ಭಾಷೆ ಬೆಳವಣಿಗೆಗೆ ಕ್ರಿಕೆಟ್ ವೇದಿಕೆ ‘ಇಂಟರ್‌ನೆಟ್, ಡಿಜಿಟಲ್ ತಂತ್ರಜ್ಞಾನಗಳು ಎಷ್ಟೇ ಬೆಳೆದಿರಲಿ. ಕ್ರಿಕೆಟ್ ವೀಕ್ಷಕ ವಿವರಣೆಯಲ್ಲಿ ಇವತ್ತಿಗೂ ಹಿಂದಿ ಸೇರಿದಂತೆ ಉಳಿದ ಭಾರತೀಯ ಭಾಷೆಗಳಿಗೆ ಸುದೀರ್ಘ ಭವಿಷ್ಯವಿದೆ’– ಭಾರತದ ಕ್ರಿಕೆಟ್ ಇತಿಹಾಸದ ಮೊಟ್ಟಮೊದಲ ಹಿಂದಿ ವೀಕ್ಷಕ ವಿವರಣೆಕಾರ ಸುಶೀಲ್ ದೋಶಿ ಅವರ ಕಾಳಜಿಯ ನುಡಿಗಳಿವು. ಇಂದೋರಿನವರಾದ ಅವರು ವೃತ್ತಿಯಿಂದ ಎಂಜಿನಿಯರ್ ಆಗಿದ್ದವರು. ಆದರೆ, ಕ್ರಿಕೆಟ್ ವೀಕ್ಷಕ ವಿವರಣೆಕಾರರಾಗಿ ಜನಪ್ರಿಯರಾಗಿದ್ದಾರೆ. 47 ವರ್ಷಗಳಿಂದ ಆಕಾಶವಾಣಿ, ದೂರದರ್ಶನ ಮತ್ತು ಖಾಸಗಿ ಟಿವಿ ಚಾನಲ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಆಂಗ್ಲಮಯವಾಗಿದ್ದ ಈ ಕ್ಷೇತ್ರದಲ್ಲಿ ಹಿಂದಿಗೂ ಮಹತ್ವದ ಸ್ಥಾನ ಕಲ್ಪಿಸಿಕೊಟ್ಟ ಶ್ರೇಯ ಅವರದ್ದು. 1968 ರಿಂದ 1984ರವರೆಗೆ ಬಾನುಲಿ, 1984 ರಿಂದ ಟಿವಿಗಾಗಿ ಕಾಮೆಂಟ್ರಿ ಮಾಡಿದ್ದಾರೆ. ಏಕದಿನ ಮತ್ತು ಟ್ವೆಂಟಿ ಮಾದರಿ ಸೇರಿದಂತೆ ಹತ್ತು ವಿಶ್ವಕಪ್ ಟೂರ್ನಿಗಳ ಆಟದ ಚಿತ್ರಣವನ್ನು ತಮ್ಮ ವಿಶಿಷ್ಟ ಶೈಲಿಯ ಮಾತುಗಾರಿಕೆಯಿಂದ ಜನಸಾಮಾನ್ಯರಿಗೆ ತಲುಪಿಸಿದ್ದಾರೆ. 63 ವರ್ಷದ ದೋಶಿ ಅವರಿಗೆ ಇತ್ತೀಚೆಗಷ್ಟೆ ಕೇಂದ್ರ ಸರ್ಕಾರವು ಪದ್ಮಶ್ರೀ ಪುರಸ್ಕಾರ ನೀಡಿ ಸನ್ಮಾನಿಸಿದೆ. ಹೋಳ್ಕರ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜೆಲೆಂಡ್ ನಡುವಣ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಅವರು ಹಂಚಿಕೊಂಡ ಅನಿಸಿಕೆಗಳು ಇಲ್ಲಿವೆ. * ಇವತ್ತು ಹೆಬ್ಬೆರಳ ತುದಿಯಲ್ಲಿ ಎಲ್ಲ ಮಾಹಿತಿಗಳೂ ಸಿಗುವಂತಹ ತಂತ್ರಜ್ಞಾನವಿದೆ. ಈಗಲೂ ಕಾಮೆಂಟ್ರಿ ಅಗತ್ಯವಿದೆಯೇ? ವೀಕ್ಷಕ ವಿವರಣೆ ಇಲ್ಲದ ಕ್ರಿಕೆಟ್ ಪಂದ್ಯದಲ್ಲಿ ಮಜವೇ ಇಲ್ಲ. ಈ ಆಟವು ಜನಪ್ರಿಯತೆಯ ಉತ್ತುಂಗ ತಲುಪಲು ವೀಕ್ಷಕ ವಿವರಣೆ ಪಾತ್ರ ಬಹಳ ದೊಡ್ಡದು. ಅದರಲ್ಲೂ ಹಿಂದಿ ಸೇರಿದಂತೆ ಪ್ರಾದೇಶಿಕ ಭಾಷೆಗಳ ವಿವರಣೆಗಳೂ ಜನರ ಮನಮುಟ್ಟಿವೆ. ಟಿವಿ ಇಲ್ಲದ ಕಾಲದಲ್ಲಿ ಆಕಾಶವಾಣಿಯ ಕಾಮೆಂಟ್ರಿ ಬಹಳ ಜನಪ್ರಿಯವಾಗಿತ್ತು. ಆದರೆ, ಈಗ ಟಿವಿಯಲ್ಲಿಯೂ ವೀಕ್ಷಕ ವಿವರಣೆ ಅಗತ್ಯವಾಗಿದೆ. * ಇತ್ತೀಚೆಗೆ ಪ್ರಾದೇಶಿಕ ಭಾಷಾ ಕಾಮೆಂಟ್ರಿಗಳು ಕಡಿಮೆಯಾಗುತ್ತಿರುವ ಕಾರಣ ಏನು? ಹಿಂದಿಯಲ್ಲಿ ಈಗಲೂ ಇದೆ. ಆದರೆ, ಮೊದಲು ಕನ್ನಡ, ಮರಾಠಿ, ಬಂಗಾಳಿ ಭಾಷೆಯ ಕಾಮೆಂಟ್ರಿಗಳು ಇರುತ್ತಿದ್ದವು. ಆದರೆ, ಈಗ ಕಡಿಮೆಯಾಗಿವೆ. ತಮ್ಮ ಭಾಷೆಯನ್ನು ಶುದ್ಧವಾಗಿ ಪ್ರಯೋಗ ಮಾಡಬಹುದಾದ ವಿವರಣೆಕಾರರ ಕೊರತೆ ಇದೆ. ಈಗ ಕೇಳಿಬರುವ ಕಾಮೆಂಟ್ರಿ ಕರ್ಕಶವಾಗುತ್ತಿದೆ. ವ್ಯಾಕರಣ ಶುದ್ಧತೆ ಮಾಯವಾಗಿದೆ. ಇಂಗ್ಲಿಷ್‌ನಲ್ಲಿ ಯೋಚಿಸಿ ಹಿಂದಿಯಲ್ಲಿ ಮಾತನಾಡುತ್ತಾರೆ. ಇದರಿಂದ ಸ್ತ್ರಿಲಿಂಗ, ಪುಲ್ಲಿಂಗಗಳು ಏರುಪೇರಾಗುತ್ತಿವೆ. ಭಾರತೀಯ ಭಾಷೆಗಳನ್ನು ಬೆಳೆಸಲು ಕ್ರಿಕೆಟ್ ಅವಕಾಶದ ವೇದಿಕೆಯಾಗಿದೆ. ಈ ಆಟದ ಇಂಗ್ಲಿಷ್ ಶಬ್ದಗಳನ್ನು ಎಲ್ಲ ವರ್ಗದ ಜನರೂ ಮಾತನಾಡಲು ಕಲಿತಿರುವುದೇ ಇದಕ್ಕೆ ಉದಾಹರಣೆ. * ಇಂಗ್ಲಿಷ್ ಕಾಮೆಂಟ್ರಿ ಕೇಳಿ ರೂಢಿ ಮಾಡಿಕೊಂಡವರು ಪ್ರಾದೇಶಿಕ ಭಾಷೆಯನ್ನು ಒಪ್ಪಿಕೊಳ್ಳುತ್ತಾರೆಯೇ? ಇದು ಕಷ್ಟ ಆದರೆ ಅಸಾಧ್ಯವಲ್ಲ. ನಾನು ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗಿನ ಸಮಯ. ಆಕಾಶವಾಣಿಯಲ್ಲಿ ವೀಕ್ಷಕ ವಿವರಣೆಕಾರರನ್ನು ನೇಮಕ ಮಾಡುವ ಪ್ರಕ್ರಿಯೆ ನಡೆದಿತ್ತು. ಶಾಲೆ,ಕಾಲೇಜುಗಳಲ್ಲಿ ಕ್ರಿಕೆಟ್ ಆಡಿದ್ದ ಅನುಭವ ಇದ್ದ ನಾನೂ ಸಂದರ್ಶನಕ್ಕೆ ಹೋದೆ. ನನ್ನ ಭಾಷೆ, ಶೈಲಿ ನೋಡಿ ಅಲ್ಲಿದ್ದವರು ನಕ್ಕು ಅವಮಾನ ಮಾಡಿದರು. ಆದರೆ, ಉಳಿದ ಅಭ್ಯರ್ಥಿಗಳು ನನಗಿಂತಲೂ ಕಳಪೆಯಾಗಿದ್ದರು. ಆದ್ದರಿಂದ ನನಗೆ ಅವಕಾಶ ಸಿಕ್ಕಿತು. 1968ರಲ್ಲಿ ಇಂದೋರ್‌ನಲ್ಲಿ ನಡೆದ ರಣಜಿ ಪಂದ್ಯಕ್ಕೆ ವೀಕ್ಷಕ ವಿವರಣೆ ನೀಡಿದೆ. ಜನರು ಅಪಹಾಸ್ಯ ಮಾಡಿದರು. ಒಂದು ಪತ್ರಿಕೆಯವರಂತೂ ಟೀಕೆಗಳ ಲೇಖನವನ್ನೇ ಪ್ರಕಟಿಸಿದರು. ಆದರೆ, ಅದನ್ನೇ ಸವಾಲಾಗಿ ಸ್ವೀಕರಿಸಿದೆ. ಹಿಂದಿಯಲ್ಲಿ ಕ್ರಿಕೆಟ್‌ ಶಬ್ದಾವಳಿ ಸಿದ್ಧ ಮಾಡಿಕೊಂಡೆ. ಜೊತೆಗೆ ಎಂಜಿನಿಯರಿಂಗ್‌ನಲ್ಲಿ ಓದಿದ ಏರೋ ಡೈನಮಿಕ್ಸ್ ಮತ್ತು ಬೌಲಿಂಗ್ ಶೈಲಿ ಒಂದೇ ಆಗಿತ್ತು. ಆದ್ದರಿಂದ ಅರಿವು ಹೆಚ್ಚಾಯಿತು. ಆತ್ಮವಿಶ್ವಾಸದಿಂದ ಮಾತನಾಡತೊಡಗಿದೆ. ಒಂದು ಪಂದ್ಯದಲ್ಲಿ ಒಂದು ಒಳ್ಳೆಯ ಮಾತು ಹೇಳಿದಾಗ ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮೆಚ್ಚುಗೆಯ ಪತ್ರಗಳು ಬರುತ್ತಿದ್ದವು. ಒಂದೊಮ್ಮೆ ನಕ್ಕವರು ನನ್ನನ್ನು ಗೌರವಿಸತೊಡಗಿದರು. ಇದು ಎಲ್ಲ ಭಾಷೆಗೂ ಅನ್ವಯಿಸುತ್ತದೆ. ಆರಂಭದಲ್ಲಿ ಕಷ್ಟ ಸಹಜ. * ಮೊದಲ ನಾಯಕ ಕರ್ನಲ್ ಸಿ.ಕೆ. ನಾಯ್ಡು ಅವರಿಂದ ಈಗಿನ ನಾಯಕ ವಿರಾಟ್ ಕೊಹ್ಲಿವರೆಗಿನ ಕ್ರಿಕೆಟ್‌ ಬೆಳವಣಿಗೆಯನ್ನು ಹೇಗೆ ಗುರುತಿಸುತ್ತೀರಿ? ನಾಯ್ಡು ಮತ್ತು ನಂತರದ ಹಲವು ನಾಯಕರ ಕಾಲದಲ್ಲಿ ಕ್ರಿಕೆಟ್ ಆಡುವವರ ಸಂಖ್ಯೆ ಕಡಿಮೆಯಿತ್ತು. ದುಡ್ಡು, ಸೌಲಭ್ಯಗಳೂ ಇರಲಿಲ್ಲ. ಅಪಾರ ಆಸಕ್ತಿ ಮತ್ತು ಪ್ರತಿಭೆ ಇದ್ದವರು ಆಡುತ್ತಿದ್ದರು. ಈಗ ಆಸಕ್ತಿ ಮುಖ್ಯ. ಅಲ್ಪಸ್ವಲ್ಪ ಕೌಶಲ್ಯ ಇದ್ದವರನ್ನೂ ತಿದ್ದಿ, ತೀಡಿ ಆಟಗಾರರನ್ನಾಗಿ ರೂಪಿಸುವ ತರಬೇತಿ, ತಂತ್ರಜ್ಞಾನದ ಸೌಲಭ್ಯಗಳು ಇವೆ. ಹಣಕ್ಕೂ ಕೊರತೆ ಇಲ್ಲ. * ಸಿ.ಕೆ.ನಾಯ್ಡು ಅವರೊಂದಿಗಿನ ನಿಮ್ಮ ಒಡನಾಟದ ಬಗ್ಗೆ ಹೇಳಿ ? ಅವರು ಮ್ಯಾಟಿಂಗ್ ವಿಕೆಟ್‌ನಲ್ಲಿ ಪುಟಿದೆದ್ದು ಬರುತ್ತಿದ್ದ ಎಸೆತಗಳನ್ನು ಹುಕ್ ಮತ್ತು ಪುಲ್ ಮೂಲಕ ಚೆಂಡನ್ನು ಮೈದಾನದಾಚೆ ಹೊಡೆಯುತ್ತಿದ್ದರು. ಹೆಚ್ಚು ಬಲಪ್ರಯೋಗಿಸದೇ ಕೇವಲ ಕೌಶಲ್ಯದ ಪ್ರದರ್ಶನ ಅದಾಗಿರುತ್ತಿತ್ತು. ಈಗಿನ ಕೊಹ್ಲಿ, ರಹಾನೆ ಕೂಡ ಪುಲ್ ಶಾಟ್‌ ಆಡಲು ಪರದಾಡುತ್ತಾರೆ. ನಾನು ಚಿಕ್ಕವನಿದ್ದಾಗ ಅವರ ಅಟವನ್ನು ನೋಡಿದ್ದೆ. ಅವರು ನಿಧನರಾಗುವ ಕೆಲವೇ ವರ್ಷಗಳ ಮುನ್ನ ಆಂಗ್ಲ ನಿಯಕಾಲಿಕೆಗಾಗಿ ಸಂದರ್ಶನ ಮಾಡಿದ್ದೆ. ಅವರು ಅದ್ಭುತ ವ್ಯಕ್ತಿ. * ಟೆಸ್ಟ್ ಕ್ರಿಕೆಟ್ ಭವಿಷ್ಯದ ಬಗ್ಗೆ? ಫಲಿತಾಂಶ ನೀಡುವ ಪಿಚ್‌ಗಳು ಸಿದ್ಧವಾಗಬೇಕು. ಅದಕ್ಕಾಗಿ ಬರೀ ಸ್ಪಿನ್ ಅಥವಾ ಬ್ಯಾಟಿಂಗ್ ವಿಕೆಟ್ ಸಿದ್ಧಪಡಿಸಿ ಏಕಪಕ್ಷೀಯ ಪಂದ್ಯಗಳಿಗೆ ಅವಕಾಶ ನೀಡಬಾರದು. ಸ್ಪರ್ಧಾತ್ಮಕ ಪಿಚ್ ಸಿದ್ಧ ಮಾಡಿದರೆ ಆಟದ ಸೊಬಗು ಮತ್ತು ಸ್ವಾರಸ್ಯ ಉಳಿಯುತ್ತದೆ. * ಇಂದೋರ್ ಟೆಸ್ಟ್ ಬಗ್ಗೆ ಮೊದಲ ಬಾರಿ ನಡೆದಿದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸೇರಿದ್ದರು. ಬಿ ದರ್ಜೆ ನಗರಗಳಲ್ಲಿ ಟೆಸ್ಟ್ ನಡೆಸಲು ಇದು ಆಶಾದಾಯಕ ಬೆಳವಣಿಗೆಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.