ಉದ್ಯೋಗ ಭರವಸೆಯ ಕೌಶಲ ತರಬೇತಿ ಮಾಹಿತಿ ತಂತ್ರಜ್ಞಾನ ಇಂದು ವಿಶ್ವವನ್ನೇ ತನ್ನ ಮುಷ್ಟಿಯಲ್ಲಿ ಬಂಧಿಸಿ ಬದುಕಿನ ಅವಿಭಾಜ್ಯ ಕ್ಷೇತ್ರವಾಗಿದೆ. ಜಾಗತೀಕರಣ, ಖಾಸಗೀಕರಣ, ಉದಾರೀಕರಣಗಳು ವಿತ್ತವಲಯದ ಕ್ಷಿತಿಜಗಳಾಗಿ ಬೆಳೆಯುತ್ತಿರುವಂತೆ ವೃತ್ತಿ ಅವಕಾಶಗಳು ವ್ಯಾಪಕವಾಗಿ ಹೆಚ್ಚಿವೆ. ಉದ್ಯೋಗ ಪರ್ವದ ಈ ಯುಗದಲ್ಲಿ ಕಾರ್ಪೊರೆಟ್ ಸಂಸ್ಥೆಗಳು ಉದ್ಯೋಗಾವಕಾಶಗಳ ಹೆಬ್ಬಾಗಿಲನ್ನೇ ತೆರೆದಿವೆ. ಶೈಕ್ಷಣಿಕ ಅರ್ಹತೆ ಜೊತೆಗೆ ಕಂಪೆನಿಗಳು ಬಯಸುವ ಅಗತ್ಯ ಕೌಶಲಗಳನ್ನು ಹೊಂದಿದ್ದರೆ ಕೆಲಸ ಗಿಟ್ಟಿಸುವುದು ಸುಲಭ. ಉದ್ಯಮ ವಲಯ ವಿಸ್ತರಿಸಿದಂತೆ ಹಿಂದೆಂದಿಗಿಂತಲೂ ಇಂದು ಕೆಲಸಗಳು ಯಥೇಚ್ಛವಾಗಿ ಹೆಚ್ಚಿವೆ. ಆದರೆ ಸ್ಕಿಲ್ಡ್ ಕೆಲಸಗಾರರೇ ಸಿಗುತ್ತಿಲ್ಲ ಎಂಬುದು ಉದ್ಯೋಗದಾತರ ಆತಂಕ. ಪದವಿ ಮುಗಿಸಿದವರಲ್ಲಿ ಸುಮಾರು ಶೇ 30 ಮಂದಿ ಮಾತ್ರ ಕೆಲಸ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಉಳಿದ ಶೇ 70 ಮಂದಿ ಹಾಗೆಯೇ ಉಳಿಯುತ್ತಿದ್ದಾರೆ. ಡಿಗ್ರಿ ಮತ್ತು ಪಿಜಿ ವರೆಗಿನ ಶೈಕ್ಷಣಿಕ ಇತಿಹಾಸ ಏನೇ ಇದ್ದರೂ ಪದವೀಧರರಿಗೆ ವರ್ತಮಾನವೇ ಮುಖ್ಯ. ವಿವಿಧ ಕೌಶಲಗಳು, ನೈಪುಣ್ಯತೆ ಕೊರತೆಯಿಂದಾಗಿ ಉದ್ಯೋಗಾಕಾಂಕ್ಷಿಗಳಿಗೆ ಕಾರ್ಪೊರೆಟ್ ಸಂಸ್ಥೆಗಳ ಕೆಲಸಗಳು ಗಗನಕುಸುಮಗಳಾಗಿ ಪರಿಣಮಿಸಿವೆ. ಪದವಿ, ಸ್ನಾತಕೋತ್ತರ ಪದವಿಯಲ್ಲಿ ರ‌್ಯಾಂಕ್ ಪಡೆದವರೂ ಕೆಲಸ ಗಿಟ್ಟಿಸುವಲ್ಲಿ ವಿಫಲರಾಗುತ್ತಿದ್ದಾರೆ. ಕೌಶಲಗಳ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಸಮಸ್ಯೆ ನೀಗಿಸಲು ವಿದ್ಯಾರ್ಥಿಗಳಿಗೆ ಪದವಿ ಜೊತೆಗೆ ಸ್ಕಿಲ್ ಟ್ರೈನಿಂಗ್ ನೀಡಿ ಅವರಲ್ಲಿನ ಕೊರತೆಗಳನ್ನು ನೀಗಿಸಿ ಅವರನ್ನು ಕಾರ್ಪೊರೆಟ್ ಪ್ರಪಂಚಕ್ಕೆ ಸನ್ನದ್ಧರಾಗಿಸುವುದು ಅತ್ಯಂತ ಅಗತ್ಯವಾಗಿದೆ. ವಿಶ್ವವಿದ್ಯಾಲಯಗಳ ಪದವಿ ಪ್ರಮಾಣ ಪತ್ರಗಳು ವಿದ್ಯಾರ್ಹತೆ ಪೂರೈಸುವ ಮಾನದಂಡಗಳಾಗಿವೆ. ಆದರೆ ಇಂದು ಉದ್ಯೋಗದಾತ ಕಂಪೆನಿಗಳು ಇದರ ಜೊತೆಗೆ ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯ ಜ್ಞಾನ, ವ್ಯಕ್ತಿತ್ವ, ಸಮಸ್ಯೆ ನಿರ್ವಹಣೆ, ಸಾಮಾಜಿಕ ನಡವಳಿಕೆ, ಸಂವಹನ ಕೌಶಲಗಳು, ರಿಸ್ಕ್ ಮ್ಯಾನೇಜ್‌ಮೆಂಟ್, ಸೂಕ್ತ ನಿಲುವು ತೆಗೆದುಕೊಳ್ಳುವ ಸ್ವಭಾವ, ವಸ್ತುನಿಷ್ಠ ಆಲೋಚನೆ, ನಾಯಕತ್ವ ಗುಣ, ಗಣಕ ಜ್ಞಾನ ಇತ್ಯಾದಿ ಸ್ಕಿಲ್‌ಗಳನ್ನು ಬಯಸುತ್ತವೆ. ಈ ನಿಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾಲಯ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸೂಕ್ತ ಕೌಶಲ ತರಬೇತಿ ನೀಡಲು ಮತ್ತು ಸ್ಪರ್ಧಾಪ್ರಪಂಚದ ಉದ್ಯೋಗ ಭರಾಟೆಗೆ ಅವರನ್ನು ಸಜ್ಜುಗೊಳಿಸಲು ಅಮೆರಿಕ ಮೂಲದ ಕೈಝನ್ ಟ್ರೈನಿಂಗ್ ಅಕಾಡೆಮಿಯೊಂದಿಗೆ ತರಬೇತಿ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಸಂಸ್ಥೆಯ ಕಚೇರಿ ಸಿಕಂದರಾಬಾದ್‌ನಲ್ಲಿದೆ. ಮೈಸೂರು ವಿವಿಯ ಸಾಮರ್ಥ್ಯ ವರ್ಧನಾ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರವು ಈ ತರಬೇತಿ ಕಾರ್ಯಕ್ರಮಕ್ಕೆ ಸಾಥ್ ನೀಡಿದೆ. ಈ ಕೌಶಲ ಕೋಚಿಂಗ್ ತರಗತಿಗಳು ಸಂಪೂರ್ಣ ಪ್ರಾಯೋಗಿಕವಾಗಿದ್ದು, ದೈನಂದಿನ ತರಗತಿಗಳು ಮುಗಿದ ನಂತರ (ಮಧ್ಯಾಹ್ನ, ಸಂಜೆ) ಮತ್ತು ವಾರಾಂತ್ಯದಲ್ಲಿ ಕ್ಲಾಸ್‌ಗಳು ನಡೆಯಲಿವೆ. ಸೆಪ್ಟೆಂಬರ್‌ನಲ್ಲಿ ಈ ಟ್ರೈನಿಂಗ್ ಆರಂಭವಾಗಲಿದ್ದು, ಮೈಸೂರು ವಿವಿಯ ಯಾವುದೇ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ದಾಖಲಾಗಬಹುದು. ತರಬೇತಿ ಅವಧಿ 300 ಗಂಟೆ (6 ತಿಂಗಳು). ಕೋರ್ಸ್ ಯಶಸ್ವಿಯಾಗಿ ಪೂರೈಸಿದವರಿಗೆ `ಸ್ಕಿಲ್ ಟ್ರೈನಿಂಗ್ ಸರ್ಟಿಫಿಕೇಟ್~ ನೀಡಲಾಗುವುದು, ಜೊತೆಗೆ ಉದ್ಯೋಗ (ಸಂಬಳ ರೂ7500-10,000) ಭರವಸೆಯನ್ನು ನೀಡಲಾಗುವುದು. ಕೋರ್ಸ್‌ನ ಶುಲ್ಕ ರೂ. 4,500 (ಕಲಿಕಾ ಸಾಮಗ್ರಿ, ಪ್ರಮಾಣ ಪತ್ರ ಫೀ ಸೇರಿದೆ) ಕೋಚಿಂಗ್‌ನಲ್ಲಿ ಏನಿರುತ್ತದೆ ಇಂಗ್ಲಿಷ್ ಪ್ರಾವೀಣ್ಯತೆ, ಗಣಕ-ಅಂತರ್ಜಾಲ ಬಳಕೆ ವಿಧಾನ, ವ್ಯಕ್ತಿತ್ವ ವಿಕಸನ, ಸಿಇಟಿ ಮಾಗದರ್ಶನ, ಆಂಗಿಕ ಭಾಷೆ, ಗುಂಪು ಚರ್ಚೆ, ಸಂದರ್ಶನ ಟಿಪ್ಸ್, ನಾಯಕತ್ವ ಗುಣ, ಸಂವಹನ ತಂತ್ರಗಾರಿಕೆ, ಕಾರ್ಪೊರೆಟ್ ಸಂಸ್ಥೆಗಳಲ್ಲಿ ಸಮನ್ವಯತೆ ಸಾಧಿಸುವ ಜಾಣ್ಮೆ, ಪ್ರತಿನಿಧಿಸುವ ಕಂಪೆನಿಯನ್ನು ಮಾರುಕಟ್ಟೆಯಲ್ಲಿ ಮುಂಚೂಣಿಗೆ ತರುವ ಚತುರತೆ, ವ್ಯವಹಾರ-ಸಾಮಾನ್ಯ ಜ್ಞಾನ, ನಿರೂಪಣಾ ಶೈಲಿ (ಮಾತುಗಾರಿಕೆ), ಉಡುಪು ಸಂಹಿತೆ, ಸಮಯಪ್ರಜ್ಞೆ, ಭಯ-ಕೀಳರಿಮೆ ತೊಡೆದುಹಾಕವುದು, ವಿವಿಧ ಉದ್ಯೋಗದಾತ ಕಂಪೆನಿಗಳು ಬಯಸುವ ಚಾಕಚಕ್ಯತೆಗಳ ಕುರಿತು ಆಯಾ ಕ್ಷೇತ್ರಗಳಲ್ಲಿನ ಪರಿಣತರು ತರಬೇತಿ ನೀಡುತ್ತಾರೆ. ಕೈಝನ್ ಸಂಸ್ಥೆಯ ಅಮೆರಿಕದಲ್ಲಿನ ಸಂಪನ್ಮೂಲ ವ್ಯಕ್ತಿಗಳೂ ಕೋಚಿಂಗ್ ನೀಡುವರು. ಕೌಶಲ ಕಲಿಕೆಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಉದ್ಯೋಗದಾತ ಕಂಪೆನಿಗಳು: ಅಮೆರಿಕ, ಬ್ರಿಟನ್, ಘಾನಾ, ಮಲೇಷ್ಯಾ ಮತ್ತು ಭಾರತದಲ್ಲಿ ಕೈಝನ್ ಸಂಸ್ಥೆ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ. ಈ ಸಂಸ್ಥೆಯು ವಿಪ್ರೊ, ಟಿಸಿಎಸ್, ಐಸಿಐಸಿಐ, ಯುಬಿಎಸ್, ಜಿಎಂಆರ್, ಎಚ್‌ಡಿಎಫ್‌ಸಿ, ಫುಲ್‌ಟ್ರಾನ್ ಇಂಡಿಯಾ, ರಿಲಯನ್ಸ್ ಕಮ್ಯುನಿಕೇಷನ್ಸ್, ಭಾರತಿ ಏರ್‌ಟೆಲ್, ಡಿಲೈಟ್ ಮತ್ತು ಕೆಲ ಗಗನಯಾನ ಸಂಸ್ಥೆಗಳೊಂದಿಗೆ ಉದ್ಯೋಗ ಒಪ್ಪಂದ ಮಾಡಿಕೊಂಡಿದ್ದು ತರಬೇತಿ ನಂತರ ಅಭ್ಯರ್ಥಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ಕಂಪೆನಿಗಳಲ್ಲಿ ಉದ್ಯೋಗ ಒದಗಿಸಲು ಸಂಸ್ಥೆ ಜವಾಬ್ದಾರಿ ತೆಗೆದುಕೊಳ್ಳುತ್ತದೆ. ತರಬೇತಿಯಲ್ಲಿ ಪಾಲ್ಗೊಳ್ಳಲು ಆಸಕ್ತರು ಪ್ರೊ. ಎ.ಎಸ್.ದಾಸನ್ ಮೊ: 9448049833 ಸಂಪರ್ಕಿಸಬಹುದು. ಕೈಝನ್ ಟ್ರೈನಿಂಗ್ ಅಕಾಡೆಮಿ ಬಗೆಗಿನ ಹೆಚ್ಚಿನ ಮಾಹಿತಿಗೆ .. ತಾಣಕ್ಕೆ ಭೇಟಿ ನೀಡಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.