ಮೈಸೂರು ವಿವಿಯಿಂದ ಮಾಧ್ಯಮ ಭಾಷಾಂತರ ತರಗತಿ ಕಾರ್ಪೊರೇಟ್ ಪ್ರಪಂಚ ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿದೆ. ಜ್ಞಾನವೇ ಕರೆನ್ಸಿಯಾಗಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶೈಕ್ಷಣಿಕ ಅರ್ಹತೆ ಉದ್ಯೋಗ ದೊರಕಿಸುವಲ್ಲಿ ಅಮೂಲ್ಯ ಮಾರ್ಗವಾಗಿದೆ. ಉದ್ಯೋಗ ಬೇಡುವ ವಿದ್ಯಾರ್ಹತೆಯ ಜೊತೆಗೆ ಪೂರಕ ಕೌಶಲ ಮತ್ತು ಪ್ರತಿಭೆಗಳನ್ನು ಹೊಂದಿದ್ದರೆ ಸುಲಭವಾಗಿ ಕೆಲಸ ಗಿಟ್ಟಿಸಬಹುದು, ಆ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನೂ ಮಾಡಬಹುದು. ಇಂದಿನ ಯುಗದಲ್ಲಿ ನವ ಮಾಧ್ಯಮ ತಂತ್ರಜ್ಞಾನಗಳು ಸಂಚಲನವನ್ನೇ ಸೃಷ್ಟಿಸಿವೆ. ಮಾಧ್ಯಮ ಕ್ಷೇತ್ರದ ಹರವು ವ್ಯಾಪಕ ಉದ್ಯೋಗವಕಾಶ ಸೃಷ್ಟಿಸಿ, ಸಮೂಹ ಸಂವಹನ ಅಧ್ಯಯನಕ್ಕೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಸುದ್ದಿ ಸಂಗ್ರಹ ಜಾಣ್ಮೆ, ಅನುವಾದ ಕಲೆ, ಭಾಷಾ ಪ್ರೌಢಿಮೆ, ವಿಷಯ ವಿಶ್ಲೇಷಣಾ ಸಾಮರ್ಥ್ಯ, ಡೆಡ್ ಲೈನ್‌ನಲ್ಲಿ ಕೆಲಸ ಮಾಡುವ ಚಾಕಚಕ್ಯತೆ, ಸಂಗತಿಯನ್ನು ಚಿಕ್ಕದಾಗಿ ಚೊಕ್ಕವಾಗಿ ವಿವರಿಸುವ ಕುಶಾಗ್ರಮತೆ ಇತ್ಯಾದಿಗಳು ಮಾಧ್ಯಮ ಸಂಸ್ಥೆಗಳ ಸುದ್ದಿ ವಿಭಾಗದಲ್ಲಿ ಕೆಲಸ ನಿರ್ವಹಿಸುವವರಿಗೆ ಇರಲೇಬೇಕಾದ ಕೌಶಲಗಳು. ಆಸಕ್ತಿ, ಅಭಿರುಚಿ, ಕುತೂಹಲಗಳೂ ಮುಖ್ಯ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜ ಕಾರ್ಯ, ಪ್ರವಾಸೋದ್ಯಮ... ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಮೈಸೂರು ವಿಶ್ವವಿದ್ಯಾನಿಲಯದ ಸಾಮರ್ಥ್ಯವರ್ಧನಾ ಮತ್ತು ಉದ್ಯೋಗವಕಾಶಗಳ ಸೇವಾ ಕೇಂದ್ರ ಮಾರ್ಚ್ ಮೊದಲ ವಾರದಿಂದ `ಮಾಧ್ಯಮ ಸಂಬಂಧಿ ಭಾಷಾಂತರ ತರಗತಿ~ ಆರಂಭಿಸುತ್ತಿದೆ. ಇದರ ಅವಧಿ ಮೂರು ತಿಂಗಳು. ಇದರಲ್ಲಿ ಮಾಧ್ಯಮ ಸಂಸ್ಥೆಗಳ ಸುದ್ದಿ ವಿಭಾಗ ಪ್ರವೇಶಿಸುವವರಿಗೆ ಜ್ಞಾನ ಮತ್ತು ಭಾಷೆಯ ಅಭಿವೃದ್ಧಿ ಹಾಗೂ ಪ್ರಸಾರದ ಸಾಧನವಾಗಿರುವ ಭಾಷಾಂತರದ ಆಳ ಮತ್ತು ಅರಿವನ್ನು ವಿವರಿಸಿ, ತರ್ಜುಮೆಯ ಅಗತ್ಯವನ್ನು ತಿಳಿಸಿಕೊಡಲಾಗುವುದು. ವಿವಿಧ ಭಾಷೆಗಳ ಕಲಿಕೆಯಿಂದ ಬೌದ್ಧಿಕ ಸಾಮರ್ಥ್ಯ ಮತ್ತು ಅರಿವಿನ ವಿಸ್ತಾರ ಹೆಚ್ಚುತ್ತದೆ. ಅನುವಾದಕರಿಗೆ ವಿಶ್ವದೆಲ್ಲೆಡೆ ಬೇಡಿಕೆ ವೃದ್ಧಿಸುತ್ತಿದೆ. ಹೀಗಾಗಿ ಇಲ್ಲಿ ನುರಿತ ಬೋಧಕರ ಜೊತೆಗೆ ವೃತ್ತಿಪರರೂ ಬೋಧಿಸಲಿದ್ದಾರೆ. ಸಂಪೂರ್ಣ ಪ್ರಾಯೋಗಿಕ ತರಗತಿಗಳಾಗಿದ್ದು ಪತ್ರಿಕೆ, ಸುದ್ದಿ ಸಂಸ್ಥೆ ಕಾಪಿ, ಜಾಹಿರಾತು, ತಾಂತ್ರಿಕ ಬರವಣಿಗೆಯ ಅನುವಾದ ಕಲೆಯನ್ನು ಕರಗತಗೊಳಿಸುವುದು ಕೋರ್ಸ್‌ನ ಉದ್ದೇಶ. ಪತ್ರಿಕಾಲಯ, ವಿದ್ಯುನ್ಮಾನ ಮಾಧ್ಯಮ, ಜಾಹೀರಾತು ಸಂಸ್ಥೆ, ಕಂಟೆಂಟ್ ರೈಟಿಂಗ್, ತಾಂತ್ರಿಕ ಬರಹಕ್ಕೆ ಆದ್ಯತೆ ನೀಡಿ ಕಲಿಸಲಾಗುವುದು. ಮೈಸೂರು ವಿವಿ ವ್ಯಾಪ್ತಿಗೊಳಪಡುವ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮೂರು ತಿಂಗಳ ಅವಧಿಯ ಈ ಕೋರ್ಸ್‌ನಲ್ಲಿ ಪಾಲ್ಗೊಳ್ಳಬಹುದು. ಇದಕ್ಕೆ ಯಾವುದೇ ಶುಲ್ಕ ಇಲ್ಲ. ವಾರದಲ್ಲಿ ಐದು ದಿನ ಸಂಜೆ ವೇಳೆ ಒಂದು ಗಂಟೆ ಕ್ಲಾಸ್ ನಡೆಯಲಿವೆ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳಿಗೆ ಪ್ರಾಶಸ್ತ್ಯ. ಕೋರ್ಸ್ ಪೂರೈಸಿದವರಿಗೆ ಸರ್ಟಿಫಿಕೆಟ್ ನೀಡಲಾಗುವುದು. ಮಾಹಿತಿಗೆ 0821 2419401, 94489 43211. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.