ಸರ್ಕಾರಿ ಶಾಲೆಗೆ ಕಾಯಕಲ್ಪ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ. ಹೀಗೇ ಮುಂದುವರೆದರೆ ಕ್ರಮೇಣ ಸರ್ಕಾರಿ ಶಾಲೆಗಳು ಮುಚ್ಚಿ, ಅರೆ ಜೀವವಾಗಿ ಉಸಿರಾಡುತ್ತಿರುವ ಕನ್ನಡ ಭಾಷೆ ಕೊನೆ ಉಸಿರೆಳೆದು ಬಿಡುತ್ತದೇನೋ ಎಂಬ ಆತಂಕ ಕನ್ನಡ ಭಾಷೆ ಬಗ್ಗೆ ಅಭಿಮಾನ ಇರಿಸಿಕೊಂಡ ಎಲ್ಲರನ್ನೂ ಕಾಡುತ್ತಿದೆ. ಯಾಕೆ ಹೀಗಾಗುತ್ತಿದೆ? ಇತ್ತೀಚೆಗೆಸಮಾರಂಭವೊಂದಲ್ಲಿ ಮಾತನಾ ಡುತ್ತಿದ್ದ ಸಾಹಿತಿ, ಚಲನಚಿತ್ರ ನಿರ್ದೆಶಕ ನಾಗತಿಹಳ್ಳಿ ಚಂದ್ರಶೇಖರ ಅವರು ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿರುವುದರ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು. ತಮ್ಮ ಹುಟ್ಟೂರಿನ ಋಣ ತೀರಿಸಲು ಮತ್ತು ಕನ್ನಡ ಭಾಷೆ ಉಳಿಯಬೇಕಾದರೆ ಅದು ಕನ್ನಡ ಶಾಲೆಗಳಿಂದ ಮಾತ್ರ ಎಂಬುದನ್ನು ಮನಗಂಡು ತಾವು ಕಲಿತ ಶಾಲೆಗೆ ಸಕಲ ಸವಲತ್ತುಗಳನ್ನು ಒದಗಿಸಿಕೊಟ್ಟು ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಕಂಪ್ಯೂಟರ್, ವಾಚನಾಲಯ, ಸುಸಜ್ಜಿತ ಕಟ್ಟಡ, ಟಿವಿ ಮುಂತಾದ ಎಲ್ಲಾ ಅನುಕೂಲಗಳನ್ನು ಮಾಡಿಕೊಟ್ಟಿದ್ದರೂ, ಸರ್ಕಾರಿ ಶಾಲೆ ಎಂಬ ಒಂದೇ ಕಾರಣಕ್ಕೆ ಆ ಶಾಲೆಗೆ ಪೋಷಕರು ಮಕ್ಕಳನ್ನು ಸೇರಿಸುತ್ತ ಇಲ್ಲ; ನಮ್ಮ ಪೋಷಕರಿಗೆ ಕಾನ್ವೆಂಟ್ ಭೂತ ಹಿಡಿದು ಬಿಟ್ಟಿದೆ, ಆ ಟೈ, ಬೂಟುಗಳಿಗೆ ಆಕರ್ಷಿತರಾಗಿ ಮನೆ ಮುಂದಿನ ಶಾಲೆಗೆ ಕಳಿಸುವ ಬದಲು ದೂರದ ಶಾಲೆಗೆ ಕಳಿಸಿ ತಮ್ಮೂರಿನ ಶಾಲೆಗಳನ್ನು ಮುಚ್ಚಿಸುತ್ತಿದ್ದಾರೆ ಎಂದು ನೋವಿನಿಂದ ನುಡಿದರು. ಹೌದು, ಈಗಾಗಲೇ ಎಲ್ಲ ಜಿಲ್ಲೆಗಳಲ್ಲೂ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎಂದು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಮುಂದೆ ಹೀಗೇ ಮುಂದುವರೆದರೆ ಕ್ರಮೇಣ ಸರ್ಕಾರಿ ಶಾಲೆಗಳು ಮುಚ್ಚಿ ಅರೆ ಜೀವವಾಗಿ ಉಸಿರಾಡುತ್ತಿರುವ ಕನ್ನಡ ಭಾಷೆ ಕೊನೆ ಉಸಿರೆಳೆದು ಬಿಡುತ್ತೆನೋ ಎಂಬ ಭಯ, ಕನ್ನಡ ಭಾಷೆ ಬಗ್ಗೆ ಅಭಿಮಾನ ಇರಿಸಿಕೊಂಡ ಎಲ್ಲರನ್ನೂ ಕಾಡುತ್ತಿದೆ. ಸರ್ಕಾರಿ ಶಾಲೆಗೆ ಕಾಯಕಲ್ಪ ಯಾಕೆ ಹೀಗಾಗುತ್ತಿದೆ? ಈ ಶಾಲೆಗಳ ಮುಚ್ಚುವಿಕೆಗೆ ಕಾರಣಗಳೇನು? ಈ ಶಾಲೆಗಳಿಗೆ ಭವಿಷ್ಯವಿಲ್ಲವೇ? ಹೀಗೆ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕ ಬೇಕಾಗಿದೆ. ಏಕರೂಪವಿಲ್ಲದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಬಗ್ಗೆ ಅವಲೋಕಿಸಿದಾಗ ಹತ್ತು ಹಲವು ಕಾರಣಗಳು ಗೋಚರಿಸುತ್ತವೆ. ಮೊದಲನೆಯದಾಗಿ ಸರ್ಕಾರಿ ಶಾಲೆಗಳಲ್ಲೂ ಮತ್ತು ಖಾಸಗಿ ಶಾಲೆಗಳಲ್ಲೂ ಅಸ್ತಿತ್ವದಲ್ಲಿರುವ ಏಕರೂಪವಲ್ಲದ ಶಿಕ್ಷಣ. ಇವೆರಡರ ಪಠ್ಯ ಕ್ರಮಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಕಲಿಸುವ ರೀತಿ ನೀತಿಯಲ್ಲೂ ಅಪಾರ ವ್ಯತ್ಯಾಸವಿದೆ. ಖಾಸಗಿ ಶಾಲೆಗಳಲ್ಲಿ ಮಗುವನ್ನು ಮೂರೂವರೆ ವರ್ಷಕ್ಕೆ ದಾಖಲಿಸಿಕೊಂಡು ಕಲಿಸಲು ಪ್ರಾರಂಭಿಸಿದರೆ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಿಕೊಳ್ಳುವುದು ಐದು ವರ್ಷಗಳ ನಂತರವೇ. ಖಾಸಗಿ ಶಾಲೆಗಲ್ಲಿ ಮೂರೂವರೆ ವರ್ಷಕ್ಕೆ ನರ್ಸರಿಗೆ ಸೇರಿ ಎರಡು ವರ್ಷ ಕಲಿತು ಒಂದನೇ ತರಗತಿಗೆ ಬರುವ ವೇಳೆಗೆ ಹೆಚ್ಚಿನ ಸಾಮರ್ಥ್ಯ ಪಡೆದುಕೊಂಡು ಸರ್ಕಾರಿ ಶಾಲೆಯ ಮಗುವಿಗಿಂತ ಈ ಮಗು ಬುದ್ಧಿವಂತ ಎನಿಸಿಕೊಳ್ಳುತ್ತದೆ. ಸರ್ಕಾರಿ ಶಾಲೆಯ ಮಗು ಆಗಷ್ಟೆ ಶಾಲೆಗೆ ಸೇರಿ ಕಲಿಯಲು ಪ್ರಾರಂಭಿಸಿರುತ್ತದೆ. ಹಾಗಾಗಿ ಖಾಸಗಿ ಶಾಲೆಯ ಮಕ್ಕಳೊಂದಿಗಿನ ಸ್ಪರ್ಧೆಯಲ್ಲಿ ಹಿಂದುಳಿಯುತ್ತದೆ. ಖಾಸಗಿ ಶಾಲೆಗಳಲ್ಲಿ ಸಂಪೂರ್ಣವಾಗಿ ಆಂಗ್ಲ ಮಾಧ್ಯಮವಿದ್ದು, ಮಗು ಇಂಗ್ಲಿಷ್‌ನಲ್ಲಿಯೇ ಎಲ್ಲಾ ವಿಷಯವನ್ನು ಕಲಿಯುವುದರಿಂದ ಆಂಗ್ಲ ಭಾಷೆಯ ಮೇಲೆ ಹಿಡಿತ ಪಡೆದು ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಿ ಉನ್ನತ ಶಿಕ್ಷಣವನ್ನು ಪಡೆಯುವಲ್ಲಿ ಹೆಚ್ಚು ಪಾಲು ಪಡೆಯುತ್ತದೆ. ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮವಿದ್ದು, ಇಂಗ್ಲಿಷ್ ಭಾಷೆಯನ್ನು ಒಂದು ವಿಷಯವಾಗಿ ಮಾತ್ರ ಕಲಿಯುವುದರಿಂದ ಇಂಗ್ಲಿಷ್ ಭಾಷೆಯಲ್ಲಿ ಹೆಚ್ಚು ಪ್ರಭುತ್ವ ಸಾಧಿಸಲಾರದೆ ಉನ್ನತ ಶಿಕ್ಷಣ ಪಡೆಯುವಲ್ಲಿ ಸಮಸ್ಯೆ ಎದುರಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಇದು ಕೂಡ ಒಂದು ಪ್ರಮುಖ ಕಾರಣವಾಗಿದೆ. ಸರ್ಕಾರಿ ಶಾಲೆಯ ಮಕ್ಕಳು ಸುಲಭವಾಗಿ ಹಾಗೂ ಸರಳವಾಗಿ ಕಲಿತು ಕಾನ್ವೆಂಟ್ ಶಾಲೆಯ ಮಕ್ಕಳೊಂದಿಗೆ ಸರಿಸಮಾನವಾಗಿ ನಿಲ್ಲಬೇಕೆಂದು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು, ಹಲವಾರು ಹೊಸ ಹೊಸ ವಿಧಾನಗಳನ್ನು , ಯೋಜನೆಗಳನ್ನು ಜಾರಿಗೆ ತಂದಿದೆ. ಅಂತಹ ವಿಧಾನದಲ್ಲಿ `ನಲಿ ಕಲಿ~ ವಿಧಾನವೂ ಒಂದು. ಮಕ್ಕಳು ಕಲಿಯುವಿಕೆಯಲ್ಲಿ ಪರಿಪೂರ್ಣತೆ ಪಡೆಯುವ ನಿಟ್ಟಿನಲ್ಲಿ ಈ ವಿಧಾನ ಹೆಚ್ಚು ನೆರವು ನೀಡಿದರೂ, ಕಾನ್ವೆಂಟ್ ಶಾಲೆಗಳಲ್ಲಿನ ವ್ಯವಸ್ಥೆ ಕಂಡಿರುವ ಪೋಷಕರು `ನಮ್ಮ ಮಕ್ಕಳೇಕೆ ನೆಲದ ಮೇಲೆ ಕುಳಿತು ಕಲಿಯಬೇಕು? ಕಾಲಿಗೆ ಹಾಕಿರುವ ಚಪ್ಪಲಿ, ಶೂಗಳನ್ನು ಕಳಚಿ ಶೀತ ಕಾಲದಲ್ಲೂ ನೆಲದ ಮೇಲೆ ಕುಳಿತು ಕಲಿಯಬೇಕೆ? ಆ ಮಕ್ಕಳಂತೆ ಏಕೆ ಇಂಗ್ಲಿಷ್ ಬರೆದು ಓದುತ್ತಿಲ್ಲ?~ ಎಂದು ಪ್ರಶ್ನಿಸುತ್ತಾ ಸರ್ಕಾರಿ ಶಾಲೆಯ ಶಿಕ್ಷಣ ಕಡಿಮೆ ಎಂದು ಭಾವಿಸುತ್ತಿರುವುದರಿಂದ ಮತ್ತು ಖಾಸಗಿ ಶಾಲೆಗೆ ಹೋಗುತ್ತಿರುವ ನೆರೆಹೊರೆಯ ಮಕ್ಕಳ ಹೊರೆ ಹೊರೆ ಪುಸ್ತಕಗಳಿಗೆ ಹೋಲಿಸಿಕೊಂಡು, ತಮ್ಮ ಮಕ್ಕಳು ಅಷ್ಟು ಕಲಿಯುತ್ತಿಲ್ಲ ಎಂಬ ಭ್ರಮೆಯಿಂದ ನಿಧಾನವಾಗಿ ಖಾಸಗಿ ಶಾಲೆಗಳತ್ತ ಆಕರ್ಷಿತರಾಗುತ್ತಿರುವುದೂ ಕೂಡ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತಕ್ಕೆ ಒಂದು ಕಾರಣವಾಗುತ್ತಿದೆ. ಖಾಸಗಿ ಶಾಲೆಗಳಲ್ಲಿನ ಅತಿ ಶಿಸ್ತು, ಬೆಲೆಬಾಳುವ ಸಮವಸ್ತ್ರ, ಮಿರುಗುವ ಶೂಗಳು, ಟೈ ಬ್ಯಾಡ್ಜ್, ಶಾಲೆಗೆ ಕರೆದೊಯ್ಯಲು ವಾಹನ ಇವೆಲ್ಲವುಗಳಿಂದ ಪ್ರಭಾವಿತರಾಗಿ ಅಂತಹ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವುದರಿಂದ ತಮ್ಮ ಅಂತಸ್ತು ಹೆಚ್ಚಾಗುವುದೆಂದು ಭಾವಿಸುವ ಪೋಷಕರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ನೀಡುವ ಉಚಿತ ಸಮವಸ್ತ್ರ, ಉಚಿತ ಪುಸ್ತಕ, ಬಿಸಿಊಟ, ಉಚಿತ ಸೈಕಲ್, ಶುಲ್ಕ ವಿನಾಯಿತಿ ಎಲ್ಲವೂ ಪೋಷಕರನ್ನು ಆಕರ್ಷಿಸುವಲ್ಲಿ ವಿಫಲವಾಗುತ್ತಿದೆ. ಹಳ್ಳಿ ಹಳ್ಳಿಗೆ ಖಾಸಗಿ ಶಾಲೆಯವರು ವಾಹನಗಳನ್ನು ಕಳಿಸಿ ಮಕ್ಕಳನ್ನು ಶಾಲೆಗೆ ಕರೆತರುತ್ತಿರುವುದು ಕೂಡ ಪೋಷಕರು ತಮ್ಮ ಮಕ್ಕಳನ್ನು ಮನೆ ಮುಂದಿನ ಶಾಲೆಯನ್ನು ಬಿಟ್ಟು ಖಾಸಗಿ ಶಾಲೆಗೆ ಸೇರಿಸುತ್ತಿರುವುದಕ್ಕೆ ಕಾರಣವಾಗಿದೆ. ಒಂದು ವೇಳೆ ಈ ರೀತಿಯ ವಾಹನದ ಸೌಲಭ್ಯ ದೊರೆಯದಿದ್ದಲ್ಲಿ ತಾವೇ ಕರೆದೊಯ್ದು ಕರೆ ತರುವ ಶ್ರಮ ಎಲ್ಲಾ ಪೋಷಕರಿಂದಲೂ ಆಗಲಾರದು. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿ ಕುಸಿತಕ್ಕೆ ಖಾಸಗಿಯವರ ವಾಹನ ಸೌಲಭ್ಯ ಕೂಡ ಕಾರಣವಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಶಿಕ್ಷಕರ ಸಂಖ್ಯೆಯಿದ್ದು ವಿಷಯವಾರು ಹೊರೆಯಿಂದಾಗಿ, ಅನ್ಯ ಕಾರ್ಯಗಳಾದ ಗಣತಿ, ಚುನಾವಣೆ, ಇಲಾಖಾ ಕಾರ್ಯಗಳಾದ ತರಬೇತಿಗಳು, ಮಾಸಿಕ ಸಭೆಗಳು, ಬಿಸಿ ಊಟದ ಜವಾಬ್ದಾರಿಗಳು, ಇಲಾಖೆಗೆ ಒದಗಿಸಬೇಕಾದ ದಾಖಲೆಗಳ ಜವಾಬ್ದಾರಿ ಹೀಗೆ ಹತ್ತು ಹಲವು ಕಾರ್ಯದಿಂದಾಗಿ ಶಿಕ್ಷಕರು ತಮ್ಮ ಕರ್ತವ್ಯದಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಳ್ಳಲಾಗದೆ ಇರುವುದು ಕೂಡ ಸರ್ಕಾರಿ ಶಾಲೆಯಲ್ಲಿನ ಮಕ್ಕಳ ಕುಸಿತಕ್ಕೆ ಒಂದು ಕಾರಣವಾಗಿರಬಹುದು. ಹೀಗೆ ಹಲವಾರು ಕಾರಣಗಳು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿತಕ್ಕೆ ಕಾರಣವಾಗಿವೆ. ಈ ಎಲ್ಲಾ ಕಾರಣಗಳನ್ನು ಒಂದೊಂದಾಗಿ ಸರಿಪಡಿಸುತ್ತಾ ಬಂದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳ ಬಹುದಾಗಿದೆ. ಮೊಟ್ಟ ಮೊದಲನೆಯದಾಗಿ ಏಕರೂಪ ಶಿಕ್ಷಣವನ್ನು ಜಾರಿಗೆ ತರಬೇಕು. ಮಗು ಯಾವ ಶಾಲೆಯಲ್ಲಾದರೂ ಓದಲಿ ದೊರೆಯುವ ಶಿಕ್ಷಣ ಒಂದೇ ರೀತಿಯದ್ದಾಗಿರಬೇಕು. ಅದು ಖಾಸಗಿ ಶಾಲೆ ಆಗಿರಲಿ, ಸರ್ಕಾರಿ ಶಾಲೆಯಾಗಿರಲಿ ಕಲಿಯುವ ಶಿಕ್ಷಣ ಒಂದೇ ಎಂದಾಗ ಪೋಷಕರಿಗೆ ಕಾನ್ವೆಂಟ್ ಶಾಲೆಗಳ ವ್ಯಾಮೋಹ ಕಡಿಮೆಯಾಗಬಹುದು. ಒಂದರಿಂದ ಐದನೇ ತರಗತಿ ತನಕ ಎಲ್ಲಾ ಶಾಲೆಗಳಲ್ಲೂ ಕನ್ನಡ ಮಾದ್ಯಮ ಕಡ್ಡಾಯ ಮಾಡಿ ನಂತರ ಮೋಷಕರ ಆಸಕ್ತಿಗೆ ಅನುಗುಣವಾಗಿ ಮಾದ್ಯಮಗಳನ್ನು ಬದಲಿಸಿಕೊಳ್ಳುವ ವ್ಯವಸ್ಥೆ ಜಾರಿಗೆ ಬರಬೇಕು. ಸರ್ಕಾರಿ ಶಾಲೆಯ ಶಿಕ್ಷಕರೂ, ಅಧಿಕಾರಿಗಳು, ರಾಜಕಾರಣಿಗಳು, ಕನ್ನಡನಾಡಿನ ಸಮಸ್ತರೂ ಕೂಡ ಸಮರ್ಪಣ ಮನೊಭಾವದಿಂದ ಕನ್ನಡ ಶಾಲೆಗಳನ್ನು ಉಳಿಸುವ ಕಾಳಜಿ, ಅಭಿಮಾನ, ಜವಾಬ್ದಾರಿ ತೋರಿದ್ದೇ ಆದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ ಆ ಮೂಲಕ ಕನ್ನಡ ಭಾಷೆಯನ್ನು ಉಳಿಸುವ ಬೆಳೆಸುವ ಕೈಂಕರ್ಯಕ್ಕೆ ನಾಂದಿ ಹಾಡಬಹುದೇನೊ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.