ಪ್ರಶ್ನೆ - ಉತ್ತರ ಸೌಮ್ಯ, ಹಾಸನ *ನಾನು ಹತ್ತನೇ ತರಗತಿ ಕನ್ನಡ ಮಾಧ್ಯಮದಲ್ಲಿ ಶೇ.80 ಅಂಕಗಳನ್ನು ಗಳಿಸಿ ಪಿ.ಯು.ಸಿ ಸೇರಿ ಪಿ.ಸಿ.ಎಂ.ಬಿ. ಕೋರ್ಸನ್ನು ಆಯ್ಕೆ ಮಾಡಿಕೊಂಡೆ. ಮನೆಯಲ್ಲಿನ ಕೆಲವು ಸಮಸ್ಯೆಗಳಿಂದ ಓದಲು ಆಗದೇ ಗಣಿತ ವಿಷಯದಲ್ಲಿ ಫೇಲಾಗಿ ನಂತರ ಮತ್ತೆ ಕಟ್ಟಿ ಶೇ.42 ಅಂಕಗಳನ್ನು ಪಡೆದಿರುತ್ತೇನೆ. ಈ ಮುಂಚೆ ಸಿ.ಇ.ಟಿ.ಯಲ್ಲಿ ಉತ್ತಮ ರ್ಯಾಂಕ್ ಪಡೆದು ಎಂ.ಬಿ.ಬಿ.ಎಸ್ ಸೀಟು ಸಿಕ್ಕುವಂತಿದ್ದರೂ ಒಂದು ವಿಷಯದಲ್ಲಿ ಫೇಲ್ ಆಗಿದ್ದರಿಂದ ಪ್ರವೇಶ ಸಾಧ್ಯವಾಗಲಿಲ್ಲ. ಈಗ ನಾನು ಮತ್ತೆ ಸಿ.ಇ.ಟಿ. ಬರೆಯಬಹುದೇ? ಎಷ್ಟು ವರ್ಷಗಳವರೆಗೆ ಈ ಅವಕಾಶ ಇರುತ್ತದೆ? ಈಗ ನಾನು ಹಾಸನ ಮೆಡಿಕಲ್ ಕಾಲೇಜಿನಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್ ಕೋರ್ಸನ್ನು ಆಯ್ಕೆ ಮಾಡಿಕೊಂಡು ಓದುತ್ತಿದ್ದೇನೆ. ಇದರಿಂದ ಸರ್ಕಾರಿ ನೌಕರಿ ಸಿಗುತ್ತದೆಯೇ? ಪಶು ವೈದ್ಯಕೀಯ ಅಥವಾ ಅಗ್ರಿಕಲ್ಚರಗೆ ಸೇರಬಹುದೇ? ಮಾಹಿತಿ ನೀಡಿ. ಸಿ.ಇ.ಟಿ.ಯಲ್ಲಿ ಎಂ.ಬಿ.ಬಿ.ಎಸ್ ಸೀಟು ಸಿಗುವಷ್ಟು ರ್ಯಾಂಕ್ ಪಡೆದೂ, ಗಣಿತದಲ್ಲಿ ಅನುತ್ತೀರ್ಣರಾದ ಕಾರಣದಿಂದ ಅದು ನಿಮ್ಮ ಕೈ ತಪ್ಪಿ ಹೋದುದು ನಿಮ್ಮ ದೌರ್ಭಾಗ್ಯ. ಆದರೆ ಮೆಡಿಕಲ್‌ಗೆ ಹೋಗಬೇಕೆಂಬ ಬಯಕೆ ನಿಮ್ಮಲ್ಲಿ ಉತ್ಕಟವಾಗಿದ್ದರೆ, ನೀವು ಈಗಲೂ ಸಿ.ಇ.ಟಿ. ಪರೀಕ್ಷೆ ತೆಗೆದುಕೊಂಡು ಪ್ರಯತ್ನಿಸಬಹುದು. ಪಿ.ಯು. ಬೋರ್ಡ್ ಪರೀಕ್ಷೆಗಳ ಅಂಕಗಳ ಹಾಗೆ ಸಿ.ಇ.ಟಿ. ಅಂಕಗಳು ಒಂದು ವರ್ಷದಿಂದ ಮತ್ತೊಂದು ವರ್ಷಕ್ಕೆ ವರ್ಗಾಯಿಸಲ್ಪಡುವುದಿಲ್ಲ. ಎಷ್ಟು ಬಾರಿಯಾದರೂ ಸಿ.ಇ.ಟಿ. ಪರೀಕ್ಷೆಗಳನ್ನು ಬರೆಯಬಹುದು. ಇದಕ್ಕೆ ವಯೋಮಿತಿ ಗಡುವು ಇಲ್ಲ. ನೀವು ಈಗ ಮಾಡುತ್ತಿರುವ ಹೆಲ್ತ್ ಇನ್ಸ್‌ಪೆಕ್ಟರ್ ಕೋರ್ಸ್ ಸಹ ಒಳ್ಳೆಯದೇ. ಆದರೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಕಡಿಮೆ. ಪ್ರತಿಭಾವಂತರಾದ ನೀವು ಎಂ.ಬಿ.ಬಿ.ಎಸ್. ಅಥವಾ ಬಿ.ವಿ.ಎಸ್.ಸಿ ಕೋರ್ಸುಗಳಿಗೆ ಹೋಗುವುದು ಒಳ್ಳೆಯದು. ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಮತ್ತು ಹೆಚ್ಚಿನ ಸಾಧನೆಗೆ ಅವಕಾಶಗಳು ವಿಪುಲವಾಗಿವೆ. ಮಂಜುನಾಥ್.ಎಂ.ಜಿ., ಕುಳಗಟ್ಟಿ, ದಾವಣಗೆರೆ ಜಿಲ್ಲೆ *ನಾನು ದ್ವಿತೀಯ ಪಿ.ಯು.ಸಿ. (ಪಿ.ಸಿ.ಎಂ.ಬಿ) ವಿದ್ಯಾರ್ಥಿ. ಮುಂದೆ ನಾನು ಆಟೋಮೊಬೈಲ್ ಡಿಸೈನರ್ ಎಂಜಿನಿಯರ್ ಆಗುವ ಬಯಕೆ ಹೊಂದಿದ್ದೇನೆ. ಇದಕ್ಕಾಗಿ ಪಿ.ಯು. ನಂತರ ಡಿಪ್ಲೊಮಾ ಸೇರಿ ನಂತರ ಆಟೋಮೊಬೈಲ್ ಡಿಸೈನರ್ ಕೋರ್ಸ್ ಮಾಡಬೇಕೆಂದಿದ್ದೇನೆ. ಡಿಪ್ಲೊಮಾ ನಂತರ ಆಟೋಮೊಬೈಲ್ ಡಿಸೈನರ್ ಕೋರ್ಸ್ ಮಾಡಬಹುದೆ? ಈ ಕೋರ್ಸ್‌ಗೆ ಸಂಬಂಧಿಸಿದಂತೆ ಡಿಪ್ಲೊಮಾನಲ್ಲಿ ಯಾವ ವಿಷಯ ಆಯ್ದುಕೊಳ್ಳಬೇಕು? ದಯಮಾಡಿ ಸಲಹೆ ಕೊಡಿ. ನೀವು ಆಟೋಮೊಬೈಲ್ ಡಿಸೈನರ್ ಆಗಲು ಎನ್.ಟಿ.ಟಿ.ಎಫ್. ಅಥವಾ ಡಿಪ್ಲೊಮಾ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡುವುದು ಒಳ್ಳೆಯದು. ಎನ್.ಟಿ.ಟಿ.ಎಫ್.ನಲ್ಲಿ ಮೂರು ವರ್ಷಗಳ ಕಾಲೇಜು ಶಿಕ್ಷಣದ ಜೊತೆ ಒಂದು ವರ್ಷದ ಉದ್ಯಮದ ತರಬೇತಿಯೂ ಸಿಗುವುದರಿಂದ ಇದು ಅತ್ಯುತ್ತಮವಾದುದು. ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ. ಪದವಿ ಪಡೆದೂ ನೀವೂ ಡಿಸೈನರ್ ಆಗಬಹುದು. ಪ್ರಶಾಂತ *ನಾನು ದ್ವಿತೀಯ ಪಿ.ಯು. (ಪಿ.ಸಿ.ಎಂ.ಬಿ) ಓದುತ್ತಿದ್ದೇನೆ. ಮುಂದೆ ಬಿ.ಎಸ್ಸಿ. ಅಗ್ರಿಕಲ್ಚರ್ ಮಾಡಬೇಕೆಂದುಕೊಂಡಿದ್ದೇನೆ. ಉತ್ತಮ ಕಾಲೇಜಿಗೆ ಪ್ರವೇಶಪಡೆಯಲು ಸಾಮಾನ್ಯವರ್ಗದವರು ಪಿ.ಸಿ.ಬಿ.ಯಲ್ಲಿ ಕನಿಷ್ಠ ಎಷ್ಟು ಅಂಕಗಳ್ನು ಗಳಿಸಬೇಕು ಮತ್ತು ಸಂತ್ರಸ್ತರ ಕೋಟಾವನ್ನು ಹೊಂದಿರುವ ನಾನು ಕನಿಷ್ಠ ಎಷ್ಟು ಅಂಕಗಳನ್ನು ಗಳಿಸಬೇಕು? ಪ್ರಸಕ್ತ ವರ್ಷದಿಂದ ಸಿ.ಇ.ಟಿ. ಇದಕ್ಕೆ ಅನ್ವಯಿಸುತ್ತದೆಯೇ? ದಯಮಾಡಿ ಮಾರ್ಗದರ್ಶನ ಕೊಡಿ. ಬಿ.ಎಸ್ಸಿ. ಅಗ್ರಿಕಲ್ಚರ್ ಮಾಡಲು ನೀವು ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರದಲ್ಲಿ ತೆಗೆಯಬೇಕಾಗುತ್ತದೆ. ಕಳೆದ ವರ್ಷ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಶೇಕಡಾ 74ರ ವರೆಗೆ ಅವಕಾಶ ಸಿಕ್ಕಿತ್ತು. ಆದರೆ ಇದು ಈ ವರ್ಷವೂ ಹೀಗೆಯೇ ಇರುತ್ತದೆಂದು ಹೇಳಲಾಗುವುದಿಲ್ಲ. ಆಯಾ ವರ್ಷದ ಪ್ರಶ್ನೆಪತ್ರಿಕೆಗಳ ಕಠಿಣತೆಯ ಮೇಲೆ ಮತ್ತು ಈ ಕೋರ್ಸ್‌ಗೆ ಇರುವ ಬೇಡಿಕೆಯ ಮೇಲೆ ಈ ಕನಿಷ್ಠ ಶೇಕಡಾ ಅವಲಂಬಿತವಾಗಿರುತ್ತದೆ. ರಾಹುಲ್ ಕೆ.ಪಾಟೀಲ್, ದಾಂಡೇಲಿ *ನಾನು ದ್ವಿತೀಯ ಪಿ.ಯು. (ವಿಜ್ಞಾನ) ಓದುತ್ತಿದ್ದು ಮುಂದೆ ಎನ್.ಟಿ.ಟಿ.ಎಫ್ ಅಥವಾ ಬಿ.ಸಿ.ಎ. ಕೋರ್ಸ್‌ಗೆ ಸೇರಬೇಕೆಂದಿದ್ದೇನೆ. ನಾನು ಯಾವ ಕೋರ್ಸ್ ಮಾಡಿದರೆ ಉತ್ತಮ? ಉದ್ಯೋಗಾವಕಾಶಗಳು ಹೇಗೆ? ಮುಂದಿನ ವಿದ್ಯಾಭ್ಯಾಸಕ್ಕಾಗಿ ಏನನ್ನು ಮಾಡಬೇಕು. ದಯವಿಟ್ಟು ಸಲಹೆ ಕೊಡಿ. ನೀವು ಯಾವ ಕೋರ್ಸಿಗೆ ಹೋಗಬೇಕೆನ್ನುವುದು ನಿಮ್ಮ ಆಸಕ್ತಿ ಮತ್ತು ಜೀವನದ ಮುಂದಿನ ಗುರಿಗಳನ್ನು ಅವಲಂಬಿಸಿದೆ. ಎನ್.ಟಿ.ಎಫ್.ಗೆ ಸೇರಿದರೆ ನೀವು ಎಂಜಿನಿಯರಿಂಗ್ ಉದ್ಯಮದ ನಿಶ್ಚಿತ ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆದು ಶೀಘ್ರ ಉದ್ಯೋಗವನ್ನು ಪಡೆಯಬಹುದು. ಬಿ.ಸಿ.ಎ. ಮಾಡಿದರೆ ಕಂಪ್ಯೂಟರ್ ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆದು ಅನಂತರ ಎಂ.ಸಿ.ಎ. ಮಾಡಿ ಶಿಕ್ಷಣ ಕ್ಷೇತ್ರ ಅಥವಾ ಸಾಫ್ಟವೇರ್ ಕ್ಷೇತ್ರವನ್ನು ಪ್ರವೇಶಿಸಬಹುದು. ರಘು, ವಿಜಯಪುರ, ಮೈಸೂರು ಜಿಲ್ಲೆ 4ನಾನು ಪ್ರಥಮ ಬಿ.ಎಸ್ಸಿ.ಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಕಳೆದ ವರ್ಷ 2010ರಲ್ಲಿ ಸಿ.ಇ.ಟಿ. ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಬಂದಿದ್ದರೂ ಆರ್ಥಿಕ ವ್ಯವಸ್ಥೆಯ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಈಗ ಬಿ.ಎಸ್ಸಿ. ವ್ಯಾಸಂಗವನ್ನು ನಿಲ್ಲಿಸಲು ನಿರ್ಧರಿಸಿದ್ದೇನೆ. ಗ್ರಾಮೀಣ ವಿದ್ಯಾರ್ಥಿಯಾದ ನಾನು ಎಂಜಿನಿಯರಿಂಗ್ ಕನಸು ಕಂಡಿದ್ದೆ. ಈಗ ಮತ್ತೊಮ್ಮೆ ಸಿ.ಇ.ಟಿ. ಪರೀಕ್ಷೆ ತೆಗೆದುಕೊಳ್ಳಬಹುದೇ? ಈಗ ಆರ್ಥಿಕ ವ್ಯವಸ್ಥೆ ತಕ್ಕಮಟ್ಟಿಗೆ ಸರಿಹೋಗಿದೆ. ಒಮ್ಮೊಮ್ಮೆ ಗಣಿತ ವಿಷಯದಲ್ಲಿ ಎಂ.ಎಸ್ಸಿ ಮಾಡಲೋ ಅಥವಾ ಎಂಜಿನಿಯರಿಂಗ್ ಮಾಡಲೋ ಎಂಬ ಗೊಂದಲ ಉಂಟಾಗುತ್ತದೆ.ಎಂಜಿನಿಯರಿಂಗ್‌ನಲ್ಲಿ ಯಾವ ಬ್ರಾಂಚ್ ಉತ್ತಮ? ಅಥವಾ ಬಿ.ಎಸ್ಸಿ.ಯನ್ನೇ ಮುಂದುವರೆಸಲೋ ತಿಳಿಯದಾಗಿದೆ. ದಯಮಾಡಿ ಸಲಹೆ ನೀಡಿ. ನಿಮ್ಮ ಗೊಂದಲ ಅರ್ಥವಾಗುವಂತಹದು. ಈಗಲೂ ನೀವು ಎಂಜಿನಿಯರಿಂಗ್ ಕನಸು ಕಾಣುತ್ತಿದ್ದರೆ ಇನ್ನೊಮ್ಮೆ ಸಿ.ಇ.ಟಿ. ಪರೀಕ್ಷೆಯನ್ನು ತೆಗೆದುಕೊಂಡು ಉತ್ತಮ ರ್ಯಾಂಕ್ ಪಡೆದು ಒಳ್ಳೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಮಾಡಿ. ಅಥವಾ ಪ್ರಥಮ ಬಿ.ಎಸ್ಸಿ. ಓದುವಾಗ ನಿಮಗೆ ಗಣಿತದಲ್ಲಿ ಆಸಕ್ತಿ ಮೂಡಿದ್ದರೆ, ಬಿ.ಎಸ್ಸಿ. ಮುಗಿಸಿ ಅನಂತರ ಗಣಿತಶಾಸ್ತ್ರದಲ್ಲಿ ಎಂ.ಎಸ್ಸಿ. ಮಾಡಿ. ಈಗ ಗಣಿತ ಪ್ರಾಧ್ಯಾಪಕರಿಗೆ ತುಂಬಾ ಬೇಡಿಕೆ ಇದೆ. ಬಿ.ಇ. ಮಾಡಬೇಕೆನ್ನುವವರು ಸಾವಿರಾರು ಮಂದಿ. ಆದರೆ ನಿಮ್ಮಂತೆ ಗಣಿತಶಾಸ್ತ್ರದಲ್ಲಿ ಎಂ.ಎಸ್ಸಿ. ಮಾಡಬೇಕೆನ್ನುವವರು ವಿರಳ. ಎಲ್ಲರೂ ನಡೆದ ದಾರಿಯಲ್ಲೇ ನಡೆಯದೆ ನೀವು ವಿರಳ ಹಾದಿಯನ್ನೇ ಹಿಡಿಯುವುದು ಸೂಕ್ತವೆಂದು ತೋರುತ್ತದೆ. ಚೈತ್ರ ಪಲ್ಲವಿ ಸಿ.ಎಸ್., ಮೈಸೂರು *ನಾನು ದ್ವಿತೀಯ ಪಿ.ಯು.ಸಿ.(ಪಿ.ಸಿ.ಎಂ.ಬಿ.) ಮಾಡುತ್ತಿದ್ದು ಮುಂದೆ ಬಯೋಟೆಕ್ನಾಲಜಿಯನ್ನು ಪ್ರಧಾನ ವಿಷಯವನ್ನಾಗಿ ತೆಗೆದುಕೊಂಡು ಓದುವ ಆಸೆ ಇದೆ. ಜೊತೆಗೆ ಈ ವಿಷಯದಲ್ಲಿ ಸಂಶೋಧನೆ ಮಾಡುವ ಬಯಕೆಯೂ ಇದೆ. ನಮ್ಮ ದೇಶದಲ್ಲಿ ಈ ವಿಷಯಕ್ಕೆ ಒಳ್ಳೆಯ ಅವಕಾಶ ಮತ್ತು ಭವಿಷ್ಯ ಇದೆಯೇ? ಇದರಲ್ಲಿ ಮುಂದುವರೆಯಬಹುದೇ? ಕೆಲವರು ಅವಕಾಶಗಳು ಇಲ್ಲ ಎನ್ನುತ್ತಾರೆ. ತುಂಬಾ ಗೊಂದಲ ಉಂಟಾಗಿದೆ. ದಯಮಾಡಿ ಸಲಹೆ ಕೊಡಿ. ಬಯೋಟೆಕ್ನಾಲಜಿ ಮುಂಚೂಣಿಯ ಸಂಶೋಧನಾ ಕ್ಷೇತ್ರವಾಗಿದ್ದು ಅದರಲ್ಲಿ ನಿಮಗೆ ಆಸಕ್ತಿ ಇರುವುದು ಶ್ಲಾಘನೀಯವಾಗಿದೆ. ಭವಿಷ್ಯದ ದಿನಗಳಲ್ಲಿ ಇದು ಬಹಳ ಮಹತ್ವದ ಕಾರ್ಯಕ್ಷೇತ್ರವಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಬೇರೆಯವರ ಮಾತಿಗೆ ಬೆಲೆಕೊಡದೆ ನಿಮ್ಮ ಕನಸನ್ನು ಬೆಂಬಿಡದೆ ಮುಂದುವರೆಯಿರಿ. ಆರ್.ಎಸ್.ಮಲ್ಲೂರ, ಬಿಲ್ಲಹಳ್ಳಿ, ಹಾವೇರಿ ಜಿಲ್ಲೆ *ನನ್ನ ಮಗ ತಮಿಳುನಾಡಿನ ಟುಟಿಕೋರಿನ್ ಎನ್.ಟಿ.ಟಿ.ಎಫ್. ಬ್ರಾಂಚ್‌ನಲ್ಲಿ ಮೆಕಾಟ್ರಾನಿಕ್ಸ್ ವಿಷಯದಲ್ಲಿ 3 ವರ್ಷದ ಡಿಪ್ಲೊಮಾ ಮುಗಿಸಿ ಈಗ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ 1 ವರ್ಷ ಇಂಡಸ್ಟ್ರಿಯಲ್ ತರಬೇತಿಗಾಗಿ ನೇಮಕವಾಗಿದ್ದಾನೆ. ಅದರಲ್ಲಿ ಮುಂದುವರೆಯುವ ಭರವಸೆಯೂ ಇದೆ. ಆದರೆ ಅವನು ಬಿ.ಇ. ಅಥವಾ ಬಿ.ಟೆಕ್ ಮಾಡಲೆಂಬುದು ನನ್ನ ಆಸೆ. ಕರ್ನಾಟಕ ಸರ್ಕಾರದಿಂದ ನಡೆಸುವ ಸಿ.ಇ.ಟಿ. ಪರೀಕ್ಷೆ ತೆಗೆದುಕೊಳ್ಳಬಹುದೇ? ಖಾಸಗಿ ಕಾಲೇಜುಗಳು ಕೇಳುವಷ್ಟು ಹಣ ಕೊಟ್ಟು ಓದಿಸುವ ಆರ್ಥಿಕ ಸಾಮರ್ಥ್ಯವಿಲ್ಲ. ಇವನು ಈಗ ಓದಿರುವ ಕೋರ್ಸಿಗೆ ಸರ್ಕಾರದ ಯಾವ ಯಾವ ಇಲಾಖೆಗಳಲ್ಲಿ ಕೆಲಸಕ್ಕೆ ಸೇರಬಹುದು. ಸಿ.ಇ.ಟಿ. ಬರೆಯಲು ಅವಕಾಶವಿಲ್ಲದಿದ್ದರೆ ದೂರಶಿಕ್ಷಣದಲ್ಲಾದರೂ ಬಿ.ಇ. ಮಾಡಬಹುದೇ? ದಯಮಾಡಿ ಸಲಹೆ ನೀಡಿ. ನಿಮ್ಮ ಮಗ ಪುನಃ ಸಿ.ಇ.ಟಿ. ಪರೀಕ್ಷೆ ತೆಗೆದುಕೊಂಡು ಬಿ.ಇ. ಮಾಡಲು ಯಾವ ತೊಂದರೆಗಳೂ ಇಲ್ಲ. ಆದರೆ ಈಗಾಗಲೇ ನಾಲ್ಕು ವರ್ಷ ಓದಿದ್ದು ವ್ಯರ್ಥವಾಗುತ್ತದೆ. ಅದರ ಬದಲು ಈಗಿನ ಓದಿನ ಮತ್ತು ತರಬೇತಿಯ ಆಧಾರದ ಮೇಲೆ ಅವನು ಉದ್ಯೋಗಕ್ಕೆ ಸೇರಿಕೊಳ್ಳಲಿ. ಅನಂತರ ದೂರಶಿಕ್ಷಣದ ಮೂಲಕ ಅಥವಾ ಸಂಜೆ ಶಿಕ್ಷಣದ ಮೂಲಕ ಆತ ಬಿ.ಇ. ಮಾಡಬಹುದು. ಮೋಹನ, ಕರಕುಚ್ಚಿ, ತರೀಕೆರೆ ತಾಲ್ಲೂಕು *ನಾನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಇನ್ ಮೆಟಲರ್ಜಿ ಮುಗಿಸಿರುತ್ತೇನೆ. ನನಗೆ ಇದೇ ವಿಷಯದಲ್ಲಿ ಬಿ.ಇ. ಮಾಡಬೇಕೆಂಬ ಆಸೆ ಇದೆ. ಎನ್.ಐ.ಟಿ. ಮತ್ತು ಎ.ಐ.ಇ.ಇ.ಇ. ಬರೆಯಬೇಕೆಂದುಕೊಂಡಿರುವೆ. ಈ ಪರೀಕ್ಷೆಯನ್ನು ಯಾವ ರೀತಿ ಬರೆಯಬೇಕು ಮತ್ತು ಈ ಪರೀಕ್ಷೆಯ ವಿಷಯಗಳ ಕುರಿತು ಮಾಹಿತಿ ನೀಡಿ. ಮೆಟಲರ್ಜಿ ಎಂಜಿನಿಯರಿಂಗ್ ಎಲ್ಲಿ ಮಾಡುವುದು ಸರಿ? ಈ ಪರೀಕ್ಷೆಯಿಂದ ನನ್ನ ವೃತ್ತಿ ಜೀವನವನ್ನು ಯಾವ ರೀತಿ ಬದಲಾಯಿಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಡಿ. ನನ್ನ ಗೆಳೆಯರು ಮೆಕ್ಯಾನಿಕಲ್ ಬಿ.ಇ. ಮಾಡು ಎನ್ನುತ್ತಾರೆ. ಗೊಂದಲದಲ್ಲಿದ್ದೇನೆ. ದಯಮಾಡಿ ಪರಿಹಾರ ಕೊಡಿ. ಈಗಾಗಲೇ ಡಿಪ್ಲೊಮಾ ಮುಗಿಸಿರುವ ನೀವು ಪುನಃ ಎ.ಐ.ಇ.ಇ.ಇ. ಪರೀಕ್ಷೆ ತೆಗೆದುಕೊಂಡು ಎನ್.ಐ.ಟಿ.ಗಳಲ್ಲಿ ಬಿ.ಟೆಕ್ ಮಾಡುವುದು ಬಹಳ ದುರ್ಗಮವಾದ ಹಾದಿ. ಎ.ಐ.ಇ.ಇ.ಇ. ಬಹಳ ಸ್ಪರ್ಧಾತ್ಮಕ ಪರೀಕ್ಷೆಯಾದ್ದರಿಂದ ಅದರಲ್ಲಿ ಯಶಸ್ಸನ್ನು ಗಳಿಸುವುದು ಕಷ್ಟ ಸಾಧ್ಯ. ಅದರ ಬದಲು ನೀವು ಲ್ಯಾಟರಲ್ ಅಡ್ಮಿಷನ್ ಮುಖಾಂತರ ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ. ಮಾಡುವುದು ಒಳ್ಳೆಯದು. ಮೆಟಲರ್ಜಿ ಮತ್ತು ಮೆಕಾನಿಕಲ್ ಎಂಜಿನಿಯರಿಂಗ್ ಪರಸ್ಪರ ಸಂಬಂಧಿ ಕ್ಷೇತ್ರಗಳಾದ್ದರಿಂದ ನಿಮ್ಮ ಅಧ್ಯಯನ ಸುಗಮವಾಗುತ್ತದೆ. ಮುಂದೆ ಬೇಕಾದರೆ ನೀವು ಮೆಟಲರ್ಜಿಯಲ್ಲಿ ಎಂ.ಟೆಕ್. ಮಾಡಬಹುದು. ಶಿವು, ಮದ್ದೂರು *ನಾನು ಡಿಪ್ಲೊಮಾ 6ನೇ ಸೆಮಿಸ್ಟರ್‌ನಲ್ಲಿ ಕಲಿಯುತ್ತಿದ್ದೇನೆ. ಕೆಲವು ಕಾರಣಗಳಿಂದ 5ನೇ ಸೆಮಿಸ್ಟರ್‌ನಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣನಾಗಿದ್ದೇನೆ. ಇದರಿಂದ 2011ರಲ್ಲಿ ಸಿ.ಇ.ಟಿ. ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವೇ? ಗೊಂದಲದಲ್ಲಿದ್ದೇನೆ. ದಯವಿಟ್ಟು ಸಲಹೆ ಕೊಡಿ. ನಾನು ಬಿ.ಟೆಕ್ ಸೇರಲು ಸಿ.ಇ.ಟಿ. ತೆಗೆದುಕೊಳ್ಳಬೇಕಾ ತಿಳಿಸಿ. ನೀವು ಸಿ.ಇ.ಟಿ. ಪರೀಕ್ಷೆಯನ್ನು ಎಷ್ಟು ಸಲ ಬೇಕಾದರೂ ತೆಗೆದುಕೊಳ್ಳಬಹುದು. ನೀವು ಡಿಪ್ಲೊಮಾ ಮುಗಿಸಿ ಬಿ.ಇ.ಗೆ ಲ್ಯಾಟರಲ್ ಅಡ್ಮಿಷನ್ ಮುಖಾಂತರವೂ ಹೋಗಬಹುದು. ಅದಕ್ಕೆ ಎ.ಐ.ಸಿ.ಟಿ.ಇ. ನವರು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ನಡೆಸುವ ಸಿ.ಇ.ಟಿ. ಪರೀಕ್ಷೆಯನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ. ಈ ಸಿ.ಇ.ಟಿ. ಪರೀಕ್ಷೆಯ ಅಂಕ ಮತ್ತು ಡಿಪ್ಲೊಮಾ ಕೊನೆಯ ವರ್ಷದ ಅಂಕಗಳ ಸರಾಸರಿ ನಿಮ್ಮ ರ್ಯಾಂಕನ್ನು ನಿರ್ಧರಿಸುತ್ತದೆ. ಇದರಿಂದ ಬಿ.ಇ. ನಲ್ಲಿ ನಿಮಗೆ ಒಂದು ವರ್ಷ ಉಳಿತಾಯವಾಗುತ್ತದೆ. ಪ್ರಶ್ನೆ ಕಳಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂಜಿ ರಸ್ತೆ,ಬೆಂಗಳೂರು 560001 ಪ್ರಶ್ನೆಗಳನ್ನು ಇಮೇಲ್‌ನಲ್ಲೂ ಕಳಿಸಬಹುದು:@. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.