ಸರಳ ಕಲಿಕೆಗೆ ಸರಳ ಉಪಕರಣ ವಿಜ್ಞಾನ ವಿಷಯಗಳ ಬೋಧನೆಯನ್ನು ಹೆಚ್ಚು ಆಸಕ್ತಿದಾಯಕವಾಗಿಸಲು ಶಿಕ್ಷಕರೊಬ್ಬರು ಕಡಿಮೆ ಖರ್ಚಿನಲ್ಲಿ ವಿಜ್ಞಾನ ಉಪಕರಣಗಳನ್ನು ಸ್ವತಃ ತಾವೇ ತಯಾರಿಸಿದ ವಿವರ ಇಲ್ಲಿದೆ. ವಿಜ್ಞಾನ ವಿಷಯದ ಪಾಠಗಳನ್ನು ಮಕ್ಕಳಿಗೆ ಬರೀ ಬಾಯಿ ಮಾತಿನ ಮೂಲಕ ಬೋಧಿಸಿದರೆ ಅದು ಅಪೂರ್ಣ ಎನಿಸುತ್ತದೆ. ಆ ವಿಷಯದ ಬಗ್ಗೆ ಮಕ್ಕಳಿಗೆ ಸಂಪೂರ್ಣ ಜ್ಞಾನ ಉಂಟಾಗಲು ಪರಿಕರಗಳ ಪ್ರಯೋಗವಾಗಬೇಕು. ಇದರಿಂದ ಕಠಿಣ ಎನಿಸುವ ವಿಷಯಗಳು ಸಾಧ್ಯವಾದಷ್ಟು ಸರಳವೆನಿಸಿ ಅರ್ಥವಾಗಲು ಅನುಕೂಲವಾಗುತ್ತವೆ.ವಿಜ್ಞಾನ ಪ್ರಯೋಗ ಮಾಡಲು ಯಂತ್ರಗಳೇ ಬೇಕೆಂದೇನೂ ಇಲ್ಲ. ಸರಳ ಪ್ರಯೋಗಗಳ ಮೂಲಕವೂ ವಿಜ್ಞಾನದ ಸತ್ಯ ಘಟನೆಗಳ ಅರಿವು ಮೂಡಿಸಬಹುದು ಎಂಬುದನ್ನು ಶಿಕ್ಷಕರೊಬ್ಬರು ತೋರಿಸಿಕೊಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಮಠಾಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ವಿ.ಶೇಟ್ ಅವರು ಸದಾ ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಂಡವರು. ಮಕ್ಕಳ ಪರಿಣಾಮಕಾರಿ ಕಲಿಕೆಗೆ ಅನ್ವಯವಾಗುವಂತಹ ಅಗ್ಗದ ವಸ್ತುಗಳ ಬಳಕೆಯ ಕಡಿಮೆ ಖರ್ಚಿನ ವಿಜ್ಞಾನ ಉಪಕರಣವನ್ನು ಸ್ವತಃ ತಯಾರಿಸಿದ್ದಾರೆ. `ನೋಡಿ ತಿಳಿ ಮಾಡಿ ಕಲಿ~ ಎಂಬ ಸಿದ್ಧಾಂತಕ್ಕೆ ತಾಜಾ ಉದಾಹರಣೆಯಾಗಬಲ್ಲ ಗಾಳಿಯಿಂದ ವಿದ್ಯುತ್ ಉತ್ಪಾದನೆಯ ಸರಳ ಯಂತ್ರದ ರಚನೆ ಮಕ್ಕಳ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವಂತಿದೆ. ಮರದ ಹಲಗೆ, `ಯು~ ಆಕಾರದ ಸೈಕಲ್ ಪೊರ್ಕ್, ಚಕ್ರ, ಪ್ಲಾಸ್ಟಿಕ್ ತುಂಡು, ಪ್ಲಾಸ್ಟಿಕ್ ಕ್ಯಾನ್, ಹಾಳಾದ ಬಲ್ಬ್, ಟೇಪ್ ರೆಕಾರ್ಡರ್ ಮೋಟಾರ್ ಮತ್ತು ದಾರದ ಬೆಲ್ಟ್‌ಗಳಿಂದ ಈ ಉಪಕರಣವನ್ನು ಸಿದ್ಧಪಡಿಸಿದ್ದಾರೆ. ಗಾಳಿಯಿಂದ ಚಕ್ರ ತಿರುಗಿದಾಗ ವಿದ್ಯುತ್‌ನಿಂದ ಬಲ್ಬ್ ಆನ್ ಆಗುತ್ತದೆ. ಮೊಬೈಲ್ ಚಾರ್ಜ್ ಆಗುತ್ತದೆ. ರೇಡಿಯೋ ಚಾಲೂ ಆಗುತ್ತದೆ. ಕೇವಲ ಡೈನೊಮೋದ ಮೊಳೆಗೆ ಪೆನ್ ರಿಫಿಲ್‌ನ ಹಿಂದಿನ ಭಾಗ ಸಿಕ್ಕಿಸಿ ಕೈ ಬೆರಳಿನಿಂದ ತಿರುಗಿಸಿದರೂ ಕರೆಂಟ್ ಬರುವುದನ್ನು ತೋರಿಸಿಕೊಟ್ಟಿದ್ದಾರೆ. ಈ ಪುಟ್ಟ ಉಪಕರಣವನ್ನು ಪ್ರಯಾಣದ ಸಮಯದಲ್ಲೂ ತೆಗೆದುಕೊಂಡು ಹೋಗಿ ಮೊಬೈಲ್ ಚಾರ್ಜ್ ಮಾಡಬಹುದು. ಶೇಟ್ ಅವರು ತಮ್ಮ ಉಪಕರಣಗಳ ರಚನೆಯಲ್ಲಿ ತಂತ್ರಜ್ಞಾನದ ಪರಿಚಯವಾಗಲಿ, ಪರರ ಮಾಹಿತಿಯಾಗಲಿ ಅನುಕರಿಸುವವರಲ್ಲ. ತಾವೇ ಸ್ವತಃ ಪ್ರಯೋಗಕ್ಕೆ ಇಳಿದು ಯಶ ಕಂಡವರು. ಇವರ ಪ್ರೇರಣೆಯಿಂದ ಇಲ್ಲಿನ ಶಿಕ್ಷಕಿ ವೀಣಾ ಹೆಗಡೆ ದೀಪದ ಶಾಖದಿಂದ ಚಕ್ರ ತಿರುಗುವ ಉಪಕರಣವನ್ನು ತಯಾರಿಸಿದ್ದಾರೆ. ಅನೇಕ ವಿಜ್ಞಾನ ಪ್ರಯೋಗ ತರಬೇತಿಗಳಲ್ಲಿ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿರುವ ಇವರು ಜಿಲ್ಲಾ ಮಟ್ಟದ ಪಾಠೋಪಕರಣಗಳ ಪ್ರದರ್ಶನಗಳಲ್ಲಿ ಪ್ರಥಮ ಮತ್ತು ಬೆಳಗಾವಿಯಲ್ಲಿ ನಡೆದ ರಾಜ್ಯ ಮಟ್ಟದ ಪ್ರದರ್ಶನದಲ್ಲಿ ವಿಜ್ಞಾನ ಅವಾರ್ಡ್ ಪಡೆದುಕೊಂಡಿದ್ದಾರೆ. ಪಾಠೋಪಕರಣಗಳ ಬಳಕೆಯಿಂದ ಮಕ್ಕಳು ಕುತೂಹಲಗೊಳ್ಳುತ್ತಾರೆ. ಆಸಕ್ತಿಯಿಂದ ಆಲಿಸಿ ಅರ್ಥ ಮಾಡಿಕೊಳ್ಳುತ್ತಾರೆ. ಇದರಿಂದ ಕಲಿಕೆ ಹೆಚ್ಚು ಮನದಟ್ಟಾಗುತ್ತದೆ. ನಮ್ಮ ಮತ್ತು ಮಕ್ಕಳ ಬಾಂಧವ್ಯ ಬೆಳೆಯುತ್ತದೆ, ಎಂಬುದು ಶೇಟ್ ಅವರ ಅಭಿಪ್ರಾಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.