ಪ್ರಶ್ನೆ - ಉತ್ತರ ಸರಿತಾ, ಕೋಲಾರ. ನಾನು ಬಿಎಸ್ಸಿ ಅಂತಿಮ ಸೆಮಿಸ್ಟರ್‌ನಲ್ಲಿ ಒಂದು ವಿಷಯದಲ್ಲಿ ಫೇಲ್ ಆಗಿದ್ದೇನೆ. ಇನ್ನು ಮುಂದೆ ಚೆನ್ನಾಗಿ ಓದಿ ಪಾಸಾಗಿ ಪಿಜಿಸಿಇಟಿ ಬರೆದು ಎಂಸಿಎ ಮಾಡಿ ಲೆಕ್ಚರರ್ ಆಗಬೇಕೆಂಬ ಆಸೆ ಮತ್ತು ಗುರಿ ಹೊಂದಿದ್ದೇನೆ. ಇದಕ್ಕೆ ಈಗಿನಿಂದಲೇ ಯಾವ ರೀತಿ ಮಾಹಿತಿ ಕಲೆ ಹಾಕಬೇಕು? ಇದಕ್ಕಿರುವ ಮಾನದಂಡಗಳು ಏನು? ನಾನು ಪಿಜಿ ಕೋಚಿಂಗ್ ತರಗತಿಗೆ ಹೋಗಲು ಸಾಧ್ಯವಿಲ್ಲ. ಮನೆಯಲ್ಲಿಯೇ ಅಭ್ಯಾಸ ಮಾಡಲು ಯಾವ ಪುಸ್ತಕಗಳನ್ನು ಅಧ್ಯಯನ ಮಾಡಬೇಕು? ನೀವು ಮೊದಲು ಉತ್ತಮ ದರ್ಜೆಯಲ್ಲಿ ಬಿಸಿಎ ಮುಗಿಸಿಕೊಳ್ಳಿ. ನಂತರ ಸ್ನಾತಕೊತ್ತರ ಪದವಿಗೆ ನೊಂದಾಯಿಸಿಕೊಂಡು, ಅಭ್ಯಾಸದಲ್ಲಿ ತೊಡಗಿಸಿಕೊಳ್ಳಿ. ಮುಕ್ತ ವಿವಿಯವರು ನಿಮಗೆ ಪಾಠಗಳ ಜೊತೆಗೆ ಅಭ್ಯಾಸ ಮಾಡಬೇಕಾದ ಪುಸ್ತಕಗಳ ಬಗ್ಗೆ ಸಹ ಮಾಹಿತಿ ಕಳಿಸಿಕೊಡುತ್ತಾರೆ. ಇದರ ಜೊತೆಗೇ ನೀವು ಇನ್ನಷ್ಟು ಪಠ್ಯವಿಷಯಗಳನ್ನು ಇಂಟರ್‌ನೆಟ್ ಮೂಲಕ ಪಡೆದುಕೊಳ್ಳುತ್ತಾ ಹೋಗಿ. ರೆಗ್ಯುಲರ್ ವಿದ್ಯಾರ್ಥಿಗಳ ಪರಿಚಯ ಮಾಡಿಕೊಂಡು ಅವರಿಂದ ಸಹಾಯ ಪಡೆದುಕೊಳ್ಳಿ. ಇದರೊಡನೆ ಈ ವಿಷಯದ ಪರಿಣತರು, ಶಿಕ್ಷಕರು, ಮುಂತಾದವರಿಂದ ಮಾರ್ಗದರ್ಶನ ಪಡೆಯಿರಿ. ಮನೆಯಲ್ಲಿಯೇ ಒಂದು ಕಂಪ್ಯೂಟರ್ ಇಟ್ಟುಕೊಂಡಲ್ಲಿ ತುಂಬಾ ಒಳ್ಳೆಯದು. ಯಾವುದಕ್ಕೂ ಮನಸ್ಸಿಟ್ಟು ಅಭ್ಯಾಸ ಮಾಡಿ. ನೀವು ಪತ್ರದಲ್ಲಿ ಬರೆದಿರುವಂತೆ ನಿರಾಶಾದಾಯಕ ಸಂಗತಿಗಳನ್ನು ದೂರ ಮಾಡಿ. ನೀವು ಇನ್ನೂ ಚಿಕ್ಕ ವಯಸ್ಸಿನವರಾದ್ದರಿಂದ ಧೈರ್ಯವಾಗಿ ಮುಂದುವರಿದು ಜಯ ಪಡೆಯಿರಿ. ಧನಾತ್ಮಕ ಚಿಂತನೆ ಯಾವಾಗಲೂ ನಿಮ್ಮ ನೆರವಿಗೆ ಇರಲಿ. ಇಂದ್ರೇಶ ಕುಮಾರ್ ಬಿ.ಎಸ್. ಬಿಡದಿ, ರಾಮನಗರ ನಾನು ಎಸ್‌ಎಸ್‌ಎಲ್‌ಸಿ ನಂತರ ಐಟಿಐಗೆ ಸೇರಿಕೊಂಡು ಫಿಟ್ಟರ್ ವಿಷಯದಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದೇನೆ. ನನಗಿನ್ನೂ ಹದಿನೆಂಟು ವರ್ಷಗಳು ತುಂಬದೇ ಇರುವುದರಿಂದ ಕಂಪೆನಿಗಳಲ್ಲಿ ಅಪ್ರೆಂಟಿಸ್ ಆಗಿ ಸೇರಲು ಅವಕಾಶ ಕೊಡುತ್ತಿಲ್ಲ. ನಾನು ಖಾಸಗಿ ಕಾಲೇಜಿನಲ್ಲಿ ಕಲಿತಿರುವುದರಿಂದ ಸರ್ಕಾರಿ ಕಂಪನಿಗಳಲ್ಲಿ ಅವಕಾಶ ಸಿಗುವುದೇ? ಉತ್ತರ: ನಮ್ಮ ದೇಶದ ಕಾನೂನಿನಂತೆ ಹದಿನೆಂಟು ತುಂಬದವರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಬರುವುದಿಲ್ಲ. ಆದರೆ ಶಿಕ್ಷಣ ಮುಂದುವರಿಸಲು ಅವಕಾಶವಿದೆ. ನೀವು ಡಿಪ್ಲೊಮಾ ಸೇರಲು ಯಾವುದೇ ತೊಂದರೆ ಇರುವುದಿಲ್ಲ. ಖಾಸಗಿ ಕಾಲೇಜಿನಲ್ಲಿ ಕಲಿತವರು ಖಂಡಿತ ಸರ್ಕಾರಿ ಕಂಪನಿಗಳಲ್ಲಿ ಅವಕಾಶ ಪಡೆಯಬಹುದು. ಉಷಾ.ಎಸ್. ದೇವನಹಳ್ಳಿ, ಬೆಂಗಳೂರು ನಾನು ಪ್ರಥಮ ವರ್ಷದ ದ್ವಿತೀಯ ಸೆಮಿಸ್ಟರ್ ಬಿಕಾಂ ಪದವಿಯಲ್ಲಿ ಓದುತ್ತಿದ್ದು, ಮನೆಯಲ್ಲಿ ಓದಿಸಲು ಕಷ್ಟವಾಗಿದೆ. ಪದವಿ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ ಕೆಲಸಕ್ಕೆ ಸೇರಲು ಒತ್ತಾಯಿಸುತ್ತಿದ್ದಾರೆ. ನನಗೆ ಕೆಲಸಕ್ಕೆ ಸೇರಲು ಇಷ್ಟವಿಲ್ಲ ಏನು ಮಾಡಲಿ? ನಿಮ್ಮ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ. ಶಿಕ್ಷಣ ಹಾಗೂ ಕುಟುಂಬದ ಜವಾಬ್ದಾರಿ ಇವೆರಡೂ ಕೂಡ ಸಮಾನವಾದ ಮಹತ್ವ ಪಡೆದಿವೆ. ನೀವು ಯಾವುದಾದರೂ ಪಾರ್ಟ್ ಟೈಮ್ ಕೆಲಸ, ಮನೆಯಲ್ಲೆೀ ಮಾಡಬಹುದಾದ ಕೆಲಸ, ಮಕ್ಕಳಿಗೆ ಪಾಠ ಹೇಳುವುದು ಮುಂತಾದವುಗಳಿಂದ ಒಂದಷ್ಟು ಹಣ ಗಳಿಸಿ ಮನೆಗೆ ಸಹಾಯ ನೀಡಿ. ಇನ್ನು ಕೇವಲ ನಾಲ್ಕು ಸೆಮಿಸ್ಟರ್ ಉಳಿದಿರುವುದರಿಂದ ಓದು ಮುಂದುವರಿಸಲು ಹಿರಿಯರ ಮನ ಒಲಿಸಿ. ಇದರಿಂದ ನಿಮ್ಮ ಭವಿಷ್ಯ ಉತ್ತಮಗೊಳ್ಳಲಿದೆ ಎಂಬ ಅಂಶವನ್ನು ಅವರಿಗೆ ಮನವರಿಕೆ ಮಾಡಿ ಕೊಡಿ. ಸಾಧ್ಯವಾದರೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆದುಕೊಳ್ಳಿ. ನೀವು ಏನೇ ನಿರ್ಧಾರ ಕೈಗೊಳ್ಳಲಿ ಸ್ವಲ್ಪ ತಡವಾಗಿ ಆದರೂ ಶೈಕ್ಷಣಿಕ ಅರ್ಹತೆ ಉತ್ತಮಗೊಳಿಸಿಕೊಳ್ಳುವ ಪ್ರಯತ್ನ ಕೈಬಿಡಬೇಡಿ. ನಿಮಗೆ ಒಳ್ಳೆಯದಾಗಲಿ. ವಿಕಾಸ್.ಎಸ್. ಶಿವಮೊಗ್ಗ ನಾನು ಪ್ರಥಮ ಪಿಯುಸಿ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ವಾಣಿಜ್ಯ ವಿಭಾಗದಲ್ಲಿ ಸಿಇಟಿ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳು ಇದ್ದರೆ ತಿಳಿಸಿ. ನೀವು ಬಿಕಾಂ ಸೇರಲು ಬಯಸಿದಲ್ಲಿ ಸಾಮಾನ್ಯವಾಗಿ ಸಿಇಟಿ ಇರುವುದಿಲ್ಲ. ಆದರೆ ಕೆಲವು ಕಾಲೇಜುಗಳು ತಮ್ಮದೇ ಆದ ಅರ್ಹತಾ ಪರೀಕ್ಷೆ ನಡೆಸಿ ಆಯ್ಕೆ ಮಾಡಬಹುದು. ಬಿಕಾಂ ಅಲ್ಲದೆ ಬೇರೆ ಕೋರ್ಸುಗಳಿಗೆ ಸೇರಬೇಕಾದರೆ ಬೇರೆ ಬೇರೆ ಆಯ್ಕೆ ಮಾನದಂಡಗಳಿರುತ್ತವೆ. ರಕ್ಷಿತ್, ಚಿಕ್ಕಮಗಳೂರು ನಾನು ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಹತ್ತನೇ ತರಗತಿ ಕಲಿಯುತ್ತಿದ್ದು ಮುಂದೆ ಇದರಲ್ಲೆೀ ಪಿಯುಸಿ ಮಾಡಬಯಸಿದ್ದೇನೆ. ಇದರಿಂದ ಮುಂದೆ ಯಾವ ಯಾವ ಕೋರ್ಸುಗಳನ್ನು ಮಾಡಬಹುದು? ಮೆಡಿಕಲ್‌ಗೆ ಹೋಗಲು ತೊಂದರೆಯಾಗುವುದೇ? ರಾಜ್ಯ ಪಠ್ಯಕ್ರಮ ಅನುಕೂಲಕರವೇ? ಸಿಬಿಎಸ್‌ಇ ಪಿಯು ಕಾಲೇಜುಗಳು ಕರ್ನಾಟಕದ ಯಾವ ಯಾವ ಊರುಗಳಲ್ಲಿವೆ? ಯಾವುದು ಅನುಕೂಲಕರ ದಯಮಾಡಿ ತಿಳಿಸಿ. ಮುಂದಿನ ವರ್ಷದಿಂದ ಪ್ರಥಮ ಪಿಯುಸಿಯಲ್ಲಿ ಸಿಬಿಎಸ್‌ಇ ಪಠ್ಯಕ್ರಮ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಲ್ಲದೆ ರಾಷ್ಟ್ರಮಟ್ಟದ ಸಿಇಟಿ ಬರುವ ಸಂಭವ ಹೆಚ್ಚಾಗಿದೆ. ಹೀಗಾಗಿ ನೀವು ಯಾವುದೇ ಕಾಲೇಜಿಗೆ ಸೇರಿಕೊಂಡರೂ ತೊಂದರೆಯಿಲ್ಲ. ಆದರೆ ಹೊಸ ಪಠ್ಯಕ್ರಮವನ್ನು ಮೊದಲ ಬಾರಿ ಅಳವಡಿಸಿಕೊಳ್ಳುವಾಗ ಕೆಲವೆಡೆ ಒಂದಷ್ಟು ಏರುಪೇರುಗಳಾಗಬಹುದು. ಸಿಬಿಎಸ್‌ಇ ಹನ್ನೊಂದನೇ ತರಗತಿಯು ರಾಜ್ಯದ ಅನೇಕ ಕಡೆ ಇದ್ದು, ವಿವರಗಳನ್ನು ಇಂಟರ್‌ನೆಟ್‌ಗಳ ಮೂಲಕ ಪಡೆಯಬಹುದು. ಚಂದ್ರಿಕಾ, ಹಾಸನ ನಾನು ಬಿಎ ಮುಗಿಸಿ ಎಂಎನಲ್ಲಿ ರಾಜ್ಯಶಾಸ್ತ್ರ ಅಧ್ಯಯನ ಮಾಡುತ್ತಿದ್ದೇನೆ. ಹಾಸನದಲ್ಲಿ ಡಿ ಗ್ರೂಪ್ ನೌಕರಿ ಮಾಡುತಿದ್ದೇನೆ. ನಾನು ಕೆಎಎಸ್ ಹಾಗು ಐಎಎಸ್ ಮಾಡಬಹುದೆ? ಯಾವುದೇ ಪದವೀಧರರು ಮೇಲಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಯಸ್ಸು ಮುಂತಾದ ಇತರ ಅರ್ಹತೆಗಳಿದ್ದಲ್ಲಿ ಪ್ರಯತ್ನಿಸಲು ಅವಕಾಶ ಮುಕ್ತವಾಗಿದೆ. ಧರ್ಮೇಂದ್ರ ಕುಮಾರ್.ಪಿ.ಎಲ್, ಹೂವಿನ ಹಡಗಲಿ, ಬಳ್ಳಾರಿ ನಾನು 2003-04ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿದ್ದೇನೆ. ಬಿಎ ಮಾಡಲು ನಿರ್ಧರಿಸಿದ್ದೆ. ಆದರೆ ನಾನು ಎಷ್ಟು ಓದಿದರೂ ನೆನಪಿನಲ್ಲಿ ಇರುವುದಿಲ್ಲ. ಆದ ಕಾರಣ ನಾನು ವಿದ್ಯಾಭ್ಯಾಸ ನಿಲ್ಲಿಸಿದ್ದು ಅಂದಿನಿಂದ ಖಾಸಗಿ ಕೆಲಸ ಮಾಡುತ್ತಿದ್ದೇನೆ. ಈಗ ನಾನು ಬಿಎ ಮಾಡಲು ಇಚ್ಛಿಸಿದ್ದೇನೆ. ದಯವಿಟ್ಟು ಓದಿದ್ದು ನೆನಪಿನಲ್ಲಿಡಲು ಸಲಹೆ ಕೊಡಿ. ಓದಿದ್ದು ನೆನಪಿನಲ್ಲಿ ಇರಬೇಕಾದರೆ, ಮೊದಲು ಆ ವಿಷಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಅದರ ಬಗ್ಗೆ ಅರಿವು ಪಡೆದುಕೊಳ್ಳಲು ವಿವಿಧ ಮೂಲಗಳಿಂದ ವಿವರ ಸಂಗ್ರಹಣೆ ಮಾಡಬೇಕು. ಅದನ್ನು ಕ್ರಮವಾಗಿ ಜೋಡಿಸಿಕೊಂಡು ಪ್ರಶ್ನೆಗಳಿಗೆ ತಕ್ಕ ಉತ್ತರಗಳನ್ನು ಹೊಂದಿಸಿಕೊಂಡು, ಪದೇ ಪದೇ ಓದುತ್ತ ಮತ್ತೆ ಬರೆಯುತ್ತ ಅಭ್ಯಾಸ ಮಾಡುತ್ತಿರಬೇಕು. ಸ್ವಲ್ಪ ಸಮಯ ಬಿಟ್ಟು ನೆನಪಿನಲ್ಲಿ ಎಷ್ಟು ಉಳಿದಿದೆ ಎಂದು ನೀವೇ ಪರೀಕ್ಷಿಸಿಕೊಳ್ಳಬೇಕು. ಅದು ನಿಮ್ಮ ಹಿಡಿತಕ್ಕೆ ಬರುವವರೆಗೂ ಬಿಡಬಾರದು. ಮೊದಲಿಗೆ ಕಷ್ಟವೆನಿಸಿದರೂ ಕ್ರಮೇಣ ಉತ್ತಮ ಪರಿಣಾಮ ಸಿಗುತ್ತದೆ. ಬೇರೆ ಬೇರೆ ವಿಷಯಗಳ ಬಗ್ಗೆ ನಿಮ್ಮಲ್ಲಿ ಪ್ರಾರಂಭಿಕ ಅರಿವು ಕಡಿಮೆಯಿದ್ದಲ್ಲಿ ಸಹಾ ಕಲಿಕೆ ಕಷ್ಟವಾಗುತ್ತದೆ. ನೀವು ಈ ಬಗ್ಗೆ ಕೂಡ ಗಮನ ಹರಿಸಿ ತಿಳಿವಳಿಕೆ ಪಡೆದುಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಪದೇ ಪದೇ ಅಭ್ಯಾಸ ಮಾಡುವುದರಿಂದ ಫಲಿತಾಂಶ ಉತ್ತಮಗೊಳ್ಳುತ್ತದೆ. ವಿಶ್ವನಾಥ.ಎಂ.ಗೌಡ, ಹೊನ್ನಾವರ ನಾನು ಬಿಪಿಎಡ್ ಪದವಿ ಪಡೆದು, ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಎಂಪಿಎಡ್ ಮಾಡುವ ಆಸೆ ಇದೆ. ಆದರೆ ದೂರ ಶಿಕ್ಷಣದ ಮೂಲಕ ವಿವಿಗಳು ಅವಕಾಶ ನೀಡಿರುವುದಿಲ್ಲ. ಮಾಹಿತಿ ನೀಡಿ. ನೀವು ಸರ್ಕಾರಿ ನಿಯಮಾವಳಿಗಳನ್ನು ಅನುಸರಿಸಿ ಸಂಬಳ ರಹಿತ ರಜೆಯನ್ನು ಪಡೆದುಕೊಂಡು ರೆಗ್ಯುಲರ್ ಆಗಿ ಎಂಪಿಎಡ್ ಪಡೆಯಬಹುದು. ಪ್ರಸಾದ್.ಕೆ. ಆಲದಗುಡ್ಡೆ, ಚಿಕ್ಕಮಗಳೂರು ನಾನು ಹತ್ತನೇ ತರಗತಿ ಓದುತ್ತಿದ್ದೇನೆ. ಬೇಗ ಕೆಲಸಕ್ಕೆ ಸೇರಬೇಕೆಂಬ ಆಸೆ ಇದೆ. ಪಿಯುಸಿ ಓದುವುದೊ ಅಥವಾ ಐಟಿಐ ಮಾಡುವುದೊ ಗೊತ್ತಾಗುತ್ತಿಲ್ಲ. ದಯಮಾಡಿ ಸಲಹೆ ಕೊಡಿ. ನಿನಗೆ ಬೇಗನೆ ಕೆಲಸಕ್ಕೆ ಸೇರಬೇಕೆಂಬ ಅಪೇಕ್ಷೆ ಇದ್ದರೆ ಅಥವಾ ಅವಶ್ಯಕತೆ ಇದ್ದಲ್ಲಿ ಐಟಿಐ ಮಾಡಬಹುದು. ಮುಂದೆ ಓದನ್ನೂ ಮುಂದುವರಿಸಬಹುದು. ಆದರೆ ಮನೆಯಲ್ಲಿ ಓದಿಸುವ ಅನುಕೂಲವಿದ್ದಲ್ಲಿ, ಪಿಯುಸಿ ಸೇರಬಹುದು. ಆಗ ಶಿಕ್ಷಣ ಒಂದು ಹಂತಕ್ಕೆ ಬರಬೇಕಾದರೆ ಸಾಕಷ್ಟು ಸಮಯ ಹಿಡಿಯುತ್ತದೆ. ಆದರೆ ಉದ್ಯೋಗ ಹಾಗು ವರಮಾನದ ದೃಷ್ಟಿಯಿಂದ ಇದು ಉತ್ತಮ ಆಯ್ಕೆ. ನಾಗರಾಜು, ಮಾಣಿಕ ನಗರ, ರಾಯಚೂರು ನಾನು ಪಾರ್ಟ್ ಟೈಮ್ ಕೆಲಸ ಮಾಡುತ್ತ ಬಿಕಾಂ ಓದುತ್ತಿದ್ದೇನೆ. ಪದವಿ ಮುಗಿದ ನಂತರ ಲೆಕ್ಕ ಪರಿಶೋಧಕನಾಗಬೇಕೆಂಬ ಆಸೆ ಇದೆ. ದಯಮಾಡಿ ಅದರ ವಿವರಗಳನ್ನು ತಿಳಿಸಿ. ನೀವು ಬಿಕಾಂ ಮುಗಿದ ನಂತರ ಯಾರಾದರೂ ಹಿರಿಯ ಲೆಕ್ಕ ಪರಿಶೋಧಕರ ಬಳಿ ಸಹಾಯಕರಾಗಿ ಸೇರಿಕೊಳ್ಳಿ. ಅಲ್ಲಿ ನಿಮಗೆ ಕಡಿಮೆ ಸಂಭಾವನೆ ದೊರೆತರೂ ವೃತ್ತಿಯಲ್ಲಿ ಅನುಭವ ಸಿಗುತ್ತದೆ. ಇದರಿಂದ ನೀವು ತೆರಿಗೆ ಸಲಹೆಗಾರರಾಗಿ ಖಾಸಗಿ ವೃತ್ತಿ ಪ್ರಾರಂಭಿಸಬಹುದು. ಇಂದಿನ ದಿನಗಳಲ್ಲಿ ಇದಕ್ಕೆ ಕಂಪ್ಯೂಟರ್ ಜ್ಞಾನ ಅತ್ಯಂತ ಅವಶ್ಯಕ. ಅಪೇಕ್ಷೆ ಇದ್ದಲ್ಲಿ ಸಿಎ ಮಾಡಲು ಈಗಿನಿಂದಲೇ ಪ್ರಯತ್ನಿಸಬಹುದು. ಇದಕ್ಕೆ ಹೆಚ್ಚು ಸಮಯ ಹಾಗೂ ಪ್ರಯತ್ನ ಬೇಕಾಗುತ್ತದೆ. ಕೆಲವು ಖಾಸಗಿ ಕಂಪೆನಿಗಳ ಲೆಕ್ಕ ವಿಭಾಗದಲ್ಲಿ ಪರಿಣತರಿಗೆ ಅವಕಾಶವಿದ್ದು, ನೀವು ಪ್ರಯತ್ನಿಸಲೂ ಬಹುದು. ನಾಗರಾಜು.ಎಸ್.ಎಸ್, ಸಾಣೆಹಳ್ಳಿ, ಹೊಸದುರ್ಗ ನಾನು ಬಿಎ ಪ್ರಥಮ ವರ್ಷದಲ್ಲಿ ಕಲಿಯುತ್ತಿದ್ದು, ಈ ವಿಷಯ ಇಷ್ಟವಾಗುತ್ತಿಲ್ಲ. ಪಿಯುಸಿ ಕಲಾ ವಿಭಾಗದಲ್ಲಿ ಉತ್ತಮ ದರ್ಜೆ ದೊರಕಿದೆ. ನನಗೆ ಕೃಷಿ ಡಿಪ್ಲೊಮಾ ಮಾಡುವ ಅಪೇಕ್ಷೆ ಇದೆ. ಇದರ ಬಗ್ಗೆ ಮಾಹಿತಿ ಕೊಡಿ. ನೀವು ಎಸ್‌ಎಸ್‌ಎಲ್‌ಸಿ ಆಧಾರದ ಮೇಲೆ ಕೃಷಿ ಡಿಪ್ಲೊಮಾ ಮಾಡಬಹುದು. ಕೃಷಿ ವಿವಿಗಳ ವೆಬ್‌ಸೈಟ್‌ಗಳ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ. ಈಗ ತೋಟಗಾರಿಕೆ ಹಾಗೂ ಪಶುಸಂಗೋಪನೆ ಬಗ್ಗೆ ಸಹಾ ಬೇರೆ ಬೇರೆ ವಿವಿಗಳಿವೆ. ಮಂಜುಶ್ರೀ, ಯಾದಗಿರಿ. ನಾನು 2011 ರಲ್ಲಿ ಪಿಯುಸಿ ಪಾಸಾಗಿದ್ದು. ಅಂಕಗಳು ಕಡಿಮೆ ಇವೆ. ಈಗ ಬಿಎಸ್ಸಿ ಸೇರಿಕೊಂಡಿದ್ದೇನೆ. ಮುಂದೆ ಸಿಇಟಿ ಬರೆದು ಸಾವಿರದ ಒಳಗೆ ರ‌್ಯಾಂಕ್ ಪಡೆದರೆ ಮೆಡಿಕಲ್‌ಗೆ ಹೋಗುವ ಸಾಧ್ಯತೆ ಇದೆಯೇ? ಸಿಇಟಿಯಲ್ಲಿ ಆಯ್ಕೆಯಾಗಬೇಕಾದರೆ ಪಿಯುಸಿಯಲ್ಲಿ ಕನಿಷ್ಠ ಅಂಕಗಳನ್ನು ನಿಗದಿಪಡಿಸಲಾಗಿದೆ. ನೀವು ಬರೀ ಪಿಯುಸಿ ಆಧಾರದ ಮೇಲೆ ಮೆಡಿಕಲ್ ಸೇರಲು ಸದ್ಯಕ್ಕೆ ಸಾಧ್ಯವಿಲ್ಲ. ಆದರೆ ಬಿಎಸ್ಸಿ ಪದವೀಧರರಿಗೆ ಮೆಡಿಕಲ್ ಕೋರ್ಸಿನಲ್ಲಿ ಕೆಲವು ಸೀಟುಗಳು ಲಭ್ಯವಿರುತ್ತವೆ. ಉತ್ತಮ ಅಂಕಗಳಿಸಿ ಪ್ರಯತ್ನಿಸಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.