ಎರಡು ಭಾಷೆ ಜ್ಞಾನ ಅಗತ್ಯ... ಓಶೋರವರ ಹೆಸರನ್ನು ಕೇಳದವರು ವಿರಳರು. ಇವರ ಚಿಂತನೆಗಳನ್ನೊಳಗೊಂಡ ನೂರಾರು ಪುಸ್ತಕಗಳು ವಿಶ್ವದಾದ್ಯಂತ ಓದುಗರ ಗಮನ ಸೆಳೆಯುತ್ತಿವೆ. ವಿವಿಧ ಕ್ಷೇತ್ರಗಳವರ ಚಿಂತನೆಗಳು ಈ ಪುಸ್ತಕಗಳಲ್ಲಿ ಅಡಗಿವೆ. ಶೈಕ್ಷಣಿಕವಾಗಿಯೂ ಓಶೋ ಅವರು ತಮ್ಮದೇ ಆದ ಯೋಚನಾ ಲಹರಿಗಳನ್ನು ಹೊಂದಿದವರು. ಮಾಹಿತಿಯೇ ಪ್ರಧಾನವಾಗಬಾರದು: ಓಶೋ ಇಂದಿನ ಶಿಕ್ಷಣ ಪದ್ಧತಿಯ ಕಟು ವಿಮರ್ಶಕರು. ಶೈಕ್ಷಣಿಕವಾಗಿ ಮಾಹಿತಿಗಳು ಅಗತ್ಯ. ಆದರೆ ಅದೇ ಪ್ರಧಾನವಾಗಬಾರದು. ಇಂದಿನ ಶಿಕ್ಷಣ ಪದ್ಧತಿಯು ಕೇವಲ ಮಾಹಿತಿಗಳನ್ನಷ್ಟೇ ನೀಡಲು ಸಮರ್ಥ ಎಂಬ ಟೀಕೆ ಇವರದ್ದು. ಈ ಬಗ್ಗೆ ಒಂದು ಚಿಕ್ಕ ಕತೆಯನ್ನೂ ಓಶೋ ನೀಡುತ್ತಾರೆ. ಒಬ್ಬ ವ್ಯಕ್ತಿಯ ಕೈಯಲ್ಲಿ ಯಾವಾಗಲೂ ಒಂದು ಕೊಡೆ ಇರುತ್ತದೆ. ಮಳೆ ಇರಲಿ ಅಥವಾ ಬಿಸಿಲಿರಲಿ ಕೊಡೆ ಈ ವ್ಯಕ್ತಿಯ ಕೈಯಿಂದ ತಪ್ಪುವುದೇ ಇಲ್ಲ. ಆದರೆ ಕೊಡೆಯನ್ನು ಈ ವ್ಯಕ್ತಿ ಎಂದಿಗೂ ಬಿಡಿಸಿಲ್ಲ ಮತ್ತು ಬಿಡಿಸುವುದೂ ಇಲ್ಲ. ಇದಕ್ಕೆ ಕಾರಣ ಆ ಕೊಡೆಯ ಅರಿವೆಯು ಹಲವು ರಂಧ್ರಗಳಿಂದ ತುಂಬಿದೆ. ಮಾಹಿತಿ ಪ್ರಧಾನವಾದ ವಿದ್ಯಾಭ್ಯಾಸವನ್ನು ಹರಕು ಅರಿವೆಯ ಕೊಡೆಗೆ ಹೋಲಿಸುತ್ತಾರೆ. ಮಕ್ಕಳಲ್ಲೂ ಸ್ವಂತ ಯೋಚನೆಗಳಿವೆ : ಶೈಕ್ಷಣಿಕವಾಗಿ ಭಾರತವು ದೇಶೀಯ ಶಿಕ್ಷಣ ಪದ್ಧತಿಯನ್ನು ಕಡೆಗಣಿಸಿರುವುದರ ಬಗ್ಗೆ ಓಶೋರವರ ತೀವ್ರ ಆಕ್ಷೇಪವಿದೆ. ನಾವಿಂದು ಶೈಕಣಿಕವಾಗಿಯೂ ಗುಲಾಮರು. ಪಶ್ಚಿಮದ ಚಿಂತನೆಗಳನ್ನೇ ಮಕ್ಕಳ ಮೇಲೆ ಹೇರುತ್ತಿದ್ದೇವೆ. ಮಕ್ಕಳಲ್ಲಿರುವ ಸೃಜನಶೀಲ ಗುಣಗಳನ್ನು ಅರಳಿಸುವ ಬದಲು ಅಳಿಸುವ ಹಾದಿ ಹಿಡಿಯುತ್ತಿದ್ದೇವೆ. ಮಕ್ಕಳಿಗೂ ಅವರದ್ದೇ ಆದ ಯೋಚನೆಗಳಿವೆ. ಬುದ್ಧಿವಂತಿಕೆಗಳಿವೆ. ಗ್ರಾಮೀಣಭಾಗ ಮರೆಯಲುಂಟೆ..? ಗ್ರಾಮೀಣ ಹಿನ್ನೆಲೆಯ ಪರಿಸರದ ಪ್ರಭಾವ ಅತ್ಯಂತ ದಟ್ಟವಾಗಿರುವ ನಮಗೆ ಆ ಶೈಕ್ಷಣಿಕ ಪರಿಸರವನ್ನು ಮರೆತು ಪಠ್ಯಕ್ರಮ ರೂಪಿಸಲಾದೀತೇ..? ಸಾಧ್ಯವಿಲ್ಲ. ಅನೇಕ ಗ್ರಾಮೀಣ ಕಾಲೇಜುಗಳಲ್ಲಿ ಸಮಾಜ ವಿಜ್ಞಾನಗಳ ವಲಯದಲ್ಲಾದ ಪ್ರಚಲಿತ ಬೆಳವಣಿಗೆಗಳ ಬಗ್ಗೆ ತಿಳಿವಳಿಕೆಯಾಗಲೀ.. ಗ್ರಂಥಗಳಾಗಲೀ ನಿರೀಕ್ಷಿತ ಪ್ರಮಾಣದಲ್ಲಿ ಇರುವುದಿಲ್ಲ. ಈ ಕುರಿತಂತೆ ಅನೇಕ ನಿದರ್ಶನಗಳನ್ನೂ ಓಶೋ ನೀಡುತ್ತಾರೆ. ಒಬ್ಬ ತಂದೆ ನಿರಂತರ ತನ್ನ ಮಗನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದನು. ತನ್ನ ಯೋಚನೆಗಳನ್ನು ಹೇರುವುದರಲ್ಲೇ ಈತನ ಶ್ರಮ. ಇದನ್ನು ಕೇಳಿ ಕೇಳಿ ಮಗುವಿಗೆ ಸಾಕಾಗಿರುತ್ತದೆ. ಒಮ್ಮೆ ಹೀಗಾಯಿತು. ಬೇರೆ ಮಕ್ಕಳನ್ನು ಹೋಲಿಸಿ `ಅವರು ಎಷ್ಟು ಪ್ರತಿಭಾವಂತರು. ನೀನಾದರೂ ಬರೀ ದಡ್ಡ~ ಎಂದು ತಂದೆ ಮಗನನ್ನು ಕೆಣಕುತ್ತಾನೆ. ಈ ತನಕ ಸುಮ್ಮನಿದ್ದ ಮಗು ಈಗ ಅದರದ್ದೇ ಆದ ಧಾಟಿಯಲ್ಲಿ ತಂದೆಗೆ ಉತ್ತರಿಸುತ್ತದೆ. ` ಅಪ್ಪಾ ! ಆತನ ತಂದೆ ನಿನ್ನಂತೆ ಅಲ್ಲ. ಅತ್ಯಂತ ಪ್ರತಿಭಾವಂತನು. ಆದರೆ ನೀನು ?.~ ಓಶೋರವರ ಪ್ರಮುಖ ಸಲಹೆಗಳು: ಓಶೋರವರ ಶೈಕ್ಷಣಿಕ ಚಿಂತನೆಗಳಲ್ಲಿ ಐದು ಅಂಶಗಳು ಪ್ರಮುಖವಾಗಿ ಅಡಗಿವೆ. ಅದರಲ್ಲಿ ಪ್ರಮುಖವಾದುದು ಮಗುವಿನಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳ ವಿಕಾಸಕ್ಕೆ ಶಿಕ್ಷಣ ಪೂರಕವಾಗಿರಬೇಕು. ನಮ್ಮ ಅಭಿಪ್ರಾಯಗಳನ್ನು ಒತ್ತಾಯಪೂರ್ವಕವಾಗಿ ಹೇರಿ ಅದನ್ನು ನಾಶಗೊಳಿಸಬಾರದು. ಶಿಕ್ಷಣದಲ್ಲಿ ಚರಿತ್ರೆ, ಸಂಸ್ಕೃತಿ, ಭೂಗೋಳ ಮೊದಲಾದ ಮಾಹಿತಿಗಳನ್ನು ಒದಗಿಸುವ ವಿಷಯಗಳ ಕಲಿಕೆಗಳನ್ನು ಕೈಬಿಡಬಾರದು. ಇದೇ ಹಂತದಲ್ಲಿ ಭಾಷಾ ಕಲಿಕೆಯತ್ತಲೂ ಗಮನ ಹರಿಸಬೇಕು. ಓಶೋರವರು ತಿಳಿಸುವಂತೆ ಮಕ್ಕಳಿಗೆ ಕನಿಷ್ಠ ಎರಡು ಭಾಷೆಗಳನ್ನಾದರೂ ಕಲಿಸಬೇಕು. ಒಂದು ಮಾತೃಭಾಷೆ, ಇನ್ನೊಂದು ಅಂತರರಾಷ್ಟ್ರೀಯ ಭಾಷೆ ಇಂಗ್ಲಿಷ್. ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮಾತೃಭಾಷೆಯಷ್ಟು ಪರಿಣಾಮಕಾರಿ ಭಾಷೆ ಬೇರೆ ಇಲ್ಲ. ಹಿರಿಯ ವಿದ್ವಾಂಸರ ಹೇಳಿಕೆಯೊಂದನ್ನು ಓಶೋ ಈ ಸಂದರ್ಭದಲ್ಲಿ ನೀಡುತ್ತಾರೆ. ನೀನು ಪರಕೀಯ ಭಾಷೆಯಲ್ಲಿ ಎಲ್ಲವನ್ನೂ ತಿಳಿಯಬಹುದು. ಆದರೆ ಜಗಳವಾಡಲು ಅಥವಾ ಪ್ರೇಮಿಸಲು ಮಾತೃಭಾಷೆ ಬಿಟ್ಟರೆ ಬೇರೊಂದಿಲ್ಲ. ಅಂದರೆ ಭಾವನೆಗಳ ಪರಿಣಾಮಕಾರಿ ಸಂವಹನ ಕೇವಲ ಮಾತೃಭಾಷೆಯಲ್ಲಿ ಮಾತ್ರ ಸಾಧ್ಯ. ಶಿಕ್ಷಣದಲ್ಲಿ ವೈಜ್ಞಾನಿಕ ವಿಚಾರಗಳ ಕಲಿಕೆ ಇನ್ನೊಂದು ಪ್ರಮುಖ ಅಂಶ. ಇದರೊಂದಿಗೆ ಇಂದಿನ ಶಿಕ್ಷಣದಲ್ಲಿ ಮಹತ್ತ್ವ ಕಳೆದುಕೊಳ್ಳುತ್ತಿರುವ ಜೀವನ ಕಲೆ. ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುವ ಮೌಲ್ಯಾಧಾರಿತ ಶಿಕ್ಷಣ. ಓಶೋರವರ ಪ್ರಕಾರ ಕಲಿಕೆಯ ಈ ಹಂತದಲ್ಲಿ ಮಕ್ಕಳು ಗಂಭೀರವದನರಾಗಬಾರದು. ಹಾಸ್ಯವು ಇಲ್ಲಿ ಪ್ರಧಾನವಾಗಿ ಪ್ರತಿಬಿಂಬಿಸಲ್ಪಡಬೇಕು. ಓದಿನಲ್ಲಿ ಗಂಭೀರರಾಗಿ ಅಥವಾ ದು:ಖಿಗಳಾಗಿ ದಿನ ಕಳೆದಲ್ಲಿ ಬದುಕು ವ್ಯರ್ಥವಾಗುತ್ತದೆ. ನಮ್ಮ ನರನಾಡಿಗಳ ತುಂಬಾ ಇವುಗಳೇ ತುಂಬಿಕೊಳ್ಳುತ್ತವೆ. ಹಾಸ್ಯ ಅಥವಾ ನಗುವಿನ ಭಾಷೆಯೇ ಮರೆತು ಹೋಗುವ ಅಪಾಯವಿದೆ. ಹಾಗಾಗಿ ಹಾಸ್ಯ ಅಥವಾ ನಗುವನ್ನು ಅರಳಿಸುವ ಅಂಶ ಶಿಕ್ಷಣದಲ್ಲಿ ಸೇರ್ಪಡೆಗೊಳ್ಳಬೇಕು. ಗಂಭೀರತೆ ಅಥವಾ ದು:ಖ ದೂರವಾಗಬೇಕು. ಶಿಕ್ಷಣದಲ್ಲಿ ಅಳವಡಿಸಬಹುದಾದ ಮತ್ತೊಂದು ಅಂಶ ಕಲೆ ಮತ್ತು ಸೃಜನಶೀಲತೆ. ಚಿತ್ರಕಲೆ, ಸಂಗೀತ, ಕುಂಬಾರಿಕೆ , ಕಲ್ಲುಕಟ್ಟಣೆ ಹೀಗೆ ಹಲವು ವಿಚಾರಗಳನ್ನು ಇಲ್ಲಿ ಓಶೋರವರು ನೀಡುತ್ತಾರೆ. ಸೃಜನಾತ್ಮಕವಾದ ಈ ಅಂಶಗಳನ್ನು ಕಲಿಕೆಯಲ್ಲಿ ಆಯ್ದುಕೊಳ್ಳಲು ಮಕ್ಕಳಿಗೆ ಸ್ವಾತಂತ್ರ್ಯವಿರಬೇಕು. ಹೆಚ್ಚಿನ ಕಲೆಗಳನ್ನು ಆಯ್ದುಕೊಳ್ಳುವ ಅವಕಾಶಗಳನ್ನೂ ಇಲ್ಲಿ ಕಲ್ಪಿಸಬಹುದು. ಓಶೋರವರ ಪ್ರಕಾರ ಮನುಷ್ಯನ ಅಸ್ತಿತ್ವವು ಅಡಗಿರುವುದು ಈ ಸೃಜನಾತ್ಮಕ ಕಲೆಗಳಲ್ಲಿ. ನೂತನ ಸೃಷ್ಟಿಗೆ ಇದು ಪೂರಕವಾಗುತ್ತದೆ. ಓಶೋರವರು ತಿಳಿಸುವ ಇನ್ನೊಂದು ಅಂಶ ಅಧ್ಯಾತ್ಮ ವಿಚಾರಕ್ಕೆ ಸಂಬಂಧಿಸಿದುದು. ಮಕ್ಕಳಲ್ಲಿ ಧೈರ್ಯವನ್ನು ಬೆಳೆಸುವಲ್ಲಿ ಇದು ಸಹಕಾರಿಯಾಗಬೇಕು. ಭಯವು ಮನುಷ್ಯನ ಎಲ್ಲಾ ವ್ಯಕ್ತಿತ್ವವನ್ನೂ ಮಸಕುಗೊಳಿಸುತ್ತದೆ. ಮಕ್ಕಳಲ್ಲಿ ಧೈರ್ಯ, ಸಾಹಸ ತುಂಬುವ ಕೆಲಸ ಶಿಕ್ಷಣದಿಂದ ಆಗಬೇಕು. ಅದಕ್ಕಾಗಿ ಈ ನಿಟ್ಟಿನಲ್ಲಿ ಸಾಧಿಸಿ ಜೀವನ ಸಾರ್ಥಕ ಪಡಿಸಿಕೊಂಡ ಮಹಾತ್ಮರನ್ನು ಮಕ್ಕಳಿಗೆ ಪರಿಚಯಿಸಬೇಕು. ಅವರ ಧೈರ್ಯ, ಸಾಧನೆಗಳ ಹಾದಿಯತ್ತ ಮಕ್ಕಳ ಗಮನ ಸೆಳೆಯಬೇಕು. ಝೆನ್, ತಾವೋ ಮೊದಲಾದವರ ವಿಚಾರಗಳನ್ನಿಲ್ಲಿ ಓಶೋ ಹೆಸರಿಸುತ್ತಾರೆ. ಧ್ಯಾನ, ಯೋಗ, ಪ್ರಾಣಾಯಾಮ ಮತ್ತು ಇವುಗಳೊಂದಿಗೆ ಆತ್ಮರಕ್ಷಣಾ ವಿದ್ಯೆಗಳನ್ನು ಮಕ್ಕಳಿಗೆ ಪರಿಚಯಿಸಬೇಕು. ಪ್ರಸ್ತುತ ಶಿಕ್ಷಣ ಪದ್ಧತಿಯ ಬಗ್ಗೆ ಅತ್ಯಂತ ಕಳವಳ ವ್ಯಕ್ತಪಡಿಸುವ ಓಶೋ ಅಮೆರಿಕಾದಲ್ಲಿ ಇಂದು ಮನಃಶಾಸ್ತ್ರಜ್ಞರಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾರೆ. ಉನ್ನತ ಶಿಕ್ಷಣ ಹೊಂದಿದವರು ಹೆಚ್ಚಿನ ಸಂಖ್ಯೆಯಲ್ಲಿ ಮಾನಸಿಕವಾಗಿ ಅಸ್ವಸ್ಥರಾಗುತ್ತಿದ್ದಾರೆ. ಭಾರತದಲ್ಲೂ ಇದಕ್ಕೆ ಕೊರತೆ ಇಲ್ಲ. ಭ್ರಷ್ಟಾಚಾರ, ಅನೈತಿಕ ಚಟುವಟಿಕೆ, ವಿವಾಹ ವಿಚ್ಛೇದನ ಮೊದಲಾದ ಪಿಡುಗುಗಳು ಸುಶಿಕ್ಷಿತರಲ್ಲಿ ಅಧಿಕವಾಗುತ್ತಿದೆ. ಇದನ್ನು ತಪ್ಪಿಸಲು ಮೆದುಳಿಗೆ ಅಧಿಕ ಒತ್ತಡ ಹೇರುವ ಕ್ರಮ ಶಿಕ್ಷಣದಿಂದ ದೂರವಾಗಬೇಕು. ಭಾವನೆ ಮತ್ತು ಮೌಲ್ಯಗಳನ್ನು ಅರಳಿಸುವ ಕೆಲಸವಾಗಬೇಕು. ಓಶೋರವರು ಹೇಳುವಂತೆ ಹೃದಯ ಮತ್ತು ನಾಭಿ ಕೇಂದ್ರಗಳ ವಿಕಾಸದತ್ತ ನಮ್ಮ ಗಮನ ಹರಿಯಬೇಕು. ಇದಕ್ಕೆ ಪೂರಕವಾದ ಕ್ರಮಗಳನ್ನು ಶಿಕ್ಷಣದಲ್ಲಿ ಅಳವಡಿಸುವ ಚಿಂತನೆಗಳತ್ತ ಯೋಚಿಸಬೇಕು. ಓಶೋ ಚಿಂತನೆಗಳು ಶಿಕ್ಷಣ ಪದ್ಧತಿಯಲ್ಲಿ ಅಳವಡಿಸಲು ಸಾಧ್ಯವೇ ? ಅವುಗಳು ಸುಧಾರಣೆಯ ಬೀಜ ಬಿತ್ತಿಯಾವೇ?. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.