ಮಗುವಿನ ಭಾಷೆ ಮತ್ತು ನಾವುನೀವು ಅಚ್ಚ ಹಸುರಿನ ದಟ್ಟಕಾನನದ ಮೂಲ ನೆಲದಾಳದಲ್ಲಿ ಹುದುಗಿರುವ ಬೇರುಗಳ ಜಾಲದಲ್ಲಿ ಅಡಗಿರುವಂತೆ ಜ್ಞಾನದ ಎಲ್ಲ ಶಾಖೆಗಳ ಮೂಲ ಭಾಷೆಯೆಂಬ ತಾಯಿ ಬೇರಿನಲ್ಲಿದೆ. ನಮ್ಮಲ್ಲಿ ಬಹುಜನರ ಕಲ್ಪನೆಯಲ್ಲಿ ಭಾಷೆ ಬರೀ ಸಂಪರ್ಕ ಮಾಧ್ಯಮ. ಅದು ಅತಿ ಸೀಮಿತ ದೃಷ್ಟಿ. ಭಾಷೆ ಚಿಂತನೆಗೆ, ಭಾವನೆಗೆ, ಅನುಭವಕ್ಕೆ ಆಕಾರ ಕೊಡುವ ಸಾಧನ. ಎಂತಹ ಅಮೂರ್ತವಾದ ಕಲ್ಪನೆಯನ್ನೂ ಪರಿಕಲ್ಪನೆಯಾಗಿಸಿ, ಮನಸ್ಸಿನಲ್ಲಿಯೇ ಮೂರ್ತ ರೂಪ ನೀಡಿ, ಭೌತಿಕ ರೂಪವನ್ನೂ ನೀಡುವ ಸಾಮರ್ಥ್ಯ ಬರುವುದು ಭಾಷೆಯೆಂಬ ಮಂತ ದಂಡದಿಂದಲೇ. ಈಗ ಒಂದು ಅಂಶ ಸ್ಪಷ್ಟ. ಎಲ್ಲಕ್ಕಿಂತ ಮೊದಲು ಮಗುವಿಗೆ ಬೇಕಾಗಿರುವುದು ಸಮರ್ಥ ಭಾಷೆ. ಮಗುವಿನ ಶೈಕ್ಷಣಿಕ ಪ್ರಗತಿಯಲ್ಲಿ ಭಾಷೆ ವಹಿಸುವ ಪಾತ್ರದ ಅರಿವು ಶಿಕ್ಷಕರಿಗೆ ಮಾತ್ರವೇ ಅಲ್ಲ, ಪೋಷಕರಿಗೂ ಅಗತ್ಯ. ಏಕೆಂದರೆ, ಮೊದಲನೆಯದಾಗಿ, ಭಾಷೆಯ ಕಲಿಕೆ ಮನೆಯಿಂದಲೇ ಪ್ರಾರಂಭ (`ಜಾಗೃತ~ ಪೋಷಕರು ದ್ವಿತೀಯ ಭಾಷೆಯ ಕಲಿಕೆಯನ್ನು ಮನೆಯಲ್ಲೇ ಪ್ರಾರಂಭಿಸುತ್ತಿದ್ದಾರೆ). ಎರಡನೆಯದಾಗಿ, ಇಂದು ಮಗುವಿನ ಶೈಕ್ಷಣಿಕ ಪ್ರಗತಿ ಶಿಕ್ಷಕರ ಜವಾಬ್ದಾರಿ ಮಾತ್ರವಲ್ಲ. ಹಾಗಿದ್ದರೆ ಶಿಕ್ಷಕರಾಗಿ ಮತ್ತು ಪೋಷಕರಾಗಿ ಮಗುವಿನ ಭಾಷಾ ಬೆಳವಣಿಗೆಯಲ್ಲಿ ನಾವು ವಹಿಸಬಹುದಾದ ಪಾತ್ರ ಎಂತಹದ್ದು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಭಾಷಾ ಕಲಿಕಾ ಪ್ರಕ್ರಿಯೆಯನ್ನು ಸ್ಥೂಲವಾಗಿ ಅರ್ಥಮಾಡಿಕೊಂಡರೆ ಸಾಕು. ಮಗು ಭಾಷೆಯನ್ನು ಹೇಗೆ ಕಲಿಯುತ್ತದೆ? ಸೋಜಿಗದ ಸಂಗತಿಯೆಂದರೆ, ಮನುಷ್ಯನು ಭಾಷೆಯನ್ನು ಹೇಗೆ ಕಲಿಯುತ್ತಾನೆ? ಎಂಬುದು ಮಹಾನ್ ಪಂಡಿತರಿಗೇ ಸಂಪೂರ್ಣವಾಗಿ ಅರ್ಥವಾಗಿಲ್ಲ. ಆದರೆ ಭಾಷಾ ಕಲಿಕೆಗೆ ಸಂಬಂಧಿಸಿದ ಬಾಹ್ಯವರ್ತನೆಗಳಲ್ಲಿ ಪ್ರಮುಖವಾದ ಆಲಿಸುವಿಕೆ, ಮಾತನಾಡುವುದು, ಓದು, ಬರವಣಿಗೆ ಇಂತಹ ವರ್ತನೆಗಳನ್ನು ಪ್ರಭಾವಿಸುವ ಮೂಲಕ ಭಾಷೆಯನ್ನು (ಕಲಿಕೆಯನ್ನು) ನಿರ್ದೇಶಿಸಬಹುದು. ಸುಪ್ತ ಆದರೆ ಸಶಕ್ತ ಮಗು ನಾವು ಮಾತನಾಡುವ ಭಾಷೆಯನ್ನು `ಮಾತನಾಡುವಂತೆಯೇ~ ಕಲಿಯುತ್ತದೆ. `ಮಾತನಾಡುವಂತೆಯೇ~ ಎಂಬುದು ಮಗುವಿನ ಆಲಿಸುವಿಕೆ ಪ್ರಕ್ರಿಯೆಯಲ್ಲಿ ನಮ್ಮ ಹೊಣೆಗಾರಿಕೆಯನ್ನು ಸೂಚಿಸುತ್ತದೆ. `ಮಗುವಿಗೇನು ತಿಳಿಯುತ್ತದೆ~ ಎಂದು ನಾವು ಅದಕ್ಕೆ ಸ್ಪಂದಿಸದೆ ಇರುವಂತಿಲ್ಲ; ಅದರ ಮುಂದೇ ಏನೇನೋ ಮಾತಾಡುವಂತಿಲ್ಲ. ಈ ಹಂತದಲ್ಲಿ ಭಾಷೆಗೆ ಸಂಬಂಧಿಸಿದಂತೆ ಮಗುವಿಗೆ ಸ್ವೀಕಾರ ಸಾಮರ್ಥ್ಯ ಸುಪ್ತ ಮತ್ತು ಸಶಕ್ತ! ನಮ್ಮ ಮನಸ್ಸಿನಂತೆ ಮಾತು, ಮಾತಿನಂತೆ ವ್ಯಕ್ತಿತ್ವ ಮತ್ತು ಇದರ ಒಟ್ಟು ಮೊತ್ತ ಮಗುವಿನ ವ್ಯಕ್ತಿತ್ವ. ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ! ಮೊದಲು ಬ್ರೋಕನ್ ನಂತರ ಸ್ಪೋಕನ್! ತಜ್ಞರು ಹೇಳುವಂತೆ, `ಮಗುವಿನ ಭಾಷಾ ನಿರರ್ಗಳತೆಗೆ (ಫ್ಲುಯೆನ್ಸಿ) ನಮ್ಮ ತಿದ್ದುವಿಕೆ ಅಡ್ಡಿಯಾಗಬಾರದು~ ಸೋಜಿಗವೆಂದರೆ, ಆರಂಭದ ಎರಡು - ಮೂರು ವರ್ಷಗಳಲ್ಲಿ ಈ ನಿಯಮ ಚಾಚೂ ತಪ್ಪದೆ ಪಾಲನೆಯಾಗುತ್ತದೆ. ಪೋಷಕರಾಗಿ ನಾವು ಮಗುವಿನ ಪ್ರತಿ ತೊದಲು ನುಡಿಯನ್ನೂ ಆನಂದಿಸುತ್ತಾ, ಪ್ರಯತ್ನಗಳಿಗೆ ಅವಕಾಶ ನೀಡುತ್ತಾ ತಿದ್ದುತ್ತೇವೆ. ಸ್ವಾನುಭವದ ಒಂದು ಉದಾಹರಣೆಯನ್ನು ಕೊಡುವುದಾದರೆ, ಮೂರು ವರ್ಷದ ಮಗುವೊಂದು `ಬೆಂಕಿ ಪೊಟ್ಟಣ~ ಎಂಬ ಪದವನ್ನು ಕಲಿತ ಬಗೆ ಹೀಗೆ - ಒಂದು ವರ್ಷ ವಯಸ್ಸಿನಲ್ಲಿ `ಬಿಕಿಪಾ~, ನಂತರ `ಬಿಕ್ಕಿ ಪೊತ~, `ಬಿಕ್ಕಿ ಪೊತ್ನ~ ಕೊನೆಗೆ `ಬೆಂಕಿ ಪೊಟ್ನ~. ಬ್ರೋಕನ್ ಭಾಷೆ ಸ್ಪೋಕನ್ ಭಾಷೆಯಾಗುವ ಪರಿಯಿದು. ಇಲ್ಲಿ ನಮ್ಮ ಜವಾಬ್ದಾರಿಯಿಷ್ಟೆ; ಮಾತನಾಡಲು ಮುಕ್ತ ಅವಕಾಶ ಮತ್ತು ನಿರ್ದೇಶನ. ಒಂದು ಉದಾಹರಣೆ ಮಗುವೊಂದನ್ನು ತರಗತಿ ಯಿಂದ ಅಥವಾ ಮನೆಯಿಂದ ಆಚೆ ಕಳುಹಿಸಿ, ವಸ್ತುವೊಂದನ್ನೋ, ಸ್ಥಳವೊಂದನ್ನೋ ಪರಿಶೀಲಿಸಲು ಹೇಳುವುದು, ಅದರ ಬಗ್ಗೆ ಮಗು ಮಾತನಾಡಬೇಕು. ಇಂತಹ ನೂರಾರು ಚಟುವಟಿಕೆಗಳನ್ನು ಮಾಡಿಸಬಹುದು. ಓದು, ಅರ್ಥಪೂರ್ಣ ಓದು ಆರಂಭದಲ್ಲಿಯೇ ಅರ್ಥಪೂರ್ಣ ಓದು ಸಾಧ್ಯವೇ? ಸಾಮಾನ್ಯ ಅಭಿಪ್ರಾಯದಲ್ಲಿ ಸಾಧ್ಯವಿಲ್ಲ. ಆದರೆ ಅಸಾಧ್ಯವಲ್ಲ. ಮಗುವಿನ ದೃಷ್ಟಿಯಲ್ಲಿ ಅರ್ಥಪೂರ್ಣವಾದರೆ ಸಾಕು. ಮನೆಯಲ್ಲಿದ್ದ ಪುಸ್ತಕಗಳನ್ನು ಪೆಟ್ಟಿಗೆಯಿಂದ ವರ್ಷಕ್ಕೊಮ್ಮೆ ಆಚೆ ತೆಗೆದು ಪೂಜಿಸುತ್ತಿದ್ದುದನ್ನು ನೋಡಿದ ಕುವೆಂಪುರವರ ಬಾಲ್ಯದ ಮನಸ್ಸು ಪುಸ್ತಕಗಳಲ್ಲಿ ಅರ್ಥ ಕಂಡಿತ್ತು. ಮುಂದಿನ ಯಶೋಗಾಥೆ ಚಿರಪರಿಚಿತ. ತಜ್ಞರು ಅಭಿಪ್ರಾಯ ಪಡುವಂತೆ ಭವಿಷ್ಯದಲ್ಲಿ ಮಗು ಓದಬೇಕಿರುವುದು ಪುಸ್ತಕಗಳನ್ನೇ ಆದ್ದರಿಂದ ಓದು ಪುಸ್ತಕದೊಂದಿಗೇ ಆರಂಭವಾಗಬೇಕು. ಯಾವ ವಿಧದ ಪುಸ್ತಕ ಎಂಬುದಷ್ಟೇ ಮುಖ್ಯ. ಪೂರಕವಾಗಿ ಬೇರೆ ಏನನ್ನೂ ಬಳಸಬಹುದು. ಲಿಖಿತ ಪದ ಮತ್ತು ಅದರ ಹಿಂದಿನ ಭಾವನೆ: `ನಮ್ಮ ಮನೆಯಲ್ಲಿ ನಾನೆ ಬಟ್ಟೆಮೊಕ್ಕೊಬೇಕು. ಅದು ನನಗೆ ತುಂಬ ಕಷ್ಟವಾಕ್ತಿದೆ. ಉ್ಡಞ ಇರಬೇಕಾದರೂ ನಾನೆ ಒಕ್ಕೊಬೇಕು ನಾನು ನಮ್ಮನೆ ಒಕ್ಕೊಡು ಅಂದ್ರೂ ನನಗೆ ಆಗುಲ್ಲ ನೀನೇ ಒಕ್ಕೊ ಯನ್ನುತ್ತಾರೆ.~ ಇದು ಹನ್ನೊಂದು ವರ್ಷದ ಮಗುವೊಂದರ ಅಳಲಿನ ಲಿಖಿತ ರೂಪ. ಇಲ್ಲಿ ಮಗುವಿನ ಬರವಣಿಗೆಯ ಕಾಗುಣಿತ ದೋಷದ ಬಗ್ಗೆ ಮಾತನಾಡಿದರೆ ಅದು ಕ್ರೂರತೆಯ ಪರಮಾವಧಿ! ದೋಷವನ್ನು ಸರಿಪಡಿಸಬಾರದೆಂದಲ್ಲ, ಆದರೆ ಅದಕ್ಕೆ ನಂತರದ ಪ್ರಾಶಸ್ತ್ಯ ಸಿಗಬೇಕು. ಮಗು ತೊದಲಲು ಆರಂಭಿಸಿದಂದಿನಿಂದ, ಭಾಷೆಯನ್ನು ಹಿಂಡಿ, ಹಿಪ್ಪೆ ಮಾಡುತ್ತದೆ; ಅದರ ಜೊತೆ ಆಟವಾಡುತ್ತದೆ; ಚಿತ್ರ ವಿಚಿತ್ರವಾಗಿ ಬಳಸುತ್ತದೆ. ಇಂತಹ ಅವಕಾಶ, ಪ್ರಯತ್ನಗಳಿಗೆ ಸಿಗುವ ಪ್ರೊತ್ಸಾಹ ಈ ಹಂತದಲ್ಲೂ ಸಿಗಬೇಕು. ವಿಪರ್ಯಾಸವೆಂದರೆ ಕಾಗುಣಿತ ದೋಷವೇ ಮಗುವಿನ ನಿರರ್ಗಳ ಲಿಖಿತ ಅಭಿವ್ಯಕ್ತಿಗೆ ತಡೆಗೋಡೆ. ನೂರೆಂಟು ಅಲಂಕಾರಗಳನ್ನು ಬಳಸಿದರೂ ಪರಿಣಾಮಕಾರಿಯಾಗದ ಒಂದು ಅನುಭವವನ್ನು, ಅದರ ಭಾಗವೇ ಆಗಿದ್ದವನ ಸರಳ ಭಾಷೆಯಲ್ಲಿ ನೀಡಿದರೆ ಅದ್ಭುತ ಪರಿನಾಮ ಬೀರಬಲ್ಲದು. ಆ್ಯನ್ ಫ್ರಾಂಕ್ ಎಂಬ ಮಗುವಿನ ದಿನಚರಿ ನಿಮಗೆ ಗೊತ್ತೇ ಇದೆ. ಒಟ್ಟಿನಲ್ಲಿ, ಮಗುವೊಂದು ಸಿಹಿಯಾದ ಫಲ ನೀಡುವ ವೃಕ್ಷವಾಗಿ ಬೆಳೆಯಬೇಕಾದರೆ, (ಅದು ಯಾವುದೇ ಭಾಷೆಯಾಗಿರಲಿ), ಭಾಷೆಯೆಂಬ ತಾಯಿ ಬೇರು ಅತ್ಯಗತ್ಯ. ಆ ತಾಯಿ ಬೇರಿನ ಸಶಕ್ತೀಕರಣದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಾತೃಭಾಷೆ ಅತ್ಯಂತ ಪರಿಣಾಮಕಾರಿ ಎಂಬ ಮಾತನ್ನು ಮರೆಯಲಾಗದು. ಭಾಷೆಗಿರುವ ಮಿತಿಯನ್ನು ವಿಸ್ತರಿಸಬೇಕಾದ್ದು ಆಯಾ ಕ್ಷೇತ್ರದ ತಜ್ಞರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.