ಶಿಕ್ಷಣ, ಅಭಿವೃದ್ಧಿ ಸ್ನಾತಕೋತ್ತರ ಕೋರ್ಸ್ ರಾಜ್ಯದ ಮೊದಲ ಖಾಸಗಿ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಜೀಂಪ್ರೇಮ್‌ಜಿ ವಿಶ್ವವಿದ್ಯಾಲಯವು ಶಿಕ್ಷಣ, ಅಭಿವೃದ್ಧಿ ಸೇರಿದಂತೆ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಿದೆ. ರಾಜ್ಯ ಸರ್ಕಾರದ ಕಾಯ್ದೆಗೆ ಅನುಗುಣವಾಗಿ ಸುಮಾರು ಒಂದು ವರ್ಷದ ಹಿಂದೆ ಆರಂಭವಾಗಿರುವ ವಿಶ್ವವಿದ್ಯಾಲಯ ಸ್ನಾತಕೋತ್ತರ ಹಂತದಲ್ಲಿ ಆರಂಭಿಸಿರುವ ಎರಡು ವರ್ಷದ (2012-14) ಕೋರ್ಸ್‌ಗಳಿಗೆ ಈಗ ಪ್ರವೇಶ ಪ್ರಕ್ರಿಯೆ ಶುರುವಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಶಿಕ್ಷಣ, ಅಭಿವೃದ್ಧಿ ಮತ್ತು ಶಿಕ್ಷಕರ ಶಿಕ್ಷಣ ಈ ಮೂರು ವಿಷಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲಾಗಿದ್ದು, ಪ್ರವೇಶ ಪರೀಕ್ಷೆ ಮೂಲಕ ಈ ಕೋರ್ಸ್‌ಗಳಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತದೆ. ವೃತ್ತಿಪರರು, ಶಿಕ್ಷಕರು ಮತ್ತು ಪದವೀಧರರು ಈ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಬೆಂಗಳೂರು ಸೇರಿದಂತೆ ದೇಶದ 28 ಕೇಂದ್ರಗಳಲ್ಲಿ 2012ರ ಫೆಬ್ರುವರಿ 26ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಲು ಫೆಬ್ರುವರಿ 10 ಕೊನೆಯ ದಿನವಾಗಿದೆ. ಇಂಗ್ಲಿಷ್, ವಿಶ್ಲೇಷಣಾ ಸಾಮರ್ಥ್ಯ, ಸಾಮಾನ್ಯ ಜ್ಞಾನ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಇರುವ ಅರಿವು ಮತ್ತು ನಿಗದಿತ ವಿಷಯದ ಕುರಿತ ಪ್ರಶ್ನೆಗಳನ್ನು ಪ್ರವೇಶ ಪರೀಕ್ಷೆಯಲ್ಲಿ ಕೇಳಲಾಗುತ್ತದೆ. ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪ್ರವೇಶ ಪರೀಕ್ಷೆ ಬರೆಯಬಹುದಾಗಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತದೆ. ಶಿಕ್ಷಣ ಮತ್ತು ಅಭಿವೃದ್ಧಿಯ ಬಗ್ಗೆ ಸಾಮಾಜಿಕ ಬದ್ಧತೆವುಳ್ಳ ಮತ್ತು ಸಮಾಜಕ್ಕೆ ಕೊಡುಗೆ ನೀಡುವಂತಹ ವೃತ್ತಿಪರರನ್ನು ತರಬೇತಿಗೊಳಿಸುವ ದೃಷ್ಟಿಯಿಂದ ವಿಶ್ವವಿದ್ಯಾಲಯ ಆರಂಭವಾಗಿದೆ. ವೃತ್ತಿಪರರ ಮೂಲಕ ಶಿಕ್ಷಣ ಮತ್ತು ಅಭಿವೃದ್ಧಿ ವಿಷಯಗಳಲ್ಲಿ ಪ್ರಗತಿಯನ್ನು ಸಾಧಿಸಿ ಆ ಮೂಲಕ ಸಾಮಾಜಿಕ ಪರಿವರ್ತನೆಯನ್ನು ತರಬೇಕು ಎಂಬುದು ವಿಶ್ವವಿದ್ಯಾಲಯದ ಆಶಯ. ಈ ಹಿನ್ನೆಲೆಯಲ್ಲಿ ಆಯ್ದ ಅಭ್ಯರ್ಥಿಗಳಿಗೆ ಮಾತ್ರ ವಿಶ್ವವಿದ್ಯಾಲಯವು ಪ್ರವೇಶ ನೀಡಲಿದ್ದು, ಅರ್ಹ ಮತ್ತು ಅಗತ್ಯವುಳ್ಳವರಿಗೆ ಆರ್ಥಿಕ ನೆರವನ್ನು ನೀಡಲಿದೆ. ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವೃತ್ತಿಪರರಿಗೆ ಸಾಲ, ವಿದ್ಯಾರ್ಥಿವೇತನ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ. ಅಲ್ಲದೆ ಕ್ಯಾಂಪಸ್ ಸಂದರ್ಶನದ ಮೂಲಕ ಸರ್ಕಾರಿ, ಖಾಸಗಿ, ಸರ್ಕಾರೇತರ ಸಂಘ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳನ್ನು ದೊರಕಿಸಿಕೊಡಲಾಗುತ್ತದೆ. ಈಗಿನ ಲೆಕ್ಕಾಚಾರದ ಪ್ರಕಾರ ಶಿಕ್ಷಣ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ವಾರ್ಷಿಕ ಮೂರು ಲಕ್ಷ ವೃತ್ತಿಪರರ ಅಗತ್ಯವಿದೆ. ಅಜೀಂಪ್ರೇಮ್‌ಜಿ ಪ್ರತಿಷ್ಠಾನ ಬರುವ ನಾಲ್ಕು ವರ್ಷಗಳಲ್ಲಿ ನಾಲ್ಕು ಸಾವಿರ ವೃತ್ತಿಪರರನ್ನು ನೇಮಕ ಮಾಡಿಕೊಳ್ಳಲಿದೆ. ಕರ್ನಾಟಕವು ಸೇರಿದಂತೆ ಎಲ್ಲ ರಾಜ್ಯಗಳ ಹಿಂದುಳಿದ ಜಿಲ್ಲೆಗಳಲ್ಲಿ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನವು ಶಾಲೆಗಳನ್ನು ಆರಂಭಿಸುತ್ತಿದ್ದು, ಅಲ್ಲಿ 10ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಕಳೆದ ಸಾಲಿನಲ್ಲೇ ಯಾದಗಿರಿ ಸೇರಿದಂತೆ ಕೆಲವೆಡೆ ಶಾಲೆಗಳು ಶುರುವಾಗಿವೆ. ಹೀಗಾಗಿ ಆ ಶಾಲೆಗಳಲ್ಲೇ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಅರ್ಹತೆ: ಎಂ.ಎ. ಇನ್ ಎಜುಕೇಷನ್ ಮತ್ತು ಡೆವಲಪ್‌ಮೆಂಟ್ ಕೋರ್ಸ್‌ಗಳಿಗೆ ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು. ಸೇವಾ ಅನುಭವವುಳ್ಳವರು ಮತ್ತು ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಎಂ.ಎ. ಇನ್ ಟೀಚರ್ಸ್‌ ಎಜುಕೇಷನ್ ಕೋರ್ಸ್‌ಗೆ ಬಿ.ಇಡಿ., ಡಿ.ಇಡಿ., ಎಂ.ಎ., ಎಂ.ಇಡಿ ಅಥವಾ ಇದಕ್ಕೆ ಸಮಾನವಾದ ವಿದ್ಯಾರ್ಹತೆ ಹೊಂದಿರುವವರು ಅರ್ಹರು. ಅಲ್ಲದೆ ಶಾಲೆ ಅಥವಾ ಪದವಿಪೂರ್ವ ಕಾಲೇಜುಗಳಲ್ಲಿ ಎರಡು ವರ್ಷದ ಬೋಧನಾ ಅನುಭವ ಹೊಂದಿರಬೇಕು. ಅರ್ಹ ವೃತ್ತಿಪರ ಶಿಕ್ಷಕರನ್ನು ಹುಟ್ಟುಹಾಕುವ ಮೂಲಕ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶವನ್ನು ವಿಶ್ವವಿದ್ಯಾಲಯ ಹೊಂದಿದೆ. ಮಕ್ಕಳಿಗೆ ಗುಣಮಟ್ಟದ ಸಿಗಬೇಕಾದರೆ ಮೊದಲು ಶಿಕ್ಷಕರ ಕಲಿಕಾಮಟ್ಟ ಹೆಚ್ಚಾಗಬೇಕು ಎಂಬ ದೃಷ್ಟಿಯಿಂದ ಶಿಕ್ಷಕರ ತರಬೇತಿಯನ್ನೇ ಮುಖ್ಯಗುರಿಯಾಗಿಟ್ಟುಕೊಂಡು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಶಿಕ್ಷಕ ವೃತ್ತಿಯಲ್ಲಿ ತೊಡಗಲು ಆಸಕ್ತಿವುಳ್ಳವರಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡಿ, ಅವರನ್ನು ವೃತ್ತಿಪರ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಮಾಡಬೇಕು. ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಬೇಕು. ಆ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡಬೇಕು ಎಂಬ ಮಹತ್ವಾಕಾಂಕ್ಷೆಯನ್ನು ವಿಶ್ವವಿದ್ಯಾಲಯ ಹೊಂದಿದೆ. ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಯಸುವವರು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 080-66145150 ಅಥವಾ 18002662001 ಸಂಪರ್ಕಿಬಹುದು. ವೆಬ್‌ಸೈಟ್ ವಿಳಾಸ: ... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.