ಪ್ರಶ್ನೆ ಉತ್ತರ ಸುನೀಲ್, ಶಿವಮೊಗ್ಗ ನಾನು ಎಸ್.ಎಸ್.ಎಲ್.ಸಿ (ಕನ್ನಡ ಮಾಧ್ಯಮ)ಯಲ್ಲಿ ಶೇ 74 ಅಂಕ ತೆಗೆದುಕೊಂಡು ನಂತರ ದ್ವಿತೀಯ ಪಿ.ಯು.ಸಿ ಯ ವಿಜ್ಞಾನ (ಪಿ.ಸಿ.ಎಂ.ಬಿ) ವಿಭಾಗದಲ್ಲಿ ಶೇ.40.33 ಅಂಕ ತೆಗೆದುಕೊಂಡಿರುತ್ತೇನೆ. ಈಗ ನಾನು ಬಿ.ಎಸ್ಸಿ.ಯಲ್ಲಿ ಸಿ.ಬಿ.ಝಡ್ ತೆಗೆದುಕೊಂಡು ಅಭ್ಯಾಸ ಮಾಡುತ್ತಿದ್ದೇನೆ. ನನಗೆ ವೈದ್ಯನಾಗಬೇಕೆಂಬ ಆಸೆ ಇದೆ. ಆದ್ದರಿಂದ ಮುಂದೆ ವೈದ್ಯಕೀಯ ಸಿ.ಇ.ಟಿ ಪರೀಕ್ಷೆಯನ್ನು ಬರೆಯಬೇಕೆಂದುಕೊಂಡಿದ್ದೇನೆ. ವೈದ್ಯಕೀಯ ಕ್ಷೇತ್ರದ ಸಿ.ಇ.ಟಿ ಪರೀಕ್ಷೆಯಲ್ಲಿ ಬರುವ ಯಾವ ಯಾವ ಐಚ್ಛಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು? ಹಾಗೂ ಮುಂದೆ ಸಿ.ಇ.ಟಿ ಪರೀಕ್ಷೆಯು ಯಾವ ತಿಂಗಳಲ್ಲಿ ಬರುತ್ತದೆ ಮತ್ತು ಸಿ.ಇ.ಟಿ ಪರೀಕ್ಷೆಯನ್ನು ಎಲ್ಲಿ ಕಟ್ಟಬೇಕು. ಹಾಗೂ ಸಿ.ಇ.ಟಿ ಪರೀಕ್ಷೆಯ ತಯಾರಿಗೆ ಹೇಗೆ ಅಭ್ಯಸಿಸಬೇಕು ಎಂದು ತಿಳಿಸಿಕೊಡಿ. ನೀವು ಬಿ.ಎಸ್ಸಿ. ಮುಗಿಸಿದ ನಂತರ ಪುನಃ ಸಿ.ಇ.ಟಿ. ಪರೀಕ್ಷೆ ತೆಗೆದುಕೊಳ್ಳಲು ಯಾವ ಅಭ್ಯಂತರವೂ ಇಲ್ಲ. ಬಿ.ಎಸ್ಸಿ. ಓದಿನಲ್ಲಿ ನೀವು ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರವನ್ನು ಆಳವಾಗಿ ಅಭ್ಯಾಸ ಮಾಡಿರುವುದರಿಂದ, ಸಿ.ಇ.ಟಿ. ಪರೀಕ್ಷೆಯೂ ನಿಮಗೆ ಸುಲಭವಾಗುತ್ತದೆ. ಮೆಡಿಕಲ್ ರ‌್ಯಾಂಕಿಂಗ್ ನಿರ್ಧರಿಸಲು ಸಿ.ಇ.ಟಿ. ಪರೀಕ್ಷೆಯ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಬೋರ್ಡ್ ಪರೀಕ್ಷೆಯ ಅಂಕಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿದ್ದರೂ, ಬೋರ್ಡ್ ಪರೀಕ್ಷೆಯಲ್ಲಿ ಕನಿಷ್ಠ ಶೇ 50 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿರುತ್ತದೆ. ನಿಮ್ಮದು ಬೋರ್ಡ್ ಪರೀಕ್ಷೆಯಲ್ಲಿ ಶೇ 40 ಅಂಕ ಮಾತ್ರವಾಗಿರುವುದರಿಂದ ನೀವು ಇನ್ನೊಮ್ಮೆ ದ್ವಿತೀಯ ಪಿ.ಯು. ಬೋರ್ಡ್ ಪರೀಕ್ಷೆಯನ್ನು ಬರೆದು 50%ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಬೇಕಾಗುತ್ತದೆ. ಇದಕ್ಕೆ ನೀವು ನಿಮ್ಮ ಹಿಂದಿನ ದ್ವಿತೀಯ ಪಿ.ಯು. ಬೋರ್ಡ್ ಪರೀಕ್ಷೆಯ ಅಂಕಪಟ್ಟಿಯನ್ನು ಬೋರ್ಡ್‌ಗೆ ಹಿಂತಿರುಗಿಸಿ ಇನ್ನೊಮ್ಮೆ ದ್ವಿತೀಯ ಪಿ.ಯು. ಪರೀಕ್ಷೆ ಬರೆಯಲು ಅನುಮತಿ ಪಡೆಯಬೇಕಾಗುತ್ತದೆ. ನೀವು ಹಿಂದೆ ಪಿ.ಯು. ಓದಿದ ಕಾಲೇಜಿನಲ್ಲಿ ಈ ಬಗ್ಗೆ ಅಗತ್ಯ ವಿವರಗಳನ್ನು ಪಡೆದು ಮುಂದುವರೆಯಿರಿ. ಸಚಿನ್ ಚಂಗಪ್ಪ, ಕೊಡಗು ನಾನು ಪಿ.ಯು.ಸಿ (ಪಿ.ಸಿ.ಎಂ.ಬಿ, ಶೇ.73 ಅಂಕಗಳೊಂದಿಗೆ) ಪಾಸು ಮಾಡಿದ್ದೇನೆ. ನನಗೆ ಬಿ.ಇ ಮಾಡುವ ಆಕಾಂಕ್ಷೆಯಿದೆ. ತದ ನಂತರ ಭಾರತೀಯ ಭೂಸೇನೆಯನ್ನು ಸೇರುವ ಹಂಬಲವಿದೆ. ಆದ್ದರಿಂದ ಯಾವ ಕೋರ್ಸ್ ಮತ್ತು ಬ್ರಾಂಚ್ ಉತ್ತಮ ಎಂದು ದಯಮಾಡಿ ತಿಳಿಸಿ. ದೇಶಕಾಯುವ ಕೆಲಸವನ್ನು ಬಯಸುತ್ತಿರುವ ನಿಮಗೆ ಅಭಿನಂದನೆಗಳು. ಬಿ.ಇ. ಮುಗಿದ ನಂತರ ಭೂಸೇನೆಯನ್ನು ಸೇರುವ ಅಭಿಲಾಷೆಯಿದ್ದರೆ ಸಿವಿಲ್ ಎಂಜಿನಿಯರಿಂಗ್ ಅಥವಾ ಮೆಕ್ಯಾನಿಕಲ್ ಎಂಜನಿಯರಿಂಗ್‌ನಲ್ಲಿ ಬಿ.ಇ. ಮಾಡುವುದು ಒಳ್ಳೆಯದು. ರಶ್ಮಿ. ಎಂ.ಕೆ, ಕೊಡಗು ನಾನು ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಶೇಕಡ 63 ಅಂಕ ತೆಗೆದಿದ್ದೇನೆ. ನನಗೆ ಡಿಪ್ಲೊಮಾ ಮಾಡುವ ಆಸೆ. ಡಿಪ್ಲೊಮಾದಲ್ಲಿ ಯಾವ ಕೋರ್ಸ್ ತೆಗೆದುಕೊಂಡರೆ ಒಳ್ಳೆಯದು? ಯಾವುದಕ್ಕೆ ಉತ್ತಮ ಭವಿಷ್ಯ ಇದೆ ಎಂದು ದಯವಿಟ್ಟು ತಿಳಿಸಿ. ಉದ್ಯೋಗಾವಕಾಶ ಹೇಗೆ? ಡಿಪ್ಲೊಮಾ ನಂತರ ಹೆಚ್ಚಿನ ಓದಿಗೆ ಏನು ಮಾಡಬಹುದು ಎಂದು ದಯವಿಟ್ಟು ಮಾರ್ಗದರ್ಶನ ನೀಡಿ. (ಎಂಜಿನಿಯರಿಂಗ್ ಬಿಟ್ಟು) ಪಿ.ಜಿ. ಡಿಪ್ಲೊಮಾ ಎಂದರೇನು? ದಯವಿಟ್ಟು ತಿಳಿಸಿ. ನೀವು ಪಿ.ಯು.ಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದೀರಿ. ಡಿಪ್ಲೊಮಾ ಮಾಡಲು ಬೇಕಾದಷ್ಟು ಎಂಜನಿಯರಿಂಗ್ ಕ್ಷೇತ್ರಗಳಿವೆ. ಆ ಕ್ಷೇತ್ರಗಳಲ್ಲಿ ನಿಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಎಂಬುದನ್ನು ಗೊತ್ತುಮಾಡಿಕೊಳ್ಳಿ. ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತಮ ಕೌಶಲದೊಂದಿಗೆ ಡಿಪ್ಲೊಮಾ ಮುಗಿಸಿದರೆ, ಉದ್ಯೊಗಾವಕಾಶಗಳು ಎಲ್ಲ ಕ್ಷೇತ್ರದಲ್ಲಿಯೂ ವಿಪುಲವಾಗಿವೆ. ನೀವು ಯಾವುದಾದರೂ ಒಂದು ಕ್ಷೇತ್ರದಲ್ಲಿ ಡಿಪ್ಲೊಮಾ ಮುಗಿಸಿದ ನಂತರ, ಹೆಚ್ಚಿನ ಜ್ಞಾನಾರ್ಜನೆಗಾಗಿ ಪಿ.ಜಿ. ಡಿಪ್ಲೊಮಾ ಕೂಡ ಮಾಡಬಹುದು. ದೀಪಾ. ಬ. ಸವಣೂರ ನಾನು ಡಿಪ್ಲೊಮಾ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರುತ್ತೇನೆ. ನನಗೆ ಬಿ.ಇ. ಮಾಡಬೇಕೆಂಬ ಆಸೆ ಇದೆ. ಆದರೆ ಮನೆಯ ಪರಿಸ್ಥಿತಿಯಿಂದ ಕೆಲಸಕ್ಕೆ ಹೋಗಬೇಕು. ಅದ್ದರಿಂದ ನಾನು ಡಿಪ್ಲೊಮಾ ಪದವಿಯ ಮುಖಾಂತರ ಹೋದರೆ ಸಾಕಾ ಅಥವಾ ಯಾವುದಾದರೂ ಒಂದು ಕೋರ್ಸ್ ಅನ್ನು ಮಾಡಬೇಕಾಗುತ್ತದೆಯೇ. ಮಾಡುವುದಾದರೆ ಯಾವ ಕೋರ್ಸ್ ಮಾಡಬೇಕು ಎಲ್ಲಿ ಮಾಡಬೇಕು. ದಯವಿಟ್ಟು ತಿಳಿಸಿಕೊಡಿ. ನಾನು ಬಿ.ಇ. ಮಾಡುವುದಾದರೆ ದೂರಶಿಕ್ಷಣದ ಮೂಲಕ ಮಾಡಬಹುದೇ. ದೂರಶಿಕ್ಷಣದ ಮೂಲಕ ಮಾಡುವುದಿದ್ದರೆ ಕಾಲೇಜಿನ ಬಗ್ಗೆ ವಿವರ ತಿಳಿಸಿ. ಮತ್ತು ಎಂ.ಸಿ.ಎ ಮಾಡಬಹುದಾ ತಿಳಿಸಿ. ನೀವು ಪ್ರಥಮ ದರ್ಜೆಯಲ್ಲಿ ಡಿಪ್ಲೊಮಾ ಮಾಡಿರುವುದು ತುಂಬ ಸಂತೋಷಕರ ಸಂಗತಿ. ಆರ್ಥಿಕ ತೊಂದರೆಗಳಿದ್ದರೆ ನೀವು ತಕ್ಷಣ ಯಾವುದಾದರೂ ಉದ್ಯೋಗಕ್ಕೆ ಸೇರಿಕೊಳ್ಳುವುದು ಸೂಕ್ತ. ಕನಿಷ್ಠ ಒಂದು ವರ್ಷ ಕೆಲಸಮಾಡಿದ ನಂತರ, ನೀವು ಸಂಜೆ ತರಗತಿಗಳ ಮುಖಾಂತರ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ. ಮಾಡಬಹುದು. ದೂರಶಿಕ್ಷಣದ ಮೂಲಕ ಬಿ.ಇ. ಮಾಡಲು ಸಾಧ್ಯವಾಗುವುದಿಲ್ಲ. ಸಾಧನಾ. ಎಸ್. ಎಂ., ಕೊಪ್ಪಳ ನಾನು ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರೆಯಬೇಕೆಂಬ ಮಹಾದಾಸೆ ಹೊಂದಿದ್ದೇನೆ. ನಾನು ಈಗ ಬಿ.ಎಸ್ಸಿ.ಯಲ್ಲಿದ್ದು, ಬಿ.ಎಸ್ಸಿ. ಮುಗಿದ ನಂತರ ಎಂ.ಬಿ.ಬಿ.ಎಸ್ ಮಾಡುವ ಆಕಾಂಕ್ಷೆ ಹೊಂದಿದ್ದು ಅದು ಹೇಗೆ ಎಂದು ತಿಳಿಯುತ್ತಿಲ್ಲ. ದಯವಿಟ್ಟು ಅದರ ಬಗ್ಗೆ ಮಾಹಿತಿ ನೀಡಿ. ಬಿ.ಎಸ್ಸಿ. ಫಲಿತಾಂಶದ ಮೇಲೆ ಸಿ.ಇ.ಟಿ ಪರೀಕ್ಷೆ ಬರೆಯಬೇಕೆ ದಯವಿಟ್ಟು ತಿಳಿಸಿ. ಎಂ.ಬಿ.ಬಿ.ಎಸ್. ಮಾಡಲು ಸಿ.ಇ.ಟಿ. ಮೆಡಿಕಲ್ ಮುಖಾಂತರವೇ ಬರಬೇಕು. ನೀವು ಬಿ.ಎಸ್ಸಿ. ಮುಗಿದ ನಂತರ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರದಲ್ಲಿ ಪಿ.ಯು. ಸಿ.ಇ.ಟಿ ಪರೀಕ್ಷೆ ಪುನಃ ತೆಗೆದುಕೊಳ್ಳಬೇಕು. ಬಿ.ಎಸ್ಸಿ.ಯಲ್ಲಿ ನೀವು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಇವುಗಳನ್ನು ಅಥವಾ ಇವುಗಳಲ್ಲಿ ಕೆಲವನ್ನು ಅಧ್ಯಯನ ಮಾಡಿರುವುದರಿಂದ, ಸಿ.ಇ.ಟಿ. ಪರೀಕ್ಷೆಯನ್ನು ಸುಲಭವಾಗಿ ತೆಗೆದುಕೊಳ್ಳಬಹುದು. ಆದರೂ ಸಾಕಷ್ಟು ತಯಾರಿ ಅಗತ್ಯ. ಮೆಡಿಕಲ್ ರ‌್ಯಾಂಕಿಂಗ್‌ಗೆ ಪಿ.ಯು. ಬೋರ್ಡ್ ಪರೀಕ್ಷೆಯ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳದಿದ್ದರೂ ಕನಿಷ್ಠ 50% ಅಂಕಗಳು ಬೋರ್ಡ್ ಪರೀಕ್ಷೆಯಲ್ಲೂ ಬಂದಿರುವುದು ಅಗತ್ಯ. ರಿತಿಕಾ. ಎಂ.ಎಂ., ಕೊಪ್ಪಳ ನಾನು ಬಿ.ಎಸ್ಸಿ ಮಾಡುತ್ತಿದ್ದು ಐ.ಎ.ಎಸ್ ಪರೀಕ್ಷೆಯನ್ನು ಬರೆಯಬೇಕು ಎಂದುಕೊಂಡಿದ್ದೇನೆ. ನಾನು ಯಾವ ಯಾವ ವಿಷಯಗಳ ಮೇಲೆ ಗಮನಕೊಡಬೇಕು ಹಾಗೂ ಯಾವ ಯಾವ ಪುಸ್ತಕಗಳನ್ನು ಓದಬೇಕು ಎಂದು ತಿಳಿಸಿ. ನಾನು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ನನಗೆ ಇದರ ಬಗ್ಗೆ ಹೆಚ್ಚಿನ ಅರಿವಿಲ್ಲದಿರುವುದರಿಂದ ನನಗೆ ಇದರ ಬಗ್ಗೆ ಮಾಹಿತಿ ನೀಡಿ. ನೀವು ಬಿ.ಎಸ್ಸಿ. ಮಾಡುತ್ತಿರುವಾಗಲೇ ಮುಂದೆ ಐ.ಎ.ಎಸ್. ಮಾಡಬೇಕೆಂಬ ಕನಸು ಕಾಣುತ್ತಿರುವುದು ಸಂತೋಷಕರ. ಐ.ಎ.ಎಸ್. ನಂತಹ ಪರೀಕ್ಷೆಗಳಿಗೆ ದೀರ್ಘಕಾಲದ ತಾಲೀಮು ಅಗತ್ಯ. ನೀವು ಈಗಿನಿಂದಲೇ ದಿನದ ನಿರ್ದಿಷ್ಟ ಅವಧಿಯಲ್ಲಿ ಐ.ಎ.ಎಸ್.ಗೆ ತಯಾರಿ ಪ್ರಾರಂಭಿಸಿ. ಐ.ಎ.ಎಸ್.ಗೆ ವಿಶಾಲ ತಳಹದಿಯ ಓದು ಅಗತ್ಯ. ನಮ್ಮ ಸುತ್ತಮುತ್ತ ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳ ಬಗೆಗೂ ಕುತೂಲಹಲ ಇಟ್ಟುಕೊಂಡಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಲಭ್ಯವಿರುವ ನಿಯತಕಾಲಿಕೆಗಳನ್ನು ಅಭ್ಯಾಸ ಮಾಡುತ್ತಿರಬೇಕು. ಐ.ಎ.ಎಸ್. ಮಾಡಲು ಬಿ.ಎಸ್ಸಿ. ಮಾಡಿರುವುದು ಸಾಕಾದರೂ ಎಂ.ಎಸ್ಸಿ. ಮಾಡಿರುವುದು ಅಪೇಕ್ಷಣೀಯ. ರಜತ್. ಎಚ್.ಎಂ, ಚಿತ್ರದುರ್ಗ ನಾನು ದ್ವಿತೀಯ ಪಿ.ಯು.ಸಿಯಲ್ಲಿ ಪಿ.ಸಿ.ಎಂ.ಬಿ ಅಭ್ಯಾಸ ಮಾಡುತ್ತಿದ್ದು. ನನಗೆ ಬಯೋಟೆಕ್ನಾಲಜಿ ಬಗ್ಗೆ ತುಂಬಾ ಆಸಕ್ತಿ ಇರುತ್ತದೆ. ಇದಕ್ಕಾಗಿ ಯಾವ ವಿಷಯದಲ್ಲಿ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ ತಿಳಿಸಿರಿ ಮತ್ತು ಕ್ಲಿನಿಕಲ್ ರಿಸರ್ಚ್ ಬಗ್ಗೆಯೂ ಸಹಾ ತಿಳಿಸಿರಿ. ಮತ್ತು ಬಯೋಟೆಕ್ ನಲ್ಲಿ ದೊರೆಯುವ ಉದ್ಯೋಗಾವಕಾಶಗಳು ಮತ್ತು ವೇತನಗಳ ಬಗ್ಗೆ ತಿಳಿಸಿರಿ. ಮೇಲ್ಕಂಡ ವಿಷಯಗಳ ಬಗ್ಗೆ ಪ್ರವೇಶ ಹೇಗೆ ಎಂಬುದರ ಬಗ್ಗೆ ತಿಳಿಸಿ. ಬಯೋಟೆಕ್ನಾಲಜಿ ಬಗ್ಗೆ ನಿಮಗೆ ತುಂಬಾ ಆಸಕ್ತಿ ಇರುವುದು ಸಂತೋಷಕರ. ನೀವು ಈಗ ಪಿ.ಯು.ಸಿ. ಓದುತ್ತಿರುವ ಸಂದರ್ಭದಲ್ಲಿ ಎಲ್ಲಾ ವಿಚಾರಗಳಿಗೂ ಗಮನಹರಿಸಿ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರಗಳ ಹದವಾದ ಪರಿಪಾಕವೇ ಬಯೋಟೆಕ್ನಾಲಜಿ. ಇದನ್ನು ಮುಂದೆ ಅಭ್ಯಾಸ ಮಾಡಲು ಎಂಜನಿಯರಿಂಗ್ ಅಥವಾ ಶುದ್ಧ ವಿಜ್ಞಾನದ ಮಾರ್ಗಗಳನ್ನು ನೀವು ಆರಿಸಿಕೊಳ್ಳಬಹುದು. ದ್ವಿತೀಯ ಪಿ.ಯು.ನಲ್ಲಿ ಸಿ.ಇ.ಟಿ. ಪರೀಕ್ಷೆ ತೆಗೆದುಕೊಂಡು ಬಯೋಟೆಕ್ನಾಲಜಿಯಲ್ಲಿ ಬಿ.ಇ. ಮಾಡಲು ಸೂಕ್ತ ಎಂಜಿನಿಯರಿಂಗ್ ಕಾಲೇಜನ್ನು ಆರಿಸಿಕೊಳ್ಳಬಹುದು ಅಥವಾ ಬಯೋಟೆಕ್ನಾಲಜಿಯನ್ನು ಒಂದು ಅಧ್ಯಯನದ ವಿಷಯವಾಗಿ ತೆಗೆದುಕೊಂಡು ಬಿ.ಎಸ್ಸಿ. ಮಾಡಿ ಅನಂತರ ಬಯೋಟೆಕ್ನಾಲಜಿಯಲ್ಲಿ ಎಂ.ಎಸ್ಸಿ. ಮಾಡಬಹುದು. ಶಿವರಾಜ, ಗೋಕಾಕ್ ನಾನು ದ್ವಿತೀಯ ಪಿ.ಯು.ಸಿ (ವಿಜ್ಞಾನ ವಿಭಾಗ) ಯಲ್ಲಿ ಓದುತ್ತಿದ್ದೇನೆ. ಇಂಗ್ಲಿಷ್ ನನಗೆ ಕಠಿಣವಾಗಿದೆ. ಇಂಗ್ಲಿಷ್ ನಲ್ಲಿ ಉತ್ತಮನಾಗಲು ಏನು ಮಾಡಬೇಕು ಮತ್ತು ನನಗೆ ಏಕಾಗ್ರತೆಯಿಂದ ಓದಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಮಾರ್ಗದರ್ಶನ ನೀಡಿ. ಇಂಗ್ಲಿಷ್ ಭಾಷೆ ಕಠಿಣವೆಂದೆನಿಸುವ ನಿಮ್ಮ ಭಾವನೆ ಅರ್ಥವಾಗುವಂತಹುದು. ಗ್ರಾಮೀಣ ಭಾಗದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಮತ್ತು ಅಲ್ಪ ಸ್ವಲ್ಪ ಇಂಗ್ಲಿಷ್ ಬಳಕೆಯಲ್ಲಿಲ್ಲದ ಕುಟುಂಬದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಹೀಗನ್ನಿಸುವುದು ಸಹಜ. ಆದರೆ ಬೇರಾವ ಭಾಷೆಗಳಿಗಿಂತಲೂ ಇಂಗ್ಲಿಷ್ ಕಲಿಯುವುದು ಸುಲಭ. ಒಂದು ಶಬ್ದಕೋಶದ ಸಹಾಯದಿಂದ ನಿಮ್ಮ ಪಠ್ಯದಲ್ಲಿನ ಎಲ್ಲ ಹೊಸ ಇಂಗ್ಲಿಷ್ ಪದಗಳ ನಿಖರವಾದ ಅರ್ಥವನ್ನು ತಿಳಿಯಿರಿ. ಈ ಪದಗಳನ್ನು ಬಳಸಿ ಬೇರೆ ಬೇರೆ ವಾಕ್ಯಗಳನ್ನು ರಚಿಸಿ. ಇಂಗ್ಲಿಷ್ ವೃತ್ತ ಪತ್ರಿಕೆಗಳನ್ನು ಓದಲು ಪ್ರಾರಂಭಿಸಿ. ಸಮಾನ ಮನಸ್ಕರಾದ ಕೆಲವು ಸ್ನೇಹಿತರು ಒಟ್ಟು ಸೇರಿ ಇಂಗ್ಲಿಷ್‌ನಲ್ಲಿಯೇ ಸಂಭಾಷಣೆ ಪ್ರಾರಂಭಿಸಿ. ಟಿ.ವಿ.ಯಲ್ಲಿ ಇಂಗ್ಲಿಷ್ ನ್ಯೂಸ್ ಕೇಳಿ, ಶಬ್ದಗಳ ಉಚ್ಚಾರಣೆಯ ಬಗ್ಗೆ ಗಮನಕೊಡಿ. ವ್ಯವಹಾರಕ್ಕೆ ಬೇಕಾಗುವಷ್ಟು ಇಂಗ್ಲಿಷನ್ನು ಈ ದಾರಿಗಳಿಂದ ಸುಲಭವಾಗಿ ಪಡೆಯಬಹುದು. ಚಂದ್ರಕಿರಣ್, ಕೊಡಗು ನಾನು ಪಿ.ಯು.ಸಿ (ಶೇ. 67%) ಪಾಸು ಮಾಡಿದ್ದೇನೆ. ನಾನು ವಾಯುಸೇನೆಯನ್ನು ಸೇರುವ ಆಂಕಾಕ್ಷೆ ಹೊಂದಿದ್ದೇನೆ. ಆದರೆ ಬಿ.ಇ. ಮುಗಿಸಿ ತದನಂತರ ವಾಯುಸೇನೆಯನ್ನು ಸೇರೋಣ ಎಂದುಕೊಂಡಿದ್ದೇನೆ. ಆದ್ದರಿಂದ ತಾವು ದಯಮಾಡಿ ಯಾವ ಕೋರ್ಸ್, ಬ್ರಾಂಚ್‌ನಲ್ಲಿ ವ್ಯಾಸಂಗ ಮಾಡಿದರೆ ಉತ್ತಮ ಅವಕಾಶವಿರುವುದು ದಯಮಾಡಿ ತಿಳಿಸಿ. ನನ್ನ ತಂದೆಯು ಆರ್ಮಿಯಲ್ಲಿ ಇದ್ದದ್ದರಿಂದ ನನಗೆ ಸಿ.ಇ.ಟಿಯಲ್ಲಿ ಎಕ್ಸ್ ಆರ್ಮಿ ಕೋಟಾ ಸಹ ಇದೆ. ವಾಯುಸೇನೆಯನ್ನು ಸೇರುವುದು ನನ್ನ ಮುಖ್ಯ ಉದ್ದೇಶವಾಗಿದೆ. ದೇಶರಕ್ಷಣೆಯ ಸೇವೆಯಲ್ಲಿ ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿರುವ ನಿಮಗೆ ಅಭಿನಂದನೆಗಳು. ಬಿ.ಇ. ಮುಗಿದನಂತರ ವಾಯುಸೇನೆಯನ್ನು ಸೇರುವ ಅಭಿಲಾಷೆ ಇದ್ದರೆ ಏರೋನಾಟಿಕಲ್ ಎಂಜನಿಯರಿಂಗ್ ಅಥವಾ ಮೆಕ್ಯಾನಿಕಲ್ ಎಂಜನಿಯರಿಂಗ್‌ನಲ್ಲಿ ಬಿ.ಇ. ಮಾಡುವುದು ಒಳ್ಳೆಯದು. ಮಂಜುಳ.ಎಂ.ಕುಂಬಾರ್, ಬಾಗಲಕೋಟೆ ನಾನು ಬಿ.ಇ ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ನಾನು ತೆಗೆದುಕೊಂಡಿದ್ದು ಬಯೋಟೆಕ್ನಾಲಜಿ . ಆದರೆ ನಾನು ಪಿ.ಯು.ಸಿ ಯಲ್ಲಿ ಕಂಪ್ಯೂಟರ್ ಸೈನ್ಸ್ ಅನ್ನು ಆಯ್ಕೆ ಮಾಡಿಕೊಂಡಿದ್ದೆ. ಆದ್ದರಿಂದ ನನಗೆ ಬಯೋಲಾಜಿ ಬಗ್ಗೆ ಗೊತ್ತಿಲ್ಲ. ಆದ್ದರಿಂದ ಬಯೋಟೆಕ್ನಾಲಜಿ ನನಗೆ ಕಠಿಣವಾಗಬಹುದೇ ತಿಳಿಸಿ. ನಾನು ಈಗ ಬ್ರಾಂಚ್‌ನ್ನು ಬೇರೆ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ಹಾಗೂ ನನ್ನ ಮೊದಲನೇ ಸೆಮಿಸ್ಟರ್ 82.6 ಫಲಿತಾಂಶ ಬಂದಿದೆ. ದಯಮಾಡಿ ಮಾರ್ಗದರ್ಶನ ನೀಡಿ. ನಿಮಗೆ ಬಯೋಟೆಕ್ನಾಲಜಿ ಬಗ್ಗೆ ಅಪಾರವಾದ ಆಸಕ್ತಿ ಇದ್ದರೆ ಅದರಲ್ಲೇ ಮುಂದುವರೆಯಿರಿ. ಪಿ.ಯು.ಸಿ.ಯಲ್ಲಿ ಓದಬೇಕಾಗಿದ್ದ ಜೀವಶಾಸ್ತ್ರವನ್ನು ಈಗ ಒಮ್ಮೆ ಓದಿದರಾಯಿತು. ಪಿ.ಯು.ಸಿ.ಯಲ್ಲಿ ಓದಿಲ್ಲ ಎಂದು ಭಯಪಡಬೇಕಾಗಿಲ್ಲ. ಈಗ ಬಯೋಟೆಕ್ನಾಲಜಿಯನ್ನು ಅರ್ಥಮಾಡಿಕೊಳ್ಳಲು ಎಷ್ಟೆಷ್ಟು ಅಗತ್ಯವೋ ಅಷ್ಟಷ್ಟನ್ನು ಓದಿಕೊಳ್ಳುತ್ತಾ ಹೋಗಬಹುದು. ಬಯೋಟೆಕ್ನಾಲಜಿ ನಿಮಗೆ ಇಷ್ಟವಲ್ಲದ ವಿಷಯವಾಗಿದ್ದರೆ ಮಾತ್ರ ಬೇರೆ ವಿಷಯಕ್ಕೆ ಬದಲಾಯಿಸಿಕೊಳ್ಳಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.