ಪಿಯುಸಿ ನಂತರ ಏನು? ಪಿ ಯುಸಿಯಲ್ಲಿ ಉತ್ತೀರ್ಣರಾಗಿ ಮುಂದೇನು ಮಾಡಬೇಕು ಎಂಬ ಯೋಚನೆಯಲ್ಲಿರುವ ವಿದ್ಯಾರ್ಥಿಗಳು ಗ್ರಂಥಾಲಯ ವಿಜ್ಞಾನ ಹಾಗೂ ಮಾಹಿತಿ ನಿರ್ವಹಣೆ ಡಿಪ್ಲೊಮಾ ಕೋರ್ಸ್‌ಗೆ ಸೇರ್ಪಡೆಯಾಗಬಹುದು. ಎರಡು ವರ್ಷದ ಈ ಕೋರ್ಸ್ ಪೂರ್ಣಗೊಂಡ ನಂತರ ಸರ್ಕಾರಿ, ಖಾಸಗಿ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಪಿಯುಸಿ/ಜೆಓಸಿಯಲ್ಲಿ ವಿಜ್ಞಾನ, ವಾಣಿಜ್ಯ, ಕಲೆ ಸೇರಿದಂತೆ ಯಾವುದೇ ವಿಷಯದಲ್ಲಿ ವಿದ್ಯಾಭ್ಯಾಸ ಮಾಡಿದವರು ಡಿಪ್ಲೊಮಾ ಅಧ್ಯಯನ ಮಾಡಬಹುದು. ವಿದ್ಯಾಭ್ಯಾಸ ಶುಲ್ಕವಿಲ್ಲ. ಪರೀಕ್ಷಾ ಶುಲ್ಕ ಸೇರಿ 2ರಿಂದ 3 ಸಾವಿರ ರೂಪಾಯಿಯಲ್ಲಿ ಎರಡು ವರ್ಷದ ಕೋರ್ಸ್ ಮುಗಿಸಬಹುದು. ಪಿಯುಸಿ ನಂತರ ಉನ್ನತ ವ್ಯಾಸಂಗ ಮಾಡಲು ಸಾಧ್ಯವಾಗದವರು, ಗ್ರಾಮೀಣ ಪ್ರದೇಶದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿನಿಯರಿಗೆ ಇದು ಹೇಳಿ ಮಾಡಿಸಿದ ಕೋರ್ಸ್. ಮೇ-ಜೂನ್ ತಿಂಗಳಲ್ಲಿ ಪ್ರವೇಶ ಪ್ರಕ್ರಿಯೆ ನಡೆಯಲಿದ್ದು, ಜುಲೈನಿಂದ ತರಗತಿಗಳು ಶುರುವಾಗಲಿವೆ. ಮೆರಿಟ್ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ. ಯಾವುದೇ ರೀತಿಯ ಪ್ರವೇಶ ಪರೀಕ್ಷೆ ಇರುವುದಿಲ್ಲ. ಸರ್ಕಾರದ ಮೀಸಲಾತಿ ನಿಯಮಗಳಿಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಲಾಗಿದೆ. ನಾಲ್ಕು ಸೆಮಿಸ್ಟರ್‌ಗಳನ್ನು ಒಳಗೊಂಡಿರುವ ಈ ಕೋರ್ಸ್‌ನಲ್ಲಿ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕೊನೆಯ ಸೆಮಿಸ್ಟರ್‌ನಲ್ಲಿ ಒಂದೂವರೆ ತಿಂಗಳ ಕಾಲ ತರಬೇತಿ ಇರುತ್ತದೆ. ಡಿಪ್ಲೊಮಾ ನಂತರ ಇನ್ನೂ ಹೆಚ್ಚಿನ ವ್ಯಾಸಂಗ ಮಾಡಲು ಬಯಸುವವರು ಬಿ.ಲಿಬ್, ಎಂ.ಲಿಬ್ ಮಾಡಬಹುದು. ಇಲ್ಲದಿದ್ದರೆ ಡಿಪ್ಲೊಮಾ ಪೂರ್ಣಗೊಳಿಸಿ ಗ್ರಂಥಾಲಯ ಸಹಾಯಕರಾಗಿ ಕೆಲಸ ಮಾಡಬಹುದು. ನಿರುದ್ಯೋಗ ಸಮಸ್ಯೆಯಂತೂ ಇರುವುದಿಲ್ಲ. ಮಹಿಳೆಯರಿಗಾಗಿಯೇ ಇರುವ ಬೆಂಗಳೂರು, ಮಂಗಳೂರು ಮತ್ತು ಹಾಸನದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ಗಳಲ್ಲಿ ಮಾತ್ರ ಸದ್ಯ ಈ ಕೋರ್ಸ್ ಇದೆ. ಪಿಯುಸಿಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಎರಡೂ ಇದೆ. ಹೀಗಾಗಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳೂ ಸೇರ್ಪಡೆಯಾಗಬಹುದು. ಮತ್ತೊಂದು ವಿಶೇಷ ಎಂದರೆ ಗಣಿತ, ವಿಜ್ಞಾನ ವಿಷಯ ಇರುವುದಿಲ್ಲ. ಇದರಿಂದಾಗಿ ಈ ಎರಡೂ ವಿಷಯಗಳು ಕಷ್ಟ ಎಂದು ಭಾವಿಸುವ ವಿದ್ಯಾರ್ಥಿಗಳು ಸಹ ಡಿಪ್ಲೊಮಾ ಕೋರ್ಸ್‌ಗೆ ಸೇರಬಹುದು. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲಾಗುತ್ತದೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬರುವ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್ ಆವರಣದಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಎಲ್ಲ ವರ್ಗದ ವಿದ್ಯಾರ್ಥಿನಿಯರಿಗೂ ಹಾಸ್ಟೆಲ್ ಸೌಲಭ್ಯವೂ ಇದೆ. ಕಂಪ್ಯೂಟರ್, ಆಟೊಮೇಷನ್, ಇ- ಡಾಕ್ಯೂಮೆಂಟ್ ಇ-ಲೈಬ್ರರಿ, ಇ-ಜರ್ನಲ್ ಇತ್ಯಾದಿ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ವಿಷಯಗಳ ಬಗ್ಗೆ ಬೋಧಿಸಲಾಗುತ್ತದೆ. ಗ್ರಂಥಾಲಯ ಇಲಾಖೆಯಲ್ಲಿ ಅಷ್ಟೇ ಅಲ್ಲದೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗಾವಕಾಶಗಳಿವೆ. ಶಾಲಾ-ಕಾಲೇಜುಗಳಲ್ಲೂ ಗ್ರಂಥಾಲಯ ಅಧಿಕಾರಿಯಾಗಿ ಕೆಲಸ ಮಾಡಬಹುದು. ಖಾಸಗಿ ಕ್ಷೇತ್ರದಲ್ಲಂತೂ ಉತ್ತಮ ಅವಕಾಶಗಳಿವೆ. ಏನಿಲ್ಲವೆಂದರೂ ಆರಂಭದಲ್ಲೇ 8ರಿಂದ 10 ಸಾವಿರ ರೂಪಾಯಿ ಸಂಬಳ ಗ್ಯಾರಂಟಿ. ಹೀಗಾಗಿ ಹೆಣ್ಣು ಮಕ್ಕಳು ಈ ಕೋರ್ಸ್ ಮಾಡಿಕೊಂಡರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು. ವಿವರಗಳಿಗೆ ದೂರವಾಣಿ ಸಂಖ್ಯೆ: 22282515, ಮೊಬೈಲ್ ಸಂಖ್ಯೆ-9481426691 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.