ಸಂಶೋಧನೆ ಮತ್ತು ಕೌಶಲ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ಹೊಸ ಮಾದರಿಯನ್ನು ಕಂಡುಕೊಳ್ಳಬೇಕಿದ್ದು, ಸಾಂಪ್ರದಾಯಿಕ ಬೋಧನಾ ಕ್ರಮಗಳನ್ನು ಬದಲಾಯಿಸಬೇಕಾಗಿದೆ. ಈ ಕಳಕಳಿಯನ್ನು ಸಾಮಾಜಿಕ ವಿಜ್ಞಾನ ಸಂಶೋಧನೆ ಮತ್ತು ಉನ್ನತ ಶಿಕ್ಷಣಕ್ಕೂ ಅನ್ವಯಿಸಬೇಕಾದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಇಂದು, ಭಾರತದ ಉನ್ನತ ಶಿಕ್ಷಣ ರಂಗವು ಹಲವು ಸಮಸ್ಯೆಗಳಿಂದ ಆವೃತ್ತವಾಗಿದೆ. ಸಮಸ್ಯೆಗಳ ಬಗ್ಗೆ ಹಲವು ಅಧ್ಯಯನಗಳು, ಸಮೀಕ್ಷೆಗಳು, ಚರ್ಚೆಗಳು, ಗಂಭೀರ ಸಂವಾದಗಳು ನಡೆದಿವೆ. ಇಂತಹ ಪ್ರಯತ್ನಗಳು ಈ ಸಮಸ್ಯೆಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿ ಹಲವು ಪರಿಹಾರ ಕ್ರಮಳನ್ನು ಕೂಡ ಸೂಚಿಸಿವೆ. ಆದರೆ ಈ ಪರಿಹಾರ ಕ್ರಮಗಳಲ್ಲಿ ಕೆಲವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡಿದ್ದಾರೆ: ಪಠ್ಯಕ್ರಮದ ರೂಪುರೇಷೆ, ಅದರ ಉಪಯುಕ್ತತೆ, ಮತ್ತು ಶಿಕ್ಷಕರ ಪಾತ್ರ ಇಂಥ ವಿಷಯಗಳಿಗೆ ಮಾತ್ರ ಸೀಮಿತವಾಗಿದೆ. ಆಶ್ಚರ್ಯಕರ ಸಂಗತಿ ಎಂದರೆ, ಶಿಕ್ಷಣಕ್ರಮದ ಗುಣಮಟ್ಟಕ್ಕೆ ನೇರವಾಗಿ ಸಂಬಂಧಿಸಿದ `ಸಂಶೋಧನೆ~ಯ ಬಗ್ಗೆ, ಚರ್ಚೆಗಳಾಗಲಿ ಅಥವಾ ಅಧ್ಯಯನಗಳಾಗಲಿ ನಡೆದಿಲ್ಲ. ಜೊತೆಗೆ ಯಾವುದೇ ರೀತಿಯ ಪರಿಹಾರಕ್ರಮಗಳಿಗೂ ಹೆಚ್ಚಿನ ಒತ್ತು ನೀಡಿಲ್ಲ. ನಮ್ಮ ವಿ.ವಿ.ಗಳಲ್ಲಿನ ಸ್ನಾತಕೋತ್ತರ ಪದವಿಗಳೂ ಸಹ ವಿದ್ಯಾರ್ಥಿಗಳಿಗೆ ಸಂಶೋಧನಾ ಕೌಶಲ್ಯತೆಯನ್ನು ಕಲಿಸಿಕೊಡುವಲ್ಲಿ ವಿಫಲವಾಗಿವೆ. ಇದು ಭಾರತದ ಅತ್ಯುನ್ನತ ದರ್ಜೆಯ ವಿ.ವಿ.ಗಳಿಗೂ ಸಹ ಅನ್ವಯವಾಗುವ ವಿಷಯ. ಸಾಮಾನ್ಯವಾಗಿ ಇದಕ್ಕೆ ಸೂಕ್ತ ಪಠ್ಯಕ್ರಮ, ಒಳ್ಳೆಯ ಗ್ರಂಥಾಲಯಗಳ ಕೊರತೆ ಮತ್ತು ಶಿಕ್ಷಕ-ವಿದ್ಯಾರ್ಥಿಗಳ ನಡುವಿನ ಸಂಖ್ಯಾತ್ಮಕ ಹಾಗೂ ಶೈಕ್ಷಣಿಕ ಮಟ್ಟದ ಸಮತೋಲನ ಇಲ್ಲದಿರುವಿಕೆ ಎಂಬಿತ್ಯಾದಿ ಅಂಶಗಳು ಕಾರಣವೆಂದುಕೊಳ್ಳುತ್ತೇವೆ. ಆದರೆ ತಿಳಿದಮಟ್ಟಿಗೆ, ಪದವಿಮಟ್ಟದಲ್ಲಿ ಸಂಶೋಧನೆಯನ್ನು ಕಲಿಸಿಕೊಡುವುದರ ಸಾಧ್ಯತೆಗಳನ್ನೂ ಯಾರೂ ಇದುವರೆಗೂ ಚರ್ಚೆಗೆ ಎತ್ತಿಕೊಂಡಂತಿಲ್ಲ (ಬೆಂಗಳೂರಿನ ಐ.ಐ.ಎಸ್.ಸಿಯಲ್ಲಿನ ಕೆಲ ವಿಜ್ಞಾನಿಗಳು ಪರೋಕ್ಷವಾಗಿ ಈ ಸಂಶೋಧನೆಯ ಕಲಿಕ ವಿಷಯಗಳನ್ನು ಚರ್ಚೆಗೆತ್ತಿಕೊಂಡಿದ್ದಾರೆ ಹಾಗೂ ಸ್ನಾತಕೋತ್ತರ ಪದವಿಗಳ ಕೆಲವು ವಿಜ್ಞಾನಗಳಲ್ಲಿ ಸಂಶೋಧನೆಯ ವಿಷಯವು ಕೇವಲ ಪಠ್ಯಕ್ರಮಕ್ಕೆ ಮಾತ್ರ ಸೀಮಿತವಾಗಿದೆ). ಆದ್ದರಿಂದ, ಪ್ರಸ್ತುತವಾಗಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಇದು: ಪದವಿ ಮಟ್ಟದ ಶಿಕ್ಷಣದಲ್ಲಿ ಸಾಮಾಜಿಕ ವಿಜ್ಞಾನ ಹಾಗೂ ಇನ್ನಿತರ ಎಲ್ಲಾ ವಿಷಯಗಳಲ್ಲಿ ಸಂಶೋಧನೆಯ ಕೌಶಲ್ಯಗಳನ್ನು ಹಾಗೂ ಕಲಿಕಾ ಶಿಸ್ತನ್ನು ಕಲಿಸಿಕೊಡುವುದು ಹೇಗೆ? ಮೇಲಿನ ಪ್ರಶ್ನೆಯು ಸಾಮಾಜಿಕ ವಿಜ್ಞಾನ ಸಂಶೋಧನೆಗಳಲ್ಲಿ ಗುಣಮಟ್ಟದ ಕೊರತೆಯಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ. ಯಾವ ರೀತಿಯ ಕೊರತೆ ಅಥವಾ ಅಪವಾದಗಳನ್ನು ಎದುರಿಸುತ್ತಿದೆ? ಸಾಮಾನ್ಯವಾಗಿ ಕೇಳಿಬರುವ ಅಪವಾದಗಳೆಂದರೆ, ಸಾಮಾಜಿಕ ವಿಜ್ಞಾನ ಸಂಶೋಧನೆಗಳಲ್ಲಿ ಶಿಸ್ತುಬದ್ಧತೆ ಇರುವುದಿಲ್ಲ: ಒಂದು ಉತ್ತಮ ಸಂಶೋಧನೆಗೆ ಬೇಕಾದ ಕೌಶಲ್ಯಗಳ ಕೊರತೆ, ಸೈದ್ಧಾಂತಿಕ ಕೆಲಸಕ್ಕೆ ಹೆಚ್ಚು ಒತ್ತು ನೀಡುವುದಿಲ್ಲ. ಬದಲಿಗೆ ಕೇವಲ ದತ್ತಾಂಶಗಳನ್ನು ಕ್ರೋಢಿಕರಿಸುವ ಕಾರ‌್ಯ ಮಾತ್ರವಾಗಿದೆ. ಆದ್ದರಿಂದ ಇಂತಹ ಸಂಶೋಧನೆಗಳು ಗುಣಮಟ್ಟವನ್ನು ಹೊಂದಿರುವುದಿಲ್ಲ ಮತ್ತು ಸಮಾಜಕ್ಕೆ ಯಾವ ರೀತಿಯ ಕೊಡುಗೆಯನ್ನು ನೀಡಲು ಸಾಧ್ಯವಿಲ್ಲ ಎಂಬುದು. ಬಂದಿರುವ ಈ ಅಪವಾದವನ್ನು ಕಡೆಗಣಿಸುವಂತಿಲ್ಲ. ಬದಲಿಗೆ ಇದರ ಕುರಿತು ಸಾಮಾಜಿಕ ವಿಜ್ಞಾನ ಶಿಸ್ತುಗಳು ಗಂಭೀರವಾಗಿ ಚಿಂತನೆ ನಡೆಸಬೇಕಾಗಿರುವ ಜರೂರು ಇಂದು ಬಂದೊದಗಿದೆ. ಎದುರಾಗುತ್ತಿರುವ ಈ ಸಮಸ್ಯೆಗಳಿಂದ ಹೊರಬರುವ ಮಾರ್ಗಗಳ ಕುರಿತು ಬೆರಳೆಣಿಕೆಯ ಸಂಶೋಧನಾ ಕೇಂದ್ರಗಳು ಗಂಭೀರವಾಗಿ ಆಲೋಚಿಸುತ್ತಿವೆ. ಅವುಗಳು ಸೂಚಿಸುವ ಮಾರ್ಗಗಳೆಂದರೆ, ಸಾಮಾಜಿಕ ವಿಜ್ಞಾನದಲ್ಲಿ ಒಂದು ಉತ್ತಮ/ವೈಜ್ಞಾನಿಕ ಸಂಶೋಧನೆ ಎನಿಸಿಕೊಳ್ಳಬೇಕಾಗಿದರೆ ಕೇವಲ ಸಂಶೋಧನಾ ಸಮಸ್ಯೆ, ಪೂರ್ವಸಿದ್ಧಾಂತ, ಮತ್ತು ಕ್ಷೇತ್ರಾಧ್ಯಯನ ಮಾಹಿತಿ ಇಷ್ಟೆ ಇದ್ದರೆ ಸಾಲದು(ಇವುಗಳು ಸಂಶೋಧನೆಯ ಭಾಗಗಳೆ ವಿನಃ, ಇದೆ ಒಂದು ಉತ್ತಮ ಸಂಶೋಧನೆ ಮಾಡುವುದಿಲ್ಲ). ಇದರ ಜೊತೆಗೆ ವಿಭಿನ್ನ ಕೌಶಲ್ಯಗಳನ್ನು ಕರಗತಗೊಳಿಸಿಕೊಳ್ಳಬೇಕಾಗುತ್ತದೆ: ಸಂಶೋಧನೆಗೆ ಸಂಬಂಧಿಸಿದ ಒಂದು ಲೇಖನ ಅಥವಾ ಪುಸ್ತಕವನ್ನು ಓದುವ ಕ್ರಮ, ಅದರ ವಾದದ ತಿರುಳನ್ನು ಕಂಡುಕೊಳ್ಳುವ, ವಿಮರ್ಶಿಸುವ, ವಾದವನ್ನು ತರ್ಕಬದ್ಧವಾಗಿ ಇಡುವುದು ಮಹತ್ವದ ಅಂಶಗಳಾಗಿವೆ. ಇಷ್ಟೆ ಅಲ್ಲದೆ, ಕ್ರಮಬದ್ಧ ಗ್ರಂಥಸೂಚಿ ಮಾಡುವ, ಅಡಿಟಿಪ್ಪಣಿ ಬರೆಯುವ ಕೌಶಲ್ಯಗಳನ್ನು ಹೊಂದುವುದು ಅವಶ್ಯಕವಾಗಿದೆ. ಆಗ ಮಾತ್ರ ಒಂದು ಸಂಶೋಧನೆಯು ಉತ್ತಮ ಸಂಶೋಧನೆ ಎನಿಸಿಕೊಳ್ಳಲು ಸಾಧ್ಯ ಎಂಬುದು ಅವುಗಳ ಅಭಿಮತ. ಆದರೆ, ಇಂದು ಈ ಅಂಶಗಳು ಸಂಶೋಧನೆಯಲ್ಲಿ ಗೌಣವಾಗುತ್ತಿರುವುದನ್ನು ನಾವೆಲ್ಲರೂ ಗಮನಿಸಬಹುದು. ಆದ್ದರಿಂದಲೇ ಸಾಮಾಜಿಕ ವಿಜ್ಞಾನಗಳ ಸಂಶೋಧನೆ ಎಂದರೆ ಮೂದಲಿಕೆಗೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ, ಸಾಂಪ್ರದಾಯಿಕ ಬೋಧನಾ ಕ್ರಮವನ್ನು ಬದಿಗಿರಿಸಿ, ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವುದು ಮುಖ್ಯವಾಗಿದೆ ಎಂಬುದು ಹೆಚ್ಚು ಪ್ರಸ್ತುತವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.