ಪ್ರಶ್ನೆ - ಉತ್ತರ ಅನುಪಮ ಕುಮಾರಿ, ಕೆ.ಆರ್.ಪುರಂ, ಬೆಂಗಳೂರು * ನಾನು ಎಸ್.ಎಸ್.ಎಲ್.ಸಿ.ಯಲ್ಲಿ ಶೇಕಡ 75 ಅಂಕ ಗಳಿಸಿದ್ದು. ಪಿ.ಯು.ಸಿ.ಯಲ್ಲಿ ಅನುತ್ತೀರ್ಣಳಾಗಿದ್ದೇನೆ. ನಾನು ಉತ್ತಮ ಎನ್.ಸಿ.ಸಿ. ಕೆಡೆಟ್ ಆಗಿ ಆಯ್ಕೆಯಾಗಿದ್ದೆ. ಈಗ ನಾನು ನನ್ನ ಕುಟುಂಬಕ್ಕೆ ಏನನ್ನಾದರೂ ಮಾಡಲಾಗದೆ ನಿರಾಶಳಾಗಿದ್ದೇನೆ. ದಯಮಾಡಿ ಸಲಹೆ ನೀಡಿ. ನಿಮ್ಮ ಉತ್ತಮ ಬರವಣಿಗೆ ಹಾಗೂ ಪತ್ರದ ಒಕ್ಕಣೆ ತುಂಬಾ ಚೆನ್ನಾಗಿದೆ. ನಿಮ್ಮ ಪತ್ರವನ್ನು ಓದಿದ ಮೇಲೆ ನೀವು ಪಿ.ಯು.ಸಿ.ಯಲ್ಲಿ ಉತ್ತೀರ್ಣರಾಗಲು ಎಲ್ಲಾ ಅರ್ಹತೆ ಪಡೆದಿದ್ದೀರಿ ಎಂದೆನಿಸುತ್ತದೆ. ಎನ್.ಸಿ.ಸಿ.ಯಲ್ಲಿ ಉತ್ತಮ ಸಾಧನೆ ನಿಮ್ಮ ಪ್ಲಸ್ ಪಾಯಿಂಟ್. ಮೊದಲು ನೀವು ನಿಮ್ಮ ಪಿ.ಯು.ಸಿ.ಯನ್ನು ಮುಗಿಸಿಕೊಳ್ಳಿ. ಈಗ ಕೇವಲ ಸರ್ಕಾರಿ ಕೆಲಸಕ್ಕೆ ಕಾಯುತ್ತಾ ಕೂಡುವ ಬದಲು ಯಾವುದಾದರೂ ಖಾಸಗಿ ಕೆಲಸಕ್ಕೆ ಸೇರಬಹುದು. ಸಾಧ್ಯವಾದರೆ ನರ್ಸರಿ ಶಾಲಾ ಶಿಕ್ಷಕಿಯಾಗಿ ಅದರ ಜೊತೆಗೆ ತರಬೇತಿಯನ್ನು ಸಹಾ ಪಡೆದುಕೊಳ್ಳಬಹುದು. ಅನುಕೂಲವಾದಾಗ ದೂರಶಿಕ್ಷಣದ ಮೂಲಕ ಶಿಕ್ಷಣ ಮುಂದುವರಿಸಿ. ಜೀವನದಲ್ಲಿ ಅನೇಕ ಎಡರು-ತೊಡರುಗಳು ಬರುತ್ತವೆ. ಜೊತೆಗೆ ಸಹಾನುಭೂತಿ ತೋರಿಸುವವರು ಇಲ್ಲ ಅಥವಾ ನಾನು ಒಂಟಿ ಎಂಬ ಭಾವನೆಯು ಸಹಾ ಅಪರೂಪವಾಗಿ ಕಾಡಬಹುದು. ಆದರೆ ಇದನ್ನೆಲ್ಲಾ ಎದುರಿಸಿ ದೃಢ ನಿರ್ಧಾರದಿಂದ ಬದುಕಿನಲ್ಲಿ ಯಶಸ್ಸು ಸಾಧಿಸಿದ ಅನೇಕರ ಉದಾಹರಣೆ ನಮ್ಮ ಮುಂದಿದೆ. ನೀವು ಅವರಲ್ಲಿ ಒಬ್ಬರಾಗಿ. ಸೌಮ್ಯ.ಬಿ.ಪಿ. ಭೇರ್ಯ, ಕೆ.ಆರ್. ನಗರ. * ನಾನು ಈಗ ಪ್ರಥಮ ಬಿ.ಎ. ಓದುತ್ತಿದ್ದೇನೆ. ಆದರೆ ನನಗೆ ಯಾವುದಾದರು ನ್ಯೂಸ್ ಚಾನೆಲ್‌ನಲ್ಲಿ ನ್ಯೂಸ್ ರಿಪೋರ್ಟರ್ ಅಥವಾ ಆಂಕರ್ ಆಗಬೇಕು ಎಂಬ ಆಸೆ ಇದೆ. ಆದರೆ ಈಗ ಬಿ.ಎ. ಬಿಟ್ಟು ಬೇರೆ ಜರ್ನಲಿಸಂ ಓದುವ ಪರಿಸ್ಥಿತಿಯಲ್ಲಿಲ್ಲ. ಆದ್ದರಿಂದ ಬಿ.ಎ. ಮುಗಿಸಿದ ನಂತರ ಏನು ಮಾಡಬೇಕು? ತಿಳಿಸಿ. ಟಿ.ವಿ ಚಾನೆಲ್‌ಗಳಲ್ಲಿ ಕೆಲಸ ಮಾಡಲು ಆಯ್ಕೆದಾರರು ಮುಖ್ಯವಾಗಿ ಬಯಸುವ ಅರ್ಹತೆಗಳೆಂದರೆ ಕ್ಯಾಮೆರಾಕ್ಕೆ ಹೊಂದುವ ಮುಖ ಲಕ್ಷಣ, ಉತ್ತಮ ಮಾತುಗಾರಿಕೆ, ಸಾಹಸ ಪ್ರವೃತ್ತಿ, ಬಿಡುವಿಲ್ಲದ ದುಡಿಮೆಗೆ ಬದ್ಧತೆ ಇತ್ಯಾದಿ. ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಬೇಕಾದ ತರಬೇತಿ ಜರ್ನಲಿಸಂನಲ್ಲಿ ದೊರಕುವುದರಿಂದ ಸಾಮಾನ್ಯವಾಗಿ ಅವರನ್ನೇ ಈ ವೃತ್ತಿಗೆ ಆಯ್ಕೆ ಮಾಡುವುದು ರೂಢಿ. ಆದರೆ ಎಷ್ಟೋ ಜನ ಜರ್ನಲಿಸಂ ಓದದೆಯೂ ಸಹ ಈ ವೃತ್ತಿಯಲ್ಲಿ ಯಶಸ್ಸು ಗಳಿಸಿದ್ದಾರೆ. ನೀವು ಬಿ.ಎ. ನಂತರ ನೇರವಾಗಿ ಈ ಬಗ್ಗೆ ಪ್ರಯತ್ನಿಸಬಹುದು. ಇಲ್ಲವಾದರೆ ಪದವಿಯ ನಂತರವೂ ಅನುಕೂಲವಿದ್ದಲ್ಲಿ ಜರ್ನಲಿಸಂ, ಎಂ.ಎ.ಗೆ ಸೇರಿಕೊಳ್ಳಬಹುದು. ಇಗ್ನೋ ಮುಂತಾದ ದೂರಶಿಕ್ಷಣ ವಿ.ವಿ.ಗಳಲ್ಲಿ ಈ ವೃತ್ತಿಗೆ ಸಂಬಂಧಿಸಿದ ಕೆಲವು ಡಿಪ್ಲೊಮಾ ಕೋರ್ಸುಗಳಿವೆ. ಅವನ್ನು ಸಹ ಓದುವ ಪ್ರಯತ್ನ ಮಾಡಬಹುದು. ಭಾರತೀಯ ವಿದ್ಯಾಭವನದಲ್ಲಿ ಕಡಿಮೆ ಅವಧಿಯ ಕೋರ್ಸ್ ಸಹಾ ಇದೆ. ಡಿ. ವಿಜಯಕುಮಾರ, ಹರಪ್ಪನಹಳ್ಳಿ, ದಾವಣಗೆರೆ * ನಾನು ಬಿ.ಎ. ಮುಗಿಸಿ ಅನುದಾನಿತ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದೇನೆ. ಈ ಕಾಲೇಜು ಒಂದೇ ಇರುವುದರಿಂದ ನನಗೆ ಬಡ್ತಿ ದೊರೆಯುತ್ತದೆಯೇ? ನಾನು ಬೇರೆ ಕೆಲಸಕ್ಕೆ ಹೋಗಲೇ? ಯಾವ ತರಹ ಮುಂದುವರೆಯಬೇಕು? ತಿಳಿಸಿ. ನಿಮ್ಮ ಕಾಲೇಜು ಅನುದಾನಕ್ಕೆ ಒಳಪಟ್ಟಿದ್ದು, ಈ ಹುದ್ದೆಗೆ ನಿಮ್ಮ ನೇಮಕಾತಿಯನ್ನು ಶಿಕ್ಷಣ ಇಲಾಖೆ ನಿಯಮಗಳಿಗನುಸಾರ ಈಗಾಗಲೇ ಅನುಮೋದನೆ ಮಾಡಿದ್ದಲ್ಲಿ ನಿಮಗೆ ಎಲ್ಲಾ ಬಗೆಯ ಸೌಲಭ್ಯಗಳು ದೊರಕುತ್ತವೆ. ನಿಮ್ಮ ಸಂಸ್ಥೆ ಒಂದೇ ಕಾಲೇಜನ್ನು ನಡೆಸುತ್ತಿದ್ದು ನಿಮಗೆ ಸೀನಿಯಾರಿಟಿಯಲ್ಲಿ ಜೇಷ್ಟತೆ ಇದ್ದಲ್ಲಿ ಬಡ್ತಿ ದೊರಕುವುದು ಸಾಧ್ಯ. ಇನ್ನು ಕೆಲಸದಲ್ಲಿ ಮುಂದುವರಿಯುವುದು ಅಥವಾ ಬಿಡುವುದು ನಿಮ್ಮ ಅಪೇಕ್ಷೆಗೆ ಬಿಟ್ಟ ವಿಚಾರ. ಅಜೀತ್ ಕುಮಾರ್.ಎಸ್.ಎಸ್. ಹೊಸದುರ್ಗ. * ನಾನು ಈಗ ದ್ವಿತೀಯ ಪಿ.ಯು.ಸಿ. ವಿಜ್ಞಾನ ಓದುತ್ತಿದ್ದೇನೆ. ಬಿ.ಎಸ್ಸಿ. ವೆಟರ್ನರಿ ಸೈನ್ಸ್ ಓದುವ ಆಸೆ ಇದೆ. ಅದಕ್ಕೆ ಎಷ್ಟು ಅಂಕಗಳನ್ನು ಪಡೆದುಕೊಂಡರೆ ಹಾಗೂ ಎಷ್ಟನೇ ಸಿ.ಇ.ಟಿ. ರ‌್ಯಾಂಕ್ ಪಡೆದರೆ ಸೀಟು ಸಿಗಬಹುದು? ಇದನ್ನು ಓದಿದರೆ ಉದ್ಯೋಗ ಅವಕಾಶಗಳು ಯಾವುವು? ವೆಟರ್ನರಿ ಕೋರ್ಸಿಗೆ ಸೇರಿಕೊಳ್ಳಬೇಕಾದರೆ ಕನಿಷ್ಠ ಶೇಕಡ 50 ಅಂಕ ಗಳಿಸಿರಬೇಕು. ಇದಕ್ಕಾಗಿ ನಡೆಯುವ ಪ್ರತ್ಯೇಕ ಅರ್ಹತಾ ಪರೀಕ್ಷೆಯಲ್ಲಿ ಉತ್ತಮ ರ‌್ಯಾಂಕಿಂಗ್ ಇರಬೇಕು. ಈ ಕೋರ್ಸ್ ಮಾಡಿದವರಿಗೆ ಸಾಕಷ್ಟು ಉದ್ಯೋಗ ಅವಕಾಶಗಳು ಇವೆ. ಸ್ನಾತಕೋತ್ತರ ಪದವಿ ಪಡೆದಲ್ಲಿ ಇನ್ನೂ ಉತ್ತಮ. ಇತ್ತೀಚೆಗೆ ಸಾಕು ಪ್ರಾಣಿಗಳನ್ನು ಮುದ್ದಿಗಾಗಿ ಪಾಲಿಸುವವರು ಹೆಚ್ಚುತ್ತಿರುವುದರಿಂದ ನೀವು ಖಾಸಗಿ ವೃತ್ತಿ ಸಹ ಮಾಡಬಹುದು. ನಿತ್ಯ ಶ್ರಿ. ಆರ್. ಜೆ.ಪಿ.ನಗರ, ಮೈಸೂರು. * ನಾನು ಶೇಕಡ 81 ಅಂಕಗಳಿಸಿ ಬಿ.ಕಾಂ. ಪೂರೈಸಿ ಪತ್ರಿಕೋದ್ಯಮದಲ್ಲಿ ಎಂ.ಎ. ಆಯ್ಕೆ ಮಾಡಿಕೊಂಡಿದ್ದೆ. ಆದರೆ ಅನೇಕ ನನ್ನ ಹಿತೈಷಿ ಹಾಗೂ ಸಹಪಾಠಿಗಳು ಎಂ.ಕಾಂ ಅಥವಾ ಎಂ.ಬಿ.ಎ. ಮಾಡಿಕೊಂಡಿದ್ದಲ್ಲಿ ಉದ್ಯೋಗ ಅವಕಾಶ ಚೆನ್ನಾಗಿತ್ತು ಎನ್ನುತ್ತಾರೆ. ಈ ಕ್ಷೇತ್ರದಲ್ಲಿ ಮಹಿಳೆಯರಿಗೆ ಬೆಳವಣಿಗೆ ಕಷ್ಟ ಎನ್ನುತ್ತಾರೆ. ಇದು ನಿಜವೇ? ಇತ್ತೀಚೆಗೆ ಅನೇಕರು ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಲು ಇಷ್ಟಪಡುವುದು ಒಳ್ಳೆಯ ಲಕ್ಷಣ. ಉದ್ಯೋಗ ಹಾಗೂ ಹಣಗಳಿಕೆ ದೃಷ್ಟಿಯಿಂದ ಬೇರೆ-ಬೇರೆ ಕೋರ್ಸುಗಳಿಗೆ ಬೇರೆ-ಬೇರೆ ಆಯಾಮಗಳಿರುತ್ತವೆ. ಆದರೆ ನಿಮ್ಮ ಓದು ಆಸಕ್ತಿಗಾಗಿಯೋ ಅಥವಾ ಉದ್ಯೋಗಕ್ಕಾಗಿಯೋ ಎಂಬುದನ್ನು ನೀವೇ ನಿರ್ಧರಿಸಬೇಕಾಗುತ್ತದೆ. ಅನೇಕ ಮಹಿಳೆಯರು ಈ ಕ್ಷೇತ್ರದಲ್ಲಿ ಈಗಾಗಲೇ ಕೆಲಸ ಮಾಡುತ್ತಿದ್ದು, ಉತ್ತಮ ಯಶಸ್ಸು ಸಾಧಿಸಿದ್ದಾರೆ. ಈಗಿನ ಕಾಲದಲ್ಲಿ ಯಾವುದೇ ಉದ್ಯೋಗದಲ್ಲಿ ಯಶಸ್ಸು ಗಳಿಸುವುದು ವೈಯಕ್ತಿಕ ವೃತ್ತಿಪರತೆಯಿಂದಲೇ ಹೊರತು ಮಹಿಳೆ ಅಥವಾ ಪುರುಷ ಎಂಬ ಕಾರಣದಿಂದಲ್ಲ. ಮಂಜುನಾಥ ಕೆ.ಎಂ. ದಾವಣಗೆರೆ * ನಾನು ಬೆಂಗಳೂರು ವಿ.ವಿ.ಯಲ್ಲಿ ದೂರಶಿಕ್ಷಣದಲ್ಲಿ ಬಿ.ಎ. ಪದವಿ ಮಾಡುತ್ತಿದ್ದು ಕೆ.ಎ.ಎಸ್. ಬರೆಯಲು ಅರ್ಹನೆ? ದೀಪಾರಾಣಿ.ಎಸ್. ಸಿದ್ದಾಪುರ. * ನಾನು ಮೈಸೂರು ಮುಕ್ತ ವಿ.ವಿ. ಯಿಂದ ಬಿ.ಎ. ಮಾಡುತ್ತಿದ್ದೇನೆ. ನನಗೆ ಉದ್ಯೋಗ ಅವಕಾಶಗಳಿವೆಯೇ? ರಾಕೇಶ್, ದಾವಣಗೆರೆ. * ನಾನು ಕುವೆಂಪು ವಿ.ವಿ.ಯಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದೇನೆ. ಇದರಿಂದ ಉಸ್ಮಾನಿಯ ಯೂನಿವರ್ಸಿಟಿಯಲ್ಲಿ ಒಂದು ವರ್ಷದ ಡಿಪ್ಲೊಮಾ ಇನ್ ರೇಡಿಯಾಲಜಿ ಮಾಡಬಹುದೇ? ಮೇಲಿನ ಪತ್ರಗಳೇ ಅಲ್ಲದೆ, ಇದೇ ರೀತಿಯ ಅನುಮಾನಗಳನ್ನು ಅನೇಕ ಓದುಗರು ಪತ್ರಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ದೂರಶಿಕ್ಷಣದ ಮೂಲ ಉದ್ದೇಶ ಶಾಲೆ-ಕಾಲೇಜುಗಳಲ್ಲಿ ನೇರವಾಗಿ ಕಲಿಯಲು ಅವಕಾಶ ವಂಚಿತರಾದವರಿಗೆ ಅನುಕೂಲ ಮಾಡಿಕೊಡುವುದು. ಹೀಗಾಗಿ ಮುಕ್ತ ವಿಶ್ವವಿದ್ಯಾಲಯ ಹಾಗೂ ಇತರ ವಿ.ವಿ.ಗಳಲ್ಲಿ ದೂರಶಿಕ್ಷಣ ನೀಡಲಾಗುತ್ತಿದೆ. ಇವುಗಳಲ್ಲಿ ಯಾವ ಯಾವ ಕೋರ್ಸುಗಳಿಗೆ ಯು.ಜಿ.ಸಿ.ಯಿಂದ ಮಾನ್ಯತೆ ದೊರಕಿರುತ್ತದೆಯೋ ಅವುಗಳಲ್ಲಿ ಕಲಿತವರು ನೇರ ಶಿಕ್ಷಣ ಪಡೆದವರಂತೆಯೇ ಉದ್ಯೋಗ ಹಾಗೂ ಓದು ಮುಂದುವರಿಸಲು ಅರ್ಹತೆ ಗಳಿಸಿಕೊಳ್ಳುತ್ತಾರೆ. ಆದ್ದರಿಂದ ಈ ಬಗ್ಗೆ ಅನುಮಾನ ಬೇಡ. ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ ಅದರಲ್ಲೂ ಖಾಸಗಿ ರಂಗದಲ್ಲಿ ನೇರ ಶಿಕ್ಷಣ ಪಡೆದವರಿಗೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶ ಎಂಬ ಷರತ್ತು ಇದ್ದಲ್ಲಿ, ಅದು ಆ ಹುದ್ದೆಗೆ ಮಾತ್ರ ಅನ್ವಯಿಸುತ್ತದೆ. ಯತೀಶ್.ಜಿ.ಎಸ್. ಗೇರಹಳ್ಳಿ, ನೆಲಮಂಗಲ. * ನಾನು ಬಿ.ಬಿ.ಎಂ. ಮುಗಿಸಿದ್ದೇನೆ. ನನಗೆ ಸರ್ಕಾರಿ ಕೆಲಸಕ್ಕೆ ಸೇರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಬೇಕು ಎಂಬ ಅಪೇಕ್ಷೆ ಇದೆ. ನಾನು ಎಂ.ಎ. ಅಥವಾ ಎಂ.ಬಿ.ಎ. ಇವುಗಳನ್ನು ಯಾವುದಕ್ಕೆ ಸೇರಲಿ? ತಿಳಿಸಿ. ನೀವು ಸರ್ಕಾರಿ ಕೆಲಸ ಎಂದರೆ ಯಾವ ಬಗೆ ವೃತ್ತಿ ಮಾಡಬೇಕೆಂದು ಮೊದಲು ನಿರ್ಧರಿಸಿಕೊಳ್ಳಿ. ಉದಾಹರಣೆಗೆ ಶಿಕ್ಷಕರಾಗಬೇಕಾದರೆ ಎಂ.ಎ. ಉತ್ತಮ ಆಯ್ಕೆ. ಇದಲ್ಲದೆ ಇತ್ತೀಚೆಗೆ ಅನೇಕ ವಿಷಯ ವೈವಿದ್ಯತೆ ಇದೆ. ಎಂ.ಬಿ.ಎ.ಗೆ ಹೆಚ್ಚಿನ ಉದ್ಯೋಗ ಅವಕಾಶಗಳು ಖಾಸಗಿ ರಂಗದಲ್ಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.