ಉನ್ನತ ಶಿಕ್ಷಣ: ವಿದೇಶಕ್ಕೆ ಹೋಗುವ ಮುನ್ನ... ನೀವು ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವಿರಾದರೆ, ಈ ನಿರ್ಣಯದ ಹಿಂದಿರುವ ಪ್ರೇರಣೆ ಮತ್ತು ವೃತ್ತಿಜೀವನದ ಉದ್ದೇಶದ ಅರಿವಿರಬೇಕು. ವಿದೇಶಿ ಶಿಕ್ಷಣದ ವ್ಯಾಮೋಹದ ಕಾಲವೊಂದಿತ್ತು. ಪ್ರಾಯಶಃ ವಸಾಹತುಶಾಹಿ ಆಳ್ವಿಕೆಗೂ, ವಿದೇಶಿ ವ್ಯಾಮೋಹಕ್ಕೂ ಆಳವಾದ, ನೇರವಾದ ಸಂಬಂಧವಿತ್ತೆನಿಸುತ್ತದೆ. ಈ ವ್ಯಾಮೋಹ ಶಿಕ್ಷಣಕ್ಕೆ ಸೀಮಿತವಾಗದೆ, ವಿದೇಶಿ ಸಂಸ್ಕೃತಿಗೂ, ಉತ್ಪನ್ನಗಳಿಗೂ ಅನ್ವಯವಾಗುತ್ತಿತ್ತು. ಆದರೆ, ಪಾಶ್ಚಾತ್ಯ ದೇಶಗಳ ಪ್ರಾಬಲ್ಯ 20ನೇ ಶತಮಾನಕ್ಕೆ ಅಂತ್ಯಗೊಂಡು, ಈಗ ವಿದೇಶಕ್ಕೆ ಹೋಗುವ ಕಾರಣಗಳೇ ಬೇರೆ; ಅದು ಮೋಹದ ಸೆಳೆತವಂತೂ ಅಲ್ಲ. ಜಾಗತೀಕರಣದ ನಂತರ, ಭಾರತದ ಅರ್ಥವ್ಯವಸ್ಥೆ ಜ್ಞಾನದ, ತಿಳಿವಳಿಕೆಯ ತಳಹದಿಯ ಮೇಲೆ ನಿಂತಿದ್ದು, ನಮ್ಮ ಆರ್ಥಿಕ ಸ್ಥಿತಿ ಉತ್ತಮಗೊಂಡಿದೆ. ಇಂದು ಭಾರತದಲ್ಲೇ ಅನೇಕ ವಿಶ್ವಮಾನ್ಯತೆ ಪಡೆದ ಕಾಲೇಜುಗಳು, ವಿಶ್ವವಿದ್ಯಾಲಯಗಳೂ ಇವೆ. ಇದರ ಜೊತೆಗೆ, ಅನೇಕ ವಿದೇಶಿ ವಿಶ್ವವಿದ್ಯಾಲಯಗಳು ಇಲ್ಲೇ ಸ್ಥಾಪಿತವಾಗುತ್ತಿವೆ. ಹಾಗಾಗಿ, ಇಂದು ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಬಗ್ಗೆ ತರ್ಕಾಧಾರಿತ ಯೋಚನೆಯ ನಂತರವೇ ನಿರ್ಧರಿಸುತ್ತಾರೆ. ವಿದೇಶಕ್ಕೆ ಏಕೆ? ನೀವು ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವಿರಾದರೆ, ಈ ನಿರ್ಣಯದ ಹಿಂದಿರುವ ಪ್ರೇರಣೆ ಮತ್ತು ವೃತ್ತಿಜೀವನದ ಉದ್ದೇಶದ ಅರಿವಿರಬೇಕು. ವಿದೇಶಿ ಶಿಕ್ಷಣ, ಖರ್ಚುವೆಚ್ಚಕ್ಕೆ ವರ್ಷಕ್ಕೆ ಸರಾಸರಿ 10-15 ಲಕ್ಷ ರೂಪಾಯಿಗಳಾಗಬಹುದು. ಆದ್ದರಿಂದ, ವಿದೇಶಿ ವ್ಯಾಸಂಗದ ನಂತರದ ವೃತ್ತಿಯಲ್ಲಿನ ಸಾಧನೆ ಇಲ್ಲಿಯೇ ಸಾಧ್ಯವೇ ಎಂದೊಮ್ಮೆ ಯೋಚಿಸಿ. ಸಾಮಾನ್ಯವಾಗಿ, ವಿದೇಶಿ ಶಿಕ್ಷಣದ ಹಿಂದಿರುವ ಬಲವಾದ ಕಾರಣಗಳೆಂದರೆ: ನಿರ್ದಿಷ್ಟವಾದ ಕೋರ್ಸ್ ಅಥವಾ ತಜ್ಞತೆಯ ಅಗತ್ಯಗಳು ಭಾರತದಲ್ಲಿನ ಅತ್ಯುನ್ನತ ವಿಶ್ವವಿದ್ಯಾಲಯಗಳ ಪ್ರವೇಶದ ತೊಡಕುಗಳು ಜಗದ್ವಿಖ್ಯಾತ ವಿಶ್ವವಿದ್ಯಾಲಯಗಳಲ್ಲಿ (ಕೇಂಬ್ರಿಡ್ಜ್, ಹಾರ್ವರ್ಡ್ ಇತ್ಯಾದಿ) ಓದುವ ಬಯಕೆ ವಿದೇಶಿ ವೃತ್ತಿಜೀವನ ವೈಯಕ್ತಿಕ ಕಾರಣಗಳು ನಿಮ್ಮ ಉದ್ದೇಶಗಳೇನೇ ಇರಲಿ, ಯಾವುದೇ ಪ್ರೇರಣೆಗಳಿರಲಿ, ನಿಮ್ಮ ಆಯ್ಕೆಯಲ್ಲಿ ವಿವೇಚನೆ ಇರಬೇಕು. ಇಂದು ಜಾಗತಿಕ ಜಗತ್ತಿನಲ್ಲಿ ತೀವ್ರವಾಗಿ ಬದಲಾವಣೆಗಳಾಗುತ್ತಿದ್ದು ನೀವು ವ್ಯಾಸಂಗ ಮುಗಿಸುವ ಸಮಯಕ್ಕೆ, ಆಗಬಹುದಾದ ಬದಲಾವಣೆಗಳ ಕಲ್ಪನೆ ಮತ್ತು ದೂರದೃಷ್ಟಿ ಇರಬೇಕು. ಏಕೆಂದರೆ, ನಿಮ್ಮ ನಿರ್ಣಯ ಈ ರೀತಿ ತರ್ಕಬದ್ಧವಾಗಿದ್ದಲ್ಲಿ ಮಾತ್ರ, ವೃತ್ತಿ ಜೀವನದ ಯಶಸ್ಸು ಸಾಧ್ಯ. ವಿದೇಶಿ ಪದವಿಯ ಮಹತ್ವ, ಪ್ರಖ್ಯಾತಿ ನೀವು ಯಾವ ದೇಶದಲ್ಲಿ ಓದಿದ್ದೀರಿ ಎನ್ನುವುದಕ್ಕಿಂತ, ಯಾವ ವಿಶ್ವವಿದ್ಯಾಲಯದಲ್ಲಿ ಎನ್ನುವುದೇ ಮುಖ್ಯ. ಮುಂದುವರಿದ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿಯ ಹಿನ್ನಡೆಯಿಂದ, ವಿಶ್ವವಿದ್ಯಾಲಯಗಳಿಗೆ ಆಯಾ ಸರ್ಕಾರಗಳಿಂದ ಸಿಗುತ್ತಿದ್ದ ಅನುದಾನ, ಸಹಾಯಧನಗಳಲ್ಲಿ ಗಣನೀಯ ಪ್ರಮಾಣದ ಕಡಿತಗಳಾಗಿವೆ. ಇದರ ಪರಿಣಾಮವಾಗಿ, ಹೊರದೇಶದ ಹಲವಾರು ವಿಶ್ವವಿದ್ಯಾಲಯಗಳು ತಮ್ಮ ಏಜೆಂಟರುಗಳ ಮೂಲಕ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಾ, ಕಾನೂನುಬಾಹಿರವಾಗಿ ದಾಖಲು ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಜೊತೆಗೆ, ಅನೇಕ ವಿಶ್ವವಿದ್ಯಾಲಯಗಳು ಮುಚ್ಚುವ ಸ್ಥಿತಿಗೂ ಬಂದಿವೆ. ಇಂತಹ ವಿಶ್ವವಿದ್ಯಾಲಯಗಳಲ್ಲಿ ದಾಖಲಿಸಿಕೊಂಡ ಭಾರತದ ಅನೇಕ ವಿದ್ಯಾರ್ಥಿಗಳು, ತೊಂದರೆಗಳಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಆದ್ದರಿಂದ, ನೀವು ವಿದೇಶಿ ಪದವಿಗಾಗಿ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡುವಾಗ, ಜಾಗ್ರತೆಯಿಂದಿರಬೇಕು. ವಿವರಗಳನ್ನು ಪರಿಶೀಲಿಸಿ; ಎಚ್ಚರಿಕೆಯಿಂದ ಆರಿಸಿ ಉನ್ನತ ಶಿಕ್ಷಣವನ್ನು ವಿದೇಶದಲ್ಲಿ ಮಾಡುವುದು ನಿಮ್ಮ ಜೀವನದ ಅತ್ಯಂತ ಪ್ರಮುಖ ನಿರ್ಧಾರ. ಈ ನಿರ್ಧಾರದ ಪೂರ್ವಭಾವಿಯಾಗಿ ನಿಮ್ಮ ಆಸಕ್ತಿ ಮತ್ತು ಅಭಿರುಚಿಯ ಅರಿವು ನಿಮಗಿರಬೇಕು. ಹಾಗೆಯೇ ಉನ್ನತ ಶಿಕ್ಷಣ, ನಿಮ್ಮ ಜ್ಞಾನ ಮತ್ತು ಸಾಮರ್ಥ್ಯವನ್ನು ವೃದ್ಧಿಸಿ, ವ್ಯಕ್ತಿತ್ವವನ್ನು ವಿಕಸಿಸುವ ನಿಟ್ಟಿನಲ್ಲಿರಬೇಕು. ಆದರೆ, ವಿದೇಶಿ ಶಿಕ್ಷಣ ದುಬಾರಿಯಾದ್ದರಿಂದ, ಹಣಕಾಸಿನ ವ್ಯವಸ್ಥೆಯ ಬಗ್ಗೆ ಹಿರಿಯರೊಡನೆ ಸಮಾಲೋಚಿಸಿ. ನೀವು, ಉನ್ನತ ಶಿಕ್ಷಣ ಮಾಡಬಯಸುವ ದೇಶದಲ್ಲಿ ಸರ್ಕಾರದ ಹತೋಟಿ ತಂತ್ರಗಳು, ಗುಣಮಟ್ಟ ಕಾಪಾಡುವ ವ್ಯವಸ್ಥೆ, ಆಧುನಿಕ ತಂತ್ರಜ್ಞಾನ, ಇತ್ಯಾದಿಗಳಿದ್ದು, ಜ್ಞಾನಾರ್ಜನೆಗೆ ಆಂತರಿಕ ಗಲಭೆ, ವರ್ಣದ್ವೇಷಗಳಿಲ್ಲದ ಮುಕ್ತವಾದ, ಶೈಕ್ಷಣಿಕ ವಾತಾವರಣವಿರಬೇಕು. ಉನ್ನತ ಶಿಕ್ಷಣ, ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ಬುನಾದಿಯಾಗಿ, ಯಶಸ್ವಿ ವೃತ್ತಿಜೀವನಕ್ಕೆ ಪೂರಕವಾಗಿರಬೇಕು. ವೃತ್ತಿಜೀವನದ ರೂಪುರೇಷೆಯ ಬಗ್ಗೆ, ಹೆಚ್ಚಿನ ಮಾಹಿತಿ ಮತ್ತು ಮಾರ್ಗದರ್ಶನಕ್ಕಾಗಿ, ಆಗಸ್ಟ್ 15, 2011ರಂದು,ಈ ಪತ್ರಿಕೆಯಲ್ಲಿ ಪ್ರಕಟಿತ `ಯಾವ ಕೋರ್ಸ್, ಯಾವ ಕಾಲೇಜ್?~ ಲೇಖನವನ್ನು ಗಮನಿಸಿ. ವಿದೇಶಿ ಶಿಕ್ಷಣಕ್ಕೆ ಅನೇಕ ಪೂರ್ವಸಿದ್ದತೆಗಳಿರುತ್ತವೆ; ಇವುಗಳನ್ನು ವ್ಯವಸ್ಥಿತವಾಗಿ ಯೋಜಿಸಬೇಕು. ಆಗಲೇ, ನಿಮ್ಮ ಪ್ರವೇಶಕ್ಕೂ, ಪ್ರಯಾಣಕ್ಕೂ ಅಡೆಚಣೆ ಇಲ್ಲದೆ, ಸಕಲವೂ ಸುಸೂತ್ರವಾಗಿ ಆಗಬಹುದು. ಪ್ರವೇಶ ಪರೀಕ್ಷೆಗಳು:ನೀವು ನಿರ್ಧರಿಸಿದ ಕೋರ್ಸ್‌ಗೆ ನಿಗದಿತ ಪ್ರವೇಶ ಪರೀಕ್ಷೆಗಳಿರುತ್ತವೆ. ಉದಾಹರಣೆಗೆ, ಮ್ಯೋನೇಜ್‌ಮೆಂಟ್ ಶಿಕ್ಷಣಕ್ಕೆ ಜಿಮಾಟ್, ಕಾನೂನಿಗೆ ಎಲ್‌ಸಾಟ್, ವೈದ್ಯಕೀಯ ಶಿಕ್ಷಣಕ್ಕೆ ಎಮ್‌ಸಾಟ್, ಎಂಜಿನಿಯರಿಂಗ್‌ಗೆ ಜಿಆರ್‌ಇ, ಅಥವಾ ಸಾಟ್ . ಈ ರೀತಿ ನಿಮ್ಮ ಕೋರ್ಸ್ ಮತ್ತು ವಿಶ್ವವಿದ್ಯಾಲಯಕ್ಕೆ ಅನುಗುಣವಾಗಿ ಯಾವ ದೇಶದಲ್ಲಿ ಯಾವ ಪರೀಕ್ಷೆಯನ್ನು ತೆಗೆದುಕೊಳ್ಳಬೇಕೆಂದು ವಿಚಾರಿಸಿ. ಈ ಪರೀಕ್ಷೆಗಳಲ್ಲಿ ವಿವಿಧ ದೇಶಗಳ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ, ಒಳ್ಳೆಯ ಗ್ರೇಡಿನ ಅವಶ್ಯಕತೆ ಇರುತ್ತದೆ. ಈ ಪರೀಕ್ಷೆಗಳಿಗೆ, ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳ ಮುಖಾಂತರ ತರಬೇತಿಯನ್ನೂ ಪಡೆದುಕೊಳ್ಳಬಹುದು. ಇಂಗ್ಲಿಷ್ ಪರೀಕ್ಷೆ ಉನ್ನತ ಶಿಕ್ಷಣಕ್ಕಾಗಿ ಜನಪ್ರಿಯ ರಾಷ್ಟ್ರಗಳೆಂದರೆ ಯೂರೋಪ್, ಇಂಗ್ಲೆಂಡ್, ಅಮೆರಿಕ, ಕೆನಡಾ, ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್. ಪ್ರಪಂಚದ ಎಲ್ಲಾ ಭಾಗಗಳಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬರುವುದರಿಂದ, ವಿದ್ಯಾರ್ಥಿಗಳ ಇಂಗ್ಲಿಷ್ ಮಟ್ಟದ ಮಾಪನವನ್ನು ಐ.ಇ.ಎಲ್.ಟಿ.ಎಸ್ ಅಥವಾ ಟೊಫೆಲ್ ಪರೀಕ್ಷೆಗಳ ಸಹಾಯದಿಂದ ಮಾಡಲಾಗುತ್ತದೆ. ನೀವು ತೆಗೆದುಕೊಳ್ಳಬೇಕಾದ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಿ. ವಿಶ್ವವಿದ್ಯಾಲಯಗಳ ಪಟ್ಟಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನೀವು ಬಯಸುವ ವಿಶ್ವವಿದ್ಯಾಲಯದಲ್ಲೇ ಪ್ರವೇಶ ಸಿಗುವುದರ ಬಗ್ಗೆ ಮುಂಚಿತವಾಗಿಯೇ ತಿಳಿಯುವುದು ಅಸಾಧ್ಯ. ನೀವು ಹಲವಾರು ವಿಶ್ವವಿದ್ಯಾಲಯಗಳಿಗೆ ಅರ್ಜಿ ಹಾಕಿ, ಪ್ರಯತ್ನಗಳನ್ನು ಮಾಡಬೇಕು. ನಿಮ್ಮ ವಿಷಯಕ್ಕೆ ಸಂಬಂಧಿಸಿದಂತೆ 10-15 ಅತ್ಯುನ್ನತ ವಿಶ್ವವಿದ್ಯಾನಿಲಯಗಳ ಪಟ್ಟಿಯನ್ನು ಮಾಡಿ. ಪ್ರವೇಶದ ಅರ್ಜಿಗಳು ಪ್ರವೇಶ ಪ್ರಕ್ರಿಯೆ ಒಂದೇ ತರವಾಗಿದ್ದರೂ, ಅರ್ಜಿಗಳು ಬೇರೆ ರೀತಿ ಇರಬಹುದು. ನೀವು ಬಯಸುವ ವಿಶ್ವವಿದ್ಯಾಲಯಗಳ ಪಟ್ಟಿಯ ಪ್ರಕಾರ, ಅರ್ಜಿಗಳನ್ನು ಭರ್ತಿ ಮಾಡಿ ಕಳುಹಿಸಿ. ನಿಮ್ಮ ಪರಿಚಯ ನೀಡುವ ಬಯೋಡೇಟ, ಮಾರ್ಕ್ಸ್‌ಕಾರ್ಡ್, ಲೇಖನ/ಪ್ರಬಂಧಗಳು, ಶಿಫಾರಸು ಪತ್ರ, ಹಣಕಾಸಿನ ಸಹಾಯ ಕೋರಿಕೆ, ಇತ್ಯಾದಿಗಳನ್ನು ಅರ್ಜಿಯ ಜೊತೆ ಕಳುಹಿಸಬೇಕಾಗುತ್ತದೆ. ಪ್ರವೇಶದ ಪ್ರಕ್ರಿಯೆ ನಿಮ್ಮ ಪದವಿ ಪೂರ್ವ/ಪದವಿ ಪರೀಕ್ಷೆಯ ಅಂಕಗಳು, ಪ್ರವೇಶ ಮತ್ತು ಇಂಗ್ಲಿಷ್ ಪರೀಕ್ಷೆಗಳ ಗ್ರೇಡ್ ಮತ್ತು ವಿಶ್ವವಿದ್ಯಾಲಯದ ನಿಬಂಧನೆಗಳನ್ನು ಪರಿಗಣಿಸಿ ಪ್ರವೇಶದ ನಿರ್ಣಯವಾಗುತ್ತದೆ. ಕೆಲವು ಪ್ರಖ್ಯಾತ ವಿಶ್ವವಿದ್ಯಾಲಯಗಳು ಅಂತಿಮ ನಿರ್ಣಯದ ಮುನ್ನ ಸಂದರ್ಶನವನ್ನು ಮಾಡುವುದು ಸಾಮಾನ್ಯ. ವಿಶ್ವವಿದ್ಯಾಲಯಗಳ ಅಂಗೀಕಾರ ಅರ್ಹತೆಯಾಧಾರದ ಮೇಲೆ, ನಿಮ್ಮ ಪ್ರವೇಶ ಅಂಗೀಕಾರವಾದಲ್ಲಿ, ವಿಶ್ವವಿದ್ಯಾಲಯಗಳು ಪ್ರವೇಶದ ಒಪ್ಪಿಗೆ ಪತ್ರವನ್ನು ರವಾನಿಸುತ್ತಾರೆ. ಆದರೆ, ಈ ಎಲ್ಲ ಪ್ರಕ್ರಿಯೆಗಳ ನಡುವೆ ನಿಮ್ಮ ವ್ಯಾಸಂಗದ ಮೇಲಿನ ಗಮನ ಕ್ಷೀಣಿಸದಿರಲಿ. ಅಂತಿಮ ವಿಶ್ಲೇಷಣೆ ಸಾಮಾನ್ಯವಾಗಿ 10-15 ವಿಶ್ವವಿದ್ಯಾಲಯಗಳಲ್ಲಿ ಅರ್ಜಿ ಹಾಕಿದರೆ, 3-4ರಲ್ಲಿ ಪ್ರವೇಶ ಸಿಗಬಹುದು. ಆದರೆ, ನೀವು ಬಯಸಿದ ವಿಶ್ವವಿದ್ಯಾಲಯದಲ್ಲಿ ಸಿಗದೆಯೂ ಇರಬಹುದು. ನಿಮ್ಮ ಪ್ರವೇಶದ ಅರ್ಜಿ ಅಂಗೀಕಾರವಾದ ಎಲ್ಲಾ ವಿಶ್ವವಿದ್ಯಾಲಯಗಳ ಬಗ್ಗೆ- ಪ್ರಖ್ಯಾತಿ, ಸ್ಥಳದ ಮಹತ್ವ, ವಿದ್ಯಾರ್ಥಿ-ಅಧ್ಯಾಪಕ ಪ್ರಮಾಣ, ಸಂಪನ್ಮೂಲಗಳು, ಕಲಿಕೆಯ ವಿಧಾನಗಳು -ಮತ್ತೊಮ್ಮೆ ವಿಶ್ಲೇಷಣೆ ಮಾಡಿ. ಹಾಗೂ, ಅಂತರ್ಜಾಲದ ಮುಖಾಂತರ ವಿಶ್ವವಿದ್ಯಾಲಯದಿಂದ ಉತ್ತೀರ್ಣರಾದ ಹಿರಿಯ ಸಹಪಾಠಿಗಳನ್ನು ಸಂಪರ್ಕಿಸಿ. ಈ ಹಂತದಲ್ಲಿ ಸ್ವಲ್ಪ ಮಟ್ಟಿನ ಗೊಂದಲವಾದಲ್ಲಿ,ನಿಮ್ಮ ಕೌನ್ಸೆಲರ್ ಅಥವಾ ಮಾರ್ಗದರ್ಶಕರ ಜೊತೆ ಸಮಾಲೋಚಿಸಿ. ವಿಶ್ವವಿದ್ಯಾಲಯಕ್ಕೆ ತಿಳಿಸಿ ನಿಮ್ಮ ಅಂತಿಮ ನಿರ್ಧಾರವನ್ನು ವಿಶ್ವವಿದ್ಯಾಲಯಕ್ಕೆ ತಿಳಿಸಬೇಕು. ನಿಮಗೆ ಹಲವೆಡೆ ಪ್ರವೇಶ ಸಿಕ್ಕಿದ್ದರೆ, ಆ ವಿಶ್ವವಿದ್ಯಾಲಯಗಳಿಗೆ ನೀವು ಸೇರಿಕೊಳ್ಳಲಾಗದ ವಿಷಯವನ್ನು ತಿಳಿಸುವುದರಿಂದ, ಇತರ ವಿದ್ಯಾರ್ಥಿಗಳಿಗೆ ಪ್ರವೇಶ ಸುಗಮವಾಗುತ್ತದೆ. ವೀಸಾ ದಾಖಲೆ ಪತ್ರ ನಿಮ್ಮ ನಿರ್ಧಾರ ತಿಳಿದ ನಂತರ, ವಿಶ್ವವಿದ್ಯಾಲಯ ನಿಮಗೆ ವೀಸಾ ಪ್ರಕ್ರಿಯೆಗೆ ಬೇಕಾಗುವ ಪ್ರವೇಶ ಪತ್ರವನ್ನು ಉದಾಹರಣೆಗೆ, ಅಮೇರಿಕದಲ್ಲಿ ಐ-20 ರವಾನಿಸುತ್ತಾರೆ. ವೀಸಾ ಪ್ರಕ್ರಿಯೆ ನಿಮ್ಮ ವಿದೇಶಿ ಶಿಕ್ಷಣಕ್ಕೆ ವೀಸಾ ಸಿಕ್ಕೇ ಸಿಗುತ್ತದೆ ಎಂದು ಖಚಿತವಾಗಿ ಹೇಳಲಾಗದು. ಏಕೆಂದರೆ, ವೀಸಾ ಪ್ರಕ್ರಿಯೆಗೆ ಪ್ರವೇಶ ಪತ್ರ ಒಂದು ಮೂಲಭೂತ ದಾಖಲೆ ಮಾತ್ರ. ಮುಂದುವರಿದ ರಾಷ್ಟ್ರಗಳಲ್ಲಿನ ನಿರುದ್ಯೋಗ ಸಮಸ್ಯೆ ಉಲ್ಬಣಿಸಿದ್ದು, ವಿದೇಶಿ ಶಿಕ್ಷಣದ ಮುಖಾಂತರ ವಲಸೆ ಹೋಗುವುದು ಕಷ್ಟವಾಗಿದೆ. ನಿಮ್ಮ ಕೋರ್ಸಿಗೆ ಬೇಕಾಗುವ ಹಣಕಾಸನ್ನು ಒದಗಿಸುವ ಸಾಮರ್ಥ್ಯ ಮತ್ತು ಭಾರತದಲ್ಲಿ ನಿಮಗಿರುವ ನಿಕಟ ಸಂಬಂಧಗಳನ್ನು ಇದರಿಂದ, ನೀವು ವಿದ್ಯಾಭ್ಯಾಸದ ನಂತರ ವಾಪಸ್ ಬರುತ್ತೀರ ಎಂದು ಅಂದಾಜು ಮಾಡುತ್ತಾ ವೀಸಾ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಾರೆ. ಆದ್ದರಿಂದ, ವೀಸಾ ಸಂದರ್ಶನಕ್ಕೆ ನೀವು ಸೂಕ್ತವಾಗಿ ತಯಾರಾಗಬೇಕು. ವಸತಿ ಸೌಕರ್ಯ ವೀಸಾ ಸಂದರ್ಶನದ ನಿರೀಕ್ಷೆಯಲ್ಲಿರುವಾಗ ಇತರ ಪ್ರಕ್ರಿಯೆಗಳ ಬಗ್ಗೆಯೂ ಗಮನ ಹರಿಸಿ. ಮುಖ್ಯವಾಗಿ, ವಿದೇಶದಲ್ಲಿ ಹಾಸ್ಟೆಲ್, ವಸತಿ ಸೌಕರ್ಯದ ಬಗ್ಗೆ ವಿಚಾರಿಸಿ. ಈಗ, ವಿದ್ಯಾರ್ಥಿಗಳು ಒಟ್ಟುಗೂಡಿ ಬಾಡಿಗೆ ಮನೆಗಳಲ್ಲಿರುವುದು ರೂಢಿಯಾಗುತ್ತಿದೆ. ನಿಮ್ಮದೇ ಗುಂಪಿನಲ್ಲಿ ಒಟ್ಟಿಗೆ ಇರುವುದು ಅನೇಕ ದೃಷ್ಟಿಗಳಿಂದ ಅನುಕೂಲಕರ.ನಿಮ್ಮ ಆಸಕ್ತಿ, ನಡವಳಿಕೆಗಳಿಗೆ ಹೊಂದಾಣಿಕೆಯಾಗುವ ಸಹಪಾಠಿಗಳಿದ್ದರೆ ಸುಖಕರ. ಇತರ ವಿಷಯಗಳು ಉನ್ನತ ಶಿಕ್ಷಣದ ತಯಾರಿಯಲ್ಲಿರುವಾಗ, ನೀವು ವಿದೇಶದಲ್ಲಿನ ಸ್ಥಳೀಯ ಸಂಪ್ರದಾಯ ಮತ್ತು ಸಂಸ್ಕೃತಿಯ ಬಗ್ಗೆ ಅರಿಯುವುದು ಅವಶ್ಯಕ. ಹಾಗೆಯೇ, ಮಾಮೂಲಿ ಸಂಭಾಷಣೆಯ ಮಟ್ಟಿಗಾದರೂ ಅಲ್ಲಿನ ಭಾಷೆಯನ್ನು ಕಲಿಯುವುದು ಉತ್ತಮ. ಇದು ಜರ್ಮನಿ, ಫ್ರಾನ್ಸ್ ದೇಶಗಳಲ್ಲಿ ಅವಶ್ಯಕವೂ ಹೌದು. ನೀವು ವಿದೇಶದಲ್ಲಿ ಉನ್ನತ ಶಿಕ್ಷಣ ಮಾಡುವುದೊಂದು ಸಾಧನೆಯೇ; ಅದು ಮುಂದಿನ ಯಶಸ್ವಿ ವೃತ್ತಿಜೀವನಕ್ಕೆ ನಿಮ್ಮನ್ನು ಸಜ್ಜು ಮಾಡುವ ಪ್ರಚೋದನೆಯೂ ಹೌದು. ಆದರೆ, ವಿದೇಶಿ ವ್ಯಾಸಂಗ ಫಲಕಾರಿಯಾಗಬೇಕಾದರೆ, ಏಕಾಗ್ರತೆ ಮತ್ತು ಹೊಸ ವಾತಾವರಣದ ಸವಾಲುಗಳನ್ನು ಎದುರಿಸಲು ದೃಢವಾದ ಮನಸ್ಸಿರಬೇಕು. ಈ ನಿಟ್ಟಿನಲ್ಲಿ ವಿದೇಶಿ ಪದವಿಯೊಂದೇ ನಿಮ್ಮ ಧ್ಯೇಯವಾಗಿರದಿರಲಿ; ಏಕೆಂದರೆ, ಪದವಿಗಳೇ ಯಶಸ್ಸಿನ ಮೂಲ ಕಾರಣವಾಗುವುದಿಲ್ಲ; ವಿದೇಶಿ ಪದವಿ ನಿಮ್ಮ ಜೀವನದ ಗುರಿಯನ್ನು ಸೇರುವುದಕ್ಕೊಂದು ಸಾಧನ. ಉನ್ನತ ಶಿಕ್ಷಣವೆಂಬ ಜ್ಞಾನಾರ್ಜನೆ,ನೀವು ವೃತ್ತಿ ಜೀವನಕ್ಕೆ ಹೂಡಿದ ಬಂಡವಾಳ. ಈ ಬಂಡವಾಳವನ್ನು ಯಾವ ಉದ್ಯೋಗಕ್ಕೆ ಅಥವಾ ಸ್ವಂತ ಉದ್ದಿಮೆಗೆ, ಎಲ್ಲಿ ಮತ್ತು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕೆನ್ನುವುದು, ನಿಮ್ಮ ವೃತ್ತಿಜೀವನದ ರೂಪುರೇಷೆಯ ಪ್ರಮುಖ ಅಂಶವಾಗಿರಲಿ. (ಲೇಖಕರು ಮ್ಯೋನೇಜ್‌ಮೆಂಟ್ ಮತ್ತು ವೃತ್ತಿ ಸಲಹಾಗಾರರು. ಇ ಮೇಲ್: @. ) ವಿದೇಶಿ ಶಿಕ್ಷಣ: ಚೆಕ್‌ಲಿಸ್ಟ್ ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ನಿಮ್ಮಲ್ಲಿರಲಿ. ಹೆಚ್ಚಿನ ಹಣ ಟ್ರಾವೆಲ್ ಚೆಕ್ ರೂಪದಲ್ಲಿರಲಿ. ಅಂತರರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯಿರಿ. ಕಾಯಂ ಲೈಸೆನ್ಸ್ ಸಿಗುವ ತನಕ ಇದರ ಉಪಯೋಗವಾಗಬಹುದು. ಕಡ್ಡಾಯವಾದ ರೋಗ ನಿರೋಧಕ ಚುಚ್ಚುಮದ್ದನ್ನು ತೆಗೆದುಕೊಳ್ಳಿ. ಮಾಮೂಲಿ ಬೇನೆಗಳಿಗೆ ಕಾನೂನುಬದ್ಧ ಔಷಧಿಯನ್ನು ಕೊಂಡೊಯ್ಯಿರಿ. ಅವಶ್ಯವಿರುವಷ್ಟು ದಿವಸಗಳಿಗೆ ಟ್ರಾವೆಲ್ ಮತ್ತು ಮೆಡಿಕಲ್ ಇನ್ಸ್ಯೂರೆನ್ಸ್ ಪಡೆಯಿರಿ. ನಿಮ್ಮ ಗೈರುಹಾಜರಿಯಲ್ಲಿ ಬೇಕಾಗಬಹುದಾದ ಕಾನೂನು ಸಂಬಂಧಿತ ಪ್ರಮಾಣಪತ್ರ ಇತ್ಯಾದಿಗಳನ್ನು ಮಾಡಲು ಮರೆಯದಿರಿ. ಅಂತರರಾಷ್ಟ್ರೀಯ ವಿದ್ಯಾರ್ಥಿ ಕಾರ್ಡ್ ಪಡೆಯುವುದರಿಂದ ಅನೇಕ ಡಿಸ್ಕೌಂಟ್, ಸೌಲಭ್ಯಗಳು ಸಿಗುತ್ತದೆ. ಹಾಸ್ಟೆಲಿಂಗ್ ಇಂಟರ್‌ನ್ಯಾಷನಲ್ ಸದಸ್ಯತ್ವ ಪಡೆಯುವುದರಿಂದ ಪ್ರವಾಸ ಮಾಡುವಾಗ ಹಾಸ್ಟೆಲ್‌ಗಳಲ್ಲಿ ಇರಬಹುದು. ಟ್ರಾವೆಲ್ ಅಡಾಪ್ಟರ್, ಸೂಕ್ತವಾದ ಮೊಬೈಲ್ ಫೋನ್ ಮತ್ತು ನೆನಪಿನ ಕಾಣಿಕೆಗಳನ್ನು ಕೊಂಡೊಯ್ಯುವುದು ಸೂಕ್ತ. ಪಾಸ್‌ಪೋರ್ಟ್, ವೀಸಾ, ಪ್ರವೇಶದ ಪತ್ರ, ಇತರ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಲ್ಯಾಪ್‌ಟಾಪ್/ ಫ್ಲಾಶ್‌ಡ್ರೈವ್ ಮತ್ತು ಇಮೇಲ್‌ನಲ್ಲಿ ರಕ್ಷಿಸಿ. ವಿದೇಶ ತಲುಪಿದ ನಂತರ ಭಾರತದ ರಾಯಭಾರಿ ಕಛೇರಿಯಲ್ಲಿ ಮತ್ತು ಭಾರತೀಯ ವಿದ್ಯಾರ್ಥಿ ಸಂಸ್ಥೆಯಲ್ಲಿ ನೋಂದಾಯಿಸಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.