ಸಾಹಿತ್ಯ ಓದಿನತ್ತ ಸೆಳೆಯಲು ಕಾಮಿಕ್ಸ್ ಇಂದಿನ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆ ಆಗಿದೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ತಂತ್ರಜ್ಞಾನದ ಅಗಾಧತೆಯ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಬಾಹ್ಯ ಆಕರ್ಷಣೆಗಳೂ ಹಲವು. ಓದುವ ಅಭಿರುಚಿ ಕ್ಷೀಣಿಸುತ್ತಿರುವುದಕ್ಕೆ ಈಗಿನ ಶಿಕ್ಷಣ ಪದ್ಧತಿಯೂ ಒಂದು ಕಾರಣವಿರಬಹುದು. ಕಡಿವಾಣ ಹಾಕಿದ ಕುದುರೆಯ ಹಾಗೆ ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದಲ್ಲಿಯೇ ಮುಳುಗಿರುತ್ತಾರೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ಸಲುವಾಗಿ ಇಂಡ್ಯಾ ಕಾಮಿಕ್ಸ್ ಸಂಸ್ಥೆಯು ವಿನೂತನ ಪ್ರಯೋಗಕ್ಕೆ ಕೈಹಾಕಿದೆ. ಭಾರತೀಯ ಭಾಷೆಗಳ ಹೆಸರಾಂತ ಕಾದಂಬರಿಗಳನ್ನು ಸಚಿತ್ರರೂಪದಲ್ಲಿ ಪ್ರಕಟಿಸುವ ಮೂಲಕ ಸಾಹಿತ್ಯ ಪರಂಪರೆಯನ್ನು ಉಳಿಸುವ ಹಾಗೂ ಓದುವ ಸಂಸ್ಕೃತಿ ಬೆಳೆಸುವ ಕೆಲಸ ಮಾಡುತ್ತಿದೆ. ಏಳು ಭಾರತೀಯ ಭಾಷೆಗಳ ಕಾದಂಬರಿಗಳನ್ನು ಆಧಾರವಾಗಿಟ್ಟುಕೊಂಡು ಇವುಗಳನ್ನು ಸಚಿತ್ರ ರೂಪದಲ್ಲಿ (ಕಾಮಿಕ್ಸ್) ಪ್ರಕಟಿಸುತ್ತಿದೆ ಈ ಸಂಸ್ಥೆ. `ಆಯ್ದ 12 ಕನ್ನಡ ಕಾದಂಬರಿಗಳನ್ನು ಸಚಿತ್ರ ರೂಪದಲ್ಲಿ ಕೊಡುತ್ತಿದ್ದೇವೆ. ಇವುಗಳನ್ನು ಹಿಂದಿ ಹಾಗೂ ಇಂಗ್ಲಿಷ್‌ಗೂ ಭಾಷಾಂತರ ಮಾಡಿ ಇಂಥದ್ದೇ ಕಾಮಿಕ್ಸ್ ತರ‌್ತಾ ಇದ್ದೀವಿ~ ಎನ್ನುತ್ತಾರೆ ಈ ಯೋಜನೆಯ ರೂವಾರಿ ಬಿ.ಎಸ್.ರಘುರಾಂ. ಕನ್ನಡ ಕಾಮಿಕ್ಸ್‌ನಲ್ಲಿ ಮಾಧವಿ, ಸಂಧ್ಯಾರಾಗ, ಡಾಲರ್ ಸೊಸೆ, ದೂರದ ಬೆಟ್ಟ, ಸಂಸ್ಕಾರ, ಸುಬ್ಬಣ್ಣ, ಚಂದವಳ್ಳಿಯ ತೋಟ, ಫಣಿಯಮ್ಮ, ಚಂದ್ರಗಿರಿಯ ತೀರದಲ್ಲಿ ಕಾದಂಬರಿಗಳು ಪ್ರಮುಖವಾದವು. ಇನ್ನು ಗೋದಾನ್, ಚಿತ್ರಲೇಖ ಮತ್ತಿತರ ಹಿಂದಿ ಕಾದಂಬರಿಗಳೂ ಕನ್ನಡ ಕಾಮಿಕ್ಸ್ ರೂಪದಲ್ಲಿ ಬರುತ್ತಿವೆ. `ಕನ್ನಡ ಸಾಹಿತ್ಯ ಎಲ್ಲ ಭಾಷೆಯ ಜನರಿಗೆ ತಲುಪಬೇಕು. ಹಾಗೂ ಬೇರೆ ಭಾಷೆಗಳ ಸಾಹಿತ್ಯ ಕನ್ನಡದ ವಿದ್ಯಾರ್ಥಿಗಳಿಗೆ ಪರಿಚಯವಾಗಬೇಕು. ಆ ಮೂಲಕ ಒಟ್ಟೂ ಸಾಹಿತ್ಯ ಪರಂಪರೆ ಉಳಿಯಬೇಕು ಎನ್ನುವುದು ಈ ಯೋಜನೆಯ ಆಶಯ~ ಎನ್ನುತ್ತಾರೆ ರಘುರಾಂ. `ಕಾಮಿಕ್ಸ್‌ನಲ್ಲಿ ಕಾದಂಬರಿಯ ಸಂಕ್ಷಿಪ್ತ ರೂಪ ಮಾತ್ರವೇ ಇರುತ್ತೆ. ಇದನ್ನು ಓದಿದ ನಂತರದಲ್ಲಿ ವಿದ್ಯಾರ್ಥಿಗಳಲ್ಲಿ ಮೂಲ ಕಾದಂಬರಿಯನ್ನು ಓದುವ ಕುತೂಹಲ ಉಂಟಾಗುತ್ತದೆ. ಹೀಗೆ ಅವರಲ್ಲಿ ನಿಧಾನವಾಗಿ ಸಾಹಿತ್ಯದ ಅಭಿರುಚಿ ಬೆಳೆಯುತ್ತ ಹೋಗುತ್ತದೆ~ ಎಂದು ವಿವರಿಸುತ್ತಾರೆ ಅವರು. ಈ ಕಾಮಿಕ್ಸ್‌ಗಳನ್ನು ಶಾಲಾ-ಕಾಲೇಜುಗಳಲ್ಲಿ ಇಂಟರ್ನಲ್ ಅಸೆಸ್‌ಮೆಂಟ್ ಪರೀಕ್ಷೆಗೂ ಅಳವಡಿಸಲಾಗಿದೆ. ಈ ಪ್ರಯೋಗ ಮೊದಲು ಆರಂಭಗೊಂಡಿದ್ದು ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ. ಜೈನ್ ಕಾಲೇಜೂ ಸೇರಿದಂತೆ ರಾಜ್ಯದ ವಿವಿಧ ಶಾಲಾ-ಕಾಲೇಜುಗಳಲ್ಲಿ ಈಗಾಗಲೇ ಇದನ್ನು ಅಳವಡಿಸಲಾಗಿದೆ. ಆನ್‌ಲೈನ್ ಪರೀಕ್ಷೆ ಅಂದಹಾಗೆ ಇದಕ್ಕಾಗಿ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ. ಇಲ್ಲಿ ಯಾವುದೇ ಭಾಷೆಯಲ್ಲಿ ಪರೀಕ್ಷೆ ಬರೆಯಬಹುದು. ಆಯ್ದ ಭಾಷೆಯ ಒಟ್ಟು 6 ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಕೊಡಲಾಗುತ್ತದೆ. ಆನ್‌ಲೈನ್ ಪರೀಕ್ಷೆಯಲ್ಲಿ ಒಟ್ಟು 10 ಅಂಕಗಳ 25 ಪ್ರಶ್ನೆಗಳಿಗೆ ಉತ್ತರಿಸಬೇಕು. ಇದಕ್ಕೆ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಕೂಡ ಸಿಗುತ್ತದೆ. ಈ ಪ್ರಯೋಗಕ್ಕಾಗಿ ನಾವು ಆಯ್ಕೆ ಸಮಿತಿ ಮಾಡಿಕೊಂಡಿದ್ದೀವಿ. ಸಾಹಿತಿ ಡಾ.ಶಿವರುದ್ರಪ್ಪ ಮುಂತಾದವರು ಸಮಿತಿಯಲ್ಲಿ ಇದ್ದಾರೆ. 5 ನೇ ತರಗತಿಯಿಂದ ಹಿಡಿದು ಕಾಲೇಜು ಹಂತದವರೆಗೆ ವಿದ್ಯಾರ್ಥಿಗಳ ಜ್ಞಾನದ ಮಟ್ಟದ ಆಧಾರದಲ್ಲಿ ಕಾಮಿಕ್ಸ್ ಪ್ರಕಟಿಸುತ್ತಾ ಇದ್ದೀವಿ. ವಿದ್ಯಾರ್ಥಿಗಳ ವಯಸ್ಸು ಹಾಗೂ ಅವರ ಗ್ರಹಿಕೆಯ ಆಧಾರದಲ್ಲಿ ಅಸೆಸ್‌ಮೆಂಟ್ ಮಾಡುತ್ತೇವೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದು `ಲರ್ನಿಂಗ್ ಆಬ್ಜೆಕ್ಟ್ ಪರೀಕ್ಷೆ~ ಎಂದು ವ್ಯಾಖ್ಯಾನಿಸುತ್ತಾರೆ ರಘುರಾಂ. ಶಾಲಾ-ಕಾಲೇಜುಗಳಲ್ಲಿ ಪ್ರಾಜೆಕ್ಟ್‌ಗೆ ಯಾವುದೋ ಪುಸ್ತಕವನ್ನು ಕೊಡುವ ಬದಲು, ಭಾಷೆ ಹಾಗೂ ಸಾಹಿತ್ಯ ಪರಂಪರೆ ಉಳಿಸುವ, ವ್ಯಕ್ತಿತ್ವ ವಿಕಸನಕ್ಕೆ ನೆರವಾಗುವ ಇಂಥ ಪುಸ್ತಕಗಳನ್ನು ಕೊಟ್ಟರೆ ಒಳ್ಳೆಯದಲ್ಲವೇ? ಕೇವಲ ಕಾದಂಬರಿಗಳು ಮಾತ್ರವಲ್ಲ ರಾಜರತ್ನಂ ಪದ್ಯಗಳು, ಗೋವಿನ ಹಾಡು, ಕುವೆಂಪು ಅವರ `ಕಿಂದರಿಜೋಗಿ~ ಪದ್ಯ ಕೂಡ ಕಾಮಿಕ್ಸ್ ರೂಪದಲ್ಲಿ ಬರುತ್ತಿದೆ. 5 ಮತ್ತು 6 ನೇ ತರಗತಿಯ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಪ್ರಯತ್ನಕ್ಕೆ ಕೈಹಾಕಲಾಗಿದೆ. ಅಂದರೆ ಇಲ್ಲಿ ಈ ಎಲ್ಲ ಪದ್ಯಗಳು ಕಥೆಯ ರೂಪದಲ್ಲಿ ಇರುತ್ತವೆ. ಮಾರಾಟದ ದೃಷ್ಟಿಯಿಂದ ಈ ಯೋಜನೆಯು ಅದೆಷ್ಟು ಯಶಸ್ವಿಯಾಗುತ್ತದೆಯೋ ಗೊತ್ತಿಲ್ಲ. ಆದರೆ ಇದರ ಹಿಂದೆ ಒಂದು ಒಳ್ಳೆಯ ಆಶಯ ಇದೆ ಎನ್ನುವುದು ಮಹತ್ವದ ಅಂಶ. (ಮಾಹಿತಿಗೆ- ದೂರವಾಣಿ: 0804084 9999 ಅಥವಾ ವೆಬ್‌ಸೈಟ್ ..) `ಇದೊಂದು ಉತ್ತಮ ಪ್ರಯತ್ನ~ ನಿಜಕ್ಕೂ ಇದೊಂದು ಉತ್ತಮ ಪ್ರಯತ್ನ. ನಮ್ಮ ಕಾಲೇಜಿನ ಕನ್ನಡ ವಿಭಾಗದಲ್ಲಿ ಇದನ್ನು ಅಸೈನ್‌ಮೆಂಟ್ ಅಂತ ಅಳವಡಿಸಿಕೊಂಡ ಬಳಿಕ, ಹಿಂದಿ ವಿಭಾಗದವರೂ ಇದಕ್ಕೆ ಮುಂದಾದರು. ವಿದ್ಯಾರ್ಥಿಗಳಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ. ಕೆಲವರಂತೂ 10 ಕ್ಕೆ 10 ಅಂಕಗಳನ್ನು ಪಡೆದಿದ್ದಾರೆ. ಸಾಹಿತ್ಯ ಹಾಗೂ ಸಂಸ್ಕೃತಿಯ ಪರಿಚಯ, ಓದುವ ಹವ್ಯಾಸ, ಬರವಣಿಗೆ ಸುಧಾರಣೆಗೆ ಇದು ಸಹಾಯಕ. ವತ್ಸಲಾ ಮೋಹನ್ ಕನ್ನಡ ಉಪನ್ಯಾಸಕಿ, `ಮಗುವಿನ ಮುಗ್ಧತೆ ಇರಬೇಕು~ ಕಲಿಕಾ ಪ್ರಕ್ರಿಯೆಯಲ್ಲಿ ಮಗುವಿನ ಮುಗ್ಧತೆ ಇರಬೇಕು. ಆಗ ಮಾತ್ರವೇ ನಮ್ಮ ಗ್ರಹಿಕೆ ಚೆನ್ನಾಗಿರುತ್ತದೆ. ಈ ದೃಷ್ಟಿಯಿಂದ ನೋಡಿದರೆ ಇಂಡ್ಯಾ ಕಾಮಿಕ್ಸ್ ಪ್ರಾಜೆಕ್ಟ್ ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿದ ಹಾಗಿದೆ. ಉನ್ನತ ಶಿಕ್ಷಣದಲ್ಲಿ ಸಂಶೋಧನೆಯೇ ಮುಖ್ಯವಾಗುತ್ತದೆಯೇ ಹೊರತೂ ಕಲಿಕೆಯಲ್ಲ. ಹಾಗಾಗಿ ವಿದ್ಯಾರ್ಥಿಗಳು ಪುಸ್ತಕದ ಹುಳುವಾಗಿಬಿಡುತ್ತಾರೆ. ಇಂಥ ಸಂದರ್ಭದಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಪ್ರೊ. ಎ.ಎಸ್. ಚಂದ್ರಮೌಳಿ ಪ್ರಾಂಶುಪಾಲರು,ಸುರಾನಾ ಕಾಲೇಜು `ಮೂಲ ಕಾದಂಬರಿ ಓದುವ ಕುತೂಹಲ~ ಕನ್ನಡ ಕಾದಂಬರಿಗಳನ್ನು ಸಂಕ್ಷಿಪ್ತ ರೂಪದಲ್ಲಿ ಕೊಟ್ಟಿರುವುದು ನಮಗೆ ತುಂಬಾ ಅನುಕೂಲವಾಗಿದೆ. ಇದನ್ನು ಓದಿದ ಮೇಲೆ ಮೂಲ ಕಾದಂಬರಿಗಳನ್ನು ಓದುವ ಕುತೂಹಲ ಕೂಡ ಉಂಟಾಗಿದೆ. ಮತ್ತೆ ಓದಿನತ್ತ ಸೆಳೆಯಲು ಇದೊಂದು ಒಳ್ಳೆಯ ಪ್ರಯತ್ನ. ಹನುಮೇಶ್ ದ್ವಿತೀಯ ಬಿ.ಎ. ವಿದ್ಯಾರ್ಥಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.