ಟೂಲ್ ಅಂಡ್ ಡೈ ಮೇಕಿಂಗ್ ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರತಿಯೊಂದು ವಸ್ತುವೂ ಉನ್ನತ ಗುಣಮಟ್ಟದ್ದಾಗಿರಬೇಕು, ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರಬೇಕು ಮತ್ತು ಅದರ ಬೆಲೆ ಕೂಡ ಕಡಿಮೆ ಆಗಿರಬೇಕು ಎಂದು ಪ್ರತಿಯೊಬ್ಬ ಗ್ರಾಹಕರು ಅಪೇಕ್ಷಿಸುತ್ತಾರೆ. ಹೀಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಯಾವುದೇ ಒಂದು ವಸ್ತು (ಕಾಂಪೊನೆಂಟ್) ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗಿದ್ದರೆ, ಆ ಎಲ್ಲಾ ವಸ್ತುಗಳು ಒಂದೇ ಗುಣಮಟ್ಟದ್ದಾಗಿರಬೇಕಾದರೆ ಮತ್ತು ಅವುಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಉತ್ಪಾದಿಸಬೇಕಿದ್ದರೆ, ಅಂತಹ ಪ್ರತಿಯೊಂದು ಕಾಂಪೊನೆಂಟ್‌ಗಾಗಿ ಒಂದು ವಿಶೇಷ ಟೂಲ್ ಬೇಕಾಗುತ್ತದೆ. ಇಂತಹ ಟೂಲ್‌ಗಳನ್ನು ವಿನ್ಯಾಸ ಮಾಡಿ, ತಯಾರಿಸಿ, ಅಂತಿಮವಾಗಿ ಕಾಂಪೊನೆಂಟ್‌ಗಳನ್ನು ಉತ್ಪಾದಿಸುವಂತೆ ಅಣಿಗೊಳಿಸುವ ಅದ್ಭುತ ತಂತ್ರಜ್ಞಾನವೇ ಟೂಲ್ ಅಂಡ್ ಡೈ ಮೇಕಿಂಗ್. ಇಲ್ಲಿ ಪ್ಲಾಸ್ಟಿಕ್, ಶೀಟ್ ಮೆಟಲ್, ಮಿಶ್ರಲೋಹ (ಅಲಾಯ್) ಹಾಗೂ ಎಂಜಿನಿಯರಿಂಗ್ ಕಾಂಪೊನೆಂಟ್‌ಗಳಿಗಾಗಿ ಟೂಲ್‌ಗಳನ್ನು ನಿರ್ಮಿಸಲಾಗುತ್ತದೆ. ಇಂದು ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಪ್ರತಿಯೊಂದು ವಸ್ತುವಿನ ತಯಾರಿಕೆಯಲ್ಲಿ ಟೂಲ್ ಅಂಡ್ ಡೈ ಮೇಕಿಂಗ್ ತಂತ್ರಜ್ಞಾನದ ಪಾತ್ರ ದೊಡ್ಡದು. ನಾವು ನಿತ್ಯ ಬಳಸುವ ಹಲ್ಲುಜ್ಜುವ ಬ್ರಷ್, ಗೃಹ ಬಳಕೆಯ ಪ್ಲಾಸ್ಟಿಕ್ ವಸ್ತುಗಳು, ಟಿವಿ, ಫ್ಯಾನ್, ಪಾನೀಯಗಳ ಬಾಟಲ್, ಪೆನ್, ಕ್ಯಾಮೆರಾ, ಮೊಬೈಲ್ ಫೋನ್ ಮತ್ತು ವಾಹನಗಳಿಂದ ಹಿಡಿದು ವಿಮಾನದ ಬಿಡಿ ಭಾಗಗಳು, ಮಿಲಿಟರಿ ಸಾಮಗ್ರಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಹೈಟೆಕ್ ಉಪಕರಣಗಳು, ಚಿತ್ತಾಕರ್ಷಕ ಲಕ್ಷುರಿ ಕಾರ್ ಹಾಗೂ ಇನ್ನೂ ಅಸಂಖ್ಯಾತ ಉತ್ಪನ್ನಗಳ ತಯಾರಿಕೆಯಲ್ಲಿ ಟೂಲ್ ಅಂಡ್ ಡೈ ಮೇಕಿಂಗ್ ತಂತ್ರಜ್ಞಾನದ ಕೊಡುಗೆ ಅನನ್ಯ ಮತ್ತು ನಿಸ್ಸಂದೇಹವಾಗಿ ಅಗ್ರಗಣ್ಯ. ಎಂತಹದೇ ಕ್ಲಿಷ್ಟಕರವಾದ ಆಕಾರ ಮತ್ತು ಗಾತ್ರದ ಕಾಂಪೊನೆಂಟ್‌ಗಳಿಗಾಗಿ ಟೂಲ್‌ಗಳನ್ನು ಅತ್ಯಂತ ನಿಖರವಾಗಿ ಡಿಸೈನ್ ಮಾಡಿ, ಅದನ್ನು ಅಷ್ಟೇ ನಿಖರತೆಯಿಂದ ತಯಾರಿಸಿ, ಉತ್ಪಾದನೆಯನ್ನು ಸಾಧಿಸಿ ತೋರಿಸುವುದೇ ಟೂಲ್ ಅಂಡ್ ಡೈ ಮೇಕಿಂಗ್‌ನ ಜೀವಾಳ. ಇಂತಹ ತಂತ್ರಜ್ಞಾನ ಬಲ್ಲ ನಿಪುಣ ತಂತ್ರಜ್ಞರೇ ಟೂಲ್ ಅಂಡ್ ಡೈ ಮೇಕರ್. ಟೂಲ್ ಅಂಡ್ ಡೈ ಮೇಕರ್ ತಾಂತ್ರಿಕ ಕ್ಷೇತ್ರದಲ್ಲಿಯೇ ಅತ್ಯಂತ ನಿಖರತೆಯೊಂದಿಗೆ ಕೆಲಸ ಮಾಡಬಲ್ಲ ಮತ್ತು ಎಲ್ಲ ಬಗೆಯ ಮಶಿನ್ ಟೂಲ್‌ಗಳನ್ನು ಸಮರ್ಥವಾಗಿ ಉಪಯೋಗಿಸಬಲ್ಲ ಟೂಲ್ ಎಂಜಿನಿಯರ್ ಆಗಿರುತ್ತಾರೆ. ಉದ್ಯೋಗಾವಕಾಶಗಳು: ಟೂಲ್ ಮೇಕರ್ ಇಂದು ಉತ್ಪಾದನಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಉತ್ಪಾದನೆ ಮತ್ತು ಡಿಸೈನ್‌ನಲ್ಲಿ ಇರುವ ನಿಪುಣತೆ, ಸೃಜನಶೀಲತೆ ಹಾಗೂ ಎಂಜಿನಿಯರಿಂಗ್‌ನ ಕ್ಲಿಷ್ಟ ಸಮಸ್ಯೆಗಳನ್ನು ಪರಿಹರಿಸುವ ಕ್ಷಮತೆಯಿಂದಾಗಿ ಐ ಟಿ ಕಂಪೆನಿಗಳೂ ಸೇರಿದಂತೆ ಎಲ್ಲ ವಿಧದ ಉದ್ದಿಮೆಗಳಲ್ಲಿ ಇಂದು ಟೂಲ್ ಮೇಕರ್‌ಗೆ ಭಾರೀ ಬೇಡಿಕೆ. ದೇಶ-ವಿದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಟೂಲ್ ಮೇಕರ್‌ಗಳು ತಮ್ಮ ನಿಪುಣತೆಯಿಂದಾಗಿ ಉನ್ನತ ಸಂಬಳ ಪಡೆಯುತ್ತಿದ್ದಾರೆ. 4ಟೂಲ್ ರೂಮ್ ಉದ್ಯಮಗಳಲ್ಲಿ ಟೂಲ್ ಎಂಜಿನಿಯರ್, ಟೂಲ್ ಮೇಕರ್ ಹಾಗೂ ಟೂಲ್ ಡಿಸೈನರ್ ಹುದ್ದೆಗಳು. * ಕಟಿಂಗ್ ಟೂಲ್ ಇಂಡಸ್ಟ್ರಿಗಳಲ್ಲಿ ಮ್ಯೋನುಫ್ಯಾಕ್ಚರಿಂಗ್, ಡಿಸೈನಿಂಗ್ ಮತ್ತು ಮಾರ್ಕೆಟಿಂಗ್‌ನಲ್ಲಿ ಉದ್ಯೋಗಾವಕಾಶಗಳು. * ಮೆಕ್ಯಾನಿಕಲ್ ಇಂಡಸ್ಟ್ರಿಯ ಎಲ್ಲ ವಿಭಾಗಗಳಲ್ಲಿ ಉದ್ಯೋಗಾವಕಾಶಗಳು. * ಆಟೊಮೊಬೈಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ಮುಂತಾದ ಎಲ್ಲ ಕ್ಷೇತ್ರಗಳಲ್ಲಿ / ಎಂಜಿನಿಯರ್ ಮತ್ತು ಪ್ರೊಡಕ್ಟ್ ಡಿಸೈನರ್ ಹುದ್ದೆಗಳು. * ವಿಮಾನ ಮತ್ತು ಅದರ ಬಿಡಿ ಭಾಗಗಳ ತಯಾರಿಕಾ ಘಟಕಗಳಲ್ಲಿಯೂ ವಿಪುಲ ಉದ್ಯೋಗಾವಕಾಶಗಳು. * ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಅಭಿವದ್ಧಿ ಹೊಂದುತ್ತಿರುವ ಎಂಜಿನಿಯರಿಂಗ್ ಸರ್ವಿಸಸ್ ವಲಯದಲ್ಲಿಯೂ ಉದ್ಯೋಗಾವಕಾಶಗಳು. * / ತಂತ್ರಾಂಶಗಳ ಮಾರ್ಕೆಟಿಂಗ್ ಮತ್ತು ಸರ್ವಿಸ್‌ಗಳಲ್ಲಿ ಅವಕಾಶಗಳಿವೆ. * / ತಂತ್ರಾಂಶಗಳ ತರಬೇತುದಾರರಾಗಲು ಅಥವಾ ಸ್ವಂತ ತರಬೇತಿ ಕೇಂದ್ರ ತೆರೆಯಲು ಅವಕಾಶಗಳಿವೆ. * ಕಂಪ್ಯೂಟರ್ ಏಡೆಡ್ ಮಶಿನಿಂಗ್ ಮತ್ತು ಪ್ರೋಗ್ರಾಮಿಂಗ್‌ನಲ್ಲಿ ಉದ್ಯೋಗ ಹೊಂದುವ ಸುವರ್ಣಾವಕಾಶ. * ಸ್ವಂತ ಉದ್ದಿಮೆ ಸ್ಥಾಪಿಸಲು ಸರ್ಕಾರದ ವಿವಿಧ ಕೈಗಾರಿಕಾ ಯೋಜನೆಗಳಿಂದ ಉತ್ತೇಜನ. ತರಬೇತಿ ಎಲ್ಲಿ? ಹೇಗೆ? ರಾಷ್ಟ್ರದಾದ್ಯಂತ ಹಲವಾರು ಪ್ರತಿಷ್ಠಿತ ಸಂಸ್ಥೆಗಳು ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದು, ಅವುಗಳಲ್ಲಿ ಕರ್ನಾಟಕದ ಜಿಟಿಟಿಸಿ (ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ), , ಮತ್ತು ಪ್ರಮುಖವಾದವುಗಳಾಗಿವೆ. ಕರ್ನಾಟಕದಾದ್ಯಂತ 17 ತರಬೇತಿ ಕೇಂದ್ರಗಳನ್ನು ಹೊಂದಿದೆ. ಕರ್ನಾಟಕದಲ್ಲಿ ಜಿಟಿಟಿಸಿಯ ಕೇಂದ್ರಗಳು : ಬೆಂಗಳೂರು (080-23152118), ಮೈಸೂರು(0821-2582750), ಹುಬ್ಬಳ್ಳಿ(0836-2333158), ಲಿಂಗಸುಗೂರು(9141630318), ಬೆಳಗಾವಿ(0831-2442407), ಗುಲ್ಬರ್ಗ(08472-230084), ಮಂಗಳೂರು(0824-2408003), ದಾಂಡೇಲಿ(08284-230437), ಹರಿಹರ(08192-243937), ಹೊಸಪೇಟೆ(08394-232197), ಹುಮನಾಬಾದ(08483-271241), ಕೂಡಲಸಂಗಮ(08351-268048), ಹಾಸನ(08172-240502), ಕಡೂರು(0826-7203250), ಗುಂಡ್ಲುಪೇಟೆ(08229-222344), ಮದ್ದೂರು(08232-236211) ಮತ್ತು ಕನಕಪುರ (080-27524561). ಬಾಲಕಿಯರಿಗೆ ಮೀಸಲು ಸೌಲಭ್ಯ ಜಿಟಿಟಿಸಿಯಲ್ಲಿ ಬಾಲಕಿಯರಿಗೆ ಮೀಸಲಾತಿ ಸೌಲಭ್ಯವಿದೆ. ಸಾಮಾನ್ಯವಾಗಿ ಈ ತರಬೇತಿಯು 3+1 ವರ್ಷ ಅವಧಿಯದ್ದಾಗಿರುತ್ತದೆ. ಮೊದಲ 3 ವರ್ಷದ ತರಬೇತಿಯನ್ನು ವಿದ್ಯಾರ್ಥಿಯು ತರಬೇತಿ ಸಂಸ್ಥೆಯಲ್ಲಿಯೇ ಪಡೆಯುತ್ತಾರೆ. ಈ ಅವಧಿಯಲ್ಲಿ ವಿದ್ಯಾರ್ಥಿಯು ಟೂಲ್ ರೂಮ್‌ನಲ್ಲಿಯ ಎಲ್ಲ ಮಶಿನ್‌ಗಳನ್ನು ನಡೆಸಲು ತರಬೇತಿ ಪಡೆಯುತ್ತಾರೆ ಹಾಗೂ ಪ್ರೆಸ್ ಟೂಲ್, ಮೌಲ್ಡ್ ಟೂಲ್, ಜಿಗ್ಸ್ ಮತ್ತು ಫಿಕ್ಚರ್‌ಗಳನ್ನು ಡಿಸೈನ್ ಮತ್ತು ಮ್ಯೋನುಫ್ಯಾಕ್ಚರ್ ಮಾಡುವುದರಲ್ಲಿ ತರಬೇತಿ ಹೊಂದುತ್ತಾರೆ. , , , ಮುಂತಾದ ಆಧುನಿಕ ಕಂಪ್ಯೂಟರ್ ಆಧರಿತ ತಂತ್ರಾಂಶಗಳಲ್ಲಿ ಕೂಡ ಪರಿಣತಿ ಹೊಂದುತ್ತಾರೆ. 4ನೆಯ ವರ್ಷ ವಿದ್ಯಾರ್ಥಿಯನ್ನು ಇನ್‌ಪ್ಲಾಂಟ್ ಟ್ರೇನಿಂಗ್‌ಗಾಗಿ ರಾಷ್ಟ್ರದಾದ್ಯಂತ ಇರುವ ಟೂಲ್ ರೂಮ್ ಉದ್ಯಮಗಳಲ್ಲಿ ನಿಯೋಜಿಸಲಾಗುವುದು. ಪ್ರತಿಷ್ಠಿತ ಉದ್ಯಮಗಳು ಕ್ಯಾಂಪಸ್ ಸಂದರ್ಶನದ ಮೂಲಕ 4 ನೆಯ ವರ್ಷದ ವಿದ್ಯಾರ್ಥಿಗಳನ್ನು ತಮ್ಮ ಬಳಿ ಇನ್‌ಪ್ಲಾಂಟ್ ಟ್ರೇನಿಂಗ್‌ಗಾಗಿ ಆಯ್ಕೆ ಮಾಡಿಕೊಳ್ಳುವ ಪರಿಪಾಠವಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಆಕರ್ಷಕ ಸ್ಟೈಪೆಂಡ್ ದೊರಕುತ್ತದೆ. ಟಾಫೆ, ವಿಡಿಯೋಕಾನ್, ಗೊದ್ರೆಜ್, ಟರ್ಮಿನಲ್ ಟೆಕ್ನಾಲಜೀಸ್, ಇಂಡೋ-ಮಿಮ್ ಟೆಕ್, ಟಾಟಾ ಆಟೊಪ್ಲಾಸ್ಟಿಕ್ಸ್, ಫ್ಲೀಟ್‌ಗಾರ್ಡ್ ಫಿಲ್ಟ್ರಮ್, ಮಾಸ್ಟರ್ ಕ್ರಾಫ್ಟ್ಸ್, ಸರ್ಮೋ ಆರ್ಕ್ ಟೂಲಿಂಗ್ಸ್, ಮೋಲೆಕ್ಸ್, ಟೊಯೊಟಾ ಕಿರ್ಲೋಸ್ಕರ್, ಟೈಟಾನ್, ಟಾಟಾ ಫಿಕೋಸಾ ಮತ್ತು ಮಿಂಡಾ ಇಂಡಸ್ಟ್ರೀಸ್ ಮುಂತಾದ ಕಂಪನಿಗಳು ಇನ್‌ಪ್ಲಾಂಟ್ ಟ್ರೈನಿಗಳನ್ನು ನಿಯೋಜಿಸಿಕೊಳ್ಳುತ್ತಿವೆ ಮತ್ತು ಇನ್‌ಪ್ಲಾಂಟ್ ಟ್ರೇನಿಂಗ್‌ನ ನಂತರ ಕಾಯಂ ಉದ್ಯೋಗವನ್ನೂ ನೀಡುತ್ತಿವೆ. ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಂದು ಆಸ್ಟ್ರೇಲಿಯಾ, ಕೆನಡಾ, ಮಲೇಷ್ಯಾ, ಥಾಯ್ಲೆಂಡ್, ಸಿಂಗಪುರ್, ಜರ್ಮನಿ, ಬ್ರಿಟನ್, ಅಮೆರಿಕ ಮುಂತಾದ ದೇಶಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಮತ್ತು ಹಲವಾರು ವಿದ್ಯಾರ್ಥಿಗಳಿಂದು ತಮ್ಮ ಸ್ವಂತ ಉದ್ದಿಮೆಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿದ್ದಾರೆ. ಎಸ್‌ಎಸ್‌ಎಲ್‌ಸಿ ಪಾಸಾದ ಕ್ರಿಯಾಶೀಲ, ಸೃಜನಶೀಲ ವಿದ್ಯಾರ್ಥಿಗಳಿಗೆ ಟೂಲ್ ಆ್ಯಂಡ್ ಡೈ ಮೇಕಿಂಗ್ ಒಂದು ಸುವರ್ಣಾವಕಾಶವಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ತಾಂತ್ರಿಕ ಶಿಕ್ಷಣ ನೀಡಿ, ಉದ್ಯೋಗ ದೊರಕಿಸಿ ಕೊಡುವ ವಿಶಿಷ್ಟ ತರಬೇತಿಯಾಗಿದೆ. ಈ ತರಬೇತಿಗಳಿಗೆ ಸೇರುವ ಅರ್ಹ ಅಭ್ಯರ್ಥಿಗಳಿಗೆ ಶಿಕ್ಷಣ ಸಾಲದ ಸಹಾಯ ಕೂಡ ದೊರೆಯುತ್ತದೆ. ತರಬೇತಿಯ ನಂತರ ಉನ್ನತ ವಿದ್ಯಾಭ್ಯಾಸದ ಅವಕಾಶಗಳೂ ಉಂಟು. ವಿದ್ಯಾರ್ಥಿಗಳು ಮತ್ತು ಪಾಲಕರು ಈ ದಿಶೆಯಲ್ಲಿ ಯೋಚಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.