ಎಂ.ಎಸ್.ಸಿ ಪರಿಸರ ವಿಜ್ಞಾನ: ವಿಪುಲ ಅವಕಾಶ ಬಿ.ಎಸ್.ಸಿ. ಪದವಿ ಮುಗಿಸಿದ ನಂತರ ಇನ್ನೇನು ಓದಬೇಕು. ಬರಿ ಬಿ.ಎಸ್.ಸಿ ಸಾಕೇ, ಕೆಲಸಕ್ಕಾಗಿ ಅಲೆಯಬೇಕೆ ಅಥವಾ ಮುಂದೆ ಏನು ಓದಬೇಕು ಎಂಬ ಜಿಜ್ಞಾಸೆಯಲ್ಲಿರುವ ವಿದ್ಯಾರ್ಥಿಗಳಿಗೆ ಇದೀಗ ಮತ್ತೊಂದು ಸ್ನಾತಕೋತ್ತರ ಪದವಿ ಮೈಸೂರಿನಲ್ಲಿ ಪ್ರಾರಂಭವಾಗಿದೆ. ಅದುವೆ ಜಲ ಮತ್ತು ಆರೋಗ್ಯ ವಿಭಾಗದ ಎಂ.ಎಸ್.ಸಿ ಇನ್ ಎನ್‌ವೈರನ್‌ಮೆಂಟ್ ಸೈನ್ಸ್‌ಸ್. ಇದು ಎರಡು ವರ್ಷಗಳ ಅವಧಿಯಲ್ಲಿ ನಾಲ್ಕು ಸೆಮೆಸ್ಟರ್‌ಗಳನ್ನು ಒಳಗೊಂಡಿದೆ. ಪ್ರಸ್ತುತ ಸಾಲಿನಲ್ಲಿ ಪ್ರಾರಂಭಿಸಿರುವ ಈ ಕೋರ್ಸ್ , ಜೆ.ಎಸ್.ಎಸ್. ವಿಶ್ವವಿದ್ಯಾಲಯದಡಿಯಲ್ಲಿ 2011 ರ ಸಾಲಿನಿಂದ ಮೈಸೂರಿನಲ್ಲಿ ನಡೆಯುತ್ತಿದ್ದು, ಪ್ರಾರಂಭದ ವರ್ಷದಲ್ಲಿ ಹಲವು ವಿದ್ಯಾರ್ಥಿಗಳು ಆಸಕ್ತಿ ತೋರಿಸಿ ದಾಖಲಾಗಿ ಅಧ್ಯಯನ ಮಾಡುತ್ತಿದ್ದಾರೆ. ಈ ಕೋರ್ಸ್ ಯು.ಜಿ.ಸಿಯಿಂದ ಅಂಗೀಕೃತವಾಗಿದ್ದು, ಇದರಲ್ಲಿ ಪಾಸಾದ ವಿದ್ಯಾರ್ಥಿಗಳು ಪರಿಸರ ವಿಜ್ಞಾನದ ಬಿ.ಇ. ವಿದ್ಯಾರ್ಥಿಗಳಿಗೆ ಪಾಠ ಕೂಡಾ ಮಾಡಲು ಅರ್ಹತೆ ಹೊಂದಿರುತ್ತಾರೆ. ಈ ಕೋರ್ಸಿನ ತರಗತಿಗಳಿಗೆ ನೇರ ಪ್ರವೇಶಾತಿ ಸೌಲಭ್ಯವಿರುತ್ತದೆ. ಇದಕ್ಕಾಗಿ ಪ್ರತ್ಯೇಕ ಪ್ರವೇಶ ಪರೀಕ್ಷೆ ಇರುವುದಿಲ್ಲ. ಆಸಕ್ತರು ತಮ್ಮ ಹೆಸರು, ಸಂಪೂರ್ಣ ವಿಳಾಸ ಹಾಗೂ ವಿದ್ಯಾರ್ಹತೆಗಳನ್ನೊಳಗೊಂಡ ವಿವರಗಳನ್ನು ನೀರು ಮತ್ತು ಆರೋಗ್ಯ ವಿಭಾಗದ ಮುಖ್ಯಸ್ಥರಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿದರೆ ಸಾಕು. ಕೋರ್ಸಿನ ಮಾಹಿತಿಗಳನ್ನು ಜೆ.ಎಸ್.ಎಸ್. ವಿಶ್ವವಿದ್ಯಾನಿಲಯದ ವೆಬ್ ಸೈಟಿನಲ್ಲೂ ಪಡೆಯಬಹುದು (...) ಅಥವಾ ದೂರವಾಣಿ ಮೂಲಕವೂ (0821-2548400/2548393) ಸಂಪರ್ಕಿಸಬಹುದಾಗಿದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಪದವಿ (ಬಿ.ಎಸ್.ಸಿ)/ಬಿ.ಎಫ್.ಎಸ್.ಸಿ/ಬಿ.,ಎಸ್.ಸಿ (ಅಗ್ರಿ)/ಬಿ.ಎಸ್.ಸಿ (ಹಾರ್ಟಿಕಲ್ಷರ್)ಅಥವಾ ಬಿ.ಎ./ಬಿ.ಟೆಕ್/ಎಂಬಿಬಿಎಸ್ ಓದಿದ್ದರೆ ಸಾಕು. ಮುಖ್ಯವಾಗಿ ಈ ಕೋರ್ಸ್ ನೀರಿಗೆ ಸಂಬಂಧಿಸಿದಂತೆ, ನೀರು ಮತ್ತು ಜನಾರೋಗ್ಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ, ತ್ಯಾಜ್ಯ ನೀರು ಸಂಸ್ಕರಣೆ ಇತ್ಯಾದಿ ಒಳಗೊಂಡಿರುತ್ತದೆ. ಅಲ್ಲದೆ, ಈ ಕೋರ್ಸ್ ಕೇವಲ ತರಗತಿಗಳಿಗೆ ಸೀಮಿತಗೊಳ್ಳದೇ, ಕೋರ್ಸ್‌ನ ಅವಧಿಯಲ್ಲಿ ವರ್ಷಪೂರ್ತಿ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಸೆಮಿನಾರ್, ಕಾರ್ಯಾಗಾರಗಳು ನಡೆದು, ಕೈಗಾರಿಕೆಗಳು ಹಾಗೂ ಅಲ್ಲಿಯ ತ್ಯಾಜ್ಯ ನೀರಿನ ಸಂಸ್ಕರಣೆ ಬಗ್ಗೆ ಪ್ರಾತ್ಯಕ್ಷಿಕೆ, ಅರ್ಥಾತ್ ಇಂಡಸ್ಟ್ರಿಯಲ್ ವಿಸಿಟ್, ಕಾರ್ಪೊರೇಟ್ ವಲಯದ ಹಿರಿಯ ಅಧಿಕಾರಿಗಳೊಂದಿಗೆ ಸಂವಾದಗಳು ಒಳಗೊಂಡಿರುತ್ತವೆ. ಭವಿಷ್ಯದ ಉದ್ಯೋಗ ಕ್ರಾಂತಿಯಲ್ಲಿ ಈ ಪದವಿಗೆ ಬೇಡಿಕೆ ಹೆಚ್ಚುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಜಲ ಮಾಲಿನ್ಯ ಎಲ್ಲೆಡೆ ಹೆಚ್ಚುತ್ತಿದ್ದು, ಅದರಿಂದಾಗಿ ಹಲವಾರು ಸಮಸ್ಯೆಗಳು ಹಲವರನ್ನು ಕಾಡುತ್ತಿವೆ. ಜೊತೆಗೆ ಬದಲಾಗುತ್ತಿರುವ ಜೀವನ ಶೈಲಿಯೂ ಇದಕ್ಕೆ ಇಂಬು ನೀಡುತ್ತಿದೆ. ಹೀಗಾಗಿ, ಸಕ್ಕರೆ, ಡೇರಿ, ಕಾಗದ, ಚರ್ಮ, ಡಿಸ್ಟಿಲರಿಗಳಂತಹ ಉದ್ದಿಮೆಯಲ್ಲಿ ಸಾಕಷ್ಟು ಬೇಡಿಕೆ ಇದೆ ಮತ್ತು ಹೆಚ್ಚಿನ ವೇತನ ಅವಕಾಶಗಳೂ ಇವೆ. ಮುಂದೆ ಇತರ ಉದ್ದಿಮೆಗಳಲ್ಲಿನ ಅವಕಾಶಗಳೂ ಮುಂದುವರೆಯುತ್ತವೆ. ಈ ಕಾರಣಗಳಿಂದ ಮುಂಬರುವ ವರ್ಷಗಳಲ್ಲಿ ಎಂ.ಎಸ್‌ಸಿ ಎನ್‌ವೈರನ್‌ಮೆಂಟ್ ಕೋರ್ಸಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.