ಆತ್ಮಶ್ರೀ, ಅನುಶ್ರೀ ಕುಸ್ತಿ ಪ್ರೀತಿ... ರಾಜ್ಯ ಹಾಗೂ ರಾಷ್ಟ್ರಮಟ್ಟದ ದಸರಾ ಮಹಿಳಾ ಕುಸ್ತಿಯಲ್ಲಿ ಮಿಂಚು ಹರಿಸಿದ್ದು ಶೃಂಗೇರಿಯ ಆತ್ಮಶ್ರೀ ಹಾಗೂ ಅನುಶ್ರೀ. ಇವರಿಬ್ಬರು ಅವಳಿ ಸಹೋದರಿಯರು ಎನ್ನುವುದು ವಿಶೇಷ. ಮೂಡಬಿದಿರೆ ಆಳ್ವಾಸ್‌ ಕಾಲೇಜಿನಲ್ಲಿ ಎಂ.ಕಾಂ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಇವರಿಬ್ಬರಿಗೆ ಕುಸ್ತಿ ಮೇಲೆ ಅಪಾರ ಪ್ರೀತಿ. ‘ನಮ್ಮ ಪೋಷಕರು ರೈತರು. ಅವರಿಗೆ ಕ್ರೀಡೆ ಬಗ್ಗೆ ಅಷ್ಟೊಂದು ಒಲವು ಇಲ್ಲ. ಆದರೆ, ನಾವಿಬ್ಬರು ಶಾಲಾಮಟ್ಟದಿಂದಲೇ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದೆವು. ಕಬಡ್ಡಿಯಲ್ಲೂ ಎತ್ತಿದ ಕೈ. ಕಾಲೇಜಿಗೆ ಬರುವ ವೇಳೆಗೆ ಕುಸ್ತಿ ಸ್ಪರ್ಧೆ ಮೇಲೆ ಆಸಕ್ತಿ ಬಂತು. ಪೋಷಕರು ನಮ್ಮ ಕ್ರೀಡಾ ಉತ್ಸಾಹಕ್ಕೆ ಯಾವತ್ತೂ ಅಡ್ಡಿಯಾಗಲಿಲ್ಲ’ ಎಂದು ಈ ಅವಳಿ ಸಹೋದರಿಯರು ನುಡಿಯುತ್ತಾರೆ. ದಸರಾ ಕುಸ್ತಿಯಲ್ಲಿ ಆತ್ಮಶ್ರೀ 60 ಕೆ.ಜಿ. ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ ಪಡೆದರು. ರಾಜ್ಯಮಟ್ಟದ ಕುಸ್ತಿಯಲ್ಲೂ ಅಗ್ರಸ್ಥಾನ ಸಂಪಾದಿಸಿದರು. ಆತ್ಮಶ್ರೀ ಅಖಿಲ ಭಾರತ ಅಂತರ ವಾರ್ಸಿಟಿ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲೂ ಪದಕ ಜಯಿಸಿದ್ದಾರೆ. ‘ಹರಿಯಾಣದ ಸಾಕ್ಷಿ ಮಲಿಕ್‌ ಒಲಿಂಪಿಕ್ಸ್‌ ಪದಕ ಗೆದ್ದಿರುವುದು ನಮ್ಮ ಕುಸ್ತಿ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಕುಸ್ತಿಯಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗೆ ಪ್ರೋತ್ಸಾಹ ನೀಡುವವರ ಅಗತ್ಯವಿದೆ. ಆಳ್ವಾಸ್‌ ಸಂಸ್ಥೆ ಅಂಥ ಕೆಲಸ ಮಾಡುತ್ತಿದೆ’ ಎಂದು ಆತ್ಮಶ್ರೀ ಹೇಳುತ್ತಾರೆ. ಕೋಚ್‌ ತುಕರಾಂ ಸಾರಥ್ಯದಲ್ಲಿ ಆಳ್ವಾಸ್‌ನ 14 ಹುಡುಗಿಯರು ದಸರಾ ಕುಸ್ತಿಯಲ್ಲಿ ಭಾಗವಹಿಸಿದ್ದರು. ಅವರು 4 ಚಿನ್ನದ ಪದಕ, 5 ಬೆಳ್ಳಿ ಪದಕ ಹಾಗೂ 5 ಕಂಚಿನ ಪದಕ ಜಯಿಸಿದರು. ಆರು ಮಂದಿ ಅಖಿಲ ಭಾರತ ಕುಸ್ತಿಯಲ್ಲಿ ಫೈನಲ್‌ ತಲುಪಿದ್ದರು. ಪವಿತ್ರಾ, ಸಾವಕ್ಕ, ಲಕ್ಷ್ಮಿ, ಧನಶ್ರೀ ಮಿಂಚು ಹರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.