ದಸರಾ ಸ್ಫೂರ್ತಿ ಕ್ರೀಡಾ ಶಕ್ತಿ ಪುಟ್ಟ ಮಗಳನ್ನು ಅಪ್ಪಿಕೊಂಡಿದ್ದ ಆ ಪೋಷಕರ ಮೊಗದಲ್ಲಿ ಖುಷಿಯ ಸೆಲೆ ಎದ್ದು ಕಾಣುತಿತ್ತು... ಅಂದಹಾಗೆ, ಎಚ್.ಡಿ.ಕೋಟೆ ತಾಲ್ಲೂಕಿನಿಂದ ಬಂದಿದ್ದ ಆ ಪುಟ್ಟ ಬಾಲಕಿಯ ಕೈಯಲ್ಲಿ ಪ್ರಮಾಣಪತ್ರವಿತ್ತು. ಇನ್ನೂ 14 ವರ್ಷ ದಾಟಿರದ ಆ ಹುಡುಗಿ 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದಳು. ಆ ತಾಯಿ ಸುತ್ತಮುತ್ತ ಇದ್ದವರಿಗೆ ತಮ್ಮ ಮಗಳ ಸಾಧನೆಯನ್ನು ಹೇಳಿ ಹಿಗ್ಗುತ್ತಿದ್ದರು. ಸಂಬಂಧಿಕರಿಗೆ ಮೊಬೈಲ್‌ ಕರೆ ಮಾಡಿದ ತಂದೆ ಆ ಸಂತೋಷದ ವಿಚಾರ ಹಂಚಿಕೊಳ್ಳುತ್ತಿದ್ದರು. ಇಂಥ ಖುಷಿಯ ವಾತಾವರಣ ಕಂಡುಬಂದಿದ್ದು ಕಳೆದ ವರ್ಷ ದಸರಾ ಉತ್ಸವದ ಅಂಗವಾಗಿ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ. ಒಂದು ಸಣ್ಣಮಟ್ಟದ ಕ್ರೀಡಾಕೂಟದಲ್ಲೂ ಗೆಲ್ಲುವ ಪದಕ ಎಷ್ಟೊಂದು ಖುಷಿಗೆ ಕಾರಣವಾಗಬಲ್ಲದು ಎಂಬುದಕ್ಕೆ ಆ ಕುಟುಂಬದ ಖುಷಿಯೇ ಸಾಕ್ಷಿ. ದಸರಾ ಕ್ರೀಡಾಕೂಟ ಎಂದಾಗ ನೆನಪುಗಳ ಸುರಳಿಯೇ ಬಿಚ್ಚಿಕೊಳ್ಳುತ್ತದೆ. ಬಹಳ ಹಿಂದೆ ದಸರಾ ಕೂಟದಲ್ಲಿ ಪಾಲ್ಗೊಂಡವರು, ಪದಕ ಗೆದ್ದವರು, ಸನಿಹದಿಂದ ವೀಕ್ಷಿಸಿದವರು ಈಗಲೂ ಆ ಕ್ಷಣಗಳನ್ನು ರೋಚಕವಾಗಿ ವರ್ಣಿಸುತ್ತಾರೆ. ದಸರಾ ಕ್ರೀಡಾಕೂಟಕ್ಕೂ ಅರಮನೆಗಳ ನಗರಿಗೂ ವಿಶೇಷ ನಂಟು. ನಾಡಹಬ್ಬದ ಸಂದರ್ಭದಲ್ಲಿ ನಡೆಯುವ ಹಲವು ವೈಶಿಷ್ಟ್ಯಗಳಲ್ಲಿ ಕ್ರೀಡಾಕೂಟವೂ ಒಂದು. ನಾಡಕುಸ್ತಿ, ವಜ್ರಮುಷ್ಟಿ ಕಾಳಗ, ಕತ್ತಿವರಸೆ ರಾಜರ ಆಳ್ವಿಕೆಯ ಕಾಲದಿಂದ ಇದ್ದರೂ ದಸರಾ ಕ್ರೀಡಾಕೂಟದ ಕಲರವ ಶುರುವಾಗಿದ್ದು ಸುಮಾರು 60 ವರ್ಷಗಳ ಹಿಂದೆ. ದಸರಾ ಕೂಟವೆಂದರೆ ರಾಜ್ಯದ ಸಾವಿರಾರು ಕ್ರೀಡಾಳುಗಳು ಭಾಗವಹಿಸುವ ಕ್ರೀಡಾ ಉತ್ಸವ. ಈ ಸಂದರ್ಭದಲ್ಲಿ ಸಂಸ್ಕೃತಿ ಹಾಗೂ ಕ್ರೀಡಾ ಸೊಬಗು ಮೇಳೈಸುತ್ತವೆ. ಇದರಿಂದ ಈ ಭಾಗದಲ್ಲಿ ಕ್ರೀಡಾ ಸಂಸ್ಕೃತಿ ಒಡಮೂಡಿದೆ ಎಂಬುದು ಹಿರಿಯ ಕ್ರೀಡಾಪಟುಗಳ ಮಾತು. ಮಕ್ಕಳಲ್ಲಿ ಕ್ರೀಡೆಗಳ ಬಗ್ಗೆ ಮತ್ತಷ್ಟು ಆಸಕ್ತಿ ಮೂಡಲು ನೆರವಾಗಿದೆ ಎನ್ನುತ್ತಾರೆ. ಇಲ್ಲಿ ಓಡಿ ಗೆದ್ದವರು ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಿದ್ದಾರೆ. 80ರ ದಶಕದಲ್ಲಿ ರಾಷ್ಟ್ರೀಯ ಕ್ರೀಡಾಕೂಟದ ಸ್ವರೂಪ ಪಡೆದಿತ್ತು. ಎರಡು ವರ್ಷ ರಾಷ್ಟ್ರಮಟ್ಟದ ಕ್ರೀಡಾಕೂಟ ಕೂಡ ನಡೆದಿದೆ. ಹಿಂದೆ ಮಹಾರಾಜ ಕಾಲೇಜಿನ ಕ್ರೀಡಾಂಗಣದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತಿತ್ತು. ಈಗ ಚಾಮುಂಡಿ ವಿಹಾರದ ವಿಶಾಲ ಪ್ರದೇಶದಲ್ಲಿ ಕ್ರೀಡಾ ಇಲಾಖೆಯ ಸುಸಜ್ಜಿತ ಕ್ರೀಡಾಂಗಣವೇ ಇದೆ. ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಕರ್ನಾಟಕದಲ್ಲಿ ವಾಸಿಸುವ ಕ್ರೀಡಾಪಟುಗಳಿಗೆ ಮಾತ್ರ ಅವಕಾಶವಿರುತ್ತದೆ. ರಕ್ಷಣಾ ಪಡೆ, ಅರೆರಕ್ಷಣಾ ಪಡೆಗೆ ಸೇರಿದ ಕ್ರೀಡಾಳುಗಳು ಕೂಡ ಪಾಲ್ಗೊಳ್ಳುವಂತಿಲ್ಲ. ಈ ಬಾರಿ ದಸರಾ ಕ್ರೀಡಾಕೂಟಕ್ಕೆ ಚಾಲನೆ ಲಭಿಸಿದ್ದು ಕ್ರೀಡಾಪಟುಗಳಿಂದ ಮೈಸೂರು ನಗರಿ ಗಿಜಿಗುಡುತ್ತಿದೆ. ಸುಮಾರು 22 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ಸಾಹಸ ಕ್ರೀಡೆಗಳು, ಮಲ್ಲಕಂಬ, ಮ್ಯಾರಥಾನ್‌, ಸೈಕ್ಲೋಥಾನ್‌ ಕೂಡ ಇವೆ. ದಸರಾ ಮಹೋತ್ಸವದ ಅಂಗವಾಗಿ ಮೈಸೂರು ರಾಜಮನೆತದವರು ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವ ಕ್ರೀಡೆ ವಜ್ರಮುಷ್ಟಿ ಕಾಳಗ. ಅರಮನೆಯಲ್ಲಿನ ಆಯುಧಪೂಜೆಯ ಸಂಪ್ರದಾಯದ ಒಂದು ಭಾಗವಾಗಿದೆ. ಜಗ ಜಟ್ಟಿಗಳು ತಮ್ಮ ತಲೆಯಲ್ಲಿ ರಕ್ತ ಬರುವವರೆಗೂ ಕಾದಾಡುವುದು ಈ ಪೈಪೋಟಿಯ ವಿಶೇಷ. ಈ ಕಾಳಗ ಅಬ್ಬಬ್ಬಾವೆಂದರೆ 30ರಿಂದ 45 ಸೆಕೆಂಡ್‌ಗಳಲ್ಲಿ ಮುಗಿದು ಹೋಗುತ್ತದೆ. ಆದರೆ, ಈ ಗುದ್ದಾಟಕ್ಕಾಗಿ ಸ್ಪರ್ಧಿಗಳು ಆಯುಧಪೂಜೆಯ ಹಿಂದಿನ ಒಂದು ತಿಂಗಳು ಕಾಲ ತಾಲೀಮು ನಡೆಸಿರುತ್ತಾರೆ. ಕುಸ್ತಿಯ ಘಮಲು ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ತುಸು ಕಾವೇರಿದ ವಾತಾವರಣ ಇರುವುದರಿಂದ ಈ ಬಾರಿ ಅಖಿಲ ಭಾರತ ಮಟ್ಟದ ಸ್ಪರ್ಧೆಗಳನ್ನು ರದ್ದುಗೊಳಿಸಲಾಗಿದೆ. ಆದರೆ, ನಾಡಕುಸ್ತಿ ಹಾಗೂ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆ ಎಂದಿನಂತೆ ನಡೆಯಲಿವೆ. ಕುಸ್ತಿಯ ಹೊಳಪು ಇಲ್ಲದೆ ದಸರಾ ಉತ್ಸವಕ್ಕೆ ಮೆರುಗು ಬರುವುದಿಲ್ಲ ಎಂಬುದು ಪ್ರತೀತಿ. ಇತ್ತೀಚಿನ ದಿನಗಳಲ್ಲಿ ಮಣ್ಣಿನ ಅಖಾಡದ ಮೇಲಿನ ಪ್ರೀತಿಯ ಸೆಳೆತ ನಿಧಾನವಾಗಿ ಮಾಸುತ್ತಿದೆ. ಆ ವೈಭೋಗ, ಅದ್ಧೂರಿ, ಸಂಪ್ರದಾಯ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಗರಡಿ ಮನೆಗಳ ಸಂಖ್ಯೆಯೂ ಕಡಿಮೆಯಾಗಿವೆ. ಇತ್ತೀಚಿನ ದಿನಗಳಲ್ಲಿ ಗೆದ್ದಾಗ ಕುಸ್ತಿಪಟುಗಳಿಗೆ ನೀಡುತ್ತಿರುವ ಬಹುಮಾನ ಮೊತ್ತ ತೀರಾ ಕಡಿಮೆ. ‘ನಾಡಕುಸ್ತಿಗೆ ಒಂದು ತಿಂಗಳು ಇದೆ ಅಂದಾಗಲೇ ಬೀದಿಗಳಲ್ಲಿ ಚರ್ಚೆ ಶುರುವಾಗುತಿತ್ತು. ಆ ಪೈಲ್ವಾನ್‌ ಹಾಗಂತೆ, ಈ ಪೈಲ್ವಾನ್‌ ಹೀಗಂತೆ. ಕುಸ್ತಿಯ ಘಮಲು ಬೀದಿಗಳಲ್ಲಿ ಹರಡುತಿತ್ತು. ಆ ತಯಾರಿ, ಗತ್ತು, ಹುರುಪು, ನೋಟ ಎಲ್ಲದರಲ್ಲೂ ಖದರ್‌ ಇರುತಿತ್ತು. ಅಖಾಡದ ಸಿದ್ಧತೆಯಂತೂ ನಮ್ಮೆಲ್ಲರ ಪಾಲಿಗೆ ಅಕ್ಷರಶಃ ಹಬ್ಬ. ಕುಸ್ತಿ ವೀಕ್ಷಿಸಲು ಅಭಿಮಾನಿಗಳು 10–15 ಕಿ.ಮೀ. ದೂರದಿಂದ ನಡೆದುಕೊಂಡು ಬರುತ್ತಿದ್ದರು. ಈಗಿನ ಪರಿಸ್ಥಿತಿ ನೋಡಿದರೆ ತುಂಬಾ ಬೇಸರವಾಗುತ್ತದೆ’ ಎನ್ನುತ್ತಾರೆ ಕೆ.ಜಿ.ಕೊಪ್ಪಲಿನ ಪೈಲ್ವಾನ್‌ ಮಂಜೇಗೌಡ. *** ಚಾರಿತ್ರಿಕ ವಜ್ರಮುಷ್ಟಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಕಾಲದಿಂದಲೂ ವಜ್ರಮುಷ್ಟಿ ಕಾಳಗ ಸಂಪ್ರದಾಯವನ್ನು ನಡೆಸಿಕೊಂಡು ಬರಲಾಗುತ್ತಿದೆ. ಹಿಂದಿನ ಕಾಲದಲ್ಲಿ ಒಂದು ರಾಜ್ಯದ ಶಕ್ತಿ ಸಾಮರ್ಥ್ಯ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳಲು ಹಾಗೂ ಸೀಮೋಲ್ಲಂಘನೆಯಾದಾಗ ಎದುರಾಳಿಗೆ ತಮ್ಮ ಬಲ ಪ್ರದರ್ಶಿಸಲು ಜಟ್ಟಿ ಜನಾಂಗದವರು ಈ ಕಾಳಗ ನಡೆಸುತ್ತಿದ್ದರು. ಜಟ್ಟಿಗಳ ಮುಷ್ಟಿಗೆ ‘ವಜ್ರನಖ’ ಎಂಬ ಚೂಪಾದ ಆಯುಧವನ್ನು ಕಟ್ಟಲಾಗುತ್ತದೆ. ಕಾಳಗದಲ್ಲಿ ಎದುರಾಳಿಯ ನೆತ್ತಿಗೆ ಆಯುಧವಿರುವ ಕೈನಿಂದ ಕುಕ್ಕಿ ರಕ್ತ ಚಿಮ್ಮಿಸಬೇಕು. ರಕ್ತ ಚಿಮ್ಮುತ್ತಿದ್ದಂತೆ ಕಾಳಗ ನಿಲ್ಲಿಸಲಾಗುತ್ತದೆ. ಅಂಬಾವಿಲಾಸ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯುವ ಈ ಸಂಪ್ರದಾಯ ಕಣ್ತುಂಬಿಕೊಳ್ಳಲು ರಾಜವಂಶಸ್ಥರೂ ಬರುತ್ತಾರೆ. ವೃತ್ತಾಕಾರದಲ್ಲಿ ಮರಳಿನಿಂದ ಅಖಾಡ ನಿರ್ಮಿಸಲಾಗುತ್ತದೆ. ಅದಕ್ಕೆ ಚೆಂಡು ಹೂವು, ಸೇವಂತಿಗೆ ಹೂವು ಹಾಕಿ ಶೃಂಗಾರ ಮಾಡಲಾಗುತ್ತದೆ. ಸಾಮಾನ್ಯವಾಗಿ ಎರಡು ಜೋಡಿಗಳನ್ನು ಏಕಕಾಲದಲ್ಲಿ ಪೈಪೋಟಿಗೆ ಬಿಡಲಾಗುತ್ತದೆ. *** ಸ್ಪರ್ಧೆಗಳ ಸಂಖ್ಯೆ ತಗ್ಗುತ್ತಿದೆ... ‘ಗ್ರಾಮೀಣ ಪ್ರದೇಶದ ಮಕ್ಕಳಿಗೆ ದಸರಾ ಕ್ರೀಡಾಕೂಟ ಅದ್ಭುತ ವೇದಿಕೆ. ತಮ್ಮ ಪ್ರತಿಭೆ ಮೆರೆಯಲು ವೇದಿಕೆ ಒದಗಿಸಿಕೊಡುತ್ತದೆ. ಕೂಟಕ್ಕೆ ಉಚಿತ ಪ್ರವೇಶವಿದೆ. ಅಲ್ಲದೆ, ಊಟ ತಿಂಡಿ ನೀಡಲಾಗುತ್ತದೆ. ವಾಸ್ತವ್ಯವೂ ಉಚಿತ. ಆದರೆ, ಈಚೆಗೆ ಸ್ಪರ್ಧೆ ಹಾಗೂ ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆಯೋಜಕರ ನಿರ್ಲಕ್ಷ್ಯ ಇದಕ್ಕೆ ಕಾರಣ’ ಎನ್ನುತ್ತಾರೆ ದೈಹಿಕ ಶಿಕ್ಷಣ ತಜ್ಞ ಶೇಷಣ್ಣ. *** ಮುಗಿಯದ ಕಾಮಗಾರಿ... ಚಾಮುಂಡಿ ವಿಹಾರದಲ್ಲಿ ಕ್ರೀಡಾ ಇಲಾಖೆ ನಿರ್ಮಿಸುತ್ತಿರುವ ಅಂತರರಾಷ್ಟ್ರೀಯ ದರ್ಜೆಯ ಈಜುಕೊಳ ಈ ಬಾರಿ ದಸರಾ ಕ್ರೀಡಾಕೂಟಕ್ಕೂ ಲಭ್ಯವಾಗುವುದಿಲ್ಲ. 3.25 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಈ ಈಜುಕೊಳದ ಕಾಮಗಾರಿ ನಾಲ್ಕು ವರ್ಷಗಳಿಂದ ನಡೆಯುತ್ತಲೇ ಇದೆ. ಇದಕ್ಕೆ ಕ್ರೀಡಾ ವಲಯದಲ್ಲಿ ಟೀಕಾ ಪ್ರಹಾರವೇ ವ್ಯಕ್ತವಾಗಿದೆ. ಈಜುಕೊಳ ನಿರ್ಮಿಸುವ ಯೋಜನೆ 12 ವರ್ಷಗಳ ಹಿಂದಿನದ್ದು. ಜಮೀನು ವಿವಾದದಿಂದ ನನೆಗುದಿಗೆ ಬಿದ್ದಿತ್ತು. 2013ರಲ್ಲಿ ಕಾಮಗಾರಿ ಶುರುವಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.