ಶಾಲೆಯಾಗಲಿ ಸ್ಟುಡಿಯೊ ಶಾಲಾ ಶಿಕ್ಷಣದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ. ಹೇಗಿರಬೇಕು ಶಿಕ್ಷಣ? ಶಿಕ್ಷಣದ ಮೌಲ್ಯ- ಮಾನದಂಡಗಳೇನು? ಮಕ್ಕಳನ್ನು ಓದಿನತ್ತ ಸೆಳೆಯಲು ಏನು ಮಾಡಬೇಕು, ಇಂದಿನ ಸ್ಪರ್ಧಾತ್ಮಕ ಯುಗದ ವೇಗಕ್ಕೆ ತಕ್ಕಂತೆ ಮಕ್ಕಳನ್ನು ತಯಾರು ಮಾಡುವುದು ಹೇಗೆ? ಎಂಬ ಬಗ್ಗೆಯೇ ಎಲ್ಲರ ಗಮನ... ಆದರೆ ಮಕ್ಕಳ ಆಸಕ್ತಿ-ಅಭಿರುಚಿ ಹೆಚ್ಚಲು ಕೇವಲ ಪಠ್ಯ-ಪುಸ್ತಕಗಳಷ್ಟೇ ಅಲ್ಲ, ಶಾಲಾ ಕಟ್ಟಡಗಳೂ, ಬೆಂಚು, ಖುರ್ಚಿ, ಬೋರ್ಡ್‌ಗಳೂ ಕೂಡ ತಮ್ಮದೇ ಆದ ಪಾತ್ರ ವಹಿಸುತ್ತವೆ ಎಂಬ ಸಿದ್ಧಾಂತಕ್ಕೆ ಮನ್ನಣೆ ನೀಡಿದವರು ಪ್ರಕಾಶ್ ನಾಯರ್. .comನ ವ್ಯವಸ್ಥಾಪಕ ಸಂಪಾದಕರೂ ಆಗಿರುವ ( )ನ ಸಹ ಸಂಸ್ಥಾಪಕ/ ನಿರ್ದೇಶಕ ಪ್ರಕಾಶ್, ಶಾಲಾ ಕಟ್ಟಡಗಳ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸಕ್ಕೆ ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ. ಪರಿಣಾಮಕಾರಿ ಶಾಲಾ ಶಿಕ್ಷಣಕ್ಕೆ ಇವರು ಸಿದ್ಧಪಡಿಸಿರುವ ಸಂಶೋಧನಾ ಆಧಾರಿತ ಪರಿಕರಗಳನ್ನು ಆಸ್ಟ್ರೇಲಿಯಾ, ಸಿಂಗಪುರ ಒಳಗೊಂಡಂತೆ ಅನೇಕ ರಾಷ್ಟ್ರಗಳು ಪರೀಕ್ಷಿಸಿವೆ. ಶಾಲಾ ಶಿಕ್ಷಣದಲ್ಲಿ ಹೊಸತನ ತರುವಲ್ಲಿ ಕಟ್ಟಡಗಳು ಹಾಗೂ ಪೀಠೋಪಕರಣಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬ ಪ್ರಕಾಶ್ ಅವರ ಅಧ್ಯಯನವನ್ನು ಒಪ್ಪಿಕೊಂಡಿವೆ. * ಜಗತ್ತಿನಾದ್ಯಂತ ಶಿಕ್ಷಣ ವಲಯ ಯಾವ ರೀತಿ ಬದಲಾವಣೆಗೆ ಒಳಪಡುತ್ತಿದೆ? ದಿನದಿಂದ ದಿನಕ್ಕೆ ವಿಶ್ವ ಕಿರಿದಾಗುತ್ತಿದೆ. ಅದರಲ್ಲೂ ಶೈಕ್ಷಣಿಕ ವಲಯದಲ್ಲಿ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಸಿಂಗಪುರ ಒಳಗೊಂಡಂತೆ ಇತರ ದೇಶಗಳು ಸಾಕಷ್ಟು ಮುಂದೆ ಸಾಗಿವೆ. ಶಿಕ್ಷಕ ಕೇಂದ್ರೀಕೃತ ಶಿಕ್ಷಣದ ಬದಲು ವಿದ್ಯಾರ್ಥಿ ಕೇಂದ್ರೀಕೃತ ಶಿಕ್ಷಣ ಹೆಚ್ಚು ಮಹತ್ವ ಪಡೆಯುತ್ತಿದೆ. ಇದಕ್ಕೆ ಎರಡು ಕಾರಣಗಳನ್ನು ಗುರುತಿಸಬಹುದು- ಇಬ್ಬರು ವ್ಯಕ್ತಿಗಳು ಒಂದೇ ರೀತಿ ಇರಲು ಸಾಧ್ಯವಿಲ್ಲ. ಹಾಗಾಗಿ ಒಂದು ಗುಂಪಿನ ವಿದ್ಯಾರ್ಥಿಗಳಿಗೆ ಒಂದೇ ರೀತಿ ಕಲಿಸುವುದರಿಂದ ಅವರೆಲ್ಲರೂ ಒಂದೇ ರೀತಿ ಕಲಿಯಲು ಸಾಧ್ಯವಿಲ್ಲ. ಆದ್ದರಿಂದ ವ್ಯಕ್ತಿಗತ ಶಿಕ್ಷಣ ಇಂದಿನ ಅಗತ್ಯವಾಗಿದೆ. ಅಲ್ಲದೇ, ಇಂದಿನ ಔದ್ಯೋಗಿಕ ವಲಯದ ಬೇಡಿಕೆಗಳೂ ಬದಲಾಗಿವೆ. ಗಂಭೀರ ಚಿಂತನೆ ಹಾಗೂ ಸಮಸ್ಯೆಯನ್ನು ಭೇದಿಸುವ ಕೌಶಲಕ್ಕೆ ಹೆಚ್ಚಿನ ಮನ್ನಣೆ ಇದೆ. ಈ ಸಾಮರ್ಥ್ಯವನ್ನು ಬೆಳೆಸುವಲ್ಲಿ ಒನ್-ಟು-ಒನ್ ಮಾದರಿಯ ಶಿಕ್ಷಣ ಬೇಕೇ ಬೇಕು. * ಈ ಬದಲಾವಣೆಗಳನ್ನು ಅಂಗೀಕರಿಸಿಕೊಳ್ಳಲು ಭಾರತ ಅನುಸರಿಸಬಹುದಾದ ನಿರ್ದಿಷ್ಟ ಮಾರ್ಗಗಳೇನು? ಶಿಕ್ಷಣದ ಮಟ್ಟದಲ್ಲಿ ಭಾರತ ಕವಲು ದಾರಿಯಲ್ಲಿ ನಿಂತಿದೆ ಎಂದೇ ಹೇಳಬಹುದು. ಶಿಕ್ಷಣ ಎಂದರೆ ವಿದ್ಯಾರ್ಥಿಗಳನ್ನು ಯಂತ್ರಗಳನ್ನಾಗಿ ತಯಾರು ಮಾಡುವುದಲ್ಲ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನದಷ್ಟೇ ಕೌಶಲ ಹಾಗೂ ಪ್ರತಿಭೆಗಳೂ ಮುಖ್ಯವಾಗುತ್ತವೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಬದಲಾಗಬೇಕು. ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ತನ್ನದಾಗಿಸಿಕೊಂಡರೆ ಭಾರತದ ವಿದ್ಯಾರ್ಥಿಗಳು ಜಾಗತಿಕ ವಲಯದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. * ಕಲಿಕೆಯಲ್ಲಿ ಕಟ್ಟಡ ಹಾಗೂ ಪೀಠೋಪಕರಣಗಳ ಪಾತ್ರದ ಕುರಿತು ನೀವು ಅನೇಕ ಮಾದರಿಗಳನ್ನು ಸಿದ್ಧಪಡಿಸಿದ್ದೀರಿ, ಕಟ್ಟಡ ಹಾಗೂ ಪೀಠೋಪಕರಣ ಕಲಿಕೆಗೆ ಹೇಗೆ ಪೂರಕವಾಗಬಲ್ಲವು? ದುರದೃಷ್ಟವಶಾತ್ ಶೇ 90ರಷ್ಟು ಶಿಕ್ಷಣ ಸಂಸ್ಥೆಗಳು ಉಪನ್ಯಾಸ ಮಾದರಿಯ ಶಿಕ್ಷಣಕ್ಕೆ ಮಾತ್ರ ಪೂರಕವಾದ ತರಗತಿ ಕಟ್ಟಡಗಳನ್ನು ಹೊಂದಿರುತ್ತವೆ. ಆದರೆ ಕಲಿಕೆ ಎಂಬುದು ಕೇವಲ ನಾಲ್ಕು ಗೋಡೆಗಳ ನಡುವೆ, ಏಕಾಭಿಮುಖವಾಗಿ ಮಾತ್ರ ನಡೆಯುವಂಥದ್ದಲ್ಲ. ಶಾಲಾ ಕಟ್ಟಡಗಳನ್ನು `ಲರ್ನಿಂಗ್ ಸ್ಟುಡಿಯೊ~ಗಳ ಮಾದರಿಯಲ್ಲಿ ನಿರ್ಮಿಸಬೇಕು. ಇದರಿಂದ ಗುಂಪು ಸಹಭಾಗಿತ್ವ, ವ್ಯಕ್ತಿಯಿಂದ-ವ್ಯಕ್ತಿಗೆ, ವೈಯಕ್ತಿಕವಾಗಿ, ಪ್ರತ್ಯೇಕವಾಗಿ, ಪ್ರಾಜೆಕ್ಟ್‌ಗಳ ಮೂಲಕವೂ ಕಲಿಕೆ ಆಗುತ್ತದೆ. ಇಂತಹ ಕಲಿಕೆಗೆ ಅನುಕೂಲವಾಗುವಂತೆ ಕಟ್ಟಡ ಹಾಗೂ ಪೀಠೋಪಕರಣಗಳನ್ನು ಅಳವಡಿಸಬೇಕು. ಇಂತಹ ಪ್ರಯತ್ನಗಳು ಸಾಂಪ್ರದಾಯಿಕ ಮಾದರಿಯ ಕಲಿಕೆಯಿಂದ ಬೇಸತ್ತ ಮಕ್ಕಳಿಗೆ ಹೊಸ ಚೈತನ್ಯ ಮೂಡಿಸಬಹುದು. * ಗುಂಪು ಅಧ್ಯಯನಗಳಂತಹ ಪ್ರಯೋಗಕ್ಕೆ ಶಾಲೆಗಳನ್ನು ಒಳಪಡಿಸುವುದು ಎಷ್ಟು ಸರಿ? ಇದರಿಂದ ಶಾಲೆಯಲ್ಲಿನ ಶಿಸ್ತು ಹಾಗೂ ಶಾಂತಿಗೆ ಅಡ್ಡಿ ಬರುವುದಿಲ್ಲವೇ? `ಶಿಸ್ತು ಎನ್ನುವುದು ಮಕ್ಕಳಿಗೆ ಗೊತ್ತೇ ಇರುವುದಿಲ್ಲ. ಅದನ್ನು ನಾವು ಒತ್ತಾಯದಿಂದ ಅವರ ಮೇಲೆ ಹೇರಿದರೆ ಮಾತ್ರ ಅವರು ಶಿಸ್ತು ಕಲಿಯುತ್ತಾರೆ~ ಎಂಬ ತಪ್ಪು ಕಲ್ಪನೆ ಶಿಕ್ಷಕರು ಹಾಗೂ ಪಾಲಕರಲ್ಲಿದೆ. ಆದರೆ ಮಕ್ಕಳಲ್ಲಿಯೂ ಶಿಸ್ತಿನ ಬಗ್ಗೆ ಪ್ರೀತಿ ಇದೆ. ಮಕ್ಕಳು ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಪರಸ್ಪರ ಮಾತಿನಲ್ಲಿ ತೊಡಗದೇ ಶಿಕ್ಷಕರು ಹೇಳುವುದನ್ನು ಕೇಳಿಸಿಕೊಂಡರೆ ಮಾತ್ರ ಶಿಸ್ತು ಎನಿಸಿಕೊಳ್ಳುವುದಿಲ್ಲ. ಪರಸ್ಪರ ಎದಿರು-ಬದಿರು ಕುಳಿತು ಚರ್ಚಿಸುತ್ತಲೇ ಪಾಠ ಕೇಳಿದಾಗ ಪರಿಣಾಮ ಇನ್ನೂ ಭಿನ್ನವಾಗಿರುತ್ತದೆ. * ಶಾಲೆಗಳಲ್ಲಿ ತಂತ್ರಜ್ಞಾನ ಬಳಕೆ ಎಷ್ಟು ಸೂಕ್ತ? ಲ್ಯಾಪ್‌ಟಾಪ್, ನೆಟ್‌ಬುಕ್ಸ್‌ನಂತಹ ತಂತ್ರಜ್ಞಾನ ಇಂದಿನ ಟ್ರೆಂಡ್‌ಗೆ ಅತ್ಯಗತ್ಯ. ಇವುಗಳ ಮೂಲಕ ಜಾಗತಿಕ ಮಟ್ಟದ ಜ್ಞಾನವನ್ನು ವಿದ್ಯಾರ್ಥಿಗಳು ಸರಳ ರೂಪದಲ್ಲಿ ಪಡೆಯಬಹುದು. * ನಿಮ್ಮ ಪ್ರಕಾರ ವಿದ್ಯಾರ್ಥಿ-ಶಿಕ್ಷಕರ ಅನುಪಾತ ಹೇಗಿರಬೇಕು? ಅದು ವಿದ್ಯಾರ್ಥಿಗಳು ಯಾರು, ಶಿಕ್ಷಕರು ಎಂಥವರು, ಅವರು ಬಳಸುತ್ತಿರುವ ಉಪಕರಣಗಳೇನು ಎಂಬ ಅಂಶಗಳನ್ನು ಅವಲಂಬಿಸುತ್ತದೆ. ಅಲ್ಲದೇ, ವಿದ್ಯಾರ್ಥಿಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಹಾಗೂ ವಿದ್ಯಾರ್ಥಿಗಳು ನಮ್ಮನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಆಧಾರದ ಮೇಲೆ ಈ ಅಂಶವನ್ನು ನಿರ್ಧರಿಸಬಹುದು. ಆದರೆ ಸಾಮಾನ್ಯ ಪದ್ಧತಿಯ, ಸಾಮಾನ್ಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ 20ರಿಂದ 25 ಜನ ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಬೇಕು. * ಅಮೆರಿಕ ಶಾಲೆಗಳು ಹಾಗೂ ಭಾರತ ಶಾಲೆಗಳ ನಡುವಿನ ವ್ಯತ್ಯಾಸ ಹಾಗೂ ಸಾಮ್ಯತೆ?ಹೆಚ್ಚೂ ಕಡಿಮೆ ಈ ಎರಡೂ ಕಡೆ ಫ್ಯಾಕ್ಟರಿ ಮಾದರಿಯಲ್ಲೇ ಶಿಕ್ಷಣವನ್ನು ನೀಡಲಾಗುತ್ತಿದೆ. ಆದರೂ ನವೀನ ರೀತಿಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಅಮೆರಿಕದಿಂದ ಭಾರತ ಸಾಕಷ್ಟನ್ನು ಕಲಿಯಬಹುದು. ಪರಿಣಾಮಕಾರಿ ಶಿಕ್ಷಣವನ್ನು ಶಾಲೆಗಳಲ್ಲಿ ಅಳವಡಿಸುವುದು ಹೇಗೆ ಎಂಬ ಬಗ್ಗೆ ಅಮೆರಿಕ ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಿದೆ. * ಶಿಕ್ಷಣ ವಲಯದಲ್ಲಿನ ಖಾಸಗೀಕರಣದ ಬಗ್ಗೆ ಎರಡು ಮಾತು... ಖಾಸಗೀಕರಣ ಎನ್ನುವುದು ಕೆಟ್ಟ ಪರಂಪರೆ ಏನೂ ಅಲ್ಲ. ಜಗತ್ತಿನಾದ್ಯಂದ ಎಷ್ಟೊ ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಫಲವಾಗಿವೆ. ಆದರೆ ಕೇವಲ ಲಾಭದ ಉದ್ದೇಶದಿಂದ ಉತ್ತಮ ಶಾಲೆಗಳನ್ನು ಕಟ್ಟಲಾಗದು. ಈ ಮೂಲಕವೂ ದೇಶಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂಬುದನ್ನು ಮನಗಾಣಬೇಕು. ಅಷ್ಟಕ್ಕೂ ಶಾಲೆ- ಕಾಲೇಜುಗಳು ಒಂದು ಉದ್ಯಮವಲ್ಲ. ಸೇವಾ ಮನೋಭಾವ ಇಲ್ಲದೇ ಈ ಕ್ಷೇತ್ರಕ್ಕೆ ಕೈಹಾಕದಿರುವುದೇ ಉತ್ತಮ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.