ಪಠ್ಯದ ಜತೆ ದೈಹಿಕ ಶಿಕ್ಷಣ `ಹರೆಯದವರೆಗೆ ಸಿಕ್ಕಿದ್ದು ಹೊರೆ ಹೊತ್ತು ಹೋಗುವವರೆಗೆ ಕಾಯುತ್ತದೆ~ ಎನ್ನುವ ಗಾದೆಯೊಂದು ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಜನಜನಿತ. ಪ್ರಾಥಮಿಕ ಶಾಲಾ ಹಂತದಲ್ಲಿ ಸಿಗುವ ಬೌದ್ಧಿಕ ಶಿಕ್ಷಣ ಮಗುವನ್ನು ಒಬ್ಬ ಸಮರ್ಥ ವ್ಯಕ್ತಿಯಾಗಿ ಭವಿಷ್ಯ ಎದುರಿಸಲು ಸಜ್ಜಾಗಿಸಿದರೆ, ಈ ಹಂತದ ದೈಹಿಕ ಶಿಕ್ಷಣ ಮಗುವಿನ ಅಂಗಾಂಗ ವಿಕಾಸಕ್ಕೆ ಮತ್ತು ಸಮಗ್ರ ದೈಹಿಕ ಬೆಳವಣಿಗೆಗೆ ಪೂರಕ. ಇದನ್ನರಿತ ಪ್ರಾಥಮಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನದಡಿ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಈ ಯೋಜನೆಗಳು ಉದ್ದೇಶಿತ ಗುರಿ ತಲುಪುವಲ್ಲಿ ವಿಫಲವಾಗುತ್ತಿವೆ ಎಂಬ ಆತಂಕವನ್ನು ಸರ್ಕಾರವೇ ಒದಗಿಸುವ ಅಂಕಿ ಅಂಶಗಳು ಸಾರಿ ಹೇಳುತ್ತವೆ. ತುಮಕೂರು ಜಿಲ್ಲೆಯ ಅರ್ಧಕ್ಕೂ ಹೆಚ್ಚು ಶಾಲೆಗಳಲ್ಲಿ ಕ್ರೀಡಾಕ್ಲಬ್‌ಗಳು ತೂಕಡಿಸುತ್ತಿವೆ. ರಾಜ್ಯದ ಇತರ ಜಿಲ್ಲೆಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಬೆಂಗಳೂರಿನ `ಎಜುಸ್ಪೋರ್ಟ್ಸ್~ ಎಂಬ ಖಾಸಗಿ ಕ್ರೀಡಾ ಸಮೀಕ್ಷಾ ಸಂಸ್ಥೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ಕ್ರೀಡಾಕ್ಲಬ್‌ಗಳ ವೈಫಲ್ಯದಿಂದಾಗಿಯೇ ಮಕ್ಕಳು ಕ್ರೀಡಾ ಕೌಶಲಗಳಲ್ಲಿ ಹಿಂದುಳಿಯುತ್ತಿದ್ದಾರೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಸ್ಥಾನಾಂತರ ಹಾಗೂ ಸಂಚಾರದ ಸಾಮರ್ಥ್ಯ (ಓಟ ಮತ್ತು ನೆಗೆಯುವುದು), ಕೈಚಳಕ ಸಾಮರ್ಥ್ಯ (ಎಸೆಯುವುದು ಹಾಗೂ ಹಿಡಿಯುವುದು), ಕೈ ಬಳಕೆಯಿಲ್ಲದೆ ತೊಡಗುವ ಕೈ ಸಾಮರ್ಥ್ಯದಲ್ಲಿ (ಸ್ಥಿಮಿತತೆ ಕಾಪಾಡಿಕೊಳ್ಳುವುದು) ಹಲವು ವೈಫಲ್ಯಗಳು ಮಕ್ಕಳನ್ನು ಕಾಡುತ್ತಿವೆ. ನಗರ ಪ್ರದೇಶದಲ್ಲಿರುವ ಶೇ.61ರಷ್ಟು ಶಾಲಾ ಮಕ್ಕಳು ಯಾವುದೇ ಕ್ರೀಡಾ ಚಟುವಟಿಕೆ ಇಲ್ಲದೆ ಬೆಳೆಯುತ್ತಿದ್ದಾರೆ. ದೈಹಿಕ ಚಟುವಟಿಕೆಗಳ ಕೊರತೆಯಿಂದಾಗಿ ಮಕ್ಕಳಲ್ಲಿ ಸ್ಥೂಲಕಾಯ ಬೆಳೆಯುವುದರ ಜೊತೆಗೆ ಆಹಾರ ಸೇವನೆಯಲ್ಲಿ ನಿರಾಸಕ್ತಿ, ಹರೆಯದಲ್ಲಿಯೇ ನಾನಾ ರೋಗ ಲಕ್ಷಣಗಳು ಗೋಚರಿಸುತ್ತಿವೆ. ಸದೃಢ ದೇಹವೇ ಇಲ್ಲದವರು, ಕ್ರೀಡೆಯಲ್ಲಿ ಇನ್ನೆಂಥ ಸಾಧನೆ ಮಾಡಿಯಾರು ? ಕಾರಣಗಳು: ಬೆಳಿಗ್ಗೆ 6ಕ್ಕೆ ಏಳುವ ಮಗು ಮುಖ ತೊಳೆದು ಹೋಂ ವರ್ಕ್ ಮಾಡುತ್ತದೆ. 8ಕ್ಕೆ ಸ್ನಾನ ಮಾಡಿ, ಕಾರ್ಟೂನ್ ನೋಡುತ್ತಾ ತಿಂಡಿ ತಿಂದು, ಶಾಲೆಗೆ ಬರುವ ಆಟೊ ಕಾಯುತ್ತದೆ. ಸಂಜೆ 5ಕ್ಕೆ ಮನೆಗೆ ಬಂದು, ಮುಖ ತೊಳೆದು ಟ್ಯೂಷನ್‌ಗೆ ಹೋಗುತ್ತದೆ. ಮನೆಗೆ ಹಿಂದಿರುಗಿ ಮ್ಯಾಗಿ- ಬಿಂಗೋ ತಿನ್ನುತ್ತಾ... ಟಿವಿ ನೋಡುತ್ತಾ ಮಲಗುತ್ತದೆ. ತನ್ನ ಪುಟ್ಟ ಹೃದಯ ಬಯಸುವ ಮನರಂಜನೆ ತುಂಬಿಕೊಳ್ಳಲು ಮಗುವಿಗೆ ಸಿಗುವ ಒಂದೇ ಅವಕಾಶ ಕಾರ್ಟೂನ್. ಅಪ್ಪ-ಅಮ್ಮ ಕೆಲಸದಲ್ಲಿ ಬ್ಯುಸಿ. ವಿಘಟಿತ ಕುಟುಂಬ ವ್ಯವಸ್ಥೆಗೆ ಒಗ್ಗಿಕೊಂಡಿರುವುದರಿಂದ ಮನೆಯಲ್ಲಿ ಮೊಮ್ಮಕ್ಕಳ ದೇಖರೇಖಿ ನೋಡುವ ಅಜ್ಜ-ಅಜ್ಜಿ ಇಲ್ಲ. ಮಾರ್ಕ್ಸ್‌ಕಾರ್ಡ್‌ನಲ್ಲಿನ ಅಂಕಗಳಿಂದಲೇ ಮಗುವಿನ ಸಕಲ ಸಾಮರ್ಥ್ಯಗಳನ್ನೂ ಅಳೆಯುವ ಮನೋಭಾವದಿಂದಾಗಿ ಮಗುವಿನ ದೈಹಿಕ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಾ- ಕೊನೆಗೊಂದು ದಿನ ರೋಗದ ಆಗರವಾಗುತ್ತದೆ. ಪರಿಹಾರ:`ನಾವು ಚಿಕ್ಕವರಿದ್ದಾಗ ಸಂಜೆ ಹೊತ್ತು ಆಟಕ್ಕೆ ಹೋಗುತ್ತಿದ್ದೆವು. ಈಗ ಅಂತಹ ವಾತಾವರಣ ಇಲ್ಲ. ಇಂದಿನ ಮಕ್ಕಳಿಗೆ ದೈಹಿಕ ಸುಸ್ತಿಗಿಂತ ಮಾನಸಿಕ ಸುಸ್ತೇ ಜಾಸ್ತಿ~ ಎನ್ನುವ ಪ್ರಾಥಮಿಕ ಶಾಲಾ ಶಿಕ್ಷಕಿ ಕೆ.ಎಸ್.ಕರಿಕಟ್ಟಿ ಅವರ ಮಾತಿನಲ್ಲಿ ಪರಿಸ್ಥಿತಿಯ ನೈಜ ಚಿತ್ರಣಗೊಂದಿಗೆ ಪರಿಹಾರದ ಬೆಳ್ಳಿಗೆರೆಯೂ ಇಣುಕಿದೆ. `ಗ್ರಾಮೀಣ ಮಕ್ಕಳು ಈಗಲೂ ಸದೃಢವಾಗಿದ್ದಾರೆ. ಕೆಲವು ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿದ್ದರೆ ಮೈದಾನವಿಲ್ಲ, ಮೈದಾನವಿದ್ದರೆ ಶಿಕ್ಷಕರು ಇಲ್ಲ ಎನ್ನುವ ಪರಿಸ್ಥಿತಿ ಇದೆ. ಪಾಲಕರು ಹಾಗೂ ಶಿಕ್ಷಕರ ಮನೋಭಾವವು ಕೂಡಾ ಕ್ರೀಡಾಸಕ್ತಿ ಕುಂಠಿತಗೊಳ್ಳಲು ಕಾರಣ~ ಎಂದು ದೈಹಿಕ ಶಿಕ್ಷಕ ಜಗನ್ನಾಥ್ ಖೇದಪಡುತ್ತಾರೆ. `ಕಿಲ್‌ಪ್ಯಾಟ್ರಿಕ್ ಕ್ರೀಡಾ ಪದ್ಧತಿ ಪ್ರಕಾರ ದೈಹಿಕ ಶಿಕ್ಷಣವನ್ನು ಮಕ್ಕಳಿಗೆ ಆಸಕ್ತಿದಾಯಕವಾಗಿ ಕಲಿಸಬಹುದು. ಇದರಲ್ಲಿ ಪಾಲಕರ ಹಾಗೂ ಶಿಕ್ಷಕರ ಪಾತ್ರ ಅತಿಮುಖ್ಯ~ ಎನ್ನುವುದು ಶಿಕ್ಷಕ ಡಿ.ಲೋಕೇಶ್ ಅನಿಸಿಕೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಂತರನ್ನಾಗಿ ಮಾಡುವುದರ ಜೊತೆಗೆ ಬದುಕಿನ ಗುರಿ ಸೇರಲು ಕ್ರೀಡೆ ಸಹಕಾರಿ. ಗುಂಪು ಆಟಗಳಿಂದ `ಟೀಂ ವರ್ಕ್‌ನಲ್ಲಿ~ ನಂಬಿಕೆ ಮೂಡಿಸುತ್ತದೆ. ಸೋಲನ್ನು ಕೂಡಾ ಗೌರವಿಸುವ ಹಾಗೂ ಆರಾಧಿಸುವ ಮನೋಭಾವ ಬೆಳೆಸುತ್ತದೆ. ಸಮಯದ ಅರಿವು ಬೆಳೆಸುತ್ತದೆ. ದುಶ್ಚಟಗಳಿಂದ ದೂರವಿರುತ್ತದೆ. ಶಾಲೆಗಳಲ್ಲಿ ಕ್ರೀಡಾ ಕ್ಲಬ್‌ಗಳನ್ನು ರಚಿಸಿ ಪ್ರತಿ ಮಗುವಿಗೆ ಅದು ಇಷ್ಟಪಡುವ ನಿರ್ದಿಷ್ಟ ಕ್ರೀಡೆಗಳಲ್ಲಿ ತರಬೇತಿ ನೀಡಿ, ಸ್ಪರ್ಧೆಗೆ ಅಣಿಗೊಳಿಸಬೇಕು. ಪ್ರತಿದಿನ ಆಟಕ್ಕೆ ಸಮಯ ಸಿಗದಿದ್ದರೂ ವಾರಾಂತ್ಯದಲ್ಲಿ ಆಟಕ್ಕೆ ಅವಕಾಶ ಇರಬೇಕು. ಟ್ಯೂಶನ್‌ಗೆ ಕಡಿವಾಣ ಹಾಕಿ, ಅದೇ ಅವಧಿಯಲ್ಲಿ ಪೋಷಕರು ಮಕ್ಕಳನ್ನು ಆಟದ ಮೈದಾನಕ್ಕೆ ಕರೆದೊಯ್ಯಬೇಕು. ಶಾಲಾ ಕ್ರೀಡಾ ಕ್ಲಬ್ ಪ್ರಾಥಮಿಕ ಶಾಲೆಗಳಲ್ಲಿ ರಚನೆಯಾಗುವ ಕ್ರೀಡಾ ಕ್ಲಬ್‌ಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು, ಒಬ್ಬರು ಕಾರ್ಯದರ್ಶಿ, ಇಬ್ಬರುಎಸ್‌ಡಿಎಂಸಿ ಸದಸ್ಯರು, ಶಾಲಾ ಮುಖ್ಯಸ್ಥರು, ಆಸಕ್ತ ಶಿಕ್ಷಕರು ಹಾಗೂ ಪ್ರತಿಭಾನ್ವಿತ ಕ್ರೀಡಾಪಟುಗಳಿರುತ್ತಾರೆ. ಇವರು ಕಾಲಕಾಲಕ್ಕೆ ಸಭೆ ನಡೆಸಿ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಾರೆ. ಗೋಲ್ಡನ್ ಗರ್ಲ್ ಮಾದರಿ ಒಲಿಂಪಿಕ್ ಪದಕಗಳ ಮೇಲೆ ಭಾರತ ದೇಶ ಕನಸು ಕಾಣುತ್ತಿದ್ದರೆ ಪ್ರಾಥಮಿಕ ಶಾಲಾ ಹಂತದ ದೈಹಿಕ ಶಿಕ್ಷಣಕ್ಕೆ ಒತ್ತು ನೀಡಬೇಕು ಎನ್ನುವುದು ಹಲವು ಅಥ್ಲಿಟ್‌ಗಳ ಅಭಿಪ್ರಾಯವಾಗಿದೆ. ಇದನ್ನರಿತ ಅಂತರರಾಷ್ಟ್ರೀಯ ಮಾಜಿ ಅಥ್ಲಿಟ್, `ಗೋಲ್ಡನ್ ಗರ್ಲ್~ ಪಿ.ಟಿ.ಉಷಾ ಕೇರಳದ ಕಿನಾಲೂರಿನಲ್ಲಿ `ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್~ ಆರಂಭಿಸಿದ್ದಾರೆ. ಇದು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳನ್ನು ವೃತ್ತಿಪರ ಕ್ರೀಡಾಪಟುಗಳನ್ನಾಗಿ ರೂಪಿಸುವಲ್ಲಿ ಶ್ರಮಿಸುತ್ತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.