ಶತಮಾನದ ಹಿಂದೆ ನಡೆದ ದಸರಾ ಓಟ ದಸರಾ ಕ್ರೀಡಾಕೂಟವಿಲ್ಲದ ಮೈಸೂರಿನ ನವರಾತ್ರಿ ಸಂಭ್ರಮವನ್ನು ಕಲ್ಪಿಸಿಕೊಳ್ಳುವಂತೆಯೇ ಇಲ್ಲ. ಇದು ಇಂದು ನಿನ್ನೆಯ ಸಂಪ್ರದಾಯವಲ್ಲ. ಶತಮಾನದ ಹಿಂದಿನಿಂದಲೂ ದಸರಾ ಕ್ರೀಡೆ ಜನಜನಿತ. ನಾಲ್ವಡಿ ಕೃಷ್ಣ ರಾಜೇಂದ್ರ ಒಡೆಯರ್‌ ಅವರು 1912ರಲ್ಲೇ ದಸರಾ ಸಮಯದಲ್ಲಿ ದೂರ ಓಟದ ಸ್ವರ್ಧೆಗಳನ್ನು ಏರ್ಪಡಿಸಿದ್ದರು. ಒಡೆಯರ್‌ ಅವರ ಆದೇಶದ ಮೇರೆಗೆ ಅವರ ಸೋದರ ಮಾವ ಸರ್ದಾರ್‌ ಗೋಪಾಲರಾಜೇ ಅರಸ್‌ ಅವರು 1912ರ ಅಕ್ಟೋಬರ್‌ 21ರಂದು ಈ ಓಟದ ಸ್ವರ್ಧೆಯನ್ನು ಸಂಘಟಿಸಿದ್ದರು. ಮೈಸೂರು –ಶ್ರೀರಂಗಪಟ್ಟಣ ರಸ್ತೆಯಲ್ಲಿ ಮೈಸೂರು ನಗರದ ಅಂಚಿನ 82ನೇ ಮೈಲುಗಲ್ಲಿನ ಬಳಿಯಿಂದ ಚಾಮುಂಡಿ ಬೆಟ್ಟದ ತಪ್ಪಲಿನ ರೇಸ್‌ಕೋರ್ಸ್‌ವರೆಗಿನ 8 ಮೈಲುವರೆಗೆ ಈ ಓಟದ ಸ್ವರ್ಧೆ ನಡೆಯಿತು. ಈ ಸ್ವರ್ಧೆಯಲ್ಲಿ ಒಟ್ಟು 75 ಮಂದಿ ಪಾಲ್ಗೊಳ್ಳುತ್ತಿದ್ದಾರೆಂದೂ, ಗೆದ್ದವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದೆಂದೂ ದಸರಾಕ್ಕೆ ಮೊದಲು ಪ್ರಕಟಣೆ ನೀಡಲಾಗಿತ್ತು. ಆದರೆ ಸ್ವರ್ಧೆಯಲ್ಲಿ 54 ಮಂದಿ ಭಾಗವಹಿಸಿದ್ದರು. ಮಹಾರಾಜರ ಮೋಟಾರು ಗ್ಯಾರೇಜಿನ ಮ್ಯಾನೇಜರ್‌ ವಿಲ್ಸನ್‌ ವೈಟ್‌ ಸ್ವರ್ಧೆಯ ಆರಂಭದ ವೇಳೆ ಸ್ಪರ್ಧಿಗಳನ್ನೆಲ್ಲಾ ಶಿಸ್ತಾಗಿ ನಿಲ್ಲಿಸಿ, ಓಟಕ್ಕೆ ಸೂಚನೆ ನೀಡಿದ್ದರು. ಗೋಪಾಲರಾಜೇ ಅರಸ್‌ ಅವರು ಎಲ್ಲರಿಗಿಂತ ಮುಂದೆ ಕುದುರೆಯ ಮೇಲೆ ಸಾಗುತ್ತಾ, ಓಟಗಾರರಿಗೆ ದಾರಿ ತೋರಿಸಿದ್ದರು. ಓಟಗಾರರಿಗೆ ತೊಂದರೆಯಾಗುವುದನ್ನು ತಡೆಯಲು ಅಲ್ಲಲ್ಲಿ ಪೊಲಿಸರನ್ನು ಕಾವಲಿಗೆ ನಿಲ್ಲಿಸಲಾಗಿತ್ತು. 18 ಮಂದಿ ಮಾತ್ರ ಓಟವನ್ನು ಪೂರ್ಣಗೊಳಿಸಿದರು. ಮಹಾರಾಜರು 7 ಮಂದಿಗೆ ಬಹುಮಾನವನ್ನು ನೀಡಿ ಗೌರವಿಸಿದ್ದರು. ಮೈಸೂರು ಸರ್ಕಾರದ ಕೈಗಾರಿಕಾ ತರಬೇತಿ ಶಾಲೆಯಲ್ಲಿ ಮರಗೆಲಸದಲ್ಲಿ ತರಬೇತಿ ಪಡೆದಿದ್ದ ಶ್ರೀನಿವಾಸ್‌ ಎಂಬುವವರು ಮೊದಲಿಗರಾಗಿ ಗುರಿ ಮುಟ್ಟಿದ್ದರು. ಅವರಿಗೆ ₹ 70 ನಗದು ಬಹುಮಾನ ಮತ್ತು ಬೆಳ್ಳಿಯ ಬಟ್ಟಲನ್ನು ನೀಡಲಾಯಿತು. ಎರಡು ಮತ್ತು ಮೂರನೇ ಬಹುಮಾನ ಪಡೆದ ರಮ್ಮನ ಹಳ್ಳಿಯ ದೊಡ್ಡನಾಯಕ ಮತ್ತು ಮಾದ ಎಂಬುವವರಿಗೆ ತಲಾ ₹ 50 ನಗದು ಬಹುಮಾನ ನೀಡಲಾಯಿತು. ರಮ್ಮನ ಹಳ್ಳಿಯವರೇ ಅದ ಮರಿಮಂಚ ಮತ್ತು ಚನ್ನ, ಮಹಾರಾಜ ಕಾಲೇಜಿನ ವಿದ್ಯಾರ್ಥಿ ಸುಬ್ಬರಾವ್‌ ಮತ್ತು ಪೊಲೀಸ್‌ ಇಲಾಖೆಯ ನೀಲಕಂಠರಾವ್‌ ಎಂಬುವವರಿಗೆ ತಲಾ ₹ 15 ನಗದು ಬಹುಮಾನ ನೀಡಲಾಯಿತು. ಈ ಏಳು ಮಂದಿ ಒಬ್ಬರ ಹಿಂದೆ ಒಬ್ಬರಂತೆ 2 ಮತ್ತು 3 ಹಾಗೂ 4 ನಿಮಿಷಗಳ ಅಂತರದಲ್ಲಿ ಗುರಿ ತಲುಪಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ರಮ್ಮನಹಳ್ಳಿಯು ಪ್ರಸಕ್ತ ಮೈಸೂರು ನಗರದ ಮಹದೇವಪುರ ಬಡಾವಣೆಯ ಸಮೀಪದಲ್ಲಿದೆ. ಅಂದು ಆ ಓಟದ ಸ್ಪರ್ಧೆಯ ಆರಂಭದ ಸ್ಥಳಕ್ಕೆ ಸಮೀಪದಲ್ಲೇ ರಮ್ಮನಹಳ್ಳಿ ಇದ್ದುದರಿಂದ ಈ ಊರಿನ ಓಟಗಾರರು ಉತ್ತಮ ಸಂಖ್ಯೆಯಲ್ಲಿ ಪಾಲ್ಗೊಂಡಿರುವ ಸಾಧ್ಯತೆ ಇದೆ. ಆಧಾರ: ವೃತ್ತಾಂತ ವಾರಪತ್ರಿಕೆಯ 1912ರ ಅಕ್ಟೋಬರ್‌ 24ರ ಸಂಚಿಕೆಯ ಪುಟ 6 ರಲ್ಲಿರುವ ಸುದ್ದಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.