ನಿರಂತರ ಓದಿನಿಂದ ಐಎಎಸ್ ಸಾಧ್ಯ ‘ಒಂದು ವರ್ಷದ ನಿರಂತರ ಓದು, ಸರ್ಕಾರಿ ವ್ಯವಸ್ಥೆಯಲ್ಲಿ ಉತ್ತಮ ಆಡಳಿತ ನೀಡಬೇಕು ಎಂಬ ಕನಸು, ಸಮಾಜದಲ್ಲಿ ಬಲವಾಗಿ ಬೇರೂರಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸುವ ಉದ್ದೇಶದಿಂದ ಐಎಎಸ್ ಪರೀಕ್ಷೆ ತೆಗೆದುಕೊಂಡಿದ್ದೇನೆ. ಜನರಿಗೆ ಎಲ್ಲ ಸೌಲಭ್ಯಗಳೂ ಸಿಗಬೇಕು ಎಂಬುದು ನನ್ನ ಆಶಯ’.. - ಇವು ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಯುಪಿಎಸ್ ಪರೀಕ್ಷೆಯಲ್ಲಿ 17ನೇ ರ್ಯಾಂಕ್ ಪಡೆದಿರುವ ಎಂಜಿನಿಯರಿಂಗ್ ವಿದ್ಯಾರ್ಥಿನಿ ಬಿ.ಸಿಂಧು ಅವರ ಮನದಾಳದ ಮಾತುಗಳು. 2010ರಲ್ಲಿ ಐಎಎಸ್ ಪರೀಕ್ಷೆ ತೆಗೆದುಕೊಂಡು ಕೋಚಿಂಗ್ ಕ್ಲಾಸ್‌ಗಳಿಗೆ ಹೋಗದೆ ಮೊದಲ ಯತ್ನದಲ್ಲೇ ಆಯ್ಕೆ ಆಗಿರುವ ಸಿಂಧು ಅವರ ಮುಂದೆ ನೂರೆಂಟು ಕನಸುಗಳಿವೆ. ಮೈಸೂರಿನ ಟಿ.ಕೆ.ಬಡಾವಣೆಯ ನಿವಾಸಿ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಕೆ.ಎಲ್.ಭಾರ್ಗವ್‌ರಾಮ್ ಹಾಗೂ ಪ್ರೊ. ಸಿ.ಕೆ.ನಳಿನಾಕ್ಷಿ ಅವರ ಎರಡನೇ ಪುತ್ರಿಯಾಗಿರುವ ಸಿಂಧು ರೋಟರಿ ಪಶ್ಚಿಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ (ಶೇ 96.64) ಹಾಗೂ ಸದ್ವಿದ್ಯಾ ಕಾಲೇಜಿನಲ್ಲಿ ಪಿಯುಸಿ (ಶೇ 96.64) ಓದಿದ್ದಾರೆ. 2008ರಲ್ಲಿ ಎಐಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಷಯದಲ್ಲಿ ಶೇ 84.37 ಅಂಕ ಪಡೆದು ಪದವಿ ಪೂರೈಸಿದ್ದಾರೆ. ಪದವಿ ಬಳಿಕ ಆಯ್ಕೆ ಮಾಡಿಕೊಂಡಿದ್ದು ಸಾಫ್ಟ್ ವೇರ್ ಎಂಜಿನಿಯರ್ ಕೆಲಸ. 2008ರಲ್ಲೇ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿ 2008 ರಿಂದ 2010ರ ವರೆಗೆ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಆದರೆ ಕೆಲಸದ ನಡುವೆಯೂ ಸದಾ ಕಾಡಿದ್ದು ಐಎಎಸ್ ಕನಸು. ಸಾರ್ವಜನಿಕ ಆಡಳಿತದಲ್ಲಿ ಉತ್ತಮ ಅಧಿಕಾರಿಯಾಗಿ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ತುಡಿತ. ಇದರಿಂದಾಗಿ ಕೈತುಂಬ ಸಂಬಳ ಬರುತ್ತಿದ್ದ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಆಯ್ಕೆ ಮಾಡಿಕೊಂಡಿದ್ದು ಐಎಎಸ್. ಆರಂಭದಲ್ಲಿ ಎಲ್ಲರಂತೆ ಕೋಚಿಂಗ್‌ನತ್ತ ಚಿತ್ತ ಹರಿಸಿದ ಇವರು ಮನೆಯಲ್ಲಿಯೇ ಕುಳಿತು ಇನ್ನೂ ಚೆನ್ನಾಗಿ ಓದಬಹುದು ಎಂದು ಗೊತ್ತಾದಾಗ ಕೋಚಿಂಗ್‌ಗೆ ಬೈ ಹೇಳಿ ನಿರಂತರ ಓದಿನಲ್ಲಿ ತೊಡಗಿಸಿಕೊಂಡರು. ಸಿಂಧು ಅವರು ತಮ್ಮ ಸಾಧನೆಯ ಕುರಿತು ಮಾತನಾಡಿದ್ದು ಹೀಗೆ.. ಐಎಎಸ್ ಪರೀಕ್ಷೆಗೆ ಓದುವುದು ಎಂದರೆ ಸಾಮಾನ್ಯವಾಗಿ ದಿನಕ್ಕೆ ಇಷ್ಟು ಗಂಟೆ ಓದಿಗೆ ಮೀಸಲಿಡಬೇಕು ಎಂಬ ಭಾವನೆ ಇರುತ್ತದೆ. ಆದರೆ, ನಾನು ಮಾತ್ರ ಒಂದು ವರ್ಷ ನಿರಂತರವಾಗಿ ಓದಿದೆ. ಮುಂಚೆಯಿಂದಲೂ ಐಎಎಸ್ ಬಗ್ಗೆ ನಿರೀಕ್ಷೆಗಳಿದ್ದವು. ಜೊತೆಗೆ ಆಡಳಿತದಲ್ಲಿ ಉತ್ತಮ ಸೇವೆ ಸಲ್ಲಿಸಬೇಕು ಎಂಬ ತುಡಿತ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಆಡಳಿತ ಮತ್ತು ಸಮಾಜಶಾಸ್ತ್ರ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಮೊದಲ ಯತ್ನದಲ್ಲೇ ಗುರಿ ಸಾಧಿಸಿದ್ದೇನೆ. ಐಎಎಸ್‌ನಲ್ಲಿ ಆಡಳಿತಕ್ಕೆ ಹೆಚ್ಚಿನ ಪ್ರಾಮುಖ್ಯತೆ. ಸಮಾಜದ ಎಲ್ಲ ಸ್ತರದ ಜನರೊಂದಿಗೆ ಬೆರೆತು ಕೆಲಸ ನಿರ್ವಹಿಸಬೇಕು. ಅದಕ್ಕಾಗಿ ಸಾರ್ವಜನಿಕ ಆಡಳಿತ ಮತ್ತು ಸಮಾಜದ ಭಾಗವೇ ಆಗಿರುವ ಸಮಾಜಶಾಸ್ತ್ರ ವಿಷಯ ಆಯ್ಕೆ ಮಾಡಿಕೊಂಡೆ. ನಿರಂತರ ಓದು, ಕಠಿಣ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಯಿತು. ಈಚೆಗೆ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಮೂಲತಃ ನಾನು ಎಂಜಿನಿಯರಿಂಗ್ ವಿದ್ಯಾರ್ಥಿಯಾದ್ದರಿಂದ ತಂತ್ರಜ್ಞಾನವನ್ನು ಚೆನ್ನಾಗಿ ಬಳಸಬಹುದು ಎಂಬುದು ನನ್ನ ನಂಬಿಕೆ. ಅದರಿಂದ ಸರ್ಕಾರ ಜಾರಿಗೆ ತಂದಿರುವ ‘ಇ-ಆಡಳಿತ’ವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಜನಸಾಮಾನ್ಯರಿಗೆ ಎಲ್ಲ ಸೌಲಭ್ಯಗಳನ್ನೂ ತಲುಪಿಸಬಹುದು ಎಂಬ ಕನಸು ನನ್ನದಾಗಿತ್ತು. ಸಮಾಜದ ಎಲ್ಲ ರಂಗದಲ್ಲಿ ಇಂದು ಭ್ರಷ್ಟಾಚಾರ ಮಿತಿ ಮೀರಿದೆ. ಒಬ್ಬರಿಂದ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ. ಇದು ಎಲ್ಲರೂ ಸೇರಿ ಮಾಡಬೇಕಾದ ಕೆಲಸ. ಮುಖ್ಯವಾಗಿ ವ್ಯವಸ್ಥೆ ಬದಲಾಗಬೇಕು. ಎಲ್ಲರೂ ಉನ್ನತ ಆದರ್ಶ ಇಟ್ಟುಕೊಂಡು ಬಂದರೆ ಭ್ರಷ್ಟಾಚಾರವನ್ನು ನಿಯಂತ್ರಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಕೆಳಸ್ತರದಿಂದಲೇ ಅದನ್ನು ಹೋಗಲಾಡಿಸಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.