ಆಭರಣ ಉದ್ದಿಮೆ ನಿರ್ವಹಣೆ ಕೋರ್ಸ್ ಕಳೆದ 6-7 ವರ್ಷಗಳಿಂದ ಆಗಸದೆತ್ತರಕ್ಕೆ ಏರುತ್ತಿರುವ ಚಿನ್ನ-ಬೆಳ್ಳಿಯ ದರ, ಜನಸಾಮಾನ್ಯರ ನಿದ್ದೆಗೆಡಿಸಿದೆ. ಅಂತೆಯೇ ಫ್ಯಾಷನ್‌ಪ್ರಿಯರೂ ಈ ಹಳದಿ ಹಾಗೂ ಬಿಳಿ ಲೋಹದ ಬದಲಾಗಿ ಬೇರೆ ಬೇರೆ ತೆರನೆಯ ಆಭರಣಗಳತ್ತ ತಮ್ಮ ದೃಷ್ಟಿ ಬೀರುತ್ತಿದ್ದಾರೆ. ಪ್ಲಾಸ್ಟಿಕ್ ಸೇರಿದಂತೆ ಇತರೇ ಯಾವುದೇ ಲೋಹದ ಆಭರಣಗಳು ಬಂದರೂ ಚಿನ್ನಕ್ಕೆ ಬೇರೆ ಯಾವುದೂ ಸಾಟಿ ಇಲ್ಲ ಎಂದರೆ ಸುಳ್ಳಾಗಲಾರದು. ಅಂತೆಯೇ ಕಳೆದ 8-10 ವರ್ಷಗಳಲ್ಲಿ ಆಭರಣಗಳ ಉದ್ದಿಮೆಗಳು ಬೆಳೆದು ಬಂದ ರೀತಿ ಗಮನಿಸಿದರೆ, ಆಶ್ಚರ್ಯವಾಗಬಹುದು. ಸಾಫ್ಟ್‌ವೇರ್ ಉದ್ದಿಮೆಗಳಿಗಿಂತಲೂ ವೇಗವಾಗಿ ಆಭರಣಗಳ ಉದ್ದಿಮೆಗಳು ಬೆಳೆಯುತ್ತಲಿದ್ದು, ಜಗತ್ತಿನಾದ್ಯಂತ ಹಲವಾರು ಬಹುರಾಷ್ಟ್ರೀಯ ಕಂಪೆನಿಗಳು ಇದರತ್ತ ವಾಲುತ್ತಿವೆ. ಕಾರಣ ಈ ಉದ್ದಿಮೆಯಲ್ಲಿರುವ ಅಪಾರವಾದ ಲಾಭ ಹಾಗೂ ಬೇಡಿಕೆ. ಆಭರಣ ಉದ್ದಿಮೆಗಳೆಂದರೆ ನಮಗೆ ಮೊದಲು ನೆನಪಾಗುವುದು ನಮ್ಮೂರಿನಲ್ಲಿರುವ ಪುಟ್ಟ ಅಕ್ಕಸಾಲಿಗನ ಅಂಗಡಿ. ಅದರಲ್ಲಿ ಊದುಕೊಳುವೆಯಿಂದ ಬೆಂಕಿ ಉರಿಸುತ್ತಿರುವ ಅಥವಾ ಸುತ್ತಿಗೆಯಿಂದ ಬಡಿಯುತ್ತಿರುವ ಚಿತ್ರಣ. ಆದರೆ ಇಂದು ಈ ಉದ್ದಿಮೆಗಳ ಚಿತ್ರಣ ಸಂಪೂರ್ಣ ಬದಲಾಗಿದೆ! ಅತ್ಯಂತ ಐಷಾರಾಮಿ, ಹವಾನಿಯಂತ್ರಿತ ಷೋರೂಮ್‌ಗಳು, ಕಂಪ್ಯೂಟರ್‌ನಲ್ಲಿ ನಮಗೆ ಬೇಕಾದ ಆಕೃತಿಯನ್ನು ನಿಮಿಷ ಮಾತ್ರದಲ್ಲಿ ಮಾಡಿ ತೋರಿಸುವ ಹದಿಹರೆಯದ, ಆಕರ್ಷಕ ದಿರಿಸು ತೊಟ್ಟಿರುವ, ಗ್ರಾಹಕರ ಮನಸ್ಸು ಗೆಲ್ಲುವ ಯುವಕ ಯುವತಿಯರು, ಬಂಗಾರದ ಶುದ್ಧತೆಯ ಕುರಿತು ನೀಡುವ ಗ್ಯಾರಂಟಿ, ಆನ್‌ಲೈನ್ ಮೂಲಕ ಆಭರಣಗಳ ಕ್ರಯ, ಯಾವಾಗ ಬೇಕಾದರೂ ವಾಪಸ್ಸು ಕೊಂಡುಕೊಳ್ಳುವಿಕೆಯಂತಹ ಹಲವಾರು ಗ್ರಾಹಕ ಮಿತ್ರ ಸೇವೆಗಳಿಂದಲೂ, ಆಭರಣ ಉದ್ದಿಮೆ ಪ್ರತಿನಿತ್ಯ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ. ಇಷ್ಟೆಲ್ಲ ಕೋಟ್ಯಂತರ ರೂಪಾಯಿ ಬಂಡವಾಳ ಸುರಿದ ಉದ್ದಿಮೆಗಳಿಗೆ ಬೇಕಾಗಿರುವುದು, ಈ ಆಭರಣ ಉದ್ದಿಮೆಗಳಲ್ಲಿ, ನುರಿತ ಯುವಕ ಯುವತಿಯರು. ಅಂತೆಯೇ ಈ ನಿಟ್ಟಿನಲ್ಲಿ ಆಭರಣ ಉದ್ದಿಮೆಗಳ ನಿರ್ವಹಣೆಯನ್ನು ಅಭ್ಯಸಿಸಿರುವ ಯುವಕ-ಯುವತಿಯರಿಗೆ ಈ ಕ್ಷೇತ್ರದಲ್ಲಿ ಅಪಾರವಾದ ಬೇಡಿಕೆಯಿದೆ, ಆರಂಭದಲ್ಲೇ ಐದಂಕಿಯ ಸಂಬಳದ ಜೊತೆ ಆಕರ್ಷಕ ಭತ್ಯೆಗಳು ಲಭ್ಯವಿವೆ! ಇದೀಗ ಪಿ.ಯು.ಸಿ. ಫಲಿತಾಂಶ ಬಂದಿದ್ದು, ಈ ಬಳಿಕ ಮುಂದೇನು ಎಂಬ ಚಿಂತೆ ಬಹುತೇಕ ವಿದ್ಯಾರ್ಥಿಗಳಲ್ಲಿದೆ. ಕೇವಲ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣದ ಹೊರತಾಗಿ ಇನ್ನೂ ಹಲವಾರು ವೃತ್ತಿಪರ ಕೋರ್ಸುಗಳಿದ್ದು, ಇಂದಿನ ದಿನಗಳಲ್ಲಿ ಗಮನಿಸಿದಾಗ ಆಭರಣ ಉದ್ದಿಮೆಯ ನಿರ್ವಹಣೆ, ಅತ್ಯಂತ ಬೇಡಿಕೆಯ, ಆಕರ್ಷಕ, ಗೌರವದ ವೃತ್ತಿಯೂ ಹೌದು. ನಮ್ಮ ದೇಶದಲ್ಲಿ, ಆಭರಣದ ಕ್ಷೇತ್ರದ ಕುರಿತು ತರಬೇತಿ ನೀಡುವ ಹಲವಾರು ಶೈಕ್ಷಣಿಕ ಸಂಸ್ಥೆಗಳಿದ್ದು, ಬಹುತೇಕ ಸಂಸ್ಥೆಗಳು 3 ವರ್ಷದ ಡಿಪ್ಲೊಮಾ ಪದವಿ ನೀಡುತ್ತಿವೆ. ಈ ನಿಟ್ಟಿನಲ್ಲಿ ಮೈಸೂರಿನಲ್ಲಿರುವ ಜೆ.ಎಸ್. ಪಾಲಿಟೆಕ್ನಿಕ್ ಕಾಲೇಜ್, ಮುಂಬೈಯಲ್ಲಿರುವ ಜೆಮಾಲಾಜಿಕಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಮುಂತಾದವುಗಳು ಖ್ಯಾತಿಯನ್ನು ಪಡೆದಿವೆ. ಜೊತೆಗೆ ಮುಂಬೈನಲ್ಲಿ ಅಲ್ಪಾವಧಿ ತರಬೇತಿ ನೀಡುವ ನೂರಾರು ಸಣ್ಣ ಪುಟ್ಟ ಸಂಸ್ಥೆಗಳೂ ಇದ್ದು ಅವರೂ ಅತಿ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಮಣಿಪಾಲ್ ವಿಶ್ವವಿದ್ಯಾಲಯ 2006 ರಿಂದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಜ್ಯುವೆಲರಿ ಮ್ಯಾನೇಜ್‌ಮೆಂಟ್ ನ ಮೂರು ವರ್ಷದ ಬಿ.ಬಿ.ಎ. ಕೋರ್ಸ್ ಆರಂಭಿಸಿದೆ. ಈ ಕೋರ್ಸ್‌ನ ವಿಶೇಷತೆ ಎಂದರೆ ಬಿ.ಬಿ.ಎ. ಮುಗಿಸಿದ ವಿದ್ಯಾರ್ಥಿಗಳು ವಿಶ್ವದ ಯಾವುದೇ ಕಾಲೇಜ್‌ನಲ್ಲಿ ಎಂ.ಬಿ.ಎ. ಪದವಿಯನ್ನು ಮಾಡಲು ಅರ್ಹರಿರುತ್ತಾರೆ. ಹೆಚ್ಚಿನ ಮಾಹಿತಿಗೆ: 9900406232. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.