ಜಯದ ಆರಂಭದಿಂದ ಯಶಸ್ಸು: ಗೌತಮ್‌ ಕರ್ನಾಟಕ ತಂಡದ ವಿಕೆಟ್ ಕೀಪರ್‌ ಸಿ.ಎಂ. ಗೌತಮ್‌ ಎಂಟು ವರ್ಷಗಳಿಂದ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 77 ಪ್ರಥಮ ದರ್ಜೆ ಪಂದ್ಯಗಳಿಂದ ಒಟ್ಟು 4046 ರನ್‌ ಕಲೆ ಹಾಕಿದ್ದಾರೆ. ಗೌತಮ್‌ ಸೊಗಸಾದ ಬ್ಯಾಟಿಂಗ್ ಶೈಲಿ ಮತ್ತು ರಿವರ್ಸ್‌ ಸ್ವೀಪ್‌ ಹೊಡೆತಗಳಿಂದ ಸಾಕಷ್ಟು ಸ್ಮರಣೀಯ ಇನಿಂಗ್ಸ್‌ಗಳನ್ನು ಕಟ್ಟಿದ್ದಾರೆ. ರಾಜ್ಯ ತಂಡ ರಣಜಿ, ಇರಾನಿ ಮತ್ತು ವಿಜಯ್‌ ಹಜಾರೆ ಟೂರ್ನಿಗಳಲ್ಲಿ ಚಾಂಪಿಯನ್‌ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರನ್ನು ಪ್ರಮೋದ ಜಿ.ಕೆ. ಸಂದರ್ಶಿಸಿದ್ದಾರೆ. *** *ಮತ್ತೊಂದು ರಣಜಿ ಋತು ಆರಂಭವಾಗುತ್ತಿದೆ. ಕರ್ನಾಟಕ ತಂಡ ಹೇಗೆ ಸಜ್ಜಾಗಿದೆ? ಕೆಪಿಎಲ್‌ ಟೂರ್ನಿ ಆರಂಭವಾಗುವ ಮೊದಲು ರಣಜಿಗೆ ಸಜ್ಜಾಗಲು ಹತ್ತು ದಿನ ತರಬೇತಿ ಶಿಬಿರ ನಡೆದಿತ್ತು. ಹೋದ ವರ್ಷ ಬೇರೆ ರಾಜ್ಯದ ತಂಡಗಳಲ್ಲಿದ್ದ ರೋನಿತ್‌ ಮೋರೆ ಹಾಗೂ ಅಬ್ರಾರ್‌ ಖಾಜಿ ಈ ವರ್ಷ ಕರ್ನಾಟಕ ತಂಡಕ್ಕೆ ಹಿಂತಿರುಗಿದ್ದರಿಂದ ನಮ್ಮ ಶಕ್ತಿ ಹೆಚ್ಚಾಗಿದೆ. ಸ್ಟುವರ್ಟ್‌ ಬಿನ್ನಿ ಪೂರ್ಣ ಪ್ರಮಾಣದಲ್ಲಿ ತಂಡದಲ್ಲಿರುತ್ತಾರೆ. ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪೈಪೋಟಿ ಇರುವ ಕಾರಣ ಗುಣಮಟ್ಟದ ಆಟಕ್ಕೆ ಎಲ್ಲರೂ ಒತ್ತು ಕೊಡುತ್ತಿದ್ದಾರೆ. ** *ಸತತ ಎರಡು ವರ್ಷ ರಣಜಿ ಮತ್ತು ಇರಾನಿ ಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದ ರಾಜ್ಯ ತಂಡ ಹೋದ ವರ್ಷ ಲೀಗ್ ಹಂತದಿಂದಲೇ ಹೊರಬಿದ್ದಿತ್ತು. ಇದು ತಂಡವನ್ನು ಒತ್ತಡಕ್ಕೆ ಸಿಲುಕಿಸಿದೆಯೇ? ಸದಾ ಪ್ರಶಸ್ತಿಗಳನ್ನು ಗೆಲ್ಲುತ್ತಲೇ ಇದ್ದರೆ ನಮ್ಮ ಮೇಲೆ ಸಹಜವಾಗಿ ನಿರೀಕ್ಷೆ ಹೆಚ್ಚಾಗುತ್ತಲೇ ಇರುತ್ತದೆ. ಸತತ ಎರಡು ವರ್ಷಗಳಿಂದ ಚಾಂಪಿಯನ್‌ ಆಗುತ್ತಲೇ ಬಂದಿದ್ದೆವು. ಆದರೆ ಹೋದ ವರ್ಷದ ಪ್ರದರ್ಶನದ ಬಗ್ಗೆ ನಮಗೂ ಬೇಸರವಿದೆ. ಸಾಕಷ್ಟು ಅಭ್ಯಾಸ ನಡೆಸಲು ಸಾಧ್ಯವಾಗದ ಕಾರಣಕ್ಕಾಗಿ ಲೀಗ್ ಹಂತದಿಂದಲೇ ಹೊರಬೀಳಬೇಕಾಯಿತು. ಮೂರ್ನಾಲ್ಕು ತಿಂಗಳು ರಣಜಿ ಆಡಬೇಕಾದ ಕಾರಣ ಹಿಂದಿನ ನಿರಾಸೆಯಲ್ಲಿಯೇ ಹೆಚ್ಚು ದಿನ ಕಳೆಯಲು ಆಗುವುದಿಲ್ಲ. ಹೋದ ವರ್ಷದ ಫಲಿತಾಂಶವನ್ನು ಮರೆತು ಹೊಸ ಸವಾಲಿಗೆ ಸಜ್ಜಾಗಿದ್ದೇವೆ. ** *ಮೊದಲ ಬಾರಿಗೆ ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ. ಇದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಲಿದೆಯೇ? ತಟಸ್ಥ ಸ್ಥಳದಲ್ಲಿ ಪಂದ್ಯ ನಡೆಯುವುದರಿಂದ ಒಂದು ರೀತಿಯಲ್ಲಿ ಅನುಕೂಲವೇ ಆಗುತ್ತದೆ. ಅಲ್ಲಿ ಯಾವ ತಂಡಗಳ ಪರವೂ ಪಿಚ್‌ ಇರುವುದಿಲ್ಲ. ಸ್ಪರ್ಧಾತ್ಮಕ ಪಿಚ್‌ ಇದ್ದರೆ ಎರಡೂ ತಂಡಗಳಿಗೆ ಅನುಕೂಲವಾಗುತ್ತದೆ. ಬಿಸಿಸಿಐನ ಈ ಹೊಸ ಪ್ರಯೋಗಕ್ಕೆ ಆಟಗಾರರೂ ಸಹಕರಿಸಬೇಕಲ್ಲವೇ. ಆದರೆ ಹೊಸ ನಿಯಮದಿಂದಾಗಿ ತವರಿನ ಅಭಿಮಾನಿಗಳ ಬೆಂಬಲ ಸಿಗುವುದಿಲ್ಲ ಎನ್ನುವ ಬೇಸರವಿದೆ. ಪ್ರತಿ ವರ್ಷವೂ ತಟಸ್ಥ ಸ್ಥಳದಲ್ಲಿಯೇ ಪಂದ್ಯಗಳು ನಡೆಯುತ್ತವೆ ಎನ್ನುವುದು ಖಚಿತವಾಗಿಲ್ಲ. ಈ ಬಾರಿಯ ರಣಜಿ ಟೂರ್ನಿ ಮುಗಿದ ಬಳಿಕ ಬಿಸಿಸಿಐ ಎಲ್ಲಾ ರಾಜ್ಯ ತಂಡಗಳ ನಾಯಕರ ಮತ್ತು ಕೋಚ್‌ಗಳ ಅಭಿಪ್ರಾಯ ಪಡೆಯುತ್ತದೆ. ನಂತರ ಮುಂದಿನ ವರ್ಷ ಎಲ್ಲಿ ಪಂದ್ಯಗಳನ್ನು ನಡೆಸಬೇಕು ಎನ್ನುವ ಬಗ್ಗೆ ತೀರ್ಮಾನಿಸುತ್ತದೆ. ** *ರಣಜಿ ತಂಡದ ಬಹುತೇಕ ಆಟಗಾರರು ಒಂದು ತಿಂಗಳು ಕೆಪಿಎಲ್‌ ಆಡಿದ್ದಾರೆ. ಇಷ್ಟು ದಿನ ಟ್ವೆಂಟಿ–20 ಆಡಿದವರು ಈಗ ನಾಲ್ಕು ದಿನಗಳ ಪಂದ್ಯಕ್ಕೆ ಬೇಗನೆ ಹೊಂದಿಕೊಳ್ಳುತ್ತಾರೆಯೇ? ಭಾರತ ತಂಡವನ್ನೇ ನೋಡಿ. ವೆಸ್ಟ್‌ ಇಂಡೀಸ್ ವಿರುದ್ಧ ಟೆಸ್ಟ್‌ ಸರಣಿ ಆಡಿದ್ದ ತಂಡ ಕೆಲ ದಿನಗಳಲ್ಲಿ ಅದೇ ತಂಡದ ಎದುರು ಟ್ವೆಂಟಿ–20ಯಲ್ಲಿಯೂ ಪಂದ್ಯವಾಡಿ ಯಶಸ್ಸು ಪಡೆಯಿತು. ಬದಲಾಗುವ ಮಾದರಿಗೆ ತಕ್ಕಂತೆ ಆಟಗಾರರೂ ಸಹಜವಾಗಿ ಬದಲಾಗುತ್ತಾರೆ. ಕೆಪಿಎಲ್‌ನಿಂದಾಗಿ ವೇಗವಾಗಿ ರನ್ ಕಲೆ ಹಾಕುವ ಕಲೆ ಕರಗತವಾಗಿದೆ. ** *ರಾಜ್ಯ ತಂಡದಲ್ಲಿ ವಿಕೆಟ್‌ ಕೀಪರ್‌ ಸ್ಥಾನಕ್ಕಾಗಿ ರಾಬಿನ್ ಉತ್ತಪ್ಪ ಮತ್ತು ನಿಮ್ಮ ನಡುವೆ ಪೈಪೋಟಿ ಏರ್ಪಟ್ಟಿದೆಯಲ್ಲವೇ? ಹೋದ ವರ್ಷ ರಾಬಿನ್ ಒಂದು ಪಂದ್ಯದಲ್ಲಿಯಷ್ಟೇ ವಿಕೆಟ್‌ ಕೀಪರ್ ಆಗಿ ಕಾರ್ಯ ನಿರ್ವಹಿಸಿದ್ದರು. ಈ ಬಾರಿ ಬ್ಯಾಟಿಂಗ್‌ಗೆ ಒತ್ತು ಕೊಡಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಆದ್ದರಿಂದ ವಿಕೆಟ್‌ ಕೀಪರ್‌ ಜವಾಬ್ದಾರಿ ನಾನೇ ನಿಭಾಯಿಸುತ್ತೇನೆ. ** *ಈ ಬಾರಿಯ ಟೂರ್ನಿಯಿಂದ ಏನು ನಿರೀಕ್ಷೆ ಮಾಡಬಹುದು? ಪ್ರತಿ ಸೋಲುಗಳಿಂದಲೂ ಪಾಠ ಕಲಿತಿದ್ದೇವೆ. ಹಿಂದಿನ ವರ್ಷ ಲೀಗ್ ಹಂತದಿಂದಲೇ ಹೊರಬಿದ್ದಾಗ ಮತ್ತೆ ಚಾಂಪಿಯನ್‌ ಆಗಬೇಕೆಂದು ಆಗಲೇ ಪಣ ತೊಟ್ಟಿದ್ದೆವು. ಸೋಮವಾರ (ಅ.3) ಮತ್ತೆ ಅಭ್ಯಾಸ ಆರಂಭಿಸುತ್ತೇವೆ. ** *ಈ ಬಾರಿ ರಾಜ್ಯ ತಂಡಕ್ಕೆ ಕಠಿಣ ಗುಂಪಿನಲ್ಲಿ ಸ್ಥಾನ ಲಭಿಸಿದೆಯಲ್ಲಾ. ಇದರ ಬಗ್ಗೆ ಹೇಳಿ? ಗುಂಪಿನಲ್ಲಿರುವ ಎಲ್ಲಾ ತಂಡಗಳು ಬಲಿಷ್ಠವಾಗಿರುವ ಕಾರಣ ಮೊದಲ ಪಂದ್ಯದಿಂದಲೇ ಚೆನ್ನಾಗಿ ಆಡಬೇಕು. ಆರಂಭದ ಎರಡು ಪಂದ್ಯಗಳಲ್ಲಿ ಜಾರ್ಖಂಡ್ ಮತ್ತು ದೆಹಲಿ ವಿರುದ್ಧ ಗೆಲುವು ಪಡೆದು ಉತ್ತಮ ಆರಂಭ ಪಡೆದರಷ್ಟೇ ನಂತರದ ಪಂದ್ಯಗಳಲ್ಲಿ ಮತ್ತಷ್ಟು ಉತ್ತಮ ಸಾಮರ್ಥ್ಯ ತೋರಲು ಸಾಧ್ಯವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.