. ವಿದ್ಯಾರ್ಥಿನಿಯರಿಗೂ ಈ ಉದ್ದಿಮೆಯಲ್ಲಿ ಅಪರಿಮಿತ ಉದ್ಯೋಗಾವಕಾಶಗಳಿವೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಉದ್ಯೋಗ ಪಡೆದು ದೇಶದ ಪ್ರವಾಸಿ ತಾಣಗಳ ಅಭಿವೃದ್ಧಿಗೊಳಿಸಿ, ಸಂಸ್ಕೃತಿ ಬಿಂಬಿಸಬೇಕು ಎಂಬ ಆಸೆ ಇದೆ. ದೀಕ್ಷಾ ನಾಣಯ್ಯ.ಬಿಟಿಎಚ್ ವಿದ್ಯಾರ್ಥಿನಿ, ಮೈಸೂರು ಗ್ರಾಮೀಣ ವಿದ್ಯಾರ್ಥಿಗಳು ಈ ಕೋರ್ಸ್ ಆಯ್ದುಕೊಳ್ಳಬಹುದು. ಇತರ ಕೋರ್ಸ್‌ಗಳಿಗಿಂತ ಭಿನ್ನವಾಗಿದೆ. ಪ್ರಾಯೋಗಿಕ ಕಲಿಕೆ ವಿಶ್ವಾಸ ಮೂಡಿಸುತ್ತದೆ. ವಿಮಾನಯಾನ ಕ್ಷೇತ್ರದಲ್ಲಿ ವ್ಯವಸ್ಥಾಪಕ ಆಗುವ ಗುರಿ ಇದೆ. ಪಾರ್ಥನಾರಾಯಣ ಶ್ರೀಧರ ಹೆಗಡೆ ಎಂಟಿಎ ವಿದ್ಯಾರ್ಥಿ, ಶಿರಸಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.