ಪ್ರಶ್ನೆ ಉತ್ತರ ಅರುಂಧತಿ, ಬೀದರ್ ನನಗೆ ಈಗ 32 ವರ್ಷ. ನಾನು ಎಂ.ಎ. ಎಕನಾಮಿಕ್ಸ್ ಮಾಡಬಯಸಿದ್ದೇನೆ. ನೇರವಾಗಿ (ರೆಗ್ಯುಲರ್) ಮಾಡುವ ಮತ್ತು ದೂರಶಿಕ್ಷಣದಲ್ಲಿ ಮಾಡುವ ಎಂ.ಎ.ಗೂ ಇರುವ ವ್ಯತ್ಯಾಸವೇನು? ದೂರಶಿಕ್ಷಣದಲ್ಲಿ ಮಾಡಿದರೆ ಪಿಹೆಚ್.ಡಿ. ಮಾಡಬಹುದೇ? ಎಂ.ಎ. ಮಾಡಲು ಯಾವ ವಿಷಯ ಸೂಕ್ತ (ಪೊಲಿಟಿಕಲ್ ಸೈನ್ಸ್, ಹಿಸ್ಟರಿ, ಎಕನಾಮಿಕ್ಸ್)? ದಯಮಾಡಿ ಸಲಹೆ ಕೊಡಿ. ನೀವು ಬಿ.ಎ. ಮಾಡುವಾಗ ಐಚ್ಛಿಕ ವಿಷಯವಾಗಿ ಅರ್ಥಶಾಸ್ತ್ರವನ್ನು ಆರಿಸಿಕೊಂಡಿದ್ದರೆ ಮತ್ತು ಹೆಚ್ಚು ಅಂಕ ಗಳಿಸಿದ್ದರೆ ಮಾತ್ರ ರೆಗ್ಯುಲರ್ ಶಿಕ್ಷಣದ ಮೂಲಕ ಎಂ.ಎ. ಮಾಡಬಹುದು. ಹಾಗಿಲ್ಲದಿದ್ದರೆ ದೂರಶಿಕ್ಷಣದ ಮೂಲಕವೇ ಎಂ.ಎ. ಮಾಡಬೇಕಾಗುತ್ತದೆ. ಯಾವ ಶಿಕ್ಷಣದ ಮೂಲಕ ಎಂ.ಎ. ಮಾಡಿದರೂ ಪಿ ಎಚ್.ಡಿ. ಮಾಡಲು ಸಾಧ್ಯ. ಆದರೆ ಇದಕ್ಕೆ ಆಯಾ ವಿಶ್ವವಿದ್ಯಾಲಯದವರು ನಡೆಸುವ ಆಯ್ಕೆ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾಗುತ್ತದೆ. ಎಂ.ಎ. ಯಾವ ವಿಷಯದಲ್ಲಿ ಮಾಡಬೇಕೆಂಬುದು ನಿಮ್ಮ ಇಷ್ಟವನ್ನೇ ಆಧರಿಸಿದೆ. ಅಭ್ಯಾಸದ ದೃಷ್ಟಿಯಿಂದ ಹೇಳುವುದಾದರೆ ಅರ್ಥಶಾಸ್ತ್ರಕ್ಕಿಂತ ಇತಿಹಾಸ ಮತ್ತು ರಾಜನೀತಿಶಾಸ್ತ್ರ ಸುಲಭ. ಸೌಮ್ಯ, ಕೊಡಗು ನಾನು ಬಿ.ಎಸ್ಸಿ. ಪದವಿ ಪಡೆದಿದ್ದೇನೆ. ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿರುವುದರಿಂದ ನಾನು ನನ್ನ ಸಂವಹನ ಕೌಶಲವನ್ನು ಹೇಗೆ ಹೆಚ್ಚಿಸಿಕೊಳ್ಳಲಿ. ನಾನು ಎಂ.ಎಸ್ಸಿ. ಭೌತಶಾಸ್ತ್ರ ಮಾಡಬಹುದೇ? ಇದು ನನಗೆ ಸುಲಭವೇ? ದಯಮಾಡಿ ಸಲಹೆ ಕೊಡಿ. ಕನ್ನಡ ಮಾಧ್ಯಮದಲ್ಲಿ ಓದಿರುವೆನೆಂಬ ಕೀಳರಿಮೆ ಬೇಡ. ಮಾತೃಭಾಷೆಯಲ್ಲಿ ಅಧ್ಯಯನ ಮಾಡಿರುವುದರಿಂದ ನಿಮಗೆ ಎಲ್ಲ ವಿಷಯಗಳೂ ಚೆನ್ನಾಗಿ ಮನದಟ್ಟಾಗಿರುತ್ತದೆ. ಭೌತಶಾಸ್ತ್ರದಲ್ಲಿ ಎಂ.ಎಸ್ಸಿ. ಮಾಡಲು ನೀವು ಬಿ.ಎಸ್ಸಿ.ಯಲ್ಲಿ ಭೌತಶಾಸ್ತ್ರದಲ್ಲಿ ಹೆಚ್ಚು ಅಂಕಗಳನ್ನು ತೆಗೆದಿರಬೇಕು. ಅದಿಲ್ಲದಿದ್ದರೆ, ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣದ ಮೂಲಕ ಎಂ.ಎಸ್ಸಿ. ಮಾಡಬಹುದು. ಈ ಮಧ್ಯೆ ನಿಮ್ಮ ಸಂವಹನ ಸಾಮರ್ಥ್ಯವನ್ನು (ಕಮ್ಯುನಿಕೇಷನ್ ಸ್ಕಿಲ್) ಹೆಚ್ಚಿಸಿಕೊಳ್ಳಲು ಪ್ರಯತ್ನಮಾಡಿ. ಇಂಗ್ಲಿಷ್ ವೃತ್ತಪತ್ರಿಕೆಗಳನ್ನು, ಕಾದಂಬರಿಗಳನ್ನು ಓದಿ. ಟಿ.ವಿ. ಚಾನೆಲ್‌ಗಳಲ್ಲಿ ಬರುವ ಇಂಗ್ಲಿಷ್ ಚರ್ಚೆಗಳನ್ನು ಕೇಳಿ. ನಿಮ್ಮ ಸ್ನೇಹಿತರೊಂದಿಗೆ ಇಂಗ್ಲಿಷ್‌ನಲ್ಲೆ ಮಾತನಾಡಿ. ಪ್ರವೀಣ್ ಆರ್.ಪಾಲನಕರ್ 42007-08ರಲ್ಲಿ ಬಿ.ಬಿ.ಎಮ್.ಗೆ ಪ್ರವೇಶ ಪಡೆದೆ. ನಂತರ 3, 4ನೇ ಸೆಮಿಸ್ಟರ್‌ಗಳಲ್ಲಿ ಕೆಲವು ವಿಷಯಗಳಲ್ಲಿ ತೇರ್ಗಡೆ ಹೊಂದದೇ ಇರುವುದರಿಂದ 6ನೇ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿಲ್ಲ. ಈ ಪರಿಸ್ಥಿತಿಯಲ್ಲಿ ಏನೂ ಮಾಡಲು ತೋಚುತ್ತಿಲ್ಲ. ಬೇರೆ ಯಾವುದಾದರೂ ಕೋರ್ಸ್ ಮಾಡಬಹುದೇ? ನನಗೆ ಈಗ 23 ವರ್ಷ; ಕೆಲಸಕ್ಕೆ ಅರ್ಜಿ ಹಾಕಬೇಕಾದರೆ ಏನಾದರೂ ಅಡ್ಡಿ ಬರುತ್ತದಯೇ? ತಿಳಿಸಿಕೊಡಿ. ನೀವು ಆರಿಸಿಕೊಂಡಿರುವ ಬಿ.ಬಿ.ಎಂ. ಉತ್ತಮವಾದದ್ದೇ ಆಗಿದೆ. ನೀವು ನಿಮ್ಮ ಆಸಕ್ತಿಯ ಆಧಾರದ ಮೇಲೆ ಈ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡಿದ್ದರೆ, ಉತ್ತಮವಾಗಿ ಅಧ್ಯಯನ ಮಾಡಿ ಎಲ್ಲ ವಿಚಾರಗಳಲ್ಲೂ ಉತ್ತೀರ್ಣರಾಗಬೇಕಾಗಿತ್ತು. ನಿಮ್ಮ ಅಸಫಲತೆಯ ಕಾರಣವನ್ನು ನೀವೇ ವಿಶ್ಲೇಷಿಸಿ ಬಗೆಹರಿಸಿಕೊಳ್ಳಬೇಕು. ಈಗಲೂ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ನೀವು ಈಗಿರುವ ಸಂಕಷ್ಟದಿಂದ ಬಿಡಿಸಿಕೊಳ್ಳಬಹುದು. ಬಿ.ಬಿ.ಎಂ. ಮುಗಿಸಿಯೇ ಕೆಲಸದ ಯೋಚನೆ ಮಾಡುವುದು ಒಳ್ಳೆಯದು. ಈಗ ಸರ್ಕಾರಿ ಕೆಲಸಗಳಿಗಿಂತ ಖಾಸಗಿ ಕೆಲಸಗಳೇ ಹೆಚ್ಚಿರುವುದರಿಂದ ನೀವು ವಯೋಮಿತಿಯ ಬಗ್ಗೆ ಚಿಂತಿತರಾಗಬೇಕಿಲ್ಲ. ಶೀಲಾ. ರಾಯಚೂರು. ನಾನು ಕೆಲಸ ಮಾಡುವುದರ ಜೊತೆಗೆ ಬಿ.ಎ. ಶೇ. 75 ಅಂಕ ಗಳಿಸಿ ಪಾಸ್ ಮಾಡಿದ್ದೇನೆ. ನಮ್ಮದು ತುಂಬಾ ಬಡ ಕುಟುಂಬ ಮತ್ತು ನನ್ನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಾನು ಹಿರಿಯ ಮಗಳಾಗಿರುವುದರಿಂದ ನಮ್ಮ ಕುಟುಂಬದ ಜವಾಬ್ದಾರಿ ಶೇ.80ರಷ್ಟು ನನ್ನ ಮೇಲಿರುವುದರಿಂದ ನಾನು ಸಂಸ್ಥೆಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ತುಂಬಾ ದಿನಗಳಿಂದ ಕೆಲಸ ಮಾಡುತ್ತಿದ್ದೇನೆ. ನನಗೆ ಮುಂದೆ ಇನ್ನೂ ಓದಬೇಕು ಅನ್ನುವ ಆಸೆ ಇದೆ. ಆದರೆ ಬಿ.ಇಡಿ., ಪಿ.ಜಿಯಂತಹ ಕೋರ್ಸುಗಳನ್ನು ಮಾಡುವಷ್ಟು ಹಣ ನನ್ನಿಂದ ಹೊಂದಿಸಲಿಕ್ಕಾಗದು. ಅದೂ ಅಲ್ಲದೇ ಕೆಲಸ ಬಿಟ್ಟು ಓದುವಂತಹ ಪರಿಸ್ಥಿತಿಯಲ್ಲೂ ನಾನು ಇಲ್ಲ. ಜೊತೆಗೆ ಕೆ.ಎ.ಎಸ್. ಮತ್ತು ಐ.ಎ.ಎಸ್ ಪರಿಕ್ಷೆಗಳಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದೇನೆ. ನಾನು ಕನ್ನಡ ಮಾಧ್ಯಮ ವಿದ್ಯಾರ್ಥಿ ಆಗಿದ್ದು, ಡಿಗ್ರಿಯಲ್ಲಿ ನಾನು ತೆಗೆದುಕೊಂಡ ವಿಷಯಗಳು ಇತಿಹಾಸ, ಕನ್ನಡ ಮತ್ತು ಶಿಕ್ಷಣ ಆಗಿರುತ್ತವೆ. ಇದರಿಂದ ನಾನು ಐ.ಎ.ಎಸ್ ಪರಿಕ್ಷೆ ಬರೆಯಲು ಅರ್ಹಳಿದ್ದೇನೆಯೇ? ದಯವಿಟ್ಟು ನನಗೆ ತಿಳಿಸಿ. ಜೊತೆಗೆ ಇಂತಹ ಪರಿಸ್ಥಿತಿಯಲ್ಲಿ ನಾನು ಏನು ಮಾಡುವುದು ಒಳ್ಳೆಯದೆಂದು ನೀವೇ ಸಲಹೆ ನೀಡಬೇಕು. ದಯವಿಟ್ಟು ನಾನು ತುಂಬಾ ಗೊಂದಲದಲ್ಲಿದ್ದೇನೆ ಮುಂದಿನ ನನ್ನ ನಿರ್ಧಾರದ ಬಗ್ಗೆ ನಿಮ್ಮ ಸಲಹೆಗಾಗಿ ಕಾಯುತ್ತಿರುತ್ತೇನೆ. ನಿಮ್ಮೆಲ್ಲ ಕೌಟುಂಬಿಕ ಸಮಸ್ಯೆಗಳ ಮಧ್ಯದಲ್ಲೂ ನೀವು ಅತೀ ಹೆಚ್ಚು ಅಂಕಗಳೊಂದಿಗೆ ಬಿ.ಎ. ಮುಗಿಸಿರುವುದು ಶ್ಲಾಘನೀಯ. ಕೆಲಸ ಮಾಡುತ್ತಲೇ ವಿದ್ಯಾಭ್ಯಾಸ ಮುಂದುವರೆಸಬೇಕೆಂಬ ಮತ್ತು ಐ.ಎ.ಎಸ್/ಕೆ.ಎ.ಎಸ್. ಮಾಡಬೇಕೆಂಬ ನಿಮ್ಮ ಹಂಬಲ ಮೆಚ್ಚತಕ್ಕದ್ದಾಗಿದೆ. ನೀವು ಹೀಗೆಯೇ ಧೃತಿಗೆಡದೆ ಮುಂದವರಿದರೆ ಖಂಡಿತಾ ನಿಮ್ಮ ಕನಸು ನನಸಾಗುವುದು. ನೀವು ಕೆಲಸ ಮಾಡುತ್ತಲೇ ಕೆ.ಎ.ಎಸ್/ಐ.ಎ.ಎಸ್‌ಗೆ ತಯಾರಿ ನಡೆಸಬಹುದು. ಈ ಪರೀಕ್ಷೆಗಳ ಪಠ್ಯವನ್ನು ನೋಡಿ ಈಗಿನಿಂದಲೇ ತಯಾರಿ ಪ್ರಾರಂಭಿಸಿ. ಯಾವುದಾದರೂ ಮುಕ್ತ ವಿಶ್ವವಿದ್ಯಾಲಯದ ಮೂಲಕ ಎಂ.ಎ. ಮಾಡುವುದೂ ಸಹಾಯಕವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.