ಆರ್ಥಿಕ ವ್ಯವಹಾರ ಇಲಾಖೆ ಇಂಟರ್ನ್‌ಷಿಪ್ ಶಿಕ್ಷಣ ಪೂರೈಸಿ ತಾನು ಆರಿಸಿಕೊಂಡ ಕ್ಷೇತ್ರದತ್ತ ಮುಖ ಮಾಡಿ ನಿಂತ ವಿದ್ಯಾರ್ಥಿಗಳ ಪಾಲಿಗೆ ಇಂಟರ್ನ್‌ಷಿಪ್ ಒಂದು ಮಹತ್ವದ ಘಟ್ಟ. ಅದರಲ್ಲೂ ಆ ಕ್ಷೇತ್ರದ ಒಳ-ಹೊರಗುಗಳ ವಿಶ್ಲೇಷಣೆಯ ಜೊತೆಗೆ ಪ್ರಾಯೋಗಿಕ ತರಬೇತಿಯೂ ಅಲ್ಲಿಯೇ ಲಭ್ಯವಾಗುತ್ತದೆ. ಅಭ್ಯರ್ಥಿಯನ್ನು ಆ ಕ್ಷೇತ್ರದ ಬೇಡಿಕೆಗಳಿಗೆ ತಕ್ಕಂತೆ ಸನ್ನದ್ಧಗೊಳಿಸುವುದೇ ಈ ಅವಧಿಯಲ್ಲಿ. ಅಂತೆಯೇ ಇದರ ಮಹತ್ವವನ್ನು ಅರಿತ ಆರ್ಥಿಕ ವ್ಯವಹಾರಗಳ ಇಲಾಖೆ ಹಣಕಾಸು ಕ್ಷೇತ್ರಕ್ಕೆ ಮೊದಲ ಹೆಜ್ಜೆ ಇಡುತ್ತಿರುವ ಅಭ್ಯರ್ಥಿಗಳಿಗೆ ಇಂಟರ್ನ್‌ಷಿಪ್ ಕಾರ್ಯಕ್ರಮವನ್ನು ಆಯೋಜಿಸಿದೆ. ಹಣಕಾಸು ನೀತಿ ಎಂದರೇನು ಹಾಗೂ ಅವುಗಳನ್ನು ರೂಪಿಸುವುದರಿಂದ ದೇಶದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬೆಲ್ಲ ಅಂಶಗಳನ್ನು ಭಾವಿ ಉಮೇದುವಾರರಿಗೆ ಸಂಪೂರ್ಣವಾಗಿ ತಿಳಿಸಿಕೊಡುವ ಮತ್ತು ಖಚಿತಪಡಿಸುವ ಕೆಲಸವನ್ನು ಈ ಕಾರ್ಯಕ್ರಮ ನಿರ್ವಹಿಸುತ್ತದೆ. ಹಣಕಾಸು ಸಚಿವಾಲಯದ ಮುಖ್ಯ ಅಂಗಗಳಲ್ಲಿ ಒಂದಾಗಿರುವ ಆರ್ಥಿಕ ವ್ಯವಹಾರಗಳ ಇಲಾಖೆಯು (ಡಿಇಎ) ಕೇವಲ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುವುದು ಮಾತ್ರವಲ್ಲ, ದೇಶದ ಆರ್ಥಿಕ ಸ್ವಾಸ್ಥ್ಯವನ್ನು ಕಾಯುವ ಹೊಣೆಯನ್ನೂ ಹೊತ್ತುಕೊಂಡಿದೆ. ಇದು ದೇಶ ವಿದೇಶಗಳ ವಿವಿಧ ಹಣಕಾಸು ಸಂಸ್ಥೆಗಳ ನಡುವಿನ ನಿಕಟ ಸಂಪರ್ಕಗಳಿಗೆ ನಾಂದಿಯಾಗುತ್ತದೆ ಎನ್ನುತ್ತಾರೆ ಡಿಇಎ ಅಧೀನ ಕಾರ್ಯದರ್ಶಿ ಅಶೋಕ್ ಕುಮಾರ್. ಮುಖ್ಯ ಗುರಿ ರಾಷ್ಟ್ರದ ಪ್ರಸಿದ್ಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ಉನ್ನತ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಯುವ ವಿದ್ವಾಂಸರು ಹಾಗೂ ಇಲಾಖೆಯ ಅಧಿಕಾರಿಗಳ ಮಧ್ಯೆ ವಿಚಾರ ವಿನಿಮಯಗಳನ್ನು ಏರ್ಪಡಿಸುವ ಮುಖ್ಯ ಗುರಿ ಈ ಇಂಟರ್ನ್‌ಷಿಪ್‌ಗಿದೆ. ಶೈಕ್ಷಣಿಕ ವಲಯದಿಂದ ಲಭ್ಯವಾಗುವ ಹೊಸ ಹಾಗೂ ಚುರುಕಿನ ವಿಚಾರಗಳಿಂದಾಗಿ, ತನ್ನ ವಿವಿಧ ಚಟುವಟಿಕೆಗಳನ್ನು ವಿಮರ್ಶಾತ್ಮಕವಾಗಿ ಹಾಗೂ ರಚನಾತ್ಮಕವಾಗಿ ವಿಶ್ಲೇಷಿಸಲು ಇಲಾಖೆಗೆ ಸಾಧ್ಯವಾಗುತ್ತದೆ. ಆ ಮೂಲಕ, ರಾಷ್ಟ್ರದ ಸಾಮೂಹಿಕ ಒಳಿತಿಗಾಗಿ ವಸ್ತುನಿಷ್ಠ ಹಾಗೂ ನಿಷ್ಪಕ್ಷಪಾತ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುವುದು ಸಾಧ್ಯವಾಗುತ್ತದೆ ಎನ್ನುತ್ತಾರೆ ಕುಮಾರ್. ಹಣಕಾಸು ನೀತಿ ನಿರೂಪಣೆಯ ಒಟ್ಟಾರೆ ಪ್ರಕ್ರಿಯೆಯನ್ನು ನಿಕಟವಾಗಿ ಅರಿತುಕೊಳ್ಳುವ ಅವಕಾಶ ಈ ಇಂಟರ್ನ್‌ಷಿಪ್‌ನಿಂದಾಗಿ ದೊರೆತಂತಾಗುತ್ತದೆ. ಅರ್ಹತೆ ಹೆಸರಾಂತ ಆರ್ಥಿಕ ಸಂಸ್ಥೆಗಳು, ಶಾಲೆಗಳು, ರಾಷ್ಟ್ರೀಯ ಆಡಳಿತ ಸಂಸ್ಥೆಗಳು ಹಾಗೂ ರಾಷ್ಟ್ರೀಯ ಕಾನೂನು ಶಾಲೆಗಳ ಪ್ರಶಿಕ್ಷಣಾರ್ಥಿಗಳು (ಇಂಟರ್ನ್‌ಗಳು) ಇಲಾಖೆಯ ಕಾರ್ಯ ನಿರ್ವಹಣೆಗೆ ತಮ್ಮದೇ ದೃಷ್ಟಿಕೋನ ಹಾಗೂ ವೈಯಕ್ತಿಕ ಒಳನೋಟಗಳನ್ನು ಸೇರಿಸುವರೆಂಬ ನಿರೀಕ್ಷೆ ಹೊಂದಲಾಗಿದೆ. ಆರ್ಥಿಕ ಕಾನೂನುಗಳು ಹಾಗೂ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಕೆಲವು ವಿಶೇಷ ವಲಯಗಳ ಕೆಲಸಗಳನ್ನು ಪ್ರಶಿಕ್ಷಣಾರ್ಥಿಗಳಿಗೆ ವಹಿಸಿಕೊಡಲಾಗುವುದು. ಆಯ್ದ ಕೆಲವು ಪ್ರಶಿಕ್ಷಣಾರ್ಥಿಗಳು ಕಾರ್ಯ ನಿರ್ವಹಿಸಬಹುದಾದ ವಿಶೇಷ ಕ್ಷೇತ್ರಗಳೆಂದರೆ: * ಬಂಡವಾಳ ಮಾರುಕಟ್ಟೆ * ಆರ್ಥಿಕ ಸುಧಾರಣೆಗಳು ವಿಶಾಲ ವ್ಯಾಪ್ತಿಯಲ್ಲಿ * ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಹಣಕಾಸು ಸಂಸ್ಥೆಗಳು ಅಥವಾ ರಾಷ್ಟ್ರಗಳಿಂದ ಭಾರತಕ್ಕೆ ಅಭಿವೃದ್ಧಿ ನೆರವು. * ವಿನಿಮಯ ಆಡಳಿತ * ಭಾರತದಲ್ಲಿ ವಿದೇಶಿ ಹಣಹೂಡಿಕೆ * ವಿದೇಶದಲ್ಲಿ ಭಾರತದ ಹೂಡಿಕೆ * ಹಣಕಾಸು ನೀತಿ * ಆರ್ಥಿಕ ನೀತಿ * ತೆರಿಗೆ ನೀತಿ * ಹಣದುಬ್ಬರ ನಿರ್ವಹಣೆ * ಸಾಲ ಮಾರುಕಟ್ಟೆ ಕಾರ್ಯಾಚರಣೆ * ಸಣ್ಣ ಉಳಿತಾಯ * ಆಯವ್ಯಯ ದಾಖಲೆಗಳ ಆಧುನೀಕರಣ ಐದು ವರ್ಷದ ಸಮಗ್ರ ಕಾನೂನು ಶಿಕ್ಷಣ ಪಡೆಯುತ್ತಿರುವ ನಾಲ್ಕನೇ ಅಥವಾ ಐದನೇ ವರ್ಷದಲ್ಲಿ ಓದುತ್ತಿರುವ ಪದವಿಪೂರ್ವ ವಿದ್ಯಾರ್ಥಿ, ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರುವ ಪದವೀಧರರು ಹಾಗೂ ಆರ್ಥಿಕ, ಹಣಕಾಸು, ಆಡಳಿತ ವಿಷಯಗಳಲ್ಲಿ ಸಂಶೋಧನೆ ನಡೆಸುತ್ತಿರುವ ಸ್ನಾತಕೋತ್ತರ ಪದವೀಧರರು ಈ ಕಾರ್ಯಕ್ರಮಕ್ಕೆ ಅರ್ಹರಾಗಿರುತ್ತಾರೆ. ಸ್ನಾತಕೋತ್ತರ ಪದವೀಧರರು ಮೊದಲ ದರ್ಜೆಯಲ್ಲಿ ತೇರ್ಗಡೆಯಾಗಿರಬೇಕು. ಸಂಶೋಧನಾ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇಕಡಾ 50 ರಷ್ಟು ಅಂಕ ಗಳಿಸಿರಬೇಕು ಹಾಗೂ ಇಂಟೆಗ್ರೇಟೆಡ್ ಕೋರ್ಸ್‌ನಲ್ಲಿ ನಾಲ್ಕು ಅಥವಾ ಐದನೇ ವರ್ಷದಲ್ಲಿರುವವರು 12ನೇ ತರಗತಿಯಿಂದ ಕನಿಷ್ಠ ಶೇಕಡಾ 80ರಷ್ಟು ಅಂಕಗಳನ್ನು ಪಡೆದಿರಬೇಕು. ಅವಧಿ ಇಂಟರ್ನ್‌ಷಿಪ್ ಅವಧಿ ಎರಡು ತಿಂಗಳು. 2012 ಹಾಗೂ 2013ರಲ್ಲಿ ವಿವಿಧ ಕಾಲಾವಧಿಗಳಲ್ಲಿ ಇದನ್ನು ನಡೆಸಲಾಗುವುದು. ಯಶಸ್ವಿಯಾಗಿ ಕಾರ್ಯಕ್ರಮ ಪೂರೈಸಿ ತಮ್ಮ ವರದಿ/ಪ್ರಬಂಧ ಸಲ್ಲಿಸಿದ ನಂತರ ಪ್ರಶಿಕ್ಷಣಾರ್ಥಿಗಳಿಗೆ ಮಾಸಿಕ ರೂ 5,000 ದಂತೆ ಸಾಂಕೇತಿಕ ಸಂಭಾವನೆ ನೀಡಲಾಗುವುದು. ಇಂಟರ್ನ್‌ಷಿಪ್‌ಗೆ ಸೇರುವ ಮೊದಲು ರಹಸ್ಯ ಪಾಲನೆಯ ಪ್ರಮಾಣಪತ್ರವನ್ನು ನೀಡಬೇಕು. ಅಂತರ್ಜಾಲ ಸೌಲಭ್ಯವಿರುವ ಕಂಪ್ಯೂಟರ್ ಹಾಗೂ ಕಚೇರಿಯಲ್ಲಿ ಆಸನ ವ್ಯವಸ್ಥೆಯ ಹೆಚ್ಚುವರಿ ಸೌಕರ್ಯಗಳನ್ನೂ ಒದಗಿಸಿಕೊಡಲಾಗುತ್ತದೆ. ನಿಯೋಜನೆ ಇಲಾಖೆಯ ಯಾವುದಾದರೂ ವಿಭಾಗದ ಉಪಕಾರ್ಯದರ್ಶಿ ಅಥವಾ ನಿರ್ದೇಶಕ ಹಂತದ ಅಧಿಕಾರಿಗಳ ಜೊತೆಗೆ ಕೆಲಸ ಮಾಡಲು ಪ್ರಶಿಕ್ಷಣಾರ್ಥಿಗಳನ್ನು ನಿಯೋಜಿಸಲಾಗುವುದು. ಸಂಬಂಧಿಸಿದ ಮುಖ್ಯಸ್ಥರಿಗೆ ನಿಗದಿತ ವಿಚಾರವನ್ನು ಕುರಿತಂತೆ ವರದಿಗಳನ್ನು ಸಲ್ಲಿಸಬೇಕು. ಜೊತೆಗೆ ಕಾರ್ಯಕ್ರಮ ಹಾಗೂ ಮೇಲುಸ್ತುವಾರಿಯಲ್ಲಿನ ಅನುಭವಗಳನ್ನು ಕುರಿತಂತೆ ವರದಿ ಸಲ್ಲಿಸುವುದೂ ಕಡ್ಡಾಯ. ಪ್ರಮಾಣ ಪತ್ರ ಇಂಟರ್ನ್‌ಷಿಪ್ ಅನ್ನು ತೃಪ್ತಿಕರವಾಗಿ ಪೂರೈಸಿದ ನಂತರ ವರದಿ ಅಥವಾ ಪ್ರಬಂಧವನ್ನು ಪ್ರಶಿಕ್ಷಣಾರ್ಥಿಗಳು ಸಲ್ಲಿಸಬೇಕು. ಇವನ್ನು ಸಂಬಂಧಿಸಿದ ಉಪಕಾರ್ಯದರ್ಶಿ ಅಥವಾ ನಿರ್ದೇಶಕ ಹಂತದ ಅಧಿಕಾರಿಗಳು ಮೌಲ್ಯಮಾಪನ ಮಾಡಿದ ನಂತರ ಪ್ರಮಾಣಪತ್ರಗಳನ್ನು ನೀಡಲಾಗುವುದು. ಅರ್ಜಿ ಆಸಕ್ತರು ಇಲಾಖೆಯ ವೆಬ್‌ಸೈಟ್‌ನಲ್ಲಿ ನಮೂದಿಸಲಾಗಿರುವಂತೆ ನಿಗದಿತ ಮಾದರಿಯಲ್ಲಿ, ಸ್ವಪರಿಚಯದೊಂದಿಗೆ ಜನವರಿ 16ರ ಒಳಗೆ ತಮ್ಮ ಅರ್ಜಿ ಸಲ್ಲಿಸಬಹುದು. ಇಂಟರ್ನ್‌ಷಿಪ್ 2012ರ ಏಪ್ರಿಲ್ ಮೊದಲ ವಾರದ ನಂತರ ಆರಂಭವಾಗುವುದು. ... ಸಂಪರ್ಕಿಸಬಹುದು. ವಿಳಾಸ: (), , , - 110 001. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.