ನಮ್ಮಲ್ಲೇಕೆ ಒಲಿಂಪಿಯನ್‌ಗಳ ಬರ? ಭಾರತದ ಈಜು ಲೋಕಕ್ಕೆ ಕರ್ನಾಟಕದ ಕೊಡುಗೆ ಅನನ್ಯ. ರಾಜ್ಯದ ಹಲವು ಈಜುಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತರದ ಸಾಧನೆ ಮಾಡಿ ಈ ಕ್ರೀಡೆಯಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ರಾಷ್ಟ್ರೀಯ ಸೀನಿಯರ್‌, ಜೂನಿಯರ್‌ ಮತ್ತು ಸಬ್‌ ಜೂನಿಯರ್‌ ವಿಭಾಗಗಳಲ್ಲಿ ಕರ್ನಾಟಕ ಹಲವು ಬಾರಿ ಸಮಗ್ರ ಪ್ರಶಸ್ತಿ ಗೆದ್ದು ಈ ಕ್ರೀಡೆಯಲ್ಲಿ ಅಧಿಪತ್ಯ ಸಾಧಿಸಿದೆ. ಹೋದವಾರ ರಾಂಚಿಯಲ್ಲಿ ನಡೆದಿದ್ದ ಸೀನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲೂ ರಾಜ್ಯದ ಈಜುಪಟುಗಳು ಪದಕದ ಬೇಟೆಯಾಡಿ ಸಮಗ್ರ ಪ್ರಶಸ್ತಿ ಎತ್ತಿಹಿಡಿದಿದ್ದರು. ಹೀಗಿದ್ದರೂ ಒಲಿಂಪಿಕ್ಸ್‌ನಂತಹ ಮಹಾ ಕೂಟದಲ್ಲಿ ಈಜಿದ ಕರ್ನಾಟಕದ ಈಜುಪಟುಗಳ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು. ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ಹಾಕಿದರೆ ಕಣ್ಣಿಗೆ ಬೀಳುವುದು ರೆಹಾನ್‌ ಪೊಂಚ, ನಿಶಾ ಮಿಲ್ಲೆಟ್‌, ಶಿಖಾ ಟಂಡನ್‌, ಎ.ಪಿ. ಗಗನ್‌ ಉಲ್ಲಾಳಮಠ ಅವರ ಹೆಸರುಗಳು ಮಾತ್ರ. ಇವರ ನಂತರ ರಾಜ್ಯದ ಯಾರೊಬ್ಬರೂ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿಲ್ಲ ಎಂಬುದು ಬೇಸರದ ಸಂಗತಿ. ಹೊಸ ಅಲೆ ಕರ್ನಾಟಕದಲ್ಲಿ ಈಗ ಹೊಸ ಅಲೆ ಎದ್ದಿದೆ. ಹಲವು ಮಂದಿ ಪ್ರತಿಭಾನ್ವಿತರು ರಾಷ್ಟ್ರೀಯ ಕೂಟಗಳಲ್ಲಿ ಮಿಂಚು ಹರಿಸುತ್ತಿದ್ದಾರೆ. ಅಮೋಘ ಸಾಮರ್ಥ್ಯ ತೋರಿ ಹೊಸ ಮೈಲಿಗಲ್ಲುಗಳನ್ನು ನೆಡುತ್ತಿದ್ದಾರೆ. ಆದರೆ ಅಂತರರಾಷ್ಟ್ರೀಯ ಕೂಟಗಳಲ್ಲಿ ನಮ್ಮವರ ಸಾಧನೆ ನಿರಾಶಾದಾಯಕವಾಗಿದೆ. ಅಮೆರಿಕ, ರಷ್ಯಾ, ಜಪಾನ್‌, ಸಿಂಗಪುರದಂತಹ ಬಲಿಷ್ಠ ಈಜುಪಟುಗಳ ಸವಾಲನ್ನು ಮೀರಿ ನಿಲ್ಲುವಷ್ಟರ ಮಟ್ಟಿಗೆ ರಾಜ್ಯದ ಈಜುಪಟುಗಳು ಬೆಳೆದಿಲ್ಲ ಎಂದರೆ ಅತಿಶಯೋಕ್ತಿ ಎನಿಸದು. ಇದಕ್ಕೆ ಕಾರಣಗಳೇನು ಎಂದು ಹುಡುಕುತ್ತಾ ಹೋದರೆ ಪಟ್ಟಿ ದೊಡ್ಡದಿದೆ. ಗ್ರಾಮೀಣ ಮಕ್ಕಳಿಗೆ ಸಿಗದ ವೇದಿಕೆ ನಮ್ಮಲ್ಲಿ ಪ್ರತಿಭಾನ್ವಿತರಿಗೇನೂ ಕೊರತೆ ಇಲ್ಲ. ಆದರೆ ಆ ಸಂಪತ್ತು ಇರುವುದು ಗ್ರಾಮೀಣ ಪ್ರದೇಶದಲ್ಲಿ. ಅವರಿಗೆ ತಮ್ಮ ಪ್ರತಿಭೆಯನ್ನು ಹೊರ ಹಾಕಲು ಸೂಕ್ತ ವೇದಿಕೆ ಸಿಗುತ್ತಿಲ್ಲ. ಭಾರತ ಈಜು ತಂಡದ ಕೋಚ್‌ ಪ್ರದೀಪ್‌ ಕುಮಾರ್‌ ಅವರೂ ಈ ಮಾತನ್ನು ಒತ್ತಿ ಹೇಳುತ್ತಾರೆ. ‘ ಗ್ರಾಮೀಣ ಭಾಗದಲ್ಲಿ ಪ್ರತಿಭಾನ್ವಿತರ ದೊಡ್ಡ ದಂಡು ಇದೆ. ಅವರಲ್ಲಿ ಹುದುಗಿರುವ ಪ್ರತಿಭೆಯನ್ನು ಹೆಕ್ಕಿ ತೆಗೆಯಲು ನಮಗೆ ಆಗುತ್ತಿಲ್ಲ. ರಾಜ್ಯದ ಬಹುತೇಕ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಈಜು ಕೇಂದ್ರಗಳಿಲ್ಲ. ಇರುವ ಕೆಲ ಕೇಂದ್ರಗಳು ಸರಿಯಾದ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಇನ್ನೂ ಕೆಲ ಈಜು ಕೇಂದ್ರಗಳಲ್ಲಿ ನುರಿತ ಕೋಚ್‌ಗಳ ಕೊರತೆ ಇದೆ. ಪರಿಸ್ಥಿತಿ ಹೀಗಿರುವಾಗ ನಮ್ಮವರು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವುದಾದರೂ ಹೇಗೆ’ ಎಂದು ಪ್ರದೀಪ್‌ ಹಿಂದೊಮ್ಮೆ ‘ಪ್ರಜಾವಾಣಿ’ ಜೊತೆ ಮಾತನಾಡುವಾಗ ಅಸಮಾಧಾನ ವ್ಯಕ್ತಪಡಿಸಿದ್ದರು. ‘ನಗರ ಪ್ರದೇಶದಲ್ಲಿ ಹಲವು ಸುಸಜ್ಜಿತ ಈಜು ಕೇಂದ್ರಗಳು ತಲೆ ಎತ್ತಿವೆ. ಆದರೆ ಅವುಗಳೆಲ್ಲಾ ಖಾಸಗಿ ಒಡೆತನ ಹೊಂದಿವೆ. ಅಲ್ಲಿ ಶ್ರೀಮಂತರು ಮಾತ್ರ ಈಜು ಕಲಿಯಲು ಬರುತ್ತಾರೆ. ಈ ಪೈಕಿ ಈಜು ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಿ ಇದರಲ್ಲೇ ಮುಂದುವರಿಯುವವರು ಮಾತ್ರ ಕೆಲವೇ ಮಂದಿ. ಹೀಗಿದ್ದಾಗ ಪ್ರತಿಭಾನ್ವೇಷಣೆಗೆ ಅವಕಾಶ ಎಲ್ಲಿ ಸಿಗುತ್ತದೆ’ ಎಂದೂ ಅವರು ಪ್ರಶ್ನಿಸಿದ್ದರು. ಪ್ರದೀಪ್‌ ಅವರ ಮಾತುಗಳು ಅಕ್ಷರಶಃ ಸತ್ಯ. ನಮ್ಮಲ್ಲಿ ಪೈಪೋಟಿ ಕಡಿಮೆಯಾಗಿದೆ. ಒಂದು ವಿಭಾಗದಲ್ಲಿ 50 ಇಲ್ಲವೊ 60 ಮಂದಿ ಇದ್ದರೆ ಅವರಲ್ಲಿ ಶ್ರೇಷ್ಠ ಎಂದೆನಿಸುವ ಒಬ್ಬರೊ, ಇಬ್ಬರನ್ನೊ ಪತ್ತೆ ಹಚ್ಚಬಹುದು. ಅಂತಹವರ ಮೇಲೆ ನಾವು ಪದಕದ ನಿರೀಕ್ಷೆ ಇಡಬಹುದು. ಅಮೆರಿಕದಲ್ಲಿ ಒಂದೊಂದು ನಗರದಲ್ಲಿ ಸಾವಿರಾರು ಮಂದಿ ಈಜು ಕಲಿಯುತ್ತಾರೆ. ಅಲ್ಲಿ ಸ್ಪರ್ಧೆ ಕಠಿಣವಾಗಿರುತ್ತದೆ. ಹೀಗಾಗಿಯೇ ಆ ರಾಷ್ಟ್ರದಲ್ಲಿ ಮೈಕಲ್‌ ಫೆಲ್ಪ್ಸ್ ಅವರಂತಹ ದಿಗ್ಗಜರು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಆ ರಾಷ್ಟ್ರ ಒಲಿಂಪಿಕ್ಸ್‌, ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಸಾಮ್ರಾಟನಂತೆ ಮೆರೆಯುತ್ತಿದೆ. ಧೋರಣೆ ಬದಲಾಗಬೇಕು ಬಹುತೇಕ ಈಜುಪಟುಗಳು ಕ್ರೀಡಾ ಕೋಟಾದಡಿಯಲ್ಲಿ ಎಂಜಿನಿಯರಿಂಗ್‌, ವೈದ್ಯಕೀಯ ಸೀಟುಗಳನ್ನು ಗಿಟ್ಟಿಸಿಕೊಳ್ಳುವ ಮತ್ತು ಸರ್ಕಾರಿ ಉದ್ಯೋಗ ಪಡೆಯುವ ಉದ್ದೇಶದಿಂದ ಈಜು ಕಲಿಯಲು ಮುಂದಾಗುತ್ತಿದ್ದಾರೆ ಎಂಬ ಮಾತುಗಳೂ ಇವೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪದಕಗಳಿಗೆ ಕೊರಳೊಡ್ಡಿದ ಅನೇಕರು ಬೇಗನೆ ಈ ಕ್ರೀಡೆಯಿಂದ ವಿಮುಖವಾಗುತ್ತಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿದೆ. ಇನ್ನೂ ಕೆಲವರು ಉನ್ನತ ವ್ಯಾಸಂಗದ ಕಾರಣದಿಂದಲೂ ಈಜು ಕಲಿಕೆಯನ್ನು ಅರ್ಧಕ್ಕೆ ಮೊಟಕು ಗೊಳಿಸಿದ ಉದಾಹರಣೆಗಳೂ ಇವೆ. ಈಜು ತರಬೇತಿ ಕೇಂದ್ರಗಳ ಮಹತ್ವ ಕರ್ನಾಟಕದ ಈಜು ಬೆಳವಣಿಗೆಯಲ್ಲಿ ಹಲವು ಈಜು ತರಬೇತಿ ಕೇಂದ್ರಗಳು ತಮ್ಮದೇ ಆದ ಕೊಡುಗೆ ನೀಡಿವೆ. ಇವುಗಳಲ್ಲಿ ಬೆಂಗಳೂರಿನ ಬಸವನಗುಡಿ ಈಜು ಕೇಂದ್ರ ಪ್ರಮುಖವಾದುದು. 1986ರಲ್ಲಿ ಹುಟ್ಟುಪಡೆದ ಈ ಕೇಂದ್ರ ಹಲವು ಈಜುಪಟುಗಳ ಬದುಕನ್ನು ರೂಪಿಸಿದೆ. ಈಗಲೂ ಇಲ್ಲಿ ವಿವಿಧ ವಯೋಮಾನದ 400ಕ್ಕೂ ಹೆಚ್ಚು ಮಂದಿ ಈ ಕ್ರೀಡೆಯ ಪಾಠಗಳನ್ನು ಕಲಿಯುತ್ತಿದ್ದಾರೆ. ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದ ರೆಹಾನ್‌ ಪೊಂಚ, ನಿಶಾ ಮಿಲ್ಲೆಟ್‌, ರೋಹಿತ್‌ ಹವಾಲ್ದಾರ್‌, ಮಂದಾರ ದಿವಾಸೆ, ತಲಾಶ ಪ್ರಭು, ಜೆ.ಪಿ. ಅರ್ಜುನ್‌, ಸಿ. ಶುಭಾ ಹೀಗೆ ಹಲವರು ಈ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾರೆ ಎಂಬುದು ವಿಶೇಷ. ಈ ಅಕಾಡೆಮಿಯಲ್ಲಿ ಕಲಿಯುತ್ತಿರುವ ಅರವಿಂದ್‌ ಮಣಿ, ಸಲೋನಿ ದಲಾಲ್‌, ದಾಮಿನಿ ಕೆ. ಗೌಡ, ಎಸ್‌.ಪಿ. ಲಿಖಿತ್‌ ಅವರು ಪ್ರಸ್ತುತ ರಾಷ್ಟ್ರೀಯ ಮತ್ತು ರಾಜ್ಯ ರಾಜ್ಯಮಟ್ಟಗಳಲ್ಲಿ ಪದಕದ ಸಾಧನೆ ಮಾಡುತ್ತಿರುವುದು ಪ್ರಶಂಸನೀಯ. ** ಈಜು ಕಣಜ ಮಹಾರಾಷ್ಟ್ರದ ವೀರ್‌ಧವಳ್‌ ಖಾಡೆ, ದೆಹಲಿಯ ಸಂದೀಪ್‌ ಸೆಜ್ವಾಲ್‌, ಕೇರಳದ ಸಾಜನ್‌ ಪ್ರಕಾಶ್‌, ಶಿವಾನಿ ಕತಾರಿಯಾ ಸೇರಿದಂತೆ ಅನೇಕರು ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಾರೆ. ಆದರೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಚಾಂಪಿಯನ್‌ಷಿಪ್‌ಗಳು ಬಂದಾಗ ಇವರು ತಮ್ಮ ತಮ್ಮ ರಾಜ್ಯಗಳನ್ನು ಪ್ರತಿನಿಧಿಸುತ್ತಾರೆ. ಈ ನಡುವೆಯೂ ಕರ್ನಾಟಕ ತಂಡ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಸಮಗ್ರ ಪ್ರಶಸ್ತಿ ಗೆಲ್ಲುತ್ತಾ ಬಂದಿರುವುದು ಉತ್ತಮ ಬೆಳವಣಿಗೆ. ರಾಜ್ಯ ಈಜು ಕಣಜ ಎಂಬುದು ಇದರಿಂದ ಸಾಬೀತಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.