ಕೆಎಎಸ್ ತೆರೆದಿದೆಅವಕಾಶ ರಾಜ್ಯ ಸರ್ಕಾರದ ಅತ್ಯುನ್ನತ ಸೇವೆಗಳಲ್ಲಿ ಒಂದಾದ ಕರ್ನಾಟಕ ನಾಗರಿಕ ಸೇವೆ (ಕೆಎಎಸ್) ಹುದ್ದೆಗಳನ್ನು ಅಲಂಕರಿಸಬೇಕೆಂದು ಹಲವು ವರ್ಷಗಳಿಂದ ಕನಸು ಕಾಣುತ್ತಿರುವ ಯುವಕರಿಗೆ ಇದೊಂದು ಸುವರ್ಣಾವಕಾಶ. ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 352 ಸಮೂಹ `ಎ~ ಮತ್ತು `ಬಿ~ ದರ್ಜೆಯ ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಕೆಎಎಸ್ ಅಧಿಕಾರಿಗಳಾಗಬೇಕೆಂದು ಬಯಸುತ್ತಿರುವವರು ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿದರೆ ಯಶಸ್ವಿಯಾಗಬಹುದು. ಹಿಂದೆಲ್ಲ ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದಾಗ ಹುದ್ದೆಗಳ ಸಂಖ್ಯೆ ಕಡಿಮೆ ಇರುತ್ತಿದ್ದವು. ಆದರೆ ಈ ಬಾರಿ ಒಮ್ಮೆಗೆ 352 ಹುದ್ದೆಗಳನ್ನು ಭರ್ತಿ ಮಾಡುತ್ತಿರುವುದರಿಂದ ಅವಕಾಶಗಳು ಹೆಚ್ಚಾಗಿವೆ. ಬರುವ ಫೆಬ್ರುವರಿಯಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇದೇ 11ರಿಂದ ಆರಂಭವಾಗಿದ್ದು, ಡಿಸೆಂಬರ್ 12ರವರೆಗೂ ಅವಕಾಶವಿದೆ. 13ರ ಒಳಗೆ ಸಿಂಡಿಕೇಟ್ ಬ್ಯಾಂಕ್ ಶಾಖೆಗಳಲ್ಲಿ ಶುಲ್ಕ ಪಾವತಿಸಿ 14ರ ಒಳಗೆ ಶುಲ್ಕ ಪಾವತಿಯ ವಿವರಗಳನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಬೇಕು. ಹೊಸ ಮಾದರಿ ಪರೀಕ್ಷೆ ಹೊಸ ಮಾದರಿಯಲ್ಲಿ ಈ ಬಾರಿ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಯುತ್ತಿದ್ದು, ಸಾಮಾನ್ಯ ವರ್ಗದ ಅಭ್ಯರ್ಥಿಗಳು ಐದು ಬಾರಿ, ಹಿಂದುಳಿದ ವರ್ಗದ ಅಭ್ಯರ್ಥಿಗಳು ಏಳು ಬಾರಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಯಾವುದೇ ಮಿತಿ ಇಲ್ಲ. ಎಷ್ಟು ಬಾರಿ ಬೇಕಾದರೂ ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ. ಒಮ್ಮೆ ಪೂರ್ವಭಾವಿ ಪರೀಕ್ಷೆ ತೆಗೆದುಕೊಂಡರೆ ಅದನ್ನು ಒಂದು ಪ್ರಯತ್ನ ಎಂದು ಪರಿಗಣಿಸಲಾಗುತ್ತದೆ. ಯಾವುದೇ ಪದವೀಧರರು ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ ಪ್ರಸ್ತುತ ಅಂತಿಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಪೂರ್ವಭಾವಿ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿದ್ದಾರೆ. ಆದರೆ ಮುಖ್ಯಪರೀಕ್ಷೆ ವೇಳೆಗೆ ಪದವಿ ಪರೀಕ್ಷೆಯ ಅಂಕಪಟ್ಟಿಯನ್ನು ಹೊಂದಿರಬೇಕು. ಮೂರು ಹಂತ: ಕೆಎಎಸ್ ಪರೀಕ್ಷೆ ಮೂರು ಹಂತಗಳಲ್ಲಿ ನಡೆಯಲಿದೆ. ಪೂರ್ವಭಾವಿ ಪರೀಕ್ಷೆ ಮೊದಲ ಹಂತವಾಗಿದ್ದು, ಇದು ತಲಾ 200 ಅಂಕಗಳ ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಈ ಪ್ರಶ್ನೆಪತ್ರಿಕೆಗಳು ಎಲ್ಲ ಅಭ್ಯರ್ಥಿಗಳಿಗೂ ಕಡ್ಡಾಯ. ಮೊದಲಿನ ಹಾಗೆ ಪೂರ್ವಭಾವಿ ಪರೀಕ್ಷೆಯಲ್ಲಿ ಐಚ್ಛಿಕ ವಿಷಯಗಳು ಇರುವುದಿಲ್ಲ. ಇತಿಹಾಸ, ಭೂಗೋಳ, ಸಂವಿಧಾನ, ಆರ್ಥಿಕ ವಿಚಾರಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಬೌದ್ಧಿಕ ಸಾಮರ್ಥ್ಯ, ಪರಿಸರ, ಮಾನವಿಕ ಶಾಸ್ತ್ರ, ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಬೆಳವಣಿಗೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯಲ್ಲಿ ವಸ್ತುನಿಷ್ಠ ಮಾದರಿಯ ಪ್ರಶ್ನೆಗಳಿರುತ್ತವೆ. ಅಂದರೆ ಒಂದು ಪ್ರಶ್ನೆಗೆ ನಾಲ್ಕು ಉತ್ತರಗಳನ್ನು ನೀಡಲಾಗಿರುತ್ತದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ, ಉತ್ತರ ಪತ್ರಿಕೆಯಲ್ಲಿನ ಸೂಕ್ತ ಜಾಗದಲ್ಲಿ ಗುರುತಿಸಬೇಕು. ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. 1:20ರ ಪ್ರಮಾಣದಲ್ಲಿ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯಪರೀಕ್ಷೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಂದರೆ ಒಂದು ಹುದ್ದೆಗೆ 20 ಅಭ್ಯರ್ಥಿಗಳಂತೆ ಮುಖ್ಯಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಮುಖ್ಯಪರೀಕ್ಷೆ: ಒಟ್ಟು 2100 ಅಂಕಗಳಿಗೆ ಮುಖ್ಯಪರೀಕ್ಷೆ ನಡೆಯಲಿದ್ದು ಎಂಟು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ. ತಲಾ 150 ಅಂಕಗಳ ಕನ್ನಡ ಮತ್ತು ಇಂಗ್ಲಿಷ್ ವಿಷಯದ ಪತ್ರಿಕೆಗಳು, ಸಾಮಾನ್ಯ ಅಧ್ಯಯನದ ಎರಡು ಪತ್ರಿಕೆಗಳು ಎಲ್ಲ ಅಭ್ಯರ್ಥಿಗಳಿಗೂ ಕಡ್ಡಾಯ. ಇದಲ್ಲದೆ 30 ಐಚ್ಛಿಕ ವಿಷಯಗಳ ಪೈಕಿ ಯಾವುದಾದರೂ ಎರಡು ವಿಷಯಗಳನ್ನು ತೆಗೆದುಕೊಳ್ಳಬೇಕು. ಪ್ರತಿಯೊಂದು ವಿಷಯವು ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಮುಖ್ಯಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮಗೆ ಇಷ್ಟವಾದ ಎರಡು ವಿಷಯಗಳನ್ನು ತಿಳಿಸಬೇಕು. ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ. ಮುಖ್ಯಪರೀಕ್ಷೆಯು ವಿವರಣಾತ್ಮಕ ಸ್ವರೂಪದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಮೊದಲ ಪತ್ರಿಕೆ ಕನ್ನಡ ಮತ್ತು ಎರಡನೇ ಪತ್ರಿಕೆ ಇಂಗ್ಲಿಷ್ ಕಡ್ಡಾಯವಾಗಿದ್ದು, ಇವುಗಳಲ್ಲಿ ಶೇ 35ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯ. ಈ ವಿಷಯಗಳಲ್ಲಿ ಗಳಿಸುವ ಅಂಕಗಳನ್ನು ವ್ಯಕ್ತಿತ್ವ ಪರೀಕ್ಷೆಗೆ (ಸಂದರ್ಶನ) ಸಿದ್ಧಪಡಿಸುವ ಪಟ್ಟಿ ಸಂದರ್ಭದಲ್ಲಿ ಪರಿಗಣಿಸುವುದಿಲ್ಲ. ಯಾವುದೇ ಒಂದು ವಿಷಯದ ಪರೀಕ್ಷೆಗೆ ಗೈರು ಹಾಜರಾದರೂ ಉಳಿದ ವಿಷಯಗಳಲ್ಲಿ ಗಳಿಸುವ ಅಂಕಗಳನ್ನು ಪ್ರಕಟಿಸುವುದಿಲ್ಲ. ಸಂದರ್ಶನ: ಮುಖ್ಯಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ 1:3ರ ಪ್ರಮಾಣದಲ್ಲಿ ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಒಟ್ಟು 200 ಅಂಕಗಳಿಗೆ ಸಂದರ್ಶನ ನಡೆಸಲಾಗುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಹೊಸದಾಗಿ ಸೃಷ್ಟಿಸಿರುವ 60 ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗಳು, 57 ತಹಸೀಲ್ದಾರ್ ಮತ್ತು 20 ಉಪ ವಿಭಾಗಾಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆಯ 34 ಸಹಾಯಕ ಆಯುಕ್ತರ ಹುದ್ದೆಗಳು ಸೇರಿದಂತೆ ಒಟ್ಟು 352 ಹುದ್ದೆಗಳಿವೆ. ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅಷ್ಟೇ ಅಲ್ಲದೆ ಅಂಗವಿಕಲರು, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಮೀಸಲಾತಿ ಇದೆ. ಮೀಸಲಾತಿ ಬಯಸುವವರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿರುವ ಪ್ರಮಾಣ ಪತ್ರವನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೂ ಮೊದಲೇ ಪಡೆದುಕೊಂಡಿರಬೇಕು. ಹೊಸ ಪದ್ಧತಿಯ ಪೂರ್ವಭಾವಿ ಪರೀಕ್ಷೆ ಕಲಾ ವಿಭಾಗದ ಮತ್ತು ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಕಷ್ಟಕರವಾಗಿರುತ್ತದೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಆದರೆ ಈಗಿನಿಂದಲೇ ಕಠಿಣ ಅಭ್ಯಾಸ ನಡೆಸಿ, ಸೂಕ್ತ ತರಬೇತಿಯನ್ನು ಪಡೆದುಕೊಂಡರೆ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು. 8ರಿಂದ 10ನೇ ತರಗತಿವರೆಗಿನ ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ವ್ಯಾಸಂಗ ಮಾಡುವುದು ಒಳ್ಳೆಯದು. ಪದವೀಧರರಿಗೆ, ಅಂತಿಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಇದ್ದರೂ, ಎಸ್ಸೆಸ್ಸೆಲ್ಸಿ ಮಟ್ಟದ ಪ್ರಶ್ನೆಗಳನ್ನೂ ಕೇಳಲಾಗುತ್ತದೆ. ಹೀಗಾಗಿ ಪ್ರೌಢಶಾಲಾ ಮಟ್ಟದ ಪಠ್ಯಕ್ರಮವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.