ರಂಗ ಶಿಕ್ಷಣದಲ್ಲಿ ಡಿಪ್ಲೊಮಾ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ರೆಪರ್ಟರಿ ರಂಗಾಯಣವು ‘ರಂಗಶಾಲೆ’ಯನ್ನು ಆರಂಭಿಸಿ ರಂಗಾಸಕ್ತರಿಗೆ ತರಬೇತಿ ನೀಡುತ್ತಿದೆ. ರೆಪರ್ಟರಿಯನ್ನು ನಡೆಸುವುದರ ಜೊತೆಗೆ ರಂಗಭೂಮಿಗೆ ಸಂಬಂಧಿಸಿದಂತೆ ಅಧ್ಯಯನ, ಸಂಶೋಧನೆ, ದಾಖಲಾತಿ ಮತ್ತು ಬೋಧನಾ ಕೇಂದ್ರಗಳನ್ನು ಆರಂಭಿಸಬೇಕು ಎಂಬ ಉದ್ದೇಶದಿಂದ ‘ಭಾರತೀಯ ರಂಗ ಶಿಕ್ಷಣ ಕೇಂದ್ರ’ವನ್ನು ಆರಂಭಿಸಿರುವ ರಂಗಾಯಣ, ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಅನ್ನು ನಡೆಸುತ್ತಿದೆ. ರಂಗ ಶಿಕ್ಷಣದಲ್ಲಿ ತರಬೇತಿ ನೀಡುವ ಡಿಪ್ಲೊಮಾ ಕೋರ್ಸ್ ಒಂದು ವರ್ಷ ಅವಧಿಯದ್ದಾಗಿದ್ದು ಈ ಕೋರ್ಸಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾನ್ಯತೆ ನೀಡಿದೆ. ಕೋರ್ಸಿನ ಪಠ್ಯಕ್ರಮ, ಬೋಧನಾ ವಿಧಾನ, ಪರೀಕ್ಷೆಗಳು ಮುಕ್ತ ವಿವಿ ಅನುಸೂಚಿಯಂತೆ ನಡೆಯುತ್ತವೆ. ಇನ್ನೂ ವಿಶೇಷವೆಂದರೆ ಒಂದು ವರ್ಷದ ಕೋರ್ಸ್ ಮುಗಿಸುವ ವಿದ್ಯಾರ್ಥಿಗಳಿಗೆ ಮುಂದಿನ ಎರಡು ವರ್ಷ ರಂಗಾಯಣದ ರೆಪರ್ಟಿ ಕಲಾವಿದರಾಗಿ ನಾಟಕಗಳ ಸಿದ್ಧತೆ, ಪ್ರದರ್ಶನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರವೇಶ ಅರ್ಹತೆ: 2011-12ನೇ ಸಾಲಿಗೆ ರಂಗ ಶಿಕ್ಷಣದಲ್ಲಿ ಡಿಪ್ಲೊಮಾ ಪಡೆಯ ಬಯಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಉತ್ತೀರ್ಣರಾಗಿದ್ದು, (10*2 ಉತ್ತೀರ್ಣ) 18 ರಿಂದ 28 ವರ್ಷ ವಯೋಮಾನದವರಾಗಿರಬೇಕು. ಕೋರ್ಸ್ ಸಂಪೂರ್ಣ ಉಚಿತವಾಗಿದ್ದು, ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಅಭ್ಯರ್ಥಿಯ ಆಯ್ಕೆಯನ್ನು ಸಂದರ್ಶನ ಹಾಗೂ ಪ್ರತಿಭೆಯ ಆಧಾರದ ಮೇಲೆ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಪ್ರತಿಭೆ ಹಾಗೂ ರಂಗಾಸಕ್ತಿಯನ್ನು ಪರಿಗಣಿಸಿ ಸರ್ಕಾರದ ನಿಯಮಾನುಸಾರ ಮೀಸಲಾತಿ ಕ್ರಮ ಅನುಸರಿಸಲಾಗುತ್ತದೆ. ರಂಗಶಾಲೆಗೆ ಸೇರಬಯಸುವ ಅಭ್ಯರ್ಥಿಗಳು ರೂ. 50 ಡಿ.ಡಿ ಅಥವಾ ಮನಿ ಆರ್ಡರ್ ಅನ್ನು ‘ನಿರ್ದೇಶಕರು, ರಂಗಾಯಣ, ಕಲಾಮಂದಿರ ಆವರಣ, ಹುಣಸೂರು ರಸ್ತೆ, ಮೈಸೂರು-5’ ಇಲ್ಲಿಗೆ ಸಂದಾಯವಾಗುವಂತೆ 2011ರ ಮೇ 30ರ ಒಳಗೆ ಕಳುಹಿಸಿ ಅರ್ಜಿ ಹಾಗೂ ಪರಿಚಯ ಪುಸ್ತಕವನ್ನು ಪಡೆದುಕೊಳ್ಳಬಹುದು. ಅಥವಾ ರಂಗಾಯಣದ ಕಚೇರಿಯಲ್ಲೂ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 10ರ ಒಳಗೆ ತಲುಪುವಂತೆ ಸಲ್ಲಿಸಬೇಕು. ಅರ್ಜಿಯೊಂದಿಗೆ ವಿದ್ಯಾರ್ಹತೆ, ಜಾತಿ ಪ್ರಮಾಣ ಪತ್ರ, ವಯಸ್ಸು ದೃಢೀಕರಣ ಪತ್ರ ಹಾಗೂ ನಾಲ್ಕು ಭಾವಚಿತ್ರಗಳನ್ನು ಕಳುಹಿಸಿಕೊಡಬೇಕು. 2011ರ ಜೂನ್ 24 ಮತ್ತು 25ರಂದು ಸಂದರ್ಶನ ನಡೆಯಲಿದ್ದು, ಜುಲೈ 1 ರಿಂದ ತರಗತಿಗಳು ಆರಂಭವಾಗಲಿವೆ. ಒಂದು ವರ್ಷದ ಡಿಪ್ಲೊಮಾ ಅವಧಿಯಲ್ಲಿ ಮೂರು ಶಾಸ್ತ್ರ ಹಾಗೂ ಎರಡು ಪ್ರಾಯೋಗಿಕ ವಿಷಯಗಳನ್ನು ಬೋಧಿಸಲಾಗುತ್ತಿದ್ದು ಒಟ್ಟು ಐದು ಪತ್ರಿಕೆಗಳು ಇರುತ್ತವೆ. ಅಲ್ಲದೆ ಆಂತರಿಕ ಮೌಲ್ಯಮಾಪನವೂ ಇರುತ್ತದೆ. ಭಾರತೀಯ ಅಭಿಜಾತ ರಂಗಭೂಮಿ, ಪೌರಾತ್ಯ-ಪಾಶ್ಚಿಮಾತ್ಯ ರಂಗಭೂಮಿ, ವಾಸ್ತವವಾದಿ ಅಭಿನಯ ಮತ್ತು ಶೈಲೀಕೃತ ಅಭಿನಯ, ನೇಪಥ್ಯ-ರಂಗತಂತ್ರ ಮತ್ತು ವಿನ್ಯಾಸ ಹಾಗೂ ಪ್ರಯೋಗ-ಪ್ರದರ್ಶನ-ರಸಗ್ರಹಣ ವಿಷಯಗಳನ್ನು ಒಳಗೊಂಡಿದೆ. ಸೌಲಭ್ಯಗಳು: ಆಯ್ಕೆಯಾದ ಅಭ್ಯರ್ಥಿಗಳಿಗೆ ಕೋರ್ಸಿನ ಒಂದು ವರ್ಷದ ಅವಧಿಗೆ ಉಚಿತ ವಸತಿ ವ್ಯವಸ್ಥೆ ಹಾಗೂ ಪ್ರತಿ ತಿಂಗಳು ರೂ.1500 ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಮುಂದಿನ ಎರಡು ವರ್ಷಗಳ ಅವಧಿಗೆ ರೆಪರ್ಟಿ ಕಲಾವಿದರಾಗಿ ಸೇವೆ ಸಲ್ಲಿಸುವಾಗ ಮಾಸಿಕ ಗೌರವ ಸಂಭಾವನೆಯನ್ನೂ ನೀಡಲಾಗುತ್ತದೆ. ರಂಗಭೂಮಿಗೆ ಸಂಬಂಧಿಸಿದ ವ್ಯವಸ್ಥಿತ ಗ್ರಂಥಾಲಯ, ಸಾವಿರಾರು ಪುಸ್ತಕ, ಜಾನಪದ ಕಲೆಗೆ ಸಂಬಂಧಿಸಿದಂತಹ ಪರಿಚಯಾತ್ಮಕ, ಆಡಿಯೋ ವಿಡಿಯೋ ಸೌಲಭ್ಯಗಳು ಲಭ್ಯ ಇವೆ. ಪ್ರಾಯೋಗಿಕ ತರಬೇತಿಗೆ ಬೇಕಾಗುವ ಸಾಮಗ್ರಿಗಳು ಲಭ್ಯವಿರುತ್ತವೆ. ಪರಿಚಯ ಪುಸ್ತಕ ಮತ್ತು ಹೆಚ್ಚಿನ ಮಾಹಿತಿಗೆ ಮಂಜುನಾಥ್ ಬೆಳಕೆರೆ, ಸಂಯೋಜಕರು ಹಾಗೂ ಕಲಾವಿದರು, ಭಾರತೀಯ ರಂಗ ಶಿಕ್ಷಣ ಕೇಂದ್ರ, ರಂಗಶಾಲೆ, ರಂಗಾಯಣ, ಮೈಸೂರು-5, ದೂ-0821-2512639, ಮೊಬೈಲ್-9480081200 ಸಂಪರ್ಕಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.