ಮೊಬೈಲ್ ಮೂಲಕ ಪಾಠ 21ನೇ ಶತಮಾನ ವೈಜ್ಞಾನಿಕ ಯುಗವಾಗಿದೆ. ಇಂದಿನ ಮಕ್ಕಳು ನವೀನ ರೀತಿಯ ಬೋಧನೆಯನ್ನು ಇಷ್ಟಪಡುತ್ತಾರೆ. ಅದರಲ್ಲೂ ಮೊಬೈಲ್ ಬಳಕೆ ಎಲ್ಲರಲ್ಲೂ ಹೆಚ್ಚಾಗುತ್ತಿದೆ. ಧಾರವಾಡ ಜಿಲ್ಲೆಯ ಅಮ್ಮಿನಬಾವಿಯ ಶಿಕ್ಷಕರಾದ ಜಿ.ಎಂ.ನದಾಫ್ ಕಳೆದ ಸಾಲಿನ ವರ್ಲ್ಡ್ ಕಪ್ ಕ್ರಿಕೆಟ್ ಸಂದರ್ಭದಲ್ಲಿ ಟೆಲಿವಿಷನ್‌ನ ಜಾಹೀರಾತಿನಲ್ಲಿ ಮೊಬೈಲ್ ಬಳಸಿ ಚಿತ್ರಗಳನ್ನು ಗೋಡೆಯ ಮೇಲೆ ತೋರಿಸಬಹುದು ಎಂಬುದನ್ನು ಗಮನಿಸಿದರು. ತಾನೇಕೆ ಇದನ್ನು ಪಾಠಕ್ಕೆ ಬಳಕೆ ಮಾಡಬಾರದು ಎಂದು ಯೋಚಿಸಿ ತಾವು ಸೇವೆ ಸಲ್ಲಿಸುತ್ತಿದ್ದ ಕರಡಿಗುದ್ದಿ ಶಾಲೆಯಲ್ಲಿ ಇದರ ಪ್ರಯೋಗ ಮಾಡಿಯೇ ಬಿಡುವ ಎಂದು ನಿರ್ಧರಿಸಿದರು. ಹೊಸ ಸೆಟ್ ಖರೀದಿಸಿ ಅದರಲ್ಲಿ ಇಂಟರ್‌ನೆಟ್ ಪ್ಯಾಕೇಜ್ ಅಳವಡಿಸಿಕೊಂಡು ಪ್ರತಿದಿನ ಬೋಧನೆಗೆ ಅವಶ್ಯಕವಾಗುವ ಅನೇಕ ಸಂಗತಿಗಳನ್ನು ಕಲೆ ಹಾಕತೊಡಗಿದರು. ಇಂಟರ್‌ನೆಟ್‌ನಿಂದ ಪಾಠಕ್ಕೆ ಬೇಕಾಗುವ ಎ್ಲ್ಲಲಾ ಚಿತ್ರಗಳನ್ನು ಕ್ಷಣಾರ್ಧದಲ್ಲಿ ಪಡೆಯುತ್ತಾ. ಮೊಬೈಲ್ ಪ್ರೊಜೆಕ್ಟರ್ ಬಳಸಿ ಗೋಡೆಯ ಮೇಲೆ ಚಿತ್ರ ಪ್ರದರ್ಶನ ಮಾಡತೊಡಗಿದರು. ಮಕ್ಕಳು ದೊಡ್ಡದಾದ ಚಿತ್ರಪಟ ನೋಡಿ ಪಾಠದೆಡೆ ಆಕರ್ಷಿತರಾಗತೊಡಗಿದರು. ಇದಕ್ಕೆ ಅವಶ್ಯಕವಾದ ಪ್ರೊಜೆಕ್ಟರ್ ಅನ್ನೂ ಖರೀದಿಸಿದರು. ಮೊಬೈಲ್ ಸೆಟ್‌ನಲ್ಲಿ ಇಂಟರ್‌ನೆಟ್ ಸಂಪರ್ಕ ಹೊಂದುವ ಸೌಲಭ್ಯವಿರುವ ನೋಕಿಯಾ ಅಥವಾ ಸ್ಯಾಮ್‌ಸಂಗ್ ಸೆಟ್‌ಗಳಲ್ಲಿ ಗೂಗಲ್.ಕಾಮ್ ಮೂಲಕ ಶೋಧನೆ ಮಾಡಿ, ಬೇಕಾದ ಮಾಹಿತಿ ಹಾಗೂ ಚಿತ್ರಪಟವನ್ನು ಉಳಿಸಿಕೊಂಡು ಪಾಠ ಬೋಧನೆಯ ಸಂದರ್ಭದಲ್ಲಿ ಬಳಸಿದರೆ ಮಕ್ಕಳು ಕುತೂಹಲದಿಂದ ವೀಕ್ಷಿಸಿ ಆನಂದಿಸುತ್ತಾರೆ ಎಂಬುದು ಅವರ ಅಭಿಮತ. ಮಾಹಿತಿ ಸಂಗ್ರಹಿಸುವುದು ಹೇಗೆ? ಕೇವಲ ಎರಡು ಜಿಬಿ ಮೆಮರಿ ಕಾರ್ಡ್‌ನಿಂದ ಒಂದು ವರ್ಷಕ್ಕೆ ಬೇಕಾಗುವ ಪಾಠೋಪಕರಣಗಳ ಸಂಗ್ರಹಣ ಮಾಡಿಕೊಳ್ಳಬಹುದು. ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ಚಿತ್ರ ಸಂಗ್ರಹಿಸಿ ಯಾವಾಗಲಾದರೂ ಬಳಕೆ ಮಾಡಬಹುದು. ಸಮಾಜ ಬೋಧನೆಗೆ ಸಂಬಂಧಿಸಿದಂತೆ ನಕ್ಷೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಂತರ್ಜಾಲದಿಂದ ತಾಲೂಕು, ಜಿಲ್ಲಾ, ರಾಜ್ಯ, ದೇಶ, ಖಂಡಗಳ ನಕ್ಷೆಗಳನ್ನು ಡೌನ್‌ಲೋಡ್ ಮಾಡಿ ಅದನ್ನು ಮೆಮೊರಿಕಾರ್ಡ್‌ನಲ್ಲಿ ಉಳಿಸಿಕೊಂಡು ಪಾಠಕ್ಕೆ ತಕ್ಕಂತೆ ಬೋಧನೆ ಮಾಡಲು ಅತ್ಯಂತ ಪರಿಣಾಮಕಾರಿಯಾಗಿದೆ. ಸಮಾಜದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ, ವಿವಿಧ ರಾಜವಂಶಗಳ ಆಗಿನ ರಾಜರುಗಳ ಭಾವಚಿತ್ರ, ಗೆದ್ದ ಪ್ರದೇಶಗಳ ನಕ್ಷೆ, ಅವರ ಲಾಂಛನದ ಭಾವಚಿತ್ರಗಳು, ಆಗಿನ ಕಾಲದಲ್ಲಿ ಬಳಕೆಯಲ್ಲಿದ್ದ ನಾಣ್ಯಗಳು, ಸ್ತ್ರೀಯರ ಸ್ಥಾನಮಾನದ ಚಿತ್ರಗಳು ಹಾಗೂ ವಾಸ್ತುಶಿಲ್ಪದ ಚಿತ್ರಗಳನ್ನು ಸಂಗ್ರಹಿಸಿ ಮಕ್ಕಳಿಗೆ ಪಾಠಬೋಧನೆ ಮಾಡಿದರೆ ತುಂಬಾ ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ. ಕನ್ನಡದಲ್ಲಿ ಕವಿಗಳ ಹಾಗೂ ಸಾಹಿತಿಗಳ ಭಾವಚಿತ್ರ, ಅವರ ಕೃತಿಗಳ ಬಗೆಗೆ ಸಮಗ್ರ ಮಾಹಿತಿ ಸಂಗ್ರಹಿಸಬಹುದು. ಕೆಲವೊಂದು ಕವಿಗಳ ಭಾವಚಿತ್ರ ಲಭ್ಯವಿಲ್ಲದಿದ್ದರೂ ಅಂತರ್ಜಾಲದಿಂದ ಪಡೆಯಲು ಸಾಧ್ಯವಿದೆ. ವಿಜ್ಞಾನದಲ್ಲಿ ವಿಜ್ಞಾನಿಗಳ ಭಾವಚಿತ್ರ, ಅವರ ಸಾಧನೆಯನ್ನು ಸಂಗ್ರಹಿಸುವುದು, ಸಾಕುಪ್ರಾಣಿ, ಕಾಡುಪ್ರಾಣಿಗಳ ಚಿತ್ರಗಳು, ನೀರಿನಲ್ಲಿರುವ ಚಿಕ್ಕಜೀವಿಯಿಂದ ಹಿಡಿದು ತಿಮಿಂಗಲದವರೆಗೆ ಜೀವಿಗಳ ಚಿತ್ರಗಳನ್ನು ಸಂಗ್ರಹಿಸಬಹುದು. ಪ್ರಾಣಿಗಳು ಯಾವ ರೀತಿಯಿಂದ ಬೆಳವಣಿಗೆ ಹೊಂದುತ್ತವೆ ಎಂಬುದರ ಚಲನಶೀಲ ಚಿತ್ರವನ್ನು ಮಕ್ಕಳಿಗೆ ತೋರಿಸಬಹುದು. ಉದಾ: ತಾಯಿಯ ಗರ್ಭದಲ್ಲಿನ ಮಗುವಿನ ಬೆಳವಣಿಗೆಯ ಚಲನಶೀಲ ಚಿತ್ರ; ಮಂಗಳ ಗ್ರಹದಲ್ಲಿ ನಾಸಾದ ರೋವರ್ ಆವಿಷ್ಕಾರದ ಚಲನಶೀಲ ಚಿತ್ರ, ಸೌರಮಂಡಲದಲ್ಲಿಯ ಗ್ರಹಗಳ ಚಿತ್ರ. ಪ್ರೊಜೆಕ್ಟರ್ ಬಳಕೆ: ಅನುಕೂಲಗಳೇನು? ಮಕ್ಕಳು ಪಾಠವನ್ನು ಆಸಕ್ತಿಯಿಂದ ಕಲಿಯುತ್ತಾರೆ. ಮಕ್ಕಳಿಗೆ ಶಾಲೆಯ ಹೊರಗಿನ ಪರಿಸರವನ್ನು ಶಾಲೆಯ ವರ್ಗ ಕೋಣೆಯಲ್ಲಿಯೇ ತೋರಿಸಬಹುದು. ಮಕ್ಕಳ ಕುತೂಹಲವನ್ನು ಕೆರಳಿಸುತ್ತದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುತ್ತದೆ. ಕ್ಲಿಷ್ಟ ವಿಷಯ ಬೋಧನೆಯಲ್ಲಿ ಸಹಾಯಕಾರಿ. ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ಕ್ರಮಾಗತ ಜೋಡಣೆ ಮಾಡಲು ಪ್ರಯತ್ನಿಸುವರು. ಕಲಿಕೆಯ ದೃಢೀಕರಣಕ್ಕೆ ಸಹಾಯಕಾರಿ. ಮಕ್ಕಳು ಕಲಿಕಾ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತದೆ. ತಾರ್ಕಿಕ ಮನೋಭಾವನೆಯನ್ನು ಬೆಳೆಸುತ್ತದೆ. ಮೊಬೈಲ್ ಮೂಲಕ ಪಾಠ ಬೋಧನೆ ಮಕ್ಕಳಲ್ಲಿ ಕ್ರಿಯಾತ್ಮಕತೆಯನ್ನು ಬೆಳೆಸಬೇಕು. ಶಾಲೆಗಳಲ್ಲಿ ಪಾಠೋಪಕರಣಗಳನ್ನು ಕ್ರಮವಾಗಿ ಜೋಡಿಸಲು ಹಲವಾರು ಸಮಸ್ಯೆಗಳಿವೆ. ಆದುದರಿಂದ ಕೇವಲ ಕಡಿಮೆ ವೆಚ್ಚದಲ್ಲಿ ಒಂದು ಸೆಮಿಸ್ಟರ್ ಅವಧಿಗೆ ಆಗುವಷ್ಟು ಚಿತ್ರಪಟ ಹಾಗೂ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಂಡು ಪಾಠಬೋಧನೆ ಮಾಡಲು ಈ ಮೊಬೈಲ್‌ನಿಂದ ಸಾಧ್ಯ. ಸಂಗ್ರಹಿಸಿದ ಮಾಹಿತಿಯನ್ನು ಎಷ್ಟು ಬಾರಿಯಾದರೂ ಬಳಸಬಹುದು. ಇದರಿಂದ ಪಾಠೋಪಕರಣ ಜೋಡಣೆ ಹಾಗೂ ಸಂರಕ್ಷಣೆ ಮಾಡುವುದು ತುಂಬಾ ಸುಲಭ. ಬೋಧನೆಯಲ್ಲಿ ತಂತ್ರಜ್ಞಾನ ಬಳಸುವುದರಿಂದ ಮಕ್ಕಳು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾರೆ ಎಂಬುದು ಸತ್ಯ. ಈಗ ಎಲ್ಲಾ ಮೊಬೈಲ್ ಕಂಪೆನಿಯವರು ಇಂಟರ್ ನೆಟ್ ಪ್ಯಾಕೇಜ್ ಬಳಕೆಯನ್ನು ಅಳವಡಿಸಿದ್ದು ತಾವು ಬೋಧಿಸುವ ಶಾಲೆಯ ಸ್ಥಳದಲ್ಲಿ ಯಾವ ನೆಟ್‌ವರ್ಕ್ ಇದೆಯೋ ಅದಕ್ಕೆ ಸಂಬಂಧಿಸಿದ ಸಿಮ್ ಹಾಗೂ ಇಂಟರ್‌ನೆಟ್ ಸೌಲಭ್ಯವುಳ್ಳ ಸೆಟ್ ಖರೀದಿಸಿ ಅದರಲ್ಲಿ ಇಂಟರ್‌ನೆಟ್ ಪ್ಯಾಕೇಜ್ ಚಂದಾದಾರರಾದರೆ ಮುಗಿಯಿತು. ಅದರ ಜೊತೆಗೆ ಮೊಬೈಲ್ ಬ್ಯಾಟರಿ ಮೇಲೆಯೇ ಕಾರ್ಯವೆಸಗುವ ಪ್ರೊಜೆಕ್ಟರ್ ಬೇಕು. ಇವೆರಡನ್ನು ಈ ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ತೆಗೆದುಕೊಂಡು ಆಧುನಿಕ ತಂತ್ರಜ್ಞಾನ ಬಳಸಿ ಇದೇ ವರ್ಷದ ಜೂನ್ ತಿಂಗಳಿನಿಂದ ನಿರಂತರವಾಗಿ ಪಾಠ ಬೋಧನೆ ಮಾಡುತ್ತಿದ್ದು ಮಕ್ಕಳ ಕಲಿಕೆಯಲ್ಲಿಯೂ ಗಮನಾರ್ಹ ಬದಲಾವಣೆಯನ್ನು ಗಮನಿಸುತ್ತಿದ್ದಾರಂತೆ. ಕರಡಿಗುದ್ದಿ ಶಾಲೆ ಧಾರವಾಡದಿಂದ ಕೇವಲ 14 ಕಿ.ಮೀ ಅಂತರದ್ಲ್ಲಲಿದೆ. ಈಗಾಗಲೇ ಧಾರವಾಡ ಜಿಲ್ಲೆಯ ಜಿಲ್ಲಾ ಉಪನಿರ್ದೇಶಕರು ಇವರ ಶಾಲೆಗೆ ಭೇಟಿ ನೀಡಿ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅನೇಕ ಶಿಕ್ಷಕರು ಇವರ ಈ ವಿಧಾನಗಳನ್ನು ಕುರಿತಂತೆ ಪ್ರಾತ್ಯಕ್ಷಿಕೆ ಏರ್ಪಡಿಸುತ್ತಿದ್ದು ಆ ಮೂಲಕ ಇದನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಗಮನಾರ್ಹ ಸಂಗತಿ. ಇಂತಹ ಪಾಠ ಬೋಧನೆ ತಂತ್ರಜ್ಞಾನ ಬಳಸುವ ಕಲೆಯನ್ನು ನೀವೂ ಅಳವಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಶಿಕ್ಷಕ ಜಿ.ಎಂ.ನದಾಫ್ ರ ಮೊಬೈಲ್ ನಂಬರ್ 9481686307 . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.