ಅಪರಾಧ ತನಿಖೆ: ಸ್ಪೀಚ್ ಫೊರೆನ್ಸಿಕ್ ಸೈನ್ಸ್ ಕೋರ್ಸ್ ಇಂದಿನ ಮಹಾಮಾಧ್ಯಮ ಯುಗದಲ್ಲಿ ವಿಧಿ ವಿಜ್ಞಾನ ಪರೀಕ್ಷೆ ಚಿರಪರಿಚಿತವಾಗಿಬಿಟ್ಟಿದೆ. ಅಪರಾಧಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪುರಾವೆಗಳ ಸತ್ಯಾಸತ್ಯತೆ ತಿಳಿಯುವಲ್ಲಿ ಈ ಪರೀಕ್ಷೆ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚುತ್ತಿರುವ ಹಗರಣಗಳು, ಅಪರಾಧ ಪ್ರಕರಣಗಳು, ಉಗ್ರರ ದಾಳಿಗಳು, ಕೌಟುಂಬಿಕ ಕಲಹಗಳು... ಇತ್ಯಾದಿಗಳಿಂದಾಗಿ ಅಪರಾಧಗಳ ಸಾಕ್ಷ್ಯ ಪರೀಕ್ಷೆಯ ವ್ಯಾಪ್ತಿ ಮತ್ತಷ್ಟು ವಿಸ್ತಾರವಾಗಿದೆ. ಅಪರಾಧಿಗಳ ಪತ್ತೆ ಕಾರ್ಯ ದಿನೇ ದಿನೇ ಜಟಿಲವಾಗುತ್ತಿದೆ. ಪೊಲೀಸರು ಚಾಪೆ ಕೆಳಗೆ ನುಸುಳಿದರೆ ಪಾತಕಿಗಳು ರಂಗೋಲಿ ಕೆಳಗೆ ನುಸುಳುವ ಚಾಣಾಕ್ಷತೆ ಮೆರೆಯುತ್ತಿದ್ದಾರೆ. ಉಗ್ರರು ಹೊಸ ತಂತ್ರ ರೂಪಿಸಿ ಅತ್ಯಾಧುನಿಕ ಅಸ್ತ್ರಗಳನ್ನು ಬಳಸಿ ಕ್ರೌರ್ಯ ಎಸಗುತ್ತಿದ್ದಾರೆ. ಅಪರಾಧ ಜಗತ್ತಿನಲ್ಲಿ ಪಾತಕಿಗಳ ಸಂಚಿನ ಜಾಡು ಬೇಧಿಸಿ ಅಪರಾಧಿಗಳನ್ನು ಪತ್ತೆ ಹಚ್ಚಲು ಫೊರೆನ್ಸಿಕ್ ಸೈನ್ಸ್ ಟೆಸ್ಟ್ ಪೊಲೀಸರಿಗೆ ಸೂಪರ್ ಸಾಥ್ ನೀಡುತ್ತಿದೆ. ಸಾಕ್ಷ್ಯ ಪರಿಶೀಲನೆಯಲ್ಲಿ ಫೊರೆನ್ಸಿಕ್ ಟೆಸ್ಟ್ ಎಲ್ಲೆಡೆ ಮಾನ್ಯತೆ ಪಡೆದಿದೆ. ಮಹಾನಗರಗಳಲ್ಲಷ್ಟೇ ಇದ್ದ ವಿಧಿ ವಿಜ್ಞಾನ ಪ್ರಯೋಗಾಲಯಗಳು ಈಗ ಜಿಲ್ಲಾ ಕೇಂದ್ರಗಳಿಗೂ ವಿಸ್ತರಣೆಯಾಗುತ್ತಿವೆ. ಅಷ್ಟೇ ಅಲ್ಲ ಖಾಸಗಿ ಪತ್ತೇದಾರಿ ಏಜೆನ್ಸಿಗಳೂ ಈ ಲ್ಯಾಬ್‌ಗಳನ್ನು ತೆರೆಯುತ್ತಿವೆ. ಫೊರೆನ್ಸಿಕ್ ಸೈನ್ಸ್ ತಂತ್ರಜ್ಞಾನಕ್ಕೆ ಬೇಡಿಕೆ ಹೆಚ್ಚುತ್ತಿರುವುದು ಆ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಿದೆ. ಸ್ಪೀಚ್ ಟೆಸ್ಟ್, ನಾರ್ಕೋ ಅನಾಲಿಸಿಸ್(ಮಂಪರು ಪರೀಕ್ಷೆ), ಬ್ರೈನ್ ಮ್ಯಾಪಿಂಗ್, ಪಾಲಿಗ್ರಾಫ್ (ಸುಳ್ಳು ಪತ್ತೆ) ಇತ್ಯಾದಿಗಳು ಪುರಾವೆಗಳ ದೃಢೀಕರಣಕ್ಕೆ ಇರುವ ಪರೀಕ್ಷಾ ವಿಧಾನಗಳು. ಸಾಕ್ಷ್ಯ ಸಾಬೀತು ಕ್ಷೇತ್ರದಲ್ಲಿ ಮಹತ್ವ ಪಡೆದಿರುವ ವಿಧಿ ವಿಜ್ಞಾನವನ್ನು ಶಾಸ್ತ್ರೋಕ್ತವಾಗಿ ಅಭ್ಯಸಿಸಲು ವಿವಿಧ ಸಂಸ್ಥೆಗಳು ಅವಕಾಶ ಮಾಡಿಕೊಟ್ಟಿವೆ. ತನಿಖಾ ಆಸಕ್ತಿ, ತಂತ್ರಜ್ಞಾನ ಚತುರತೆ, ಬೌದ್ಧಿಕ ಕ್ಷಮತೆಗೆ ಇಲ್ಲಿ ಪ್ರಾಧಾನ್ಯತೆ. ಜಗತ್ತಿನಲ್ಲಿ ಒಬ್ಬರ ಧ್ವನಿಯಂತೆ ಮತ್ತೊಬ್ಬರ ಧ್ವನಿ ಇರುವುದಿಲ್ಲ. ಭಾಷೆ ಬಳಕೆಯಲ್ಲಿ ಪ್ರಾಂತ್ಯಾವಾರು ಭಿನ್ನತೆ ಇರುವಂತೆ ಸಂಭಾಷಣೆ, ಪದಬಳಕೆಯಲ್ಲೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಸಾಮಾನ್ಯವಾಗಿ ವ್ಯಕ್ತಿಯ ಮಾತನ್ನು ಕೇಳಿದಾಗ ಆತ ಅಥವಾ ಆಕೆ ಯಾವ ಕಡೆಯವರು (ಧಾರವಾಡ, ಮಂಗಳೂರು, ಮಂಡ್ಯ...) ಎಂಬುದನ್ನು ತಿಳಿಯಬಹುದಾಗಿದೆ. ಮಾತಿನ ಆಧಾರದಲ್ಲಿ ವ್ಯಕ್ತಿಗಳನ್ನು ಗುರುತಿಸುವ ಕುರಿತು ಅಧ್ಯಯನ ಮಾಡುವುದೇ ವಾಕ್ ವಿಜ್ಞಾನ. ಸ್ಥಿರ ದೂರವಾಣಿ, ಸೆಲ್ ಫೋನು, ರೇಡಿಯೋ, ವಿಡಿಯೋ ಇತ್ಯಾದಿಗಳಲ್ಲಿನ ಧ್ವನಿತರಂಗಗಳನ್ನು ಪರೀಕ್ಷಿಸಿ ಈ ಸಂಭಾಷಣೆಯಲ್ಲಿರುವುದು ಇಂಥವರದ್ದೇ ಧ್ವನಿ ಎಂದು ದೃಢಪಡಿಸುವ ತಂತ್ರಜ್ಞಾನವೇ ಸ್ಪೀಚ್ ಫೊರೆನ್ಸಿಕ್ ಟಿಕ್ನಾಲಜಿ. ಮೈಸೂರಿನ ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯಲ್ಲಿ (ಆಯಿಷ್) ವಾಕ್ ವಿಧಿ ವಿಜ್ಞಾನ-ತಂತ್ರಜ್ಞಾನ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಕಲಿಯಲು ಅವಕಾಶವಿದೆ. ಒಂದು ವರ್ಷ ಅವಧಿಯ ಈ ಕೋರ್ಸ್ 16 ವಾರಗಳ ಮೂರು ಟರ್ಮ್ ಒಳಗೊಂಡಿದೆ. ಹತ್ತು ಮಂದಿಗೆ ಅವಕಾಶ. ಸ್ಪೆಕ್ಟೋಗ್ರಾಂ, ಮುದ್ರಿತ ಧ್ವನಿ ಪರೀಕ್ಷೆ, ಅಕೌಸ್ಟಿಕ್ಸ್, 3ಡಿ ಎಫೆಕ್ಟ್ಸ್, ಧ್ವನಿತರಂಗಗಳ ವಿಶ್ಲೇಷಣೆ, ವಾಕ್ ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಳು, ಒತ್ತಡ-ಆವೇಶ-ಭಯದ ಸಂದರ್ಭಗಳಲ್ಲಿ ಧ್ವನಿ ಏರು-ಪೇರು, ಧ್ವನಿ ಪತ್ತೆಗೆ ಬಳಸುವ ಮಾಪನಗಳು, ಸಂಬೋಧನೆ ವಿಧಾನ, ಪದ ಬಳಕೆ, ದೈಹಿಕ ಚಹರೆ ಆಧರಿಸಿ ವ್ಯಕ್ತಿಯ ಧ್ವನಿಯ ಗಡುಸುತನ ಗುರುತಿಸುವುದು, ಪೋನಿಗೆ ಕರ್ಚೀಫ್ ಹಾಕಿ ಮಾತಾಡಿರುವುದು - ಬಾಯಲ್ಲಿ ಕಲ್ಲಿಟ್ಟುಕೊಂಡು ಸಂಭಾಷಿಸಿರುವ ಪ್ರಕರಣಗಳಲ್ಲಿ ಮೂಲಧ್ವನಿ ಗುರುತಿಸುವುದು ಇತ್ಯಾದಿ ತನಿಖಾ ಪ್ರಕರಣಗಳಲ್ಲಿನ ಧ್ವನಿಪತ್ತೆ ಪ್ರಾತ್ಯಕ್ಷಿಕೆಗಳನ್ನು ವಿವರವಾಗಿ ಕಲಿಸಲಾಗುವುದು. ಕೋರ್ಸ್‌ನ ಅಂತಿಮ ಟರ್ಮ್‌ನಲ್ಲಿ ಪ್ರಾಜೆಕ್ಟ್ ವರ್ಕ್ ಕಡ್ಡಾಯ. ಈ ಕೋರ್ಸ್‌ನಲ್ಲಿ ಸೈದ್ಧಾಂತಿಕ ತರಗತಿಗಳಿಗಿಂತ ಪ್ರಾಯೋಗಿಕ ತರಗತಿಗಳು ಹೆಚ್ಚಾಗಿರುತ್ತವೆ. ಬಿ.ಎಸ್ಸಿಯಲ್ಲಿ ಸ್ಪೀಚ್ ಅಂಡ್ ಹಿಯರಿಂಗ್, ಫೊರೆನ್ಸಿಕ್ ಸೈನ್ಸ್, ಭೌತಶಾಸ್ತ್ರ, ಗಣಿತ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ ಇವುಗಳಲ್ಲಿ ಒಂದನ್ನು ವಿಷಯವಾಗಿ ಅಧ್ಯಯನ ಮಾಡಿದವರು, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಬಿ.ಇ/ಬಿ.ಟೆಕ್ ಪದವೀಧರರು, ಎಂಬಿಬಿಎಸ್ ಮಾಡಿದವರು ಈ ಕೋರ್ಸ್‌ಗೆ ಅರ್ಹರು. ವಿಧಿ ವಿಜ್ಞಾನ ಪ್ರಯೋಗಾಲಯಗಳಲ್ಲಿ ಸ್ಪೀಚ್ ಪೊರೆನ್ಸಿಕ್ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಆದ್ಯತೆ ನೀಡಲಾಗುವುದು. ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಆಯ್ಕೆ ನಡೆಯುತ್ತದೆ. ಕೋರ್ಸ್ ಶುಲ್ಕ ರೂ.10 ಸಾವಿರ. ಜುಲೈ 30 ಅರ್ಜಿ ಸಲ್ಲಿಸಲು ಕಡೇ ದಿನ. ಹೆಚ್ಚಿನ ಮಾಹಿತಿಗೆ .. ಅಥವಾ ದೂ: 0821-2514449, 2515410 ಸಂಪರ್ಕಿಸಬಹುದು. ಖಾಸಗಿ ಕ್ಷೇತ್ರದಲ್ಲೂ ಅವಕಾಶಗಳಿವೆ ಖಾಸಗಿ ತನಿಖಾ ಎಜೆನ್ಸಿಗಳು ಫೊರೆನ್ಸಿಕ್ ಲ್ಯಾಬ್‌ಗಳನ್ನು ಈಗ ತೆರೆಯುತ್ತಿರುವುದರಿಂದ ಸ್ಪೀಚ್ ಫೊರೆನ್ಸಿಕ್ ಕೋರ್ಸ್ ಮುಗಿಸಿದವರು ಸರ್ಕಾರಿ ವಲಯದಲ್ಲಷ್ಟೇ ಅಲ್ಲದೇ ಖಾಸಗಿ ಕ್ಷೇತ್ರದಲ್ಲೂ ಉದ್ಯೋಗ ಗಿಟ್ಟಿಸಬಹುದು. ವಿಧಿ ವಿಜ್ಞಾನ ಪ್ರಯೋಗಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ನಿರ್ದಿಷ್ಟ ಕ್ಷೇತ್ರದಲ್ಲಿ ವಿಶೇಷ ಪರಿಣತಿ ಹೊಂದಲು ಈ ಕೋರ್ಸ್ ಸಹಾಯಕವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.