ಬೇಸಿಗೆ ಶಿಬಿರದಲ್ಲಿ ಯಕ್ಷ ಶಿಕ್ಷಣ ಮಕ್ಕಳಿಗೆ ಪರೀಕ್ಷೆ ಮುಗಿದಾಕ್ಷಣ ಬೇಸಿಗೆ ಶಿಬಿರಗಳು ಕೈಬೀಸುತ್ತವೆ. ಇಂಗ್ಲಿಷ್ ಕಲಿಸುತ್ತೇವೆ ಎಂದು ಕೆಲವು ಶಾಲೆಗಳು ಧುತ್ತೆಂದು ಹುಟ್ಟಿಕೊಳ್ಳುತ್ತವೆ. ಸಾವಿರಗಟ್ಟಲೆ ಶುಲ್ಕ ತೆಗೆದುಕೊಳ್ಳುತ್ತವೆ. ಮಕ್ಕಳು ಅದೆಷ್ಟರ ಮಟ್ಟಿಗೆ ಇದರ ಪ್ರಯೋಜನ ಪಡೆಯುತ್ತಾರೋ ತಿಳಿಯದು. ಆದರೆ ನಾಡಿನ ಸಂಸ್ಕೃತಿ ಹಾಗೂ ಕಲೆಯನ್ನು ಪರಿಚಯಿಸುವಂತ ಶಿಬಿರಗಳೂ ಕೆಲವು ಕಡೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ತನ್ನದೇ ಆದ ಹೊಸ ಪರಿಕಲ್ಪನೆ ‘ಯಕ್ಷಶಿಕ್ಷಣ’ದ ಮೂಲಕ ಕರಾವಳಿಯ ಕಲೆಯೊಂದರ ಪರಿಚಯವನ್ನು ಮಕ್ಕಳಿಗೆ ಮಾಡಿಕೊಡುವಲ್ಲಿ ಸಫಲರಾಗಿದೆ. ಇದಕ್ಕೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಕೈಜೋಡಿಸಿತ್ತು. ಅರವತ್ತೈದು ವಿದ್ಯಾರ್ಥಿಗಳು ಯಾವುದೇ ಶುಲ್ಕ ತೆರದೆ ಒಂದು ವಾರ ಯಕ್ಷಗಾನದ ಲೋಕದಲ್ಲಿ ವಿಹರಿಸಿದರು. ‘ಒಂದು ವಾರದಲ್ಲಿ ಕಲಾವಿದನಾಗಿಯೋ, ಕಲಾವಿದೆಯಾಗಿಯೋ ರೂಪುಗೊಳ್ಳಲಾರರು. ಆದರೆ ಎಲ್ಲೂ ಸಿಗದ ಪ್ರಾಥಮಿಕ ಮಾಹಿತಿಗಳು ಇಲ್ಲಿ ಲಭ್ಯ. ಮಕ್ಕಳು ಮುಂದೆ ಯಕ್ಷಗಾನದ ಒಲವು ಮೂಡಿಸಿಕೊಳ್ಳಲು ಇದು ಸಹಕಾರಿ’ ಎಂದು ಶಿಬಿರದ ಆಶಯ ಮತ್ತು ಫಲಿತಾಂಶವನ್ನು ಕಟ್ಟಿಕೊಡುತ್ತಾರೆ ಶಿಬಿರದ ನಿರ್ದೇಶಕ, ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್. ಈ ಶಿಬಿರದಲ್ಲಿ ತೆಂಕುತಿಟ್ಟಿನ ವೇಷಗಳ ವೈವಿಧ್ಯವನ್ನು ಪವರ್‌ಪಾಯಿಂಟ್ ಮೂಲಕ ವಿವರಿಸಲಾಯಿತು. ಕಲಾವಿದ ದಿವಾಣ ಶಿವಶಂಕರ ಭಟ್ಟರಿಂದ ಕಿರೀಟ ವೇಷಗಳ ಬಗ್ಗೆ, ಹಿರಿಯ ಕಲಾವಿದ ಪುತ್ತೂರು ಶ್ರೀಧರ ಭಂಡಾರಿಯವರಿಂದ ಪುಂಡು ವೇಷಗಳು ಮತ್ತು ಶಿಕ್ಷಕ ಚಂದ್ರಶೇಖರ್‌ರಿಂದ ರಾಕ್ಷಸ ವೇಷಗಳ ಮಾಹಿತಿ ನೀಡಿದರು. ರಂಗದಲ್ಲಿ ಹಾಸ್ಯ ಹೊಮ್ಮುವ ಪರಿಯನ್ನು ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟರು ತಾನೇ ಅಭಿನಯಿಸಿ ತೋರಿಸಿದರೆ; ಉಪನ್ಯಾಸಕ ವೆಂಕಟರಾಮ ಭಟ್ ಸುಳ್ಯ ಸ್ತ್ರೀ ಪಾತ್ರಗಳ ವಿವರಣೆ ನೀಡಿದರು. ಪಾತ್ರಗಳು, ಅವುಗಳ ಸ್ವಭಾವಗಳು, ಮುಖವರ್ಣಿಕೆಯ ರೀತಿ, ಯಾವ್ಯಾವ ಪಾತ್ರಗಳು ಯಾವ್ಯಾವ ಗುಣಗಳನ್ನು ಪ್ರತಿನಿಧಿಸುತ್ತವೆ ಎಂಬ ವಿಚಾರಗಳ ಕುರಿತೂ ಮಕ್ಕಳಿಗೆ ವಿವರಣೆ ನೀಡಲಾಯಿತು. ಮಹಾಬಲ ಕಲ್ಮಡ್ಕ, ಯಕ್ಷಗಾನದ ಮುಖವರ್ಣಿಕೆಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಶಿಕ್ಷಕ ರುಕ್ಮಯ ಪೂಜಾರಿ ಯಕ್ಷ ಮುಖವಾಡಗಳ ರಚನೆಯನ್ನು ಶಿಬಿರಾರ್ಥಿಗಳಿಂದಲೇ ಮಾಡಿಸಿದ್ದರು. ಅರ್ಥಗಾರಿಕೆ ಮತ್ತು ಪುರಾಣ ಜ್ಞಾನವನ್ನು ಉಪನ್ಯಾಸಕ ರಾಧಾಕಷ್ಣ ಕಲ್ಚಾರ್ ವಿವರಿಸಿ, ಅರ್ಥಗಾರಿಕೆ ಮೂಡುವ ರೀತಿಯನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರಸುತ ಪಡಿಸಿದರು. ಕಲಾವಿದ ರಾಮ ಜೋಯೀಸ್ ಬೆಳ್ಳಾರೆ ಇದಕ್ಕೆ ಸಾತ್ ನೀಡಿದರು. ಬಯಲಾಟ ಅಕಾಡೆಮಿಯ ಸದಸ್ಯ ಡಾ.ಸುಂದರ ಕೇನಾಜೆಯವರ ಯಕ್ಷಗಾನ-ಸಾಮಾಜಿಕ ಪ್ರೇರಣೆ ವಿಚಾರಗಳು ಶಿಬಿರಾರ್ಥಿಗಳಲ್ಲಿ ಕುತೂಹಲ ಮೂಡಿದುದಕ್ಕೆ ಅವರಿಂದ ಬಂದ ಹಲವು ಪ್ರಶ್ನೆಗಳೇ ಸಾಕ್ಷಿ. ಯಕ್ಷ ನಡೆ, ವೇಷಗಳಿಗೆ ಕಣ್ಣು ಬರೆಯುವ ಕ್ರಮ, ಮುದ್ರೆಗಳ ವೈವಿಧ್ಯ, ತಿಲಕಗಳ ರೀತಿ, ಯಾವ್ಯಾವ ಪಾತ್ರಗಳು ಯಾವ್ಯಾವ ತಿಲಕವನ್ನು ಧರಿಸಬೇಕು.. ಮುಂತಾದ ಸೂಕ್ಷ್ಮ ವಿಚಾರಗಳನ್ನು ರೇಖಾಚಿತ್ರ ಸಹಿತ ಮಕ್ಕಳಿಗೆ ವಿವರಿಸಲಾಯಿತು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬಳೆ ಸುಂದರ ರಾಯರು ಸಮಾರೋಪದಂದು ಪೂರ್ತಿಯಾಗಿ ಶಿಬಿರದಲ್ಲಿ ಭಾಗವಹಿಸಿ ಅನುಭವ ಹಂಚಿಕೊಂಡರು. ‘ಇದೊಂದು ಚಿಕ್ಕ ಪರಿಕಲ್ಪನೆ. ನಾವೇನೂ ನೂತನವಾಗಿ ರೂಪಿಸಿದ್ದಲ್ಲ. ಬದುಕಿನಿಂದ ಮರೆಯಾಗುತ್ತಿರುವ ಯಕ್ಷಗಾನದ ಪ್ರಾಥಮಿಕ ಪರಿಚಯವನ್ನು ಮಕ್ಕಳಿಗೆ ತಿಳಿಸಿ ಕೊಡುವುದೇ ಯಕ್ಷಶಿಕ್ಷಣದ ಉದ್ದೇಶ. ಯಕ್ಷಗಾನಕ್ಕೆ ಶೈಕ್ಷಣಿಕ ಸ್ಪರ್ಶ ನೀಡುವ ಪ್ರಯತ್ನ’ ಎನ್ನುತ್ತಾರೆ ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ. ಯಕ್ಷ ಶಿಕ್ಷಣದಂತಹ ಶಿಬಿರಗಳು ಶಾಲಾ ಮಟ್ಟದಲ್ಲಿ ನಡೆದರೆ ಉತ್ತಮ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.