ಪ್ರಶ್ನೇ-ಉತ್ತರ ರಾಜೇಶ್ ನಾನು ಹೆಲ್ತ್ ಇನ್ಸ್‌ಪೆಕ್ಟರ್ ಡಿಪ್ಲೊಮಾ ಮಾಡಿಕೊಂಡಿದ್ದೇನೆ. ವೈದ್ಯಕೀಯ ವೃತ್ತಿಯಲ್ಲಿ ಹೆಚ್ಚು ಆಸಕ್ತನಾಗ್ದ್ದಿದು, ದಂತ ವೈದ್ಯನಾಗಲು ಬಯಸಿದ್ದೇನೆ. ಈಗ ನೇರವಾಗಿ ದ್ವಿತೀಯ ಪಿ.ಯು.ಸಿ. ಪರೀಕ್ಷೆ ತೆಗೆದುಕೊಳ್ಳಬಹುದೇ? ಹಾಗಿದ್ದಲ್ಲಿ ಇದಕ್ಕೆ ಅವಕಾಶವಿರುವ ಕಾಲೇಜುಗಳ ಬಗ್ಗೆ ಮಾಹಿತಿ ಕೊಡಿ ಅಥವಾ ದಂತ ವೈದ್ಯನಾಗಲು ಇರುವ ಇತರ ಯಾವುದಾದರೂ ಕೋರ್ಸುಗಳ ಬಗ್ಗೆ ತಿಳಿಸಿ. ದಂತ ವೈದ್ಯನಾಗಬೇಕೆಂಬ ನಿಮ್ಮ ಹಂಬಲ ಮೆಚ್ಚುವಂತಹುದು. ಆದರೆ ನೀವು ಈ ನಿರ್ಧಾರವನ್ನು, ಪಿ.ಯು. ಓದುತ್ತಿರುವಾಗಲೇ ಮಾಡಬೇಕಾಗಿತ್ತು. ಈಗ ದಂತವೈದ್ಯ ಕೋರ್ಸಿಗೆ ಸೇರಿಕೊಳ್ಳಲು ನೀವು ಪುನಃ ಸಿ.ಇ.ಟಿ. ಪರೀಕ್ಷೆ ತೆಗೆದುಕೊಂಡು ಅತ್ಯುತ್ತಮ ರ‌್ಯಾಂಕ್ ಪಡೆಯಬೇಕು. ನೀವು ದಂತ ವೈದ್ಯ ಕೋರ್ಸಿಗೆ ಸೇರಿಕೊಳ್ಳಲು ಪಿ.ಯು. ನಲ್ಲಿ ನೀವು ತೆಗೆದುಕೊಂಡಿರುವ ಅಂಕಗಳು ಮುಖ್ಯವಲ್ಲದಿದ್ದರೂ ಕನಿಷ್ಠ 50% ಅಂಕಗಳನ್ನು ಗಳಿಸಿರುವುದು ಅನಿವಾರ್ಯ. ಈ ಎಲ್ಲ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ನೀವು ನಿಮ್ಮ ಹಂಬಲವನ್ನು ಪುನರ್ವಿಮರ್ಶಿಸಿಕೊಳ್ಳುವುದು ಒಳ್ಳೆಯದು. ನೀವು ಈಗ ಮುನ್ನಡೆಯುತ್ತಿರುವ ದಾರಿಯಲ್ಲಿಯೇ ಹೆಚ್ಚಿನ ವ್ಯಾಸಂಗವನ್ನು ಮಾಡಿ ಯಶಸ್ಸನ್ನು ಕಂಡುಕೊಳ್ಳುವುದು ಒಳ್ಳೆಯದು. ರಘು ನಾನು ಬೆಂಗಳೂರು ವಿಶ್ವವಿದ್ಯಾಲಯದ ದೂರಶಿಕ್ಷಣದಲ್ಲಿ ಬಿ.ಕಾಂ. ಮಾಡುತ್ತಿದ್ದೇನೆ. ಇದು ಮುಗಿದ ನಂತರ ಮುಂದೆ ನಿಯಮಿತ ಶಿಕ್ಷಣ ಪದ್ಧತಿಯಲ್ಲಿ (ರೆಗ್ಯುಲರ್) ಕಾಲೇಜಿಗೆ ಹೋಗಿ ಎಂ.ಬಿ.ಎ. / ಸಿ.ಎ. / ಬಿ.ಎಲ್.ಎಲ್. ಮಾಡಬಹುದೇ? ನನ್ನ ಗೆಳೆಯನೊಬ್ಬ ಪಿ.ಯು.ಸಿ. ಮಾಡದೇ ದೂರಶಿಕ್ಷಣ ವ್ಯವಸ್ಥೆಯಲ್ಲಿ ಬಿ.ಕಾಂ. ಮಾಡುತ್ತಿರುವುದರಿಂದ ಇದು ಸಾಧ್ಯವಿಲ್ಲ ಎನ್ನುತ್ತಿದ್ದಾನೆ. ಗೊಂದಲದಲ್ಲಿದ್ದೇನೆ. ದಯಮಾಡಿ ಸಲಹೆ ಕೊಡಿ. ಮುಕ್ತವಿಶ್ವವಿದ್ಯಾಲಯಗಳು ನೀಡುವ ಕೋರ್ಸುಗಳ ಉದ್ದೇಶ ಜ್ಞಾನಪ್ರಸಾರ ಮತ್ತು ವಿದ್ಯಾಭ್ಯಾಸದ ವಿಸ್ತರಣೆ. ನಿಯಮಿತ ರೀತಿಯಲ್ಲಿ, ನಿಯಮಿತ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯಲಾಗದ ಕುತೂಹಲಿಗಳಿಗಾಗಿ ಈ ಕೋರ್ಸುಗಳು ಇವೆ. ಇವುಗಳ ಆಧಾರದ ಮೇಲೆ ನೀವು ಸರ್ಕಾರೀ ಉದ್ಯೋಗವನ್ನು ಪಡೆಯುವುದಾಗಲೀ, ನಿಯಮಿತ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸುವುದಾಗಲೀ ಸಾಧ್ಯವಾಗುವುದಿಲ್ಲ. ಆದರೆ ಮುಕ್ತ ವಿಶ್ವವಿದ್ಯಾಲಯದಲ್ಲೇ ನಿಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ ಖಾಸಗೀ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಯಾವ ಅಡ್ಡಿಯೂ ಇಲ್ಲ. ರಘು, ದಾವಣಗರೆ ನಾನು 70% ನೊಂದಿಗೆ ಬಿ.ಕಾಂ. ಈಗಷ್ಟೇ ಮುಗಿಸಿಕೊಂಡಿದ್ದೇನೆ. ನಾವು ಆರ್ಥಿಕವಾಗಿ ತುಂಬಾ ಹಿಂದಿದ್ದೇವೆ. ನನ್ನ ಮುಂದಿನ ಭವಿಷ್ಯದ ಬಗ್ಗೆ ದಾರಿ ತೋರಿಸಿ. ನನಗೆ ಯಾವ ಕಂಪನಿಯ ಬಗ್ಗೆಯೂ ಗೊತ್ತಿಲ್ಲ. ಐ.ಸಿ.ಡಬ್ಲೂ. ಮಾಡೋದಕ್ಕೆ ಬೇರೆಡೆಗೆ ಹೋಗಬೇಕು. ಆದರೆ ಈಗ ಅದು ಸಾಧ್ಯವಿಲ್ಲ ಎನಿಸುತ್ತದೆ. ಏಕೆಂದರೆ ನಮ್ಮದೊಂದು ಪುಟ್ಟ ಹೋಟೆಲ್ ಇದೆ. ನಾನಿಲ್ಲದಿದ್ದರೆ ನನ್ನ ತಂದೆಯವರಿಗೆ ತುಂಬಾ ತೊಂದರೆಯಾಗುತ್ತದೆ. ನಾನೇನು ಮಾಡುವುದೋ ತಿಳಿಯುತ್ತಿಲ್ಲ. ಐ.ಎ.ಎಸ್.ಗೆ ಅರ್ಜಿ ಹಾಕುವುದು, ಅದರ ಶುಲ್ಕ ಇದಾವುದೂ ನನಗೆ ತಿಳಿದಿಲ್ಲ. ಆದರೂ ನಾನು ಜೀವನದಲ್ಲಿ ನೆಲೆ ನಿಂತು ನನ್ನ ಪರಿವಾರವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆ. ದಯಮಾಡಿ ಸಲಹೆ ಕೊಡಿ. ನೀವು 70% ಅಂಕಗಳೊಂದಿಗೆ ಬಿ.ಕಾಂ. ಮುಗಿಸಿರುವುದು ತುಂಬಾ ಶ್ಲಾಘನೀಯವಾದುದು. ನಿಮ್ಮ ಮನೆಯ ಆರ್ಥಿಕ ಸಂಕಷ್ಟದ ಮಧ್ಯೆಯೂ ನೀವು ಮಾಡಿರುವ ಸಾಧನೆ ಅನನ್ಯವಾದುದು. ದೃಢ ಸಂಕಲ್ಪದಿಂದ ನೀವು ಈ ತೊಂದರೆಗಳ ಮಧ್ಯೆಯೂ ಹೆಚ್ಚಿನ ಸಾಧನೆ ಮಾಡಲು ಶಕ್ಯರಾಗಿರುವಿರಿ. ನೀವು ದಾವಣಗೆರೆಯಲ್ಲಿಯೇ ಇದ್ದು ಎಂ.ಕಾಂ. ಮಾಡುವ ಪ್ರಯತ್ನ ಮಾಡಬಹುದು. ನಿಮ್ಮ ಸದ್ಯದ ಕೆಲಸದ ಮಧ್ಯೆಯೇ ಮುಕ್ತವಿಶ್ವವಿದ್ಯಾಲಯದ ಮೂಲಕ ಎಂ.ಬಿ.ಎ. ಮಾಡಬಹುದು. ವಿಶಾಲ ತಳಹದಿಯ ತಯಾರಿ ಮಾಡಿಕೊಂಡು ಕೆ.ಎ.ಎಸ್ ಅಥವಾ ಐ.ಎ.ಎಸ್. ಪರೀಕ್ಷೆ ತೆಗೆದುಕೊಳ್ಳಬಹುದು. ಈ ಬಗ್ಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾರ್ಗದರ್ಶಿ ಪುಸ್ತಕಗಳನ್ನು ಓದಲು ಪ್ರಾರಂಭಿಸಿ. ನೀವು ಈಗ ಸಣ್ಣದಾಗಿ ಮಾಡುತ್ತಿರುವ ಹೋಟೆಲ್ ಉದ್ಯಮವನ್ನೇ ಪರಿಣಾಮಕಾರಿಯಾಗಿ ಬೆಳೆಸಿ ಹೊಸ ಆಲೋಚನೆಗಳೊಂದಿಗೆ ದೊಡ್ಡ ಹೋಟೆಲ್ ಉದ್ಯಮಿಯೂ ಆಗಬಹುದು. ಎಲ್ಲವೂ ನಿಮ್ಮ ಕೈಯಲ್ಲೇ ಇದೆ. ನಿಮ್ಮ ಭವಿಷ್ಯದ ಶಿಲ್ಪಿ ನೀವೇ. ತುಳಸಿಕುಮಾರ ನಾನು ಇಇ ವಿಭಾಗದಲ್ಲಿ ಎಂಜಿನಿಯರಿಂಗ್ ಮುಗಿಸಿದ್ದೇನೆ. ಎಲೆಕ್ಟ್ರಿಕಲ್ ವಿಷಯದಲ್ಲಿ ಡಿಸೈನರ್ ಎಂಜಿನಿಯರ್ ಆಗಬೇಕೆಂಬ ಗುರಿ ಇದೆ. ಇದಕ್ಕೆ ಎಂ.ಟೆಕ್ ಮಾಡುವ ಅವಶ್ಯಕತೆ ಇದೆಯೇ? ಅಥವಾ ಬಿ.ಇ. ಸಾಕೇ? ಎಂ.ಟೆಕ್ ಮಾಡಬೇಕೆಂದಾದರೆ ಯಾವ ವಿಷಯದ ಆಯ್ಕೆ ಉತ್ತಮ. ಇದಲ್ಲದೆ ಯಾವುದಾದರೂ ಕೋರ್ಸುಗಳ ಅವಶ್ಯಕತೆ ಇದೆಯೇ? ಇದಕ್ಕೆ ಅವಕಾಶ ಯಾವ ಕಾಲೇಜಿನಲ್ಲಿದೆ ತಿಳಿಸಿಕೊಡಿ. ಡಿಸೈನ್ ಎಂಜಿನಿಯರ್ ಆಗಬೇಕೆಂಬ ನಿಮ್ಮ ಹಂಬಲ ಶ್ಲಾಘನೀಯ. ನಿರ್ದಿಷ್ಟ ಗುರಿಗಳಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಎಲೆಕ್ಟ್ರಿಕಲ್ ಡಿಸೈನ್ ಮಾಡಲು ನೀವು ಎಂ.ಟೆಕ್. ನಲ್ಲಿ ಪವರ್ ಸಿಸ್ಟಮ್ಸ ಆಯ್ಕೆ ಮಾಡಿಕೊಳ್ಳಬಹುದು. ಅದರೊಳಗೆ ಟ್ರಾನ್ಸಫಾರ‌್ಮರ್ ಡಿಸೈನ್ ಅಥವಾ ಪವರ್ ಸಿಸ್ಟಮ್ ಡಿಸೈನ್ ಆರಿಸಿಕೊಳ್ಳಬಹುದು. ಬಿ.ಇ. ಮಾಡಿಕೊಂಡಿರುವ ನೀವು ಡಿಸೈನಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಂಪೆನಿಗಳಲ್ಲಿ ಉದ್ಯೋಗವನ್ನು ಹುಡುಕಿಕೊಂಡರೂ ಸೂಕ್ತವಾಗುತ್ತದೆ. ಎಬಿಬಿ, ಸೈಮನ್ಸ್ ಮುಂತಾದ ಕಂಪನಿಗಳಲ್ಲಿ ನೀವು ಕೆಲಸಕ್ಕೆ ಸೇರಿಕೊಂಡರೆ ಡಿಸೈನ್‌ಗೆ ಸಂಬಂಧಪಟ್ಟ ತರಬೇತಿಯನ್ನು ಅವರೇ ಕೊಡುತ್ತಾರೆ. ಅಶೋಕ ಬಿ.ಎಸ್. ನಾನು ಕೆ.ಇ.ಎಸ್.(ಕರ್ನಾಟಕ ವಿದ್ಯಾ ಇಲಾಖೆ) ಪರೀಕ್ಷೆ ತೆಗೆದುಕೊಳ್ಳಬೇಕೆಂದು ಮಾಡಿದ್ದೇನೆ. ಇದಕ್ಕೆ ಉಪಯುಕ್ತವಾಗುವ ಅಂದರೆ ಅರ್ಹತೆ, ಪಠ್ಯಕ್ರಮ ಮತ್ತು ಈ ಪರೀಕ್ಷೆ ನಡೆಸುವ ಸಂಸ್ಥೆ ಇನ್ನಿತರ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಒದಗಿಸಿಕೊಡಿ. ಕರ್ನಾಟಕ ವಿದ್ಯಾ ಇಲಾಖೆಯಲ್ಲಿ ಆಡಳಿತಾತ್ಮಕ ಹುದ್ದೆಯಲ್ಲಿ ಕೆಲಸ ಮಾಡಲು ನೀವು ಕೆ.ಎ.ಎಸ್. ಪರೀಕ್ಷೆಯನ್ನೇ ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ನೀವು ಯಾವುದೇ ಕ್ಷೇತ್ರದಲ್ಲಿ ಪದವೀಧರರಾಗಿದ್ದರೆ ಸಾಕು. ಈ ಪರೀಕ್ಷೆಯ ಪಠ್ಯಕ್ರಮ, ಶುಲ್ಕ ಮತ್ತು ಇನ್ನಿತರ ವಿವರಗಳಿಗೆ ಈ ಅಂತರ್ಜಾಲ ತಾಣವನ್ನು ನೋಡಿ. .... ಸರಿತಾ ನಾನು ಬಿ.ಕಾಂ. ಮುಗಿಸಿದ್ದೇನೆ. ನನಗೆ ಬ್ಯಾಂಕ್ ಮ್ಯೋನೇಜರ್ ಆಗಬೇಕೆಂಬ ಬಯಕೆ ಇದೆ. ನಾನು ಅಕೌಂಟ್ಸ್‌ನಲ್ಲಿ ಉತ್ತಮಳಿದ್ದೇನೆ. ಆದರೆ ನನ್ನ ಭವಿಷ್ಯಕ್ಕೆ ಮುಂದೆ ಯಾವ ಕೋರ್ಸು ಮಾಡಬೇಕೆಂದು ತಿಳಿಯುತ್ತಿಲ್ಲ. ಆರ್ಥಿಕ ಸ್ಥಿತಿ ಉತ್ತಮವಿಲ್ಲದಿರುವುದರಿಂದ ಸಿ.ಎ. ಮಾಡಲು ಸಾಧ್ಯವಿಲ್ಲ. ಆದ್ದರಿಂದ ಯಾವುದಾದರೂ ಪಿ.ಜಿ ಅಥವಾ ಡಿಪ್ಲೊಮಾ ಕೋರ್ಸುಗಳ ಬಗ್ಗೆ ಮಾಹಿತಿ ಕೊಡಿ. ನನ್ನ ಕನಸು ಬ್ಯಾಂಕ್‌ನಲ್ಲಿ ಕೆಲಸ ಮಾಡುವುದು, ಬ್ಯಾಂಕ್ ಮ್ಯೋನೇಜರ್ ಆಗುವುದು. ದಯಮಾಡಿ ಸಲಹೆ ನೀಡಿ. ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ನೀವು ಈಗಾಗಲೇ ಪಡೆದಿರುವ ಬಿ.ಕಾಂ. ಪದವಿ ಸಾಕು. ಬ್ಯಾಂಕ್‌ನಲ್ಲಿ ಲಭ್ಯವಿರುವ ಕ್ಲರಿಕಲ್ ಕೆಲಸಗಳ ಬಗ್ಗೆ ಆಗಾಗ ದಿನ/ವೃತ್ತ ಪತ್ರಿಕೆಗಳಲ್ಲಿ ಪ್ರಕಟಣೆಗಳು ಪ್ರಕಟಗೊಳ್ಳುತ್ತಿರುತ್ತವೆ. ಹಾಗೆಯೇ ಬ್ಯಾಂಕುಗಳಲ್ಲಿ ಲಭ್ಯವಿರುವ ಪ್ರೊಬೇಶನರಿ ಆಫೀಸರ್ ಹುದ್ದೆಗಳ ಬಗ್ಗೆಯೂ ಪ್ರಕಟಣೆಗಳು ಬರುತ್ತಿರುತ್ತವೆ. ಇವುಗಳನ್ನು ಗಮನಿಸಿ ನಿಮ್ಮ ಆವೇದನಾ ಪತ್ರವನ್ನು (ಅಪ್ಲಿಕೇಷನ್) ಕಳುಹಿಸಿ. ಈಗಿನಿಂದಲೇ ಬ್ಯಾಂಕಿಂಗ್ ಪರೀಕ್ಷೆಗಳ ಬಗ್ಗೆ ತಯಾರಿ ಪ್ರಾರಂಭಿಸಿ. ಈ ಬಗ್ಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾರ್ಗದರ್ಶಿ ಪುಸ್ತಕಗಳನ್ನು ಓದಲು ಉಪಕ್ರಮಿಸಿ. ಸವಿತಾಭಟ್ ನಾನು ಟೆಲಿಕಮ್ಯುನಿಕೇಷನ್ ವಿಷಯದಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದೇನೆ. ನಾಲ್ಕನೇ ಸೆಮಿಸ್ಟರ್‌ನಲ್ಲಿ 6 ವಿಷಯಗಳಲ್ಲಿ ಫೇಲ್ ಆದ್ದರಿಂದ ಮುಂದೆ ಹೋಗಲಾಗಲಿಲ್ಲ. ಹಾಗಾಗಿ ಈ ಎಲ್ಲಾ ವಿಷಯಗಳನ್ನು ಪಾಸು ಮಾಡಿಕೊಳ್ಳುವ ಕುಶಲತೆಯನ್ನು ತಿಳಿಸಿಕೊಡಿ. ಅಂತೆಯೇ ನನ್ನ ಭವಿಷ್ಯಕ್ಕೆ ಪೂರಕವಾಗುವ ಯಾವುದಾದರೂ ಕೋರ್ಸುಗಳಿದ್ದರೆ ತಿಳಿಸಿಕೊಡಿ. ನಿಮ್ಮ ಮೊದಲ ಆದ್ಯತೆ ಅನುತ್ತೀರ್ಣರಾಗಿರುವ ಆರು ವಿಷಯಗಳಲ್ಲೂ ಕಠಿಣ ಪರಿಶ್ರಮದ ಮೂಲಕ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವುದು. ಇದಕ್ಕೆ ಸರಿಯಾದ ಕ್ರಮದಲ್ಲಿ ನೀವು ಓದಬೇಕು. ನಿಮ್ಮ ಪಠ್ಯಕ್ರಮಕ್ಕೆ ಅನ್ವಯವಾಗಿ ಬರೆದಿರುವ ಒಂದು ಪಠ್ಯಪುಸ್ತಕ ಮತ್ತು ಒಂದು ಆಕರ ಪುಸ್ತಕವನ್ನು ಪ್ರತಿ ವಿಷಯದಲ್ಲೂ ಇಟ್ಟುಕೊಳ್ಳಬೇಕು. ಒಂದೊಂದು ಅಧ್ಯಾಯವನ್ನೂ ಶ್ರದ್ಧೆಯಿಂದ ಓದಿ ಅರ್ಥ ಮಾಡಿಕೊಳ್ಳಬೇಕು. ಓದಿದ್ದನ್ನು ಪುನಃ ಪುನಃ ಮನನ ಮಾಡಿ ಅಂತರ್ಗತಗಳಿಸಿಕೊಳ್ಳಬೇಕು. ಹೀಗಾಗಿರುವುದನ್ನು ಪರೀಕ್ಷಿಸಿಕೊಳ್ಳಲು ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳಿಂದ ಈ ಅಧ್ಯಾಯಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಹೆಕ್ಕಿ ತೆಗೆದು ಉತ್ತರಿಸಬೇಕು. ಸಂದೇಹಗಳಿದ್ದರೆ ಅಧ್ಯಾಪಕರ ಜೊತೆ ಅಥವಾ ಸ್ನೇಹಿತರ ಜೊತೆ ಚರ್ಚಿಸಬೇಕು. ಈ ವಿಧಾನದಿಂದ ನೀವು ಯಶಸ್ಸುಗಳಿಸುವುದರಲ್ಲಿ ಸಂಶಯವಿಲ್ಲ. ಲಕ್ಷ್ಮಿಗಣೇಶ್ ನಾನು ಇಇ ನಲ್ಲಿ ಡಿಪ್ಲೊಮಾ ಮಾಡಿಕೊಂಡಿದ್ದೇನೆ. ನನ್ನ ಮುಂದಿನ ವಿದ್ಯಾಭ್ಯಾಸ ಮತ್ತು ಭವಿಷ್ಯದ ಕುರಿತಾಗಿ ಸಲಹೆ ಕೊಡಿ. ನಿಮಗೆ ಉನ್ನತ ವ್ಯಾಸಂಗದಲ್ಲಿ ಇಚ್ಛೆ ಇದ್ದರೆ ಮುಕ್ತ ವಿಶ್ವವಿದ್ಯಾಲಯಗಳ ಮುಖಾಂತರ ಪಿ.ಜಿ. ಡಿಪ್ಲೊಮಾ ಮಾಡಬಹುದು. ಅಥವಾ ಇನ್ನೊಮ್ಮೆ ಸಿ.ಇ.ಟಿ. ಪರೀಕ್ಷೆ ತೆಗೆದುಕೊಂಡು ಪರ್ಯಾಯ ಮಾರ್ಗದ ಮೂಲಕ ಬಿ.ಇ. ಎರಡನೇ ವರ್ಷಕ್ಕೆ ಸೇರಿಕೊಳ್ಳಬಹುದು ಅಥವಾ ಕೆಲಸಕ್ಕೆ ಸೇರಿಕೊಂಡು ಒಂದು ವರ್ಷದ ಅನುಭವವನ್ನು ಪಡೆದು ಅದರ ಆಧಾರದ ಮೇಲೆ ಸಂಜೆ ಕಾಲೇಜಿನಲ್ಲಿ ಬಿ.ಇ. ವ್ಯಾಸಂಗ ಮುಂದುವರಿಸಬಹುದು. ಲಿಖಿತ್ ಸಿ ನಾನು ದ್ವಿತೀಯ ಪಿ.ಯು.ಸಿ. ಪಿ.ಸಿ.ಎಂ.ಬಿ ಓದುತ್ತಿದ್ದೇನೆ. ನನಗೆ ಏರೋನಾಟಿಕಲ್ ಇಂಜನಿಯರಿಗ್ ಅಥವಾ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್ ಮಾಡಬೇಕೆನಿಸಿದೆ. ಇವೆರಡರಲ್ಲಿ ಯಾವುದು ಒಳ್ಳೆಯದು? ನಾನು ಆಸ್ಟ್ರೇಲಿಯಾದಲ್ಲಿ ಓದಲು ಬಯಸಿದರೆ ಅದಕ್ಕಾಗಿ ಯಾವುದಾದರೂ ಪ್ರವೇಶ ಪರೀಕ್ಷೆ ಬರೆಯಬೇಕೆ? ದಯಮಾಡಿ ಮಾಹಿತಿ ಕೊಡಿ. ಏರೋನಾಟಿಕಲ್ ಎಂಜಿನಿಯರಿಂಗ್ ಮತ್ತು ಮಾಹಿತಿ ವಿಜ್ಞಾನ ಇವೆರಡರಲ್ಲಿ ಯಾವ ಕ್ಷೇತ್ರ ಉತ್ತಮವೆಂಬುದು ನಿಮ್ಮ ಆಸಕ್ತಿಯನ್ನೇ ಅವಲಂಬಿಸಿದೆ. ಏರೋನಾಟಿಕಲ್ ಎಂಜಿನಿಯರಿಂಗ್ ಕಿರಿದಾದ ಕ್ಷೇತ್ರವಾಗಿದ್ದು, ಮ್ಯೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ. ಮಾಡಿದ ನಂತರ ಎಂ.ಟೆಕ್. ಮಾಡಲು ಆ ಕ್ಷೇತ್ರಕ್ಕೆ ಹೋಗುವುದು ಒಳ್ಳೆಯದು. ಮಾಹಿತಿ ವಿಜ್ಞಾನ ವಿಶಾಲ ಹರಹಿನ ಕ್ಷೇತ್ರವಾಗಿದ್ದು ಉದ್ಯೋಗಾವಕಾಶಗಳು ವಿಪುಲವಾಗಿವೆ. ನೀವು ದ್ವಿತೀಯ ಪಿ.ಯು. ಮುಗಿದ ನಂತರ ಎಂಜಿನಿಯರಿಂಗ್ ಮಾಡಲು ಆಸ್ಟ್ರೇಲಿಯಾಕ್ಕೆ ಹೋಗಬಹುದು. ಆದರೆ ಅದಕ್ಕೆ ಪೂರ್ವಭಾವಿಯಾಗಿ ಐ.ಇ.ಎಲ್.ಟಿ.ಎಸ್. (ಇಂಟರ್‌ನ್ಯಾಷನಲ್ ಇಂಗ್ಲಿಷ್ ಲಾಂಗ್ವೇಜ್ ಟೆಸ್ಟಿಂಗ್) ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಚೇತನಕುಮಾರಿ ನಾನು 63% ನೊಂದಿಗೆ ಬಿ.ಎಸ್ಸಿ. (ಪಿ.ಎಂ.ಸಿಎಸ್) ಪದವಿ ಮುಗಿಸಿದ್ದೇನೆ. ಪಿ.ಯು.ನಲ್ಲಿ ನನಗೆ ಕೇವಲ 51% ಬಂದಿತ್ತು. ನನಗೆ ಈಗ ಎಂ.ಬಿ.ಬಿ.ಎಸ್. ಮಾಡಬೇಕೆನಿಸುತ್ತಿದೆ. ದಯಮಾಡಿ ಕಾಲೇಜು, ಶುಲ್ಕ ಇನ್ನಿತರ ವಿಷಯಗಳ ಕುರಿತು ಮಾಹಿತಿ ಕೊಡಿ ಮತ್ತು ನನ್ನ ಉತ್ತಮ ಭವಿಷ್ಯಕ್ಕೆ ಸಲಹೆ ಕೊಡಿ. ನೀವು ಎಂ.ಬಿ.ಬಿ.ಎಸ್. ಮಾಡಲು ಪಿ.ಯು.ನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರವನ್ನು ಅಧ್ಯಯನ ಮಾಡಿ 50% ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು. ಈಗ ಪುನಃ ಸಿ.ಇ.ಟಿ. ಪರೀಕ್ಷೆಯನ್ನು ತೆಗೆದುಕೊಂಡು ಅತ್ಯುತ್ತಮ ರ‌್ಯಾಂಕ್ ಪಡೆಯಬೇಕು. ನೀವು ಪಡೆಯುವ ರ‌್ಯಾಂಕ್‌ನ ಆಧಾರದ ಮೇಲೆ ನಿಮಗೆ ಸಿಗುವ ಕಾಲೇಜು, ಶುಲ್ಕ ಮತ್ತು ವಿದ್ಯಾಭ್ಯಾಸದ ವೆಚ್ಚ ನಿರ್ಧಾರವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.