ನಿರಂತರ-ಸಮಗ್ರ ಮೌಲ್ಯಮಾಪನ ಕಲಿಕೆಯನ್ನಾಧರಿಸಿದ ಅಂಶಗಳು ಶಿಕ್ಷಕ ಕೇಂದ್ರದಿಂದ ಶಿಶು ಕೇಂದ್ರಿತದ ಕಡೆಗೆ ಸಾಗುತ್ತಿದ್ದರೂ, ಪ್ರಾಥಮಿಕ ಶಿಕ್ಷಣದಲ್ಲಿ ಮೌಲ್ಯಮಾಪನಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಬಹು ಚರ್ಚೆಗೆ ಒಳಗಾಗುತ್ತಲೇ ಇವೆ. ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಪ್ರಗತಿಯನ್ನು ವಿದ್ಯಾರ್ಥಿ ತರಗತಿಗೆ ದಾಖಲಾದ ದಿನದಿಂದಲೇ ಹಂತಹಂತವಾಗಿ ಗುರುತು ಮಾಡುವುದು ಹೇಗೆ? ನಿರಂತರ ವ್ಯಾಪಕ ಮೌಲ್ಯಮಾಪನ (ಸಿಸಿಇ)ದ ಸವಾಲುಗಳು ಏನು? ಪರೀಕ್ಷೆಗಾಗಿ ವಿದ್ಯಾರ್ಥಿಯನ್ನು ಸಿದ್ಧಗೊಳಿಸಬೇಕೊ ಅಥವಾ ಬರುವ ನಾಳೆಗಳಲ್ಲಿ ಆತ್ಮವಿಶ್ವಾಸದಿಂದ ಸ್ವತಂತ್ರವಾಗಿ ಬದುಕಲು ಸಿದ್ಧಗೊಳಿಸಬೇಕೊ ಎಂಬ ಪ್ರಶ್ನೆ ಉದ್ಭವಿಸಿದಾಗ ಎರಡನೆಯದು ಆಯ್ಕೆ. ವಾಸ್ತವದಲ್ಲಿ ಮೇಲಿನದಕ್ಕೆ ಪ್ರಾಶಸ್ತ್ಯ. ಆಯ್ಕೆಯೇ ಬೇರೆ. ವಾಸ್ತವವೇ ಬೇರೆ. ಆಯ್ಕೆಯು ವಾಸ್ತವದಲ್ಲಿ ಮೂರ್ತೀಕರಿಸಲ್ಪಡಬೇಕು ಎಂಬ ಕಾಣ್ಕೆ ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟಿನದು. ಈ ನಿಟ್ಟಿನಲ್ಲಿ 1986ರ ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸ್ಸು ಮಾಡಿದ್ದ ನಿರಂತರ ವ್ಯಾಪಕ ಮೌಲ್ಯಮಾಪನ (ಕಂಟಿನ್ಯುಯಸ್ ಕಾಂಪ್ರೆಹೆನ್ಸಿವ್ ಇವ್ಯಾಲ್ಯುಯೇಷನ್ - ಸಿಸಿಇ)ದ ಚರ್ಚೆ ಪ್ರಸ್ತುತ. ಕಲಿಕೆಯನ್ನಾಧರಿಸಿದ ಅಂಶಗಳು ಶಿಕ್ಷಕ ಕೇಂದ್ರದಿಂದ ಶಿಶು ಕೇಂದ್ರಿತದ ಕಡೆಗೆ ಸಾಗುತ್ತಿದ್ದರೂ, ಪ್ರಾಥಮಿಕ ಶಿಕ್ಷಣದಲ್ಲಿ ಮೌಲ್ಯಮಾಪನಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಬಹು ಚರ್ಚೆಗೆ ಒಳಗಾಗುತ್ತಲೇ ಇವೆ. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವನ್ನು ಸಾಮಾನ್ಯವಾಗಿವ್ಯಾಖ್ಯಾನಿಸುವುದಾದರೆ, ನಿತ್ಯ ಎಲ್ಲವನ್ನು ಮತ್ತು ಎಲ್ಲಾ ಕ್ಷೇತ್ರವನ್ನು ಒರೆಗೆ ಹಚ್ಚುವುದು ಎಂದರ್ಥ. ತರಗತಿ ಸನ್ನಿವೇಶದ ಆಚೆಗೂ ವಿಸ್ತರಿಸಿಕೊಡುವ, ಇತರೆ ಕಲಿಕೆಯ ಸನ್ನಿವೇಶದ ಅವಕಾಶವನ್ನು ಇದು ಒಳಗೊಳ್ಳುತ್ತದೆ. ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಪ್ರಗತಿಯನ್ನು ವಿದ್ಯಾರ್ಥಿ ದಾಖಲಾದ ದಿನದಿಂದಲೇ ಹಂತಹಂತವಾಗಿ ಗುರುತು ಮಾಡುವುದು. ಕಲಿಕೆಯ ಆಸಕ್ತಿ, ಕಲಿಕೆಯ ಪ್ರವೃತ್ತಿ, ಕೌಶಲ, ಕಲೆ, ಅಭಿವ್ಯಕ್ತಿ, ಭಾವನೆಗಳು ನಾಯಕತ್ವ ಗುಣ, ಸಹಕಾರ, ಹೊಂದಾಣಿಕೆ, ಮನೋಧೋರಣೆ ಇತ್ಯಾದಿಗಳಲ್ಲಿ ವಿದ್ಯಾರ್ಥಿಯ ಅಪೇಕ್ಷಿತ ಸಾಧನೆಯ ಮಟ್ಟವನ್ನು ನಿರ್ಧರಿಸುವುದು. ಶಾಲಾ ಸನ್ನಿವೇಶದಲ್ಲಿ ವಿದ್ಯಾರ್ಥಿಯ ಪಾತ್ರ ನಿರ್ವಹಣೆ, ಪಾಲ್ಗೊಳ್ಳುವಿಕೆ ಮತ್ತು ಪ್ರಗತಿಯನ್ನು ವಿವಿಧ ತಂತ್ರಗಳ ಮೂಲಕ ಸಮಗ್ರವಾಗಿ ದಾಖಲಿಸಿಕೊಂಡು, ವಿಶ್ಲೇಷಿಸಿ, ಪಡೆದ ಒಳನೋಟಗಳಿಂದ ಅಭಿವೃದ್ಧಿಯನ್ನು ನಿರ್ಧರಿಸುವ ಪ್ರಕ್ರಿಯೆಯು ಹೌದು ಇದು. ಹೀಗೆ ಹೇಳುವಾಗ ತರಗತಿಗಳಲ್ಲಿ ಇದೆಲ್ಲಾ ಆಗುತ್ತಿಲ್ಲವೇ? ಎಂಬ ಆಕ್ಷೇಪಸಹಜ. ಇದರ ಸಮರ್ಥ ಹಾಗೂ ಪರಿಣಾಮಕಾರಿ ಅನುಷ್ಠಾನ ಆಕ್ಷೇಪಣೆಗೂ ಮೀರಿದ್ದು ಮತ್ತು ತೀರಾ ಗಂಭೀರ. ನಿರಂತರ, ವ್ಯಾಪಕ ಮೌಲ್ಯಮಾಪನ ಏಕೆ? ಕಲಿಕೆಯ ಪ್ರಕ್ರಿಯೆಯಲ್ಲಿ ಪ್ರತಿ ವಿದ್ಯಾರ್ಥಿಯೂ ವಿಶಿಷ್ಟ . ಕಲಿಕೆಯ ಆಸಕ್ತಿಯ ವಿಷಯಗಳಲ್ಲಿ ಮತ್ತು ಕಲಿಕೆಯ ಪ್ರವೃತ್ತಿಗಳಲ್ಲಿ ಭಿನ್ನತೆಯನ್ನು ಕಾಣುತ್ತೇವೆ. ಕಲಿಕೆ ವ್ಯಕ್ತಿಗತವಾಗಿ ವಿದ್ಯಾರ್ಥಿಯು ಅಭಿವೃದ್ಧಿ ಹೊಂದಲು ಮತ್ತು ಸ್ವತಂತ್ರವಾಗಿ ಸದೃಢಗೊಳ್ಳಲು ಪ್ರೇರಕವಾದದ್ದು. ಕಲಿಕೆ ಪಠ್ಯವನ್ನು ದಾಟಿ ಸಹಪಠ್ಯದಲ್ಲಿನ ಬೆಳವಣಿಗೆಯನ್ನು ಪ್ರಗತಿಯಲ್ಲಿ ಸಂಯೋಜಿತವಾಗಿ ನೋಡುವ ಮೂಲಕ ಸಮಗ್ರತೆಯನ್ನು ಪ್ರದರ್ಶಿಸುತ್ತದೆ. ಕಲಿಕೆ ನಿರಂತರ ಹಾಗೂ ಸಾಮರ್ಥ್ಯಾಧಾರಿತವಾದದ್ದು - ವರ್ತನೆಯಲ್ಲಿ ಬದಲಾವಣೆ ಬಯಸುವಂತದ್ದು. ಪ್ರಾಮುಖ್ಯ: ಕಡ್ಡಾಯ ಮೂಲಭೂತ ಶಿಕ್ಷಣ ಹಕ್ಕು ಕಾಯಿದೆ 2009ರ ಸೆಕ್ಷನ್ 29 (ಎಚ್) ರಂತೆ ಜ್ಞಾನದ ಗ್ರಹಿಕೆ ಮತ್ತು ಅದನ್ನು ಅನ್ವಯಿಸುವ ಸಾಮರ್ಥ್ಯದ ಬಗ್ಗೆ ಮಕ್ಕಳ ಸಮಗ್ರ ಹಾಗೂ ನಿರಂತರ ಮೌಲ್ಯ ನಿರ್ಧರಣೆಯಾಗಬೇಕು. ಪ್ರಾಥಮಿಕ ಶಿಕ್ಷಣ ಪೂರ್ಣಗೊಳ್ಳುವವರೆಗೆ ಯಾವ ಮಗುವನ್ನೂ ಮಂಡಳಿಗಳ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕೆಂದು ಒತ್ತಾಯ ಪಡಿಸತಕ್ಕದಲ್ಲ. ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಸಿದ ಪ್ರತಿಯೊಂದು ಮಗುವಿಗೆ ನಿಯಮಿಸಬಹುದಾದಂತಹ ನಮೂನೆಯಲ್ಲಿ ಮತ್ತು ವಿಧಾನದಲ್ಲಿ ಪ್ರಮಾಣ ಪತ್ರವನ್ನು ನೀಡತಕ್ಕದ್ದು ಎಂದು ಸ್ಪಷ್ಟನೆಯನ್ನು ನೀಡುವ ಮುಖೇನ ಪರೀಕ್ಷೆಯ ವಿಶಾಲತೆಯನ್ನು ಅರ್ಥೈಸುತ್ತದೆ. ಇನ್ನು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮಗುವಿನ ಕಲಿಕೆಯ ಗುಣಮಟ್ಟ ಮತ್ತು ವೈಶಾಲ್ಯಗಳನ್ನು ಕುರಿತ ಯಾವುದೇ ಪ್ರಗತಿ ವರದಿಯು ಸಾಕಷ್ಟು ವ್ಯಾಪಕವಾಗಿರಬೇಕು; ಅದು ಮಗುವಿನ ಸಾಧನೆಯ, ತೊಡಗಿಸಿಕೊಳ್ಳುವಿಕೆಯ ಎಲ್ಲಾ ಆಯಾಮಗಳ ಕುರಿತಂತೆಯೂ ಹಿಮ್ಮಾಹಿತಿ ನೀಡಲು ಶಕ್ತವಾಗಿರಬೇಕು ಎಂದು ಹೇಳುತ್ತದೆ. ಘನ ವ್ಯಾಖ್ಯಾನಗಳು ಮುಂದಿನ ದಿನಗಳಲ್ಲಿ ಪ್ರಗತಿಯ ಸ್ವರೂಪ ಹೇಗಿರಬೇಕು ಏನನ್ನು ಅಳೆದು ಬೆಳೆಸಬೇಕು ಎನ್ನುವುದನ್ನು ಸ್ಪಷ್ಟಪಡಿಸುತ್ತವೆ. ಸದ್ಯದ ಸ್ಥಿತಿಯಲ್ಲಿ ಮೌಲ್ಯಮಾಪನ ಎಂದಾಕ್ಷಣ ಪರೀಕ್ಷೆ - ಪ್ರಶ್ನೆ ಪತ್ರಿಕೆ ಎಂಬ ಭಾವನೆ. ಲಿಖಿತ ಮತ್ತು ಮೌಖಿಕ ಪ್ರಶ್ನಾವಳಿಗಳೇ ಸಾಧನ. ಪಠ್ಯ ವಿಷಯಗಳಿಗೆ ಜ್ಞಾನದ ಮೇಲ್ಮೈಯನ್ನು ಮಾತ್ರ ಪರೀಕ್ಷಿಸಿ ನೋಡುವ ಹಂತಕ್ಕೆ ಇದರ ಪ್ರಕ್ರಿಯೆ ಬಂದು ನಿಲ್ಲುತ್ತದೆ. ಅದರ ಆಳಗಳಾದ ಕೌಶಲ, ಅನ್ವಯ, ವಿಮರ್ಶಾತ್ಮಕ ಚಿಂತನೆ, ಸ್ವತಂತ್ರ ಅಭಿವ್ಯಕ್ತಿಗಳಿಗೆ ತರಗತಿಗಳಲ್ಲಿ ಮತ್ತು ವಿವಿಧ ಸನ್ನಿವೇಶಗಳಲ್ಲಿ ಪ್ರತಿಮಕ್ಕಳಿಗೂ ನಿತ್ಯ ಕಲ್ಪಿಸಿ ಡುವ ಪ್ರಾಯೋಗಿಕ ಅವಕಾಶ ಮತ್ತು ಅನುಭವ ತೀರಾ ವಿರಳ. ಇಂತಹ ಅನುಭವಗಳನ್ನು ಕಿರುಪರೀಕ್ಷೆಗಳು ಒಂದೇ ಸಾರಿ ನುಂಗಿಬಿಡುತ್ತವೆ. ಸಹಪಠ್ಯಾಂಶಗಳಲ್ಲಿನ ಅಭಿವೃದ್ಧಿಯನ್ನು ಮೂರ್ತರೂಪದಲ್ಲಿ ದಾಖಲಿಸಿ ಪ್ರತಿಯೊಬ್ಬ ವಿದ್ಯಾರ್ಥಿ ಹೀಗೆ ಎಂದು ಹೇಳುವಲ್ಲಿ ಸಾಕಷ್ಟು ಕೆಲಸ ಆಗಬೇಕು. ವಿದ್ಯಾರ್ಥಿಯ ಪ್ರಗತಿಯನ್ನು ಅವಲೋಕನಕ್ಕೊಳಪಡಿಸುವ `ಪ್ರೊಫೈಲ್~ ನಿರ್ವಹಣೆ ತರಗತಿಯ ಭಾಗವಾಗಿ ಪರಿಗಣಿಸಲ್ಪಟ್ಟಿಲ್ಲ. ಪಠ್ಯದ ಸಾಧನೆಯು ಭವಿಷ್ಯದ ನಿರ್ಧಾರಕವೇ? ವಿವಿಧ ಕಲೆ ಮತ್ತು ಕೌಶಲಗಳಲ್ಲಿ ಅಸಾಮಾನ್ಯ ಪ್ರತಿಭೆಯನ್ನು ತೋರಿಸುತ್ತಿರುವ ಮಕ್ಕಳಿಗೆ ಇಂತಹ ವಿಷಯದಲ್ಲಿ ಫೇಲ್ ಅಥವಾ ಕೆಳ ಶ್ರೇಣಿಯಿಂದ ಸಾಧನೆಯನ್ನು ದಾಖಲಿಸಿ ಹೇಳುವುದು ಎಷ್ಟು ಸರಿ? ಮಾರ್ಕ್ ಇರುವ ವಿದ್ಯಾರ್ಥಿಯನ್ನಷ್ಟೇ ವ್ಯಕ್ತಿಯಾಗಿ ರೂಪಿಸಬೇಕೆ? ವೀಕ್ಷಣೆ, ಸಂದರ್ಶನ, ತಪಶೀಲು ಪಟ್ಟಿ, ದರ್ಜಾಮಾಪನದಂತಹ ಸಾಧನ ತಂತ್ರಗಳ ಅಳವಡಿಕೆ ಅಭಿವೃದ್ಧಿಯನ್ನು ಸೂಚಿಸಲು ಬಳಕೆಯಾಗುವುದು ಯಾವಾಗ? ಇವು ಕಾಡುವ ಪ್ರಶ್ನೆಗಳು. ದಶಕಗಳಿಂದೀಚೆಗೆ ಬೋಧನೆ - ಕಲಿಕೆಯ ವಿಧಾನಗಳಲ್ಲಿ ವೈವಿಧ್ಯತೆಯನ್ನು ಕಂಡಿದ್ದೇವೆ. ಚಟುವಟಿಕೆಗಳು ಕಲಿಸುವ ಪದ್ಧತಿಯ ಸತ್ವವಾಗಿವೆ. ಆದರೆ ಇಂತಹ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿ ಪಡೆದುಕೊಳ್ಳುವ ಅನುಭವಗಳನ್ನು ಭಿನ್ನವಾಗಿ ಮೌಲ್ಯಮಾಪನಕ್ಕೊಳಪಡಿಸುವ ವಿಧಾನಗಳ ಅಳವಡಿಕೆಯಲ್ಲಿ ಪ್ರಯತ್ನಗಳು ದೂರವೇ ಉಳಿದಿದ್ದು, ಈ ಜಿಜ್ಞಾಸೆಯಲ್ಲಿಯೇ ಸಿಸಿಇ ನ ಅನುಷ್ಠಾನದ ಪ್ರಶ್ನೆ ಎದುರಾಗುತ್ತದೆ. ಎದುರಾಗುವ ಸವಾಲುಗಳು ಈಗಿರುವ ಪರೀಕ್ಷಾ ಪದ್ಧತಿಯಲ್ಲಿನ ಉತ್ತೀರ್ಣತೆಯ ಸ್ವರೂಪವನ್ನು ಹೇಗೆ ಭಿನ್ನವಾಗಿ ನೋಡುವುದು?ಸಂಕಲನಾತ್ಮಕ ಮೌಲ್ಯಮಾಪನದಲ್ಲಿ ಆಗಬೇಕಾದ ಬದಲಾವಣೆ. ಏಕಕಾಲಕ್ಕೆ ರಾಜ್ಯಾದ್ಯಂತ ಅಳವಡಿಸಲು ಬೇಕಾದ ಸಾಧನ ತಂತ್ರಗಳ ತಯಾರಿಕೆ ಹೇಗೆ? ಕಲಿಕೆಯ ಸನ್ನಿವೇಶಗಳಲ್ಲಿ ಚರ್ಚೆಯ ಭಾಗವಾಗುವ ಸಹಪಠ್ಯಗಳ ಮೌಲ್ಯ ನಿರ್ಧರಣೆಯ ಆಯಾಮಗಳು ಮತ್ತು ಸಾಧನ ಸಲಕರಣೆಗಳ ಸ್ವರೂಪ, ವಿನ್ಯಾಸ ಹೇಗಿರಬೇಕು? ನಿರಂತರ ಮೌಲ್ಯಮಾಪನ ಅನುಷ್ಠಾನದ ಭಾಗವಾಗಿರುವ ಶಿಕ್ಷಕರನ್ನು ಸಜ್ಜುಗೊಳಿಸುವಲ್ಲಿನ ಸಿದ್ಧತೆ ವಿವಿಧ ಭಾಗೀದಾರರಿಗೆ ಅರ್ಥೈಸುವ ಕ್ರಮ! ದಾಖಲೆಗಳ ರೂಪುರೇಷೆ ಮತ್ತು ನಿರ್ವಹಣೆಯಲ್ಲಿನ ಕ್ರಮಗಳು ಶಾಲೆ ನಡೆಯುವ ದಿನಗಳಿಗೂ ಪಠ್ಯಾಂಶಗಳಿಗೂ ಇರುವ ಸಂಬಂಧದ ಲೆಕ್ಕಾಚಾರ! ಪ್ರತಿ ಮಗುವಿಗೂ ಅವಕಾಶ ಕಲ್ಪಿಸಿಕೊಟ್ಟಲ್ಲಿ ಸಿಗುವ ಕಲಿಕೆಯ ಅವಧಿಗಳ ಪರಿಗಣನೆ ಉತ್ತೀರ್ಣತೆಯ ನಿಯಮಾವಳಿಗಳ ನಿರ್ಧರಣೆಯಲ್ಲಿನ ಮಾನದಂಡಗಳು ಮೌಲ್ಯಮಾಪನಕ್ಕೆ ನಿಗದಿಪಡಿಸಬೇಕಾದ ಪ್ರಗತಿಯ/ ಬೆಳವಣಿಗೆಯ/ ಕಲಿಕೆಯ ಸೂಚಿಗಳ ಆಯ್ಕೆ ಪ್ರಕ್ರಿಯೆ ಇತ್ಯಾದಿಗಳನ್ನು ವಿಶ್ಲೇಷಣಾತ್ಮಕವಾಗಿ ನೋಡಬೇಕಾಗುತ್ತದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಈಗಾಗಲೇ ಬಳಕೆಗೆ ತಂದ ಸಿಸಿಇ ವಿದ್ಯಾರ್ಥಿಯ ಸಮಗ್ರ ಬೆಳವಣಿಗೆ ಕುರಿತಂತೆ ಅನುಷ್ಠಾನದಲ್ಲಿ ನ್ಯೂನತೆಗಳೆಲ್ಲವನ್ನು ಮೀರಿ ಬಳಕೆಯಾಗಿದೆ ಎನ್ನುವುದಕ್ಕಿಂತ ಪ್ರಯತ್ನ ಶ್ಲಾಘನೀಯ. ಅನುಷ್ಠಾನಕ್ಕೂ ಮುನ್ನ ಸಾಕಷ್ಟು ಕೆಲಸ ರಾಜ್ಯದಲ್ಲೂ ಆಗಬೇಕಿದೆ. ಪರಿವರ್ತನೆ ಜಗದ ನಿಯಮ. ಏರುಗತಿಗಳಿದ್ದಾಗ್ಯೂ ಏನನ್ನು ನಿಜವಾಗಿ ಸಾಧಿಸಬೇಕು ಎಂಬಲ್ಲಿಗೆ ನಡೆಯಲು ಸಮರ್ಥ ಪೂರ್ವಸಿದ್ಧತೆಗಳಂತೂ ಗಂಭಿರವಾಗಿ ವಿನ್ಯಾಸಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.