ಶಾಲಾ ಶಿಕ್ಷಣಕ್ಕೆ ಹೊಸ ಭಾಷ್ಯ ಬಹುಸಂಖ್ಯಾತ ಸಮುದಾಯಗಳನ್ನು ಹೊರಗಿಡುವ ಮೂಲಕ ಸಾಮಾಜಿಕ ಅಭಿವೃದ್ಧಿ ಸಾಧ್ಯವಿಲ್ಲವೆಂಬುದು ಸಾರ್ವತ್ರಿಕ ಸತ್ಯ. ಮಾನವ ಹಕ್ಕುಗಳ ಈ ಯುಗದಲ್ಲಿ ‘ಕಲ್ಯಾಣ ರಾಜ್ಯ’ದ ಪರಿಕಲ್ಪನೆಗೆ ಪರ್ಯಾಯವಾಗಿ ‘ಹಕ್ಕು ಆಧಾರಿತ’ ನೆಲೆಗಟ್ಟಿನಲ್ಲಿ ಅಭಿವೃದ್ಧಿ ಮಾದರಿಗಳನ್ನು ರೂಪಿಸಿಕೊಳ್ಳುವುದು ಮತ್ತು ಸಾಕಾರಗೊಳಿಸುವುದು ರಾಜ್ಯದ ಜವಾಬ್ದಾರಿ. ಅಭಿವೃದ್ಧಿಯ ಈ ಪ್ರಕ್ರಿಯೆಯಲ್ಲಿ ಮೂಲ ಶಿಕ್ಷಣ ಪಾತ್ರ ಅತ್ಯಮೂಲ್ಯವಾದದ್ದು. ಶಿಕ್ಷಣವನ್ನು ಸಾರ್ವತ್ರಿಕ ನೆಲೆಗಟ್ಟಿನಲ್ಲಿ ಎಲ್ಲರಿಗೂ ಒದಗಿಸಲು ನಾವು ಕಟ್ಟಿಕೊಳ್ಳುವ ಶಿಕ್ಷಣ ವ್ಯವಸ್ಥೆ ಸಮಾನತೆ, ಸಮತೆ ಮತ್ತು ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ರೂಪಗೊಳ್ಳಬೇಕಾಗಿರುವುದು ನಾವೇ ರೂಪಿಸಿಕೊಂಡ ಸಂವಿಧಾನದ ಆಶಯ ಮತ್ತು ಆದ್ಯತೆ. ಆದರೆ, ರಾಜ್ಯದಲ್ಲಿ ನಾವು ಕಟ್ಟಿಕೊಂಡಿರುವ ಶಿಕ್ಷಣ ವ್ಯವಸ್ಥೆ ಇದಕ್ಕೆ ಅಪವಾದವಾಗಿದ್ದು ಒಂದೆಡೆ ಅಸಮಾನತೆ ಮತ್ತು ತಾರತಮ್ಯವನ್ನು ತನ್ನ ಒಡಲಿನಲ್ಲಿರಿಸಿಕೊಂಡರೆ ಮತ್ತೊಂದೆಡೆ ಖಾಸಗೀಕರಣ ಮತ್ತು ವ್ಯಾಪಾರೀಕರಣವನ್ನು ತನ್ನ ಮೂಲ ಮಂತ್ರವನ್ನಾಗಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ, ಐಜಿಸಿಎಸ್‌ಇ, ಐಸಿಎಸ್‌ಇ ಮತ್ತು ಸಿಬಿಎಸ್‌ಇ ನೊಂದಾಯಿತ ಶಿಕ್ಷಣ ಸಂಸ್ಥೆಗಳು ಪಠ್ಯಕ್ರಮ, ಪಠ್ಯವಸ್ತು, ಶುಲ್ಕ ನಿಗದಿ, ಭಾಷಾ ಮಾಧ್ಯಮ ಇತ್ಯಾದಿ ವಿಷಯಗಳಲ್ಲಿ ಸಂವಿಧಾನದ ಮೌಲ್ಯಗಳಿಗೆ ತಿಲಾಂಜಲಿ ನೀಡಿ ಏಕಪಕ್ಷೀಯ ಮತ್ತು ಲಾಭಕೋರ ನೀತಿಯ ಮೂಲಕ ಶಿಕ್ಷಣವನ್ನು ಒಂದು ಮಾರಾಟದ ಸರಕನ್ನಾಗಿಸಿವೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿನ ಸೌಲಭ್ಯಗಳ ಕೊರತೆ ಮತ್ತು ಕನ್ನಡ ಮಾಧ್ಯಮ ಬೋಧನಾ ವಿಷಯವನ್ನು ತನ್ನ ಲಾಭ ಮತ್ತು ಅನುಕೂಲಕ್ಕೆ ಉಪಯೋಗಿಸಿಕೊಳ್ಳುವ ಮೂಲಕ ಸರ್ಕಾರಿ ಶಾಲೆಗಳನ್ನು ಅನುಪಯುಕ್ತ ಕೇಂದ್ರಗಳೆಂದು ಬಿಂಬಿಸುವ ಈ ಖಾಸಗಿ ಹರಕು - ಮುರುಕು ಆಂಗ್ಲ ಮಾಧ್ಯಮ ಶಾಲೆಗಳು ಜನ ಸಾಮಾನ್ಯರ ಪಾಲಿಗೆ ಸುಲಿಗೆ ಕೇಂದ್ರಗಳಾಗಿವೆ. ಖಾಸಗಿ ಶಾಲೆಗಳ ಈ ವರ್ತನೆಯನ್ನು ವಿರೋಧಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಪಾಲಕರ ಮತ್ತು ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರ ಸಂಘದ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಂಡಿದ್ದ ಘನ ಉಚ್ಚ ನ್ಯಾಯಾಲಯವು ಈ ವರ್ಷ ಜನವರಿ10ರಂದು ಮಹತ್ವದ ತೀರ್ಪುನ್ನು ನೀಡಿದೆ. ಈ ತೀರ್ಪು ಕರ್ನಾಟಕದಲ್ಲಿ ಶಾಲಾ ಶಿಕ್ಷಣಕ್ಕೆ ಹೊಸ ಭಾಷ್ಯ ಬರೆದಿದೆ. ಈ ತೀರ್ಪಿನ ಪ್ರಮುಖ ಸಾರಾಂಶವನ್ನು ರಾಜ್ಯದ ಪ್ರಜ್ಞಾವಂತ ನಾಗರೀಕರು ಗ್ರಹಿಸಿ ಆ ಮೂಲಕ ಹೊಸದೊಂದು ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಳ್ಳುವ ಕೆಲಸಕ್ಕೆ ಮುಂದಾಗಬೇಕಾಗಿದೆ. ನ್ಯಾಯಾಲಯದ 32 ಪುಟಗಳ ಈ ತೀರ್ಪು ಕೇವಲ ಅರ್ಜಿದಾರರ ಅಹವಾಲನ್ನು ಇತ್ಯರ್ಥಪಡಿಸಲು ಮಾತ್ರ ಸೀಮಿತವಾಗಿರದೆ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಅರ್ಥಪೂರ್ಣವಾಗಿ ವಿಶ್ಲೇಷಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಎರಡು ಪ್ರಮುಖ ಪ್ರಶ್ನೆಗಳನ್ನು ತನ್ನ ಮುಂದಿಟ್ಟುಕೊಂಡಿತ್ತು. ಒಂದು, ಕರ್ನಾಟಕ ಶಿಕ್ಷಣ ಕಾಯಿದೆ 1983ರಲ್ಲಿನ ಪ್ರಕರಣ 1 (-ಎ) ಅನ್ವಯ ಐಸಿಎಸ್‌ಸಿ ಮತ್ತು ಸಿಬಿಎಸ್‌ಇ ಶಾಲೆಗಳನ್ನು, ಕಾಯ್ದೆಯ ಪರಿಧಿಯಿಂದ ಹೊರಗಿಡುವುದು ಸಂವಿಧಾನದ ಪರಿಚ್ಛೇಧ 14ರ ಉಲ್ಲಂಘನೆಯೇ? ಎಂಬುದು. ಎರಡು, ಈ ಶಾಲೆಗಳು ಶಾಲಾ ಶುಲ್ಕವನ್ನು ಏರಿಸಲು ಹೊರಡಿಸಿರುವ ಸುತ್ತೋಲೆಗಳು, ಜ್ಞಾಪನಾ ಮತ್ತು ಮಾಹಿತಿ ಪತ್ರಗಳನ್ನು ಸ್ವೇಚ್ಛಾನುಸಾರ, ಏಕಪಕ್ಷೀಯ, ಕಾನೂನು ಬಾಹಿರ, ಅನ್ಯಾಯ ಮತ್ತು ಅಸಮಂಜಸವೆನ್ನುವ ಆಧಾರದ ಮೇಲೆ ರದ್ದುಗೊಳಿಸಬೇಕೆ? ಎಂಬುದಾಗಿತ್ತು. ನ್ಯಾಯಾಲಯವು ಈ ಪ್ರಕರಣವನ್ನು ಇತ್ಯರ್ಥಗೊಳಿಸಲು ಶಿಕ್ಷಣದ ಉದ್ದೇಶ ಏನಾಗಿರಬೇಕು ಎಂಬ ಅಂಶದಿಂದ ತನ್ನ ವಿಶ್ಲೇಷಣೆಯನ್ನು ಪ್ರಾರಂಭಿಸಿದೆ. ಶಿಕ್ಷಣ ಒಂದು ಸಾಮಾಜಿಕ ಮತ್ತು ರಾಜಕೀಯ ಅವಶ್ಯಕತೆ ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ. ಪ್ರಾಚೀನ ಭಾರತ, ಬ್ರಿಟಿಷ್ ಆಳ್ವಿಕೆ ಮತ್ತು ಸ್ವತಂತ್ರ ಭಾರತದ ಸಂವಿಧಾನದಲ್ಲಿ ಶಿಕ್ಷಣದ ಸ್ಥಿತಿಗತಿಗಳನ್ನು ಸಂಕ್ಷಿಪ್ತವಾಗಿ ನ್ಯಾಯಾಲಯವು ಚರ್ಚಿಸಿದೆ. ಸ್ವಾತಂತ್ರ್ಯ ನಂತರ ಬೆಳವಣಿಗೆಗಳನ್ನು ಗುರುತಿಸಿರುವ ನ್ಯಾಯಾಲಯವು ಶಾಲಾ ಶಿಕ್ಷಣದಲ್ಲಿನ ಹಲವು ಪ್ರಮುಖ ಸಾಧನೆಗಳನ್ನು ಪಟ್ಟಿಮಾಡಿದೆ. ಶಿಕ್ಷಣ ಆಯೋಗದ(1964-66) ಹೇಳಿಕೆಯನ್ನು ಉದ್ಧರಿಸಿರುವ ನ್ಯಾಯಾಲಯವು “ಶಿಕ್ಷಣ ಪರಿವರ್ತನೆಯ ಸಾಧನ, ಶಿಕ್ಷಣದಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ಹಿಂಸಾರಹಿತ ಕ್ರಾಂತಿಯಿಲ್ಲದೆ ಸಾಧಿಸಬೇಕಾದರೆ, ಇರುವ ಒಂದೇ ಒಂದು ಸಾಧನವೆಂದರೆ ಶಿಕ್ಷಣ” ಎಂಬುದನ್ನು ಪುನರುಚ್ಚರಿಸಿದೆ. ನ್ಯಾಯಾಲಯವು ತನ್ನ ತೀರ್ಪಿನ ಪ್ಯಾರಾ 10ರಲ್ಲಿ ಶಿಕ್ಷಣ ಕ್ಷೇತ್ರದಲ್ಲಿರುವ ಇಂದಿನ ಸಮಸ್ಯೆಗಳನ್ನು ಚರ್ಚಿಸುತ್ತಾ ಶಿಕ್ಷಣವು ಹೇಗೆ ಪ್ರತ್ಯೇಕತೆ ಮತ್ತು ವಿಭಜನೆಯಿಂದ ಕೂಡಿದೆ ಎಂಬ ಅಂಶವನ್ನು ಮನೋಜ್ಞವಾಗಿ ವಿಶ್ಲೇಷಿಸಿದೆ. ಇಂದಿನ ಶಿಕ್ಷಣ ವ್ಯವಸ್ಥೆಯು ಮಕ್ಕಳಲ್ಲಿ ಪ್ರತ್ಯೇಕತೆ, ಅಸಮಾನತೆ ಮತ್ತು ತಾರತಮ್ಯವನ್ನು ಬೆಳೆಸುತ್ತಿದೆ ಎಂದು ಹೇಳಿರುವ ನ್ಯಾಯಾಲಯವು ಶಿಕ್ಷಣ ವ್ಯವಸ್ಥೆಯು ಶ್ರೀಮಂತರ ಮತ್ತು ಬಡವರ ನಡುವಿನ ಕಂದರವನ್ನು ಹೆಚ್ಚಿಸುವ ಮೂಲಕ ಕಣ್ಣಿಗೆ ರಾಚುವ ರೀತಿಯಲ್ಲಿ ತಾರತಮ್ಯವನ್ನುಂಟುಮಾಡಿದೆ ಎಂದು ಅಭಿಪ್ರಾಯ ಪಟ್ಟಿದೆ. ಶಿಕ್ಷಣ ಕ್ಷೇತ್ರದಲ್ಲಿನ ಈ ಬೆಳವಣಿಗೆ ಸಂವಿಧಾನದಲ್ಲಿನ ಸಮಾನತೆ, ಸಮತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ. ಪ್ರತಿಯೊಂದು ಮಗುವಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವ ಹಕ್ಕಿದೆ ಎಂಬುದನ್ನು ನ್ಯಾಯಾಲಯವು ಮತ್ತೊಮ್ಮೆ ಪುನರುಚ್ಚರಿಸಿದೆ. ತೀರ್ಪಿನ ಕೊನೆಯ ಭಾಗದಲ್ಲಿ, ಕರ್ನಾಟಕ ಶಿಕ್ಷಣ ಕಾಯಿದೆಯನ್ನು ರೂಪಿಸುವ ಹಿಂದಿದ್ದ ಉದ್ದೇಶ ಮತ್ತು ಕಾರಣವನ್ನು ಪ್ರಸ್ತಾಪಿಸುತ್ತಾ, ಕಾಯಿದೆಯನ್ನು ರೂಪಿಸುವ ಸಂದರ್ಭದಲ್ಲಿ ಸರ್ಕಾರವು “ಶಿಕ್ಷಣ ವ್ಯವಸ್ಥೆಯನ್ನು ಯೋಜಿತ ಅಭಿವೃದ್ಧಿಯ ಮಾದರಿಯಲ್ಲಿ ಕಟ್ಟಿಕೊಳ್ಳುವ ಅವಶ್ಯಕತೆಯಿದ್ದು ಆರೋಗ್ಯಕರ ಶಿಕ್ಷಣ ಪದ್ಧತಿ, ಶಿಕ್ಷಣ ಗುಣಮಟ್ಟದ ಸುಧಾರಣೆ ಹಾಗೂ ನಿರ್ವಹಣೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಒಂದು ಸಂಘಟನಾತ್ಮಕ ಶಿಸ್ತು ಮತ್ತು ನಿಯಂತ್ರಣವನ್ನು ಸಾಧಿಸುವ ದೃಷ್ಟಿಯಿಂದ ರೂಪಿಸಲಾಗಿದೆ”ಎಂದು ತಿಳಿಸಿದೆ. ಆದರೆ, ಅದೇ ಸರ್ಕಾರವು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾದ 1998ರ ಕಾಯಿದೆ 8 ರ ಮೂಲಕ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಶಾಲೆಗಳನ್ನು ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡುವ ಮೂಲಕ ತನ್ನ ಮೂಲ ಉದ್ದೇಶಕ್ಕೆ ತಾನೇ ಚ್ಯುತಿ ತಂದುಕೊಂಡಿದೆ. ಹೀಗಾಗಿ, ರಾಜ್ಯವು ಈ ಶಾಲೆಗಳಲ್ಲಿ ಪ್ರವೇಶ/ದಾಖಲಾತಿ, ಶುಲ್ಕ ನಿಗದಿ ಮತ್ತು ಸೇವಾ ಸ್ಥಿತಿಗತಿಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದ್ದರಿಂದ 1998ರ ತಿದ್ದುಪಡಿ ಕಾಯಿದೆ 8 ಮೂಲ ಶಿಕ್ಷಣ ಕಾಯಿದೆಯ ಉದ್ದೇಶ ಮತ್ತು ಕಾರಣಗಳಿಗೆ ತದ್ವಿರುದ್ಧವಾಗಿದೆ. ಶಿಕ್ಷಣ ಕಾಯಿದೆಯ ಪ್ರಕರಣ 1 (-ಎ ) ಸಂವಿಧಾನದ ಪರಿಚ್ಛೇದ 14ರ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯವು ಘೋಷಿಸಿದೆ. ಈ ಶಾಲೆಗಳ ಮೇಲೆ ರಾಜ್ಯದ ಹಿಡಿತ ಮತ್ತು ನಿಯಂತ್ರಣವಿಲ್ಲದ ಕಾರಣ ಶಾಲೆಗಳು ತಮ್ಮ ಸ್ವೇಚ್ಛಾನುಸಾರ ಪ್ರವೇಶಾತಿ, ಶುಲ್ಕ ನಿಗದಿ ಮತ್ತು ಸೇವಾ ನಿಯಮಗಳನ್ನು ಅನುಸರಿಸುವುದು ಸಂವಿಧಾನ ವಿರೋಧಿ ಮತ್ತು ಪರಿಚ್ಛೇಧ 14ರ ಉಲ್ಲಂಘನೆ ಎಂಬುದನ್ನು ನ್ಯಾಯಾಲಯವು ಘಂಟಾಘೋಷವಾಗಿ ಸಾರಿದೆ. ಒಟ್ಟಾರೆ, ನ್ಯಾಯಾಲಯದ ಈ ತೀರ್ಪು ಕರ್ನಾಟಕ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಹೊಸ ಭಾಷ್ಯವನ್ನು ಬರೆದಿದೆ. 1998ರಿಂದ ಐಸಿಎಸ್‌ಇ, ಸಿಬಿಎಸ್‌ಇ ಮತ್ತು ಇತರೆ ಅಂತರರಾಷ್ಟ್ರೀಯ ಶಾಲೆಗಳಿಗೆ ಆಕ್ಷೇಪಣಾ ರಹಿತ ಪತ್ರವನ್ನು ನೀಡಿ ಕೈತೊಳೆದುಕೊಳ್ಳುತ್ತಿದ್ದ ಸರ್ಕಾರ ಇನ್ನು ಮುಂದೆ ಆ ರೀತಿ ಮಾಡಲಾಗದಂತೆ ಕರ್ನಾಟಕ ಶಿಕ್ಷಣ ಹಕ್ಕು ಕಾಯಿದೆ 1983 ರ ಪ್ರಕರಣ 1(-ಎ ) ಯನ್ನು ಅಸಿಂಧು ಎಂದು ಘೋಷಿಸಿ ನ್ಯಾಯಾಲಯ ಅನೂರ್ಜಿತಗೊಳಿಸಿದೆ. ಶಿಕ್ಷಣದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ತರುವಲ್ಲಿ ಸೋತಿರುವ ಎಲ್ಲ ಸರ್ಕಾರಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ.ನ್ಯಾಯಾಲಯದ ಈ ತೀರ್ಪು ಸಾಮಾಜಿಕ ನ್ಯಾಯ, ಸಮತೆ, ಸಮಾನತೆ ಮತ್ತು ಸಮಾನ ಶಾಲಾ ಶಿಕ್ಷಣಕ್ಕಾಗಿ ಹಗಲಿರುಳು ಹೋರಾಡುತ್ತಿರುವ ಜನಪರ ಸಂಘಟನೆಗಳ ಹೋರಾಟಕ್ಕೆ ಒಂದು ಹೊಸ ಆಯಾಮವನ್ನು ತಂದಿದೆ. ಸಮಾನ ಶಾಲಾ ಶಿಕ್ಷಣದ ಕನಸನ್ನು ಹೊತ್ತು ಕಳೆದ ಮೂರು ದಶಕಗಳಿಂದ ಸಂಶೋಧಕನಾಗಿ ಮತ್ತು ಸಾಮಾಜಿಕ ಕಾರ್ಯಕರ್ತನಾಗಿ ದುಡಿಯುತ್ತಿರುವ ನನಗೆ ಮತ್ತು ನನ್ನಂತಹ ಸಾವಿರಾರು ಜನ ಕಾರ್ಯಕರ್ತರು ಅಸಮಾನತೆ ಮತ್ತು ತಾರತಮ್ಯದಿಂದ ಕೂಡಿರುವ ಈ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ ನೆಲೆಗಟ್ಟಿನಲ್ಲಿ ಹೊಸ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಳ್ಳಬೇಕೆಂಬ ಹೋರಾಟಕ್ಕೆ ನ್ಯಾಯಾಲಯದ ಈ ತೀರ್ಪು ಮತ್ತಷ್ಟು ಶಕ್ತಿ ತುಂಬಿದೆ. ಎಲ್ಲಕ್ಕಿಂತ ಮಿಗಿಲಾಗಿ, ಲಕ್ಷಾಂತರ ಪಾಲಕರ ಮನಸ್ಸಿನಲ್ಲಿ ಒಂದು ಹೊಸ ಆಶಾ ಭಾವನೆಯನ್ನು ಮೂಡಿಸಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕೂಡಲೇ ಕಾರ್ಯ ಪ್ರವೃತ್ತವಾಗಿ ನ್ಯಾಯಾಲಯದ ತೀರ್ಪಿನ ಅನ್ವಯ ಎಲ್ಲ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣ ನೀಡಬಲ್ಲ ವ್ಯವಸ್ಥೆಯೊಂದನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸಮಗ್ರ ನೀತಿಯೊಂದನ್ನು ರೂಪಿಸಲು ಮುಂದಾಗಬೇಕಿದೆ. ಅದನ್ನು ಮರೆತು, ಕೇವಲ ಆಕ್ಷೇಪಣಾ ರಹಿತ ಪತ್ರ ನೀಡುವ ಮೂಲಕ ಎಲ್ಲೆಂದರಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಇಂಥಹ ಲಾಭಕೋರ ಖಾಸಗಿ ಶಾಲೆಗಳನ್ನು ನಿಯಂತ್ರಿಸದೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಜಾರಿಕೊಂಡು ಕೈಕಟ್ಟಿ ಕುಳಿತರೆ ಮುಂದೊಂದು ದಿನ ಜನ “ ಸರ್ಕಾರ ಏಕೆ ಬೇಕು” ಎಂಬ ಪ್ರಶ್ನೆ ಎತ್ತಿದರೆ ಅದು ಅತಿಶಯೋಕ್ತಿಯಲ್ಲ? (ಲೇಖಕರು - ಫೆಲೋ, ಮಗು ಮತ್ತು ಕಾನೂನು ಕೇಂದ್ರ ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ, ಬೆಂಗಳೂರು) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.