ಬೋಧನೆಯಲ್ಲಿ ಹೊಸದೃಷ್ಟಿ ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮ ಹೆಚ್ಚು ಮಹತ್ವ ಪಡೆಯುತ್ತಿದೆ. ಮಕ್ಕಳು ಟಿವಿ ಅಥವಾ ಕಂಪ್ಯೂಟರ್ ಮುಂದೇ ಹೆಚ್ಚು ಸಮಯ ಕಳೆಯುತ್ತಾರೆ. ಆ ಮಾಧ್ಯಮಗಳನ್ನೇ ಆಧಾರವಾಗಿಟ್ಟುಕೊಂಡು ಪಾಠ ಮಾಡಿದರೆ ಮಕ್ಕಳ ಆಸಕ್ತಿ ಹಾಗೂ ಗಮನವನ್ನು ಸೆರೆಹಿಡಿಯಬಹುದು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಶಾಲಾ ಪಠ್ಯಕ್ರಮವನ್ನು ದೃಶ್ಯ ಹಾಗೂ ಧ್ವನಿಯಲ್ಲಿ ಸೆರೆ ಹಿಡಿದು ಡಿವಿಡಿ ತಯಾರಿಸಿದ್ದಾರೆ ಎಸ್.ವಿಶ್ವನಾಥ್. 1967ರಿಂದ 2004ರವರೆಗೆ ಶಿಕ್ಷಣ ಕ್ಷೇೀತ್ರದಲ್ಲಿ ದುಡಿದು ಪದವಿಪೂರ್ವ ಶಿಕ್ಷಣದ ಜಂಟಿ ನಿರ್ದೇಶಕರಾಗಿ ನಿವೃತ್ತರಾದ ವಿಶ್ವನಾಥ್ ಅವರಿಗೆ ಪಾಠವನ್ನು ಹೆಚ್ಚು ಆಸಕ್ತಿಕರವಾಗಿ ಬೋಧಿಸುವುದು ಹೇಗೆ ಎಂಬ ಬಗ್ಗೆ ಆಲೋಚನೆ ಇದ್ದೇ ಇತ್ತು. ಬೋರ್ಡು-ಬಳಪ ಹಿಡಿದು ಎಷ್ಟು ದಿನ ಪಾಠ ಮಾಡುವುದು? ಮಕ್ಕಳೂ ಹೊಸತನ ಬಯಸುತ್ತಾರೆ. ಇಂದಿನ ತಾಂತ್ರಿಕ ಯುಗದಲ್ಲಿ ಮಕ್ಕಳು ಬೌದ್ಧಿಕವಾಗಿ ಹೆಚ್ಚು ಪ್ರೌಢರಾಗುತ್ತಿದ್ದಾರೆ. ಅವರಿಗೆ ಶತಮಾನಗಳ ಹಿಂದಿನ ಪಾಠ ಪದ್ಧತಿಯಲ್ಲಿ ಆಸಕ್ತಿ ಮೂಡುತ್ತಿಲ್ಲ. ಇದಕ್ಕೆ ಏನಾದರೂ ಮಾಡಬೇಕೆಂಬ ಆಲೋಚನೆಯಲ್ಲಿ ತೊಡಗಿದಾಗ ಈ ಆಲೋಚನೆ ಮೂಡಿತು. `ನಾವು ಚಿಕ್ಕವರಾಗಿದ್ದಾಗಲೂ ಇದೇ ಪಾಠ ಪದ್ಧತಿ ಇತ್ತು. ಅಮೆರಿಕ, ಚೀನಾಗಳನ್ನು ತೋರಿಸುವುದಕ್ಕೆ ಒಂದು ನಕ್ಷೆಯೂ ಇರಲಿಲ್ಲ. ಮಹಾಯುದ್ಧಗಳ ಬಗ್ಗೆ, ಮಹಾನ್ ನಾಯಕರ ಬಗ್ಗೆ, ನಮ್ಮ ನಾಡಿನ ಇತಿಹಾಸದ ಬಗ್ಗೆ ಓದುವಾಗ ಮೂಡುವ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತಿರಲಿಲ್ಲ. ಮಕ್ಕಳಿಗೆ ಸಚಿತ್ರ ಸಹಿತ ಪಾಠಗಳು ಸಿಗಬೇಕು ಎಂಬ ದೃಷ್ಟಿಯಿಂದ ದೇಶ-ವಿದೇಶಗಳನ್ನು ಸುತ್ತಿ ದೃಶ್ಯಗಳನ್ನು, ಚಿತ್ರಗಳನ್ನು ಸಂಗ್ರಹಿಸಿ ಈ ಡಿವಿಡಿ ತಯಾರಿಸಿದೆ~ ಎನ್ನುತ್ತಾರೆ ಎಸ್.ವಿಶ್ವನಾಥ್. ಹಾಗೆ ನೋಡಿದರೆ ಇದೇನೂ ಹೊಸ ಪರಿಕಲ್ಪನೆ ಅಲ್ಲ. ಉನ್ನತ ಶೈಕ್ಷಣಿಕ ವಲಯದಲ್ಲಿ, ಅದರಲ್ಲೂ ದೂರ ಶಿಕ್ಷಣದಲ್ಲಿ ಈ ಪ್ರಯೋಗವನ್ನು ಮಾಡಲಾಗಿದೆಯಾದರೂ ಶಾಲಾ ಹಂತದಲ್ಲಿ ಅದರಲ್ಲೂ ಕನ್ನಡದಲ್ಲಿ ಇಂತಹ ಪ್ರಯೋಗ ಇದೇ ಮೊದಲೆಂದೇ ಹೇಳಬಹುದು. ಅದರಲ್ಲೂ ಪಾಠಗಳಿಗೆ ಸಂಬಂಧಿಸಿದಂತೆ ಅತ್ಯುತ್ತಮ ಗುಣಮಟ್ಟದ ಮೂಲ ಚಿತ್ರಗಳನ್ನು, ದೃಶ್ಯಗಳನ್ನು ಸಂಗ್ರಹಿಸುವಲ್ಲಿ ವಿಶ್ವನಾಥ್ ಅವರ ಪರಿಶ್ರಮ ಅಡಗಿದೆ. ಡಿವಿಡಿಯಲ್ಲಿ ಏನೇನಿದೆ? ಭಾಗ-1 * ಭಾರತೀಯ ಅನ್ವೇಷಣೆ * ಭಾರತದಲ್ಲಿ ಯೂರೋಪಿಯನ್ನರು * ಮೈಸೂರು ಸುಲ್ತಾನರು * ವಿಶ್ವಸಂಸ್ಥೆ * ಅಂಟಾರ್ಟಿಕ ಖಂಡ ಭಾಗ-2 * ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು * ಭಾರತ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ * ಒಂದನೇ ಮಹಾಯುದ್ಧ * ದ ಲೀಗ್ ಆಫ್ ನೇಷನ್ಸ್ (ರಾಷ್ಟ್ರಸಂಘ) * ಎರಡನೇ ಮಹಾಯುದ್ಧ * ಭಾರತದ ಸ್ವಾತಂತ್ರ್ಯ ಹೋರಾಟ 7ನೇ ತರಗತಿಯಿಂದ 10ನೇ ತರಗತಿವರೆಗಿನ ಪಠ್ಯವನ್ನು ಎರಡು ಭಾಗಗಳಲ್ಲಿ ತಯಾರಿಸಲಾಗಿದೆ. (ಪಿಯುಸಿ ಇತಿಹಾಸ ವಿಷಯದಲ್ಲಿಯೂ ಈ ಅಧ್ಯಾಯಗಳಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು). ಮೊದಲ ಭಾಗದಲ್ಲಿ ಐದು ಹಾಗೂ ಎರಡನೇ ಭಾಗದಲ್ಲಿ ಆರು ಹೀಗೆ ಒಟ್ಟು 11 ಅಧ್ಯಾಯಗಳಿವೆ. ಎರಡೂ ಡಿವಿಡಿಗಳ ಅವಧಿ ಆರು ಗಂಟೆ. ಚಿತ್ರಗಳ ಆಧಾರದಿಂದ ವಿಷಯಗಳನ್ನು ತಿಳಿಸುವ ಮುಲಕ ಪರಿಣಾಮಕಾರಿ ಬೋಧನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸ್ವಾಮಿ ವಿವೇಕಾನಂದ, ಸುಭಾಷ್‌ಚಂದ್ರಬೋಸ್, ಗಾಂಧೀಜಿ, ನೆಹರು, ಮೌಂಟ್‌ಬ್ಯಾಟನ್ ಮುಂತಾದ ಮಹಾನ್ ನಾಯಕರ ಸಚಿತ್ರ ಪರಿಚಯ ಮಾಡಲಾಗಿದೆ. ಜೊತೆಗೆ ಅವರ ಮೂಲ ಭಾಷಣದ ಶ್ರವಣ ದೃಶ್ಯಭಾಗಗಳಿವೆ. ಮಹಾಯುದ್ಧಗಳ ಪಾಠಗಳಿಗೆ ಸಂಬಂಧಿಸಿದಂತೆ ನೈಜ ಯುದ್ಧ ದೃಶ್ಯಗಳನ್ನು ಅಳವಡಿಸಲಾಗಿದೆ. ಭೂಪಟಗಳು, ನಕ್ಷೆಗಳ ಮೂಲಕ ಭೌಗೋಳಿಕ ಅಧ್ಯಯನವನ್ನು ಸಾದರಪಡಿಸಲಾಗಿದೆ. ಇಲ್ಲಿಯವರೆಗೂ ಸುಮಾರು ಮೂರು ಸಾವಿರ ಡಿವಿಡಿಗಳನ್ನು ವಿವಿಧ ಶಾಲೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ವಿತರಿಸಿದ್ದಾರೆ. ಕಾರ್ಯಾಗಾರಗಳಲ್ಲಿ ಈ ಡಿವಿಡಿಗಳನ್ನು ಪ್ರದರ್ಶಿಸಿ ಮಕ್ಕಳಿಂದ, ಪಾಲಕರಿಂದ, ಶಿಕ್ಷಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ ವಿಶ್ವನಾಥ್. ಈ ಡಿವಿಡಿಯ ಯಶಸ್ಸಿನ ಆಧಾರದ ಮೇಲೆ ಮುಂದೆ ಯಾವ ಯಾವ ವಿಷಯಗಳನ್ನು ತಯಾರಿಸುವುದು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವುದು ಅವರ ಮುಂದಿನ ಆಲೋಚನೆ. (ಸಂಪರ್ಕ ಸಂಖ್ಯೆ: 99457 99886) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.