ವಾಕ್ ಮತ್ತು ಶ್ರವಣ ವಿಷಯದಲ್ಲಿ ಪದವಿ ಆಯುರ್ವೇದ ಮತ್ತು ವೈದ್ಯಕೀಯ ಕೋರ್ಸ್‌ನಲ್ಲಿ ಅವಕಾಶ ಲಭ್ಯವಾಗದ ವಿದ್ಯಾರ್ಥಿಗಳಿಗಾಗಿ ಮೈಸೂರಿನ ಜೆಎಸ್‌ಎಸ್‌ಸಂಸ್ಥೆ ವಾಕ್ ಮತ್ತು ಶ್ರವಣ ಶಿಕ್ಷಣ, ನ್ಯಾಚುರೋಪತಿ ಮತ್ತು ಯೋಗ, ಫಿಸಿಯೋಥೆರಪಿ ಕೋರ್ಸ್‌ಗಳನ್ನು ಆರಂಭಿಸಿದೆ. ಸಂವಹನ ಕೊರತೆ ಇರುವ ವ್ಯಕ್ತಿಯ ಜೊತೆ ಸಂಪರ್ಕ ಸಾಧಿಸುವುದು ಕಷ್ಟದ ಕೆಲಸ. ಇಂತಹ ಸಮಸ್ಯೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವೈದ್ಯ ಜಗತ್ತೂ ಸಾಕಷ್ಟು ಶ್ರಮಿಸುತ್ತಿದೆ. ಇದರ ಫಲವಾಗಿ ವಾಕ್ ಮತ್ತು ಶ್ರವಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ಅತ್ಯಾಧುನಿಕ ಉಪಕರಣಗಳು ಇಂದು ಲಭ್ಯವಾಗಿವೆ.ಹಾಗೆಯೇ ಈ ಕ್ಷೇತ್ರದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ದೇಶ-ವಿದೇಶಗಳಲ್ಲಿ ಉದ್ಯೋಗಾವಕಾಶ ಲಭ್ಯವಾಗಿವೆ. ಆದರೆ, ವಾಕ್ ಮತ್ತು ಶ್ರವಣ ವಿಷಯಗಳ ಬಗ್ಗೆ ಅಧ್ಯಯನ ಮಾಡಿರುವ ವೃತ್ತಿಪರ ವಿದ್ಯಾರ್ಥಿಗಳ ಕೊರತೆ ನಮ್ಮ ದೇಶದಲ್ಲಿ ಸಾಕಷ್ಟಿದೆ. ವಿಷಯದ ಬಗ್ಗೆ ಸ್ಪಷ್ಟವಾದ ತಿಳಿವಳಿಕೆ, ಮಾಹಿತಿ, ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜುಗಳು ಲಭ್ಯವಿಲ್ಲದ್ದರಿಂದ ಈ ಸಮಸ್ಯೆ ಉಂಟಾಗಿದೆ. ಈ ನಿಟ್ಟಿನಲ್ಲಿ ಮೈಸೂರಿನ `ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆ~ಯಲ್ಲಿ ವಾಕ್ ಮತ್ತು ಶ್ರವಣ ದೋಷಕ್ಕೆ ಸಂಬಂಧಿಸಿದಂತೆ ಬಿಎಸ್‌ಸಿ ಮತ್ತು ಎಂಎಸ್‌ಸಿ (ಸ್ಪೀಚ್ ಅಂಡ್ ಹಿಯರಿಂಗ್) ಕೋರ್ಸ್‌ಳು ಲಭ್ಯ. ಈ ಕೋರ್ಸ್‌ಗಳು ಮೈಸೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿವೆ. ಎರಡೂ ಕೋರ್ಸ್‌ಗಳಿಗೆ ಈಗಾಗಲೇ ಪ್ರವೇಶ ಪ್ರಾರಂಭವಾಗಿದ್ದು, ದಂಡ ಸಹಿತ ಜುಲೈ ತಿಂಗಳ 31ರ ವರೆಗೆ ಪ್ರವೇಶ ಪಡೆದುಕೊಳ್ಳಬಹುದು. ಮಾಹಿತಿಗೆ ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆ, ಊಟಿ ರಸ್ತೆ, ಮೈಸೂರು. ದೂರವಾಣಿ: 0821-2548230 . ಆಯುರ್ವೇದ ಕಾಲೇಜು ಜೆಎಸ್‌ಎಸ್ ಆಯುರ್ವೇದ ಕಾಲೇಜಿನಲ್ಲಿ ನಾಲ್ಕೂವರೆ ವರ್ಷದ ಬಿಎಎಂಎಸ್ ಹಾಗೂ ಮೂರು ವರ್ಷದ ಎಂಡಿ ಕೋರ್ಸ್‌ಗಳು ಲಭ್ಯ ಇವೆ. ಕೋರ್ಸ್ ಮುಗಿಸಿದ ಬಳಿಕ ಒಂದು ವರ್ಷ ಇಂಟರ್ನ್‌ಶಿಪ್ ಪೂರೈಸಬೇಕು. ಒಂದು ವರ್ಷಕ್ಕೆ ರೂ. 82 ಸಾವಿರ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಪ್ರವೇಶಾತಿಗೆ ಸೆಪ್ಟೆಂಬರ್ 30 ಕೊನೆಯ ದಿನ. ಎಂಡಿ ಪದವಿ: ರಸಶಾಸ್ತ್ರ, ದ್ರವ್ಯಗುಣ, ಪಂಚಕರ್ಮ ವಿಷಯಗಳಲ್ಲಿ 3 ವರ್ಷ ಎಂಡಿ ಪದವಿ ಪಡೆಯಬಹುದು. ಒಂದು ವರ್ಷಕ್ಕೆ ರೂ. 1.10 ಲಕ್ಷ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಜುಲೈ 31ರ ಒಳಗೆ ಪ್ರವೇಶ ಪಡೆದುಕೊಳ್ಳಬೇಕು. ಆಸಕ್ತ ಅಭ್ಯರ್ಥಿಗಳು `ಜೆಎಸ್‌ಎಸ್ ಆಯುರ್ವೇದ ಮೆಡಿಕಲ್ ಕಾಲೇಜು~ ಹೆಸರಿನಲ್ಲಿ ರೂ. 300 ಡಿಡಿಯನ್ನು ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು, ಲಲಿತಾದ್ರಿಪುರ ರಸ್ತೆ, ಲಲಿತಮಹಲ್ ಹತ್ತಿರ, ಆಲನಹಳ್ಳಿ, ಮೈಸೂರು ಇಲ್ಲಿಗೆ ಕಳುಹಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.