ಕ್ಯಾಂಪಸ್ ಬೇಸ್ಃ ಹೋಮ್: ಮನೆಯಲ್ಲೇ ಶಿಕ್ಷಣ ಕಾರಣಾಂತರಗಳಿಂದ ತರಗತಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗಾಗಿ ಮನೆಯಲ್ಲಿಯೇ ಶಿಕ್ಷಣ ನೀಡುವ ಉದ್ದೇಶದಿಂದ ಬೇಸ್ ಸಂಸ್ಥೆ `ಬೇಸ್‌ಃಹೋಮ್~ ಕಾರ್ಯಕ್ರಮವನ್ನು ಆರಂಭಿಸಿದೆ. ಒಂದು ವರ್ಷದ ಎಕ್ಸೆಲ್ ಸಿಇಟಿ ಹಾಗೂ ಎರಡು ವರ್ಷದ ಪ್ರೀ ಯುಸಿ ಪ್ಲಸ್ ಕಾರ್ಯಕ್ರಮಗಳಿದ್ದು, ಬ್ರಾಡ್‌ಬ್ಯಾಂಡ್ ಅಂತರ್ಜಾಲದ ಮೂಲಕ ಶಿಕ್ಷಣ ನೀಡಲಾಗುವುದು. ವಿದ್ಯಾರ್ಥಿಯು ಈ ಸೌಲಭ್ಯ ಪಡೆಯಲು ಕಂಪ್ಯೂಟರ್ ಮತ್ತು ಬ್ರಾಡ್‌ಬ್ಯಾಂಡ್ ಸಂಪರ್ಕ ಹೊಂದಿರಬೇಕು ಎಂದು ಪ್ರಕಟಣೆ ತಿಳಿಸಿದೆ. ದೃಶ್ಯ-ಶ್ರವ್ಯ ಸೌಲಭ್ಯದ ಮೂಲಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಮಾಲೋಚನೆ ನಡೆಸಬಹುದು. ನೇರ ಪ್ರಸಾರದ ತರಗತಿಗಳ ಜೊತೆಗೆ, ವಿದ್ಯಾರ್ಥಿಗಳು ಅಂತರ್ಜಾಲದಲ್ಲಿ ಇರುವಾಗಲೇ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಸಮಸ್ಯೆಗಳಿಗೆ ದೃಶ್ಯ ಮಾಧ್ಯಮದ ಮೂಲಕ ಪರಿಹಾರಗಳನ್ನು ಕಲ್ಪಿಸಲಾಗುವುದು. ತರಗತಿಗಳು ಆರಂಭಗೊಳ್ಳುವ ದಿನಗಳಿಗೂ ಮೊದಲೇ ಅಂತರ್ಜಾಲ ತಾಣದಲ್ಲಿ ಪಠ್ಯಕ್ರಮದೊಂದಿಗೆ ದೃಶ್ಯ ರೂಪದ ತರಗತಿ-ಪೂರ್ವ ಸಮಾವೇಶವನ್ನು ಮುದ್ರಿತ ರೂಪದಲ್ಲಿಯೂ ಹಾಗೂ ಅಂತರ್ಜಾಲ ತಾಣದಲ್ಲಿಯೂ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಶಾಲಾಮಕ್ಕಳಿಗೆ ಪರಿಸರ ಗೀತೆ ಪರಿಸರ ಜಾಗೃತಿಗಾಗಿ ರಾಜ್ಯದ 50 ಶಾಲೆಗಳ ಮಕ್ಕಳನ್ನು ಒಂದೆಡೆ ಸೇರಿಸಿ ಗೀತೆಗಳನ್ನು ಹಾಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ಯೋಜನೆಗಾಗಿ ಬಾಗೂರು ಮಾರ್ಕಂಡೇಯ ಅವರು ರಚಿಸಿರುವ ಪರಿಸರ ಗೀತೆಗಳಿಗೆ ಮೃತ್ಯುಂಜಯ ದೊಡ್ಡವಾಡ ಸ್ವರ ಸಂಯೋಜನೆ ಮಾಡಿದ್ದಾರೆ. ಹಂತ ಹಂತವಾಗಿ ರಾಜ್ಯದ ಪ್ರತಿ ಶಾಲೆಗಳಲ್ಲೂ ಮಕ್ಕಳಿಗೆ ತರಬೇತಿ ನೀಡಿ ಬೆಂಗಳೂರಿನಲ್ಲಿ ಬೃಹತ್ ಸಾಮೂಹಿಕ ಗಾಯನ ಸಮಾವೇಶ ಆಯೋಜಿಸಿ ಪರಿಸರ ಜಾಗೃತಿಯ ಆಂದೋಲನ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.