ಪಿಯು ಪ್ರವೇಶಕ್ಕೆ ಆನ್‌ಲೈನ್ ಪದ್ಧತಿ ಪ್ರವೇಶ ಪದ್ಧತಿಯಲ್ಲಿ ಪಾರದರ್ಶಕತೆ ಕಾಪಾಡಲು ಹಾಗೂ ವಿದ್ಯಾರ್ಥಿಗಳು, ಪೋಷಕರ ಪರದಾಟವನ್ನು ತಪ್ಪಿಸುವ ದೃಷ್ಟಿಯಿಂದ ಪಿಯು ಪ್ರವೇಶಕ್ಕೆ ಆನ್‌ಲೈನ್ ಪದ್ಧತಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಈ ಮೂಲಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂಬುದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಶಯವಾಗಿದೆ. ಖಾಸಗಿ ಕಾಲೇಜುಗಳಲ್ಲಿನ ವಂತಿಗೆ ಹಾವಳಿ ಹಾಗೂ ಸೀಟಿಗಾಗಿ ವಿದ್ಯಾರ್ಥಿಗಳು, ಪೋಷಕರು ಪರದಾಡುವುದನ್ನು ತಪ್ಪಿಸುವ ದೃಷ್ಟಿಯಿಂದ ಪ್ರಥಮ ಪಿಯುಸಿ ಪ್ರವೇಶಕ್ಕೆ ಮುಂಬರುವ ಶೈಕ್ಷಣಿಕ ಸಾಲಿನಿಂದ ಆನ್‌ಲೈನ್ ಪ್ರವೇಶ ಪದ್ಧತಿಯನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಈಗಿನಿಂದಲೇ ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಸೇರಿದಂತೆ ಒಟ್ಟು 3,440 ಪದವಿ ಪೂರ್ವ ಕಾಲೇಜುಗಳಿದ್ದು, ಸುಮಾರು 9 ಲಕ್ಷ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ. ಎಲ್ಲ ಕಾಲೇಜುಗಳಿಗೂ ಅನ್ವಯವಾಗುವಂತೆ ಏಕರೂಪ ಪ್ರವೇಶ ನಿಯಮಾವಳಿ ಜಾರಿಗೊಳಿಸಲಾಗುತ್ತಿದ್ದು, ಶುಲ್ಕವನ್ನು ಸಹ ಸರ್ಕಾರವೇ ನಿಗದಿಪಡಿಸಲಿದೆ. ಹೊಸ ಪದ್ಧತಿಯಿಂದಾಗಿ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಹತ್ತಾರು ಕಾಲೇಜುಗಳಿಗೆ ಅರ್ಜಿ ಸಲ್ಲಿಸುವುದು, ಸೀಟಿಗಾಗಿ 3-4 ಬಾರಿ ಅಲೆದಾಡುವುದು, ಪ್ರಭಾವಿಗಳಿಂದ ಒತ್ತಡ ಹೇರುವುದು ತಪ್ಪಲಿದೆ. ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸಬಹುದಲ್ಲದೆ, ಸೀಟು ಸಿಕ್ಕಿದೆಯೇ ಇಲ್ಲವೇ ಎಂಬುದನ್ನು ಸಹ ಆನ್‌ಲೈನ್ ಮೂಲಕವೇ ತಿಳಿದುಕೊಳ್ಳಬಹುದಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ವಿ.ರಶ್ಮಿ `ಪ್ರಜಾವಾಣಿ~ಗೆ ತಿಳಿಸಿದರು. ಒಂದು ವೇಳೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಕಷ್ಟವೆನಿಸಿದರೆ ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ಮೂಲಕ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬಹುದು. ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ ಆನ್‌ಲೈನ್ ಮೂಲಕ ಸೀಟು ಹಂಚಿಕೆಗೆ ವ್ಯವಸ್ಥೆ ಮಾಡಲಾಗುತ್ತದೆ. ಮೂರು ಸುತ್ತಿನ ಸೀಟು ಹಂಚಿಕೆ ಇರಲಿದ್ದು, ಸರ್ಕಾರದ ಮೀಸಲಾತಿ ಮತ್ತು ಅರ್ಹತೆ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ. ಅನುದಾನಿತ ಕಾಲೇಜುಗಳಲ್ಲಿ ಶೇ 20ರಷ್ಟು ಹಾಗೂ ಅನುದಾನರಹಿತ ಕಾಲೇಜುಗಳಲ್ಲಿ ಶೇ 50ರಷ್ಟು ಸೀಟುಗಳನ್ನು ಆಡಳಿತ ಮಂಡಳಿಗೆ ಬಿಟ್ಟುಕೊಡಲಾಗುತ್ತದೆ. ಇನ್ನುಳಿದ ಎಲ್ಲ ಸೀಟುಗಳನ್ನು ಸರ್ಕಾರವೇ ಹಂಚಿಕೆ ಮಾಡಲಿದೆ. ಆಡಳಿತ ಮಂಡಳಿ ಕೋಟಾ ಸೀಟುಗಳನ್ನು ಹಂಚಿಕೆ ಮಾಡಿಕೊಳ್ಳುವ ಅಧಿಕಾರ ಆಯಾ ಕಾಲೇಜುಗಳಿಗೆ ಇರುತ್ತದೆ. ಹೊಸ ಪದ್ಧತಿ ಜಾರಿಗೆ ಬಂದ ನಂತರವೂ ವಿದ್ಯಾರ್ಥಿಗಳು ತಾವು ಬಯಸಿದ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು. ಭೌಗೋಳಿಕವಾಗಿ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ. ಒಂದಕ್ಕಿಂತ ಹೆಚ್ಚಿನ ಕಾಲೇಜುಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಂತಹ ಸಂದರ್ಭದಲ್ಲಿ ಮೊದಲ, ದ್ವಿತೀಯ, ತೃತೀಯ ಹೀಗೆ ಆದ್ಯತೆ ಗಳನ್ನು ತಿಳಿಸಬೇಕು. ಅಂತಿಮವಾಗಿ ವಿದ್ಯಾರ್ಥಿ ಗಳಿಸಿರುವ ಅಂಕಗಳು ಮತ್ತು ಕಾಲೇಜಿನಲ್ಲಿ ಲಭ್ಯವಿರುವ ಸೀಟುಗಳನ್ನು ಆಧರಿಸಿ ಹಂಚಿಕೆ ಮಾಡಲಾಗುತ್ತದೆ. ಸರ್ಕಾರ ಪ್ರಥಮ ಪಿಯುಸಿ ಪ್ರವೇಶ ಅರ್ಜಿಗೆ ಸದ್ಯ 21 ರೂಪಾಯಿ ಶುಲ್ಕ ನಿಗದಿಪಡಿಸಿದೆ. ಆದರೆ ಯಾವ ಕಾಲೇಜಿನಲ್ಲೂ 21ರೂಪಾಯಿಗೆ ಅರ್ಜಿ ನೀಡುತ್ತಿಲ್ಲ. 100ರಿಂದ 500 ರೂಪಾಯಿವರೆಗೂ ಅರ್ಜಿ ಮತ್ತು ಕೈಪಿಡಿ ಶುಲ್ಕ ಪಡೆಯಲಾಗುತ್ತಿದೆ. ಇದಲ್ಲದೆ ಬಹುತೇಕ ಖಾಸಗಿ ಕಾಲೇಜುಗಳು 20ರಿಂದ 60 ಸಾವಿರ ರೂಪಾಯಿ ವಂತಿಗೆ ಪಡೆಯುತ್ತಿವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪಾರದರ್ಶಕವಾದ ಆನ್‌ಲೈನ್ ಪ್ರವೇಶ ಪದ್ಧತಿಯನ್ನು ತರಲಾಗುತ್ತಿದೆ. ಪುಣೆ, ಚಂಡಿಗಢ, ದೆಹಲಿ, ಮುಂಬೈನಲ್ಲಿ ಈಗಾಗಲೇ ಇಂತಹ ವ್ಯವಸ್ಥೆ ಜಾರಿಯಲ್ಲಿದೆ. ಅದನ್ನು ಅಧ್ಯಯನ ಮಾಡಿದ ನಂತರ ಇಲ್ಲೂ ಸಹ ಆನ್‌ಲೈನ್ ಪ್ರವೇಶ ಪದ್ಧತಿ ಜಾರಿ ಮಾಡಲಾಗುತ್ತಿದೆ. ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಇದಕ್ಕಾಗಿ ಹೊಸ ಸಾಫ್ಟ್‌ವೇರ್ ಸಿದ್ಧಪಡಿಸಲಾಗುತ್ತಿದ್ದು, ಡಿಸೆಂಬರ್ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕೌನ್ಸೆಲಿಂಗ್ ಇಲ್ಲದೆ ಅಭ್ಯರ್ಥಿಗಳಿಗೆ ನೇರವಾಗಿ ಆನ್‌ಲೈನ್ ಮೂಲಕವೇ ಸೀಟು ಹಂಚಿಕೆ ಮಾಡುವ ಮೂಲಕ ಪ್ರವೇಶ ಪ್ರಕ್ರಿಯೆಯನ್ನು ಸರಳಗೊಳಿಸಲಾಗುತ್ತಿದೆ. ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಒಟ್ಟು 35 ಸಂಯೋಜನೆಗಳಿದ್ದು, ವಿದ್ಯಾರ್ಥಿ ಬಯಸಿದ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಯಾವ ಸಂಯೋಜನೆಗೆ ಎಷ್ಟು ಶುಲ್ಕ ಎಂಬುದನ್ನು ಸರ್ಕಾರವೇ ನಿರ್ಧರಿಸಲಿದೆ. ಆಡಳಿತ ಮಂಡಳಿ ಕೋಟಾ ಸೀಟಿಗೂ ಸರ್ಕಾರ ನಿಗದಿಪಡಿಸುವ ಶುಲ್ಕವನ್ನು ಮಾತ್ರ ಕಾಲೇಜುಗಳು ಪಡೆಯಬೇಕು. ಅಲ್ಲದೆ ಶೇ 50ರಷ್ಟು ಸೀಟುಗಳನ್ನು ಆಡಳಿತ ಮಂಡಳಿಗಳು ಕಡ್ಡಾಯವಾಗಿ ಸರ್ಕಾರಕ್ಕೆ ಬಿಟ್ಟುಕೊಡಬೇಕಾಗುತ್ತದೆ. ಈಗಲೂ ಶೇ 50ರಷ್ಟು ಸೀಟುಗಳನ್ನು ನೀಡಬೇಕು ಎಂಬುದು ನಿಯಮಗಳಲ್ಲಿ ಇದೆ. ಆದರೆ ಇದರ ಪಾಲನೆಯಾಗುತ್ತಿರಲಿಲ್ಲ. ಆದರೆ ಇನ್ನು ಮುಂದೆ ಈ ರೀತಿ ವಂಚಿಸಲು ಅವಕಾಶ ಇರುವುದಿಲ್ಲ. ವಿದ್ಯಾರ್ಥಿಗಳ ಎಲ್ಲ ಮಾಹಿತಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ತರಿಸಿಕೊಳ್ಳುತ್ತದೆ. ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ, ಪ್ರವೇಶ ಬಯಸುವ ಕಾಲೇಜಿನ ಹೆಸರನ್ನು ನಮೂದಿಸಬೇಕಾಗುತ್ತದೆ ಅಷ್ಟೇ. ಸದ್ಯಕ್ಕೆ ರಾಜ್ಯ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಪದ್ಧತಿಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಒಂದು ವೇಳೆ ಸಿಬಿಎಸ್‌ಇ ಸಹ ಸಕಾಲಕ್ಕೆ ಫಲಿತಾಂಶ, ಅಂಕಗಳ ಮಾಹಿತಿ ನೀಡಿದರೆ ಆ ವಿದ್ಯಾರ್ಥಿಗಳನ್ನು ಇದರ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗುತ್ತದೆ. ಇಲ್ಲದಿದ್ದರೆ ಅವರಿಗೆ ಮೀಸಲಾದ ಶೇ 5ರಷ್ಟು ಸೀಟುಗಳಿಗೆ ನೇರವಾಗಿಕಾಲೇಜುಗಳಿಗೆ ತೆರಳಿ ಪ್ರವೇಶ ಪಡೆಯಲು ಅವಕಾಶ ಇರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.