ಐಎಎಸ್ ಸಿದ್ಧತೆಯ ಕಠಿಣ ಹಾದಿ ಐಎಎಸ್‌ನಂತಹ ಕನಸಿನ ಹುದ್ದೆ ಹಿಡಿಯುವ ವಿಚಾರದಲ್ಲಿ ಎಲ್ಲರದೂ ಏಕಮುಖ ಅಭಿಪ್ರಾಯ. `ಹೌದು. ನಾನು ಆ ಹುದ್ದೆಗೇರಬೇಕು~ ಎಂಬುದು ಸರ್ವರ ಆಶಯ. ಆದರೆ ಅದನ್ನು ಸಾಕಾರಗೊಳಿಸುವ ವಿಧಾನದಲ್ಲಿ ಗೊಂದಲ ಸಾಮಾನ್ಯ ಸಂಗತಿಯಾಗಿದೆ. ಬಹುದೊಡ್ಡ ಹುದ್ದೆಯ ವಶೀಕರಣದ ಹಿಂದೆ ಅತ್ಯಂತ ವಸ್ತುನಿಷ್ಠ ಅಧ್ಯಯನ ವಿಧಾನದ ಅಸ್ತಿತ್ವವಿರುತ್ತದೆ. ಯಾರು ಈ ಸೂಕ್ಷ್ಮ ನೆಲೆಗಟ್ಟಿನೊಳಗೆ ತಮ್ಮ ಅಧ್ಯಯನ ಕ್ರಮವನ್ನು ಸಮೀಕರಿಸಿಕೊಳ್ಳುತ್ತಾರೋ, ಅವರು ಮಾತ್ರ ಯಶಸ್ಸಿನ ಕದ ತಟ್ಟಬಹುದು. ಪ್ರಜ್ಞಾಪೂರ್ವಕ ಅಧ್ಯಯನದ ಹೊರತು ಇಂತಹ ಹುದ್ದೆ ಪಡೆಯುವುದು ಅಸಾಧ್ಯದ ಮಾತೇ ಸರಿ. ಆಧಾರ ಗ್ರಂಥಗಳ ಹುಡುಕಾಟ ಎಲ್ಲರಲ್ಲೂ ಒಮ್ಮೆಲೇ ಆತಂಕ ಸೃಷ್ಟಿ ಮಾಡುವಂತಹದ್ದು ಈ ಆಧಾರ ಗ್ರಂಥಗಳು. ಅಂದರೆ, ಐಎಎಸ್ ಪಾಸಾಗಲು ಯಾವ ಪುಸ್ತಕ ಓದಬೇಕು? ಮತ್ತೆ ಕೆಲವರ ದುಗುಡ ನಾನು 2-3 ವರ್ಷಗಳಿಂದ ದಿನವಿಡೀ ಓದುತ್ತಲೇ ಇದ್ದೇನೆ. ಆದರೆ ಪ್ರಶ್ನೆ ಪತ್ರಿಕೆಯಲ್ಲಿ ಬೇರೆಯದೇ ಪ್ರಶ್ನೆಗಳು ರಚಿತವಾಗಿರುತ್ತವೆ ಎಂಬುದು. ಹೌದು ಈ ರೀತಿಯ ಅನುಭವಗಳನ್ನು ರಾಜ್ಯದಾದ್ಯಂತ ಎಲ್ಲ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳ ಒಳಗೆ ಮತ್ತು ಹೊರಗೆ ಪರೀಕ್ಷಾಕಾಂಕ್ಷಿಗಳಿಂದ ಪಡೆಯುತ್ತಲೇ ಇರುತ್ತೇವೆ. ಹಾಗಾದರೆ ನಾವು ಎಂತಹ ಪುಸ್ತಕಗಳನ್ನು ಓದಬೇಕೆಂಬುದು ಯಕ್ಷ ಪ್ರಶ್ನೆಯಾಗಿ ಉಳಿದುಬಿಟ್ಟಿದೆ. ಇದಕ್ಕೆ ಸೂಕ್ತ ಉತ್ತರ ಕಂಡುಕೊಳ್ಳದ ಹೊರತು, ಗುರಿಮುಟ್ಟುವುದು ಸಾಧ್ಯವೇ ಇಲ್ಲ. ಪ್ರಶ್ನೆಪತ್ರಿಕೆ - ಆಧಾರಗ್ರಂಥ ಸಂಬಂಧ ಪ್ರಶ್ನೆ ಪತ್ರಿಕೆಯಲ್ಲಿ ಅದೆಂತಹ ಕ್ಲಿಷ್ಟ ಪ್ರಶ್ನೆಗಳೇ ಇರಲಿ. ಅದರ ಬಗ್ಗೆ ನಾವು ಚಿಂತಿಸಬೇಕಾದ ಅಗತ್ಯವಿಲ್ಲ. ಬದಲಿಗೆ ನಾವು ಸೂಕ್ಷ್ಮವಾಗಿ ವಿಮರ್ಶಿಸಬೇಕಾದ ಅಂಶ, ಅದು ಪ್ರಶ್ನೆ ಪತ್ರಿಕೆಗಳ ಸಂರಚನೆಯ ಆಧಾರ. ಅಂದರೆ ಯಾವುದೇ ಒಬ್ಬ ಪ್ರಶ್ನೆ ಪತ್ರಿಕೆಯ ಸಂರಚನಕಾರ, ನೇರವಾಗಿ ತನ್ನ ತಲೆಯಿಂದ ಪ್ರಶ್ನೆಗಳನ್ನು ಹೊರತೆಗೆಯುವುದಿಲ್ಲವೆಂಬುದು ವಾಸ್ತವ ಸಂಗತಿ. ಆತ ಅಥವಾ ಆಕೆ ಕೂಡ ಹಲವು ಆಧಾರ ಗ್ರಂಥಗಳ ಅಭ್ಯಾಸದ ನಂತರವೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಸಾಧ್ಯ. ನಿಜಕ್ಕೂ ಪರಿಕ್ಷಾರ್ಥಿಗಳಷ್ಟೇ ಜವಬ್ದಾರಿ ಅವರ ಮತ್ತು ಆ ಕಮಿಟಿಯ ಮುಂದೆ ಇದ್ದೇ ಇರುತ್ತದೆ. ಅವರು ಒಂದು ಪ್ರಶ್ನೆಯನ್ನು ನಿಮ್ಮ ಬಳಿ ತರುವಾಗ ಹತ್ತು ಹಲವು ಬಾರಿ ವಿಶ್ಲೇಷಿಸಿ, ವಿಮರ್ಶಿಸಬೇಕಾದ ಅನಿವಾರ್ಯತೆ ಇರುತ್ತದೆ. ಬಹುತೇಕ ದೀರ್ಘಾಧ್ಯಯನದ ನಂತರವೇ ಅವರು ಪ್ರತಿ ಪ್ರಶ್ನೆಯನ್ನು ಸಿದ್ಧಪಡಿಸುತ್ತಾರೆ. ಏಕೆಂದರೆ ಆ ಮಟ್ಟದ ಗುರುತರ ಜವಾಬ್ದಾರಿ ಅವರ ಮೇಲಿರುತ್ತದೆ. ಅಂದ ಮೇಲೆ ಅವರು ರಚಿಸುವ ಪ್ರತಿ ಪ್ರಶ್ನೆಗಳ ಹಿಂದೆ ಆಧಾರ ಗ್ರಂಥಗಳ ಅಸ್ತಿತ್ವವಿರುತ್ತದೆ ಎಂಬುದು ಖಚಿತ. ಅಧ್ಯಯನ ವ್ಯಾಪ್ತಿ ಪುನಃ ನಾವು ಜಾಗೃತರಾಗಬೇಕಿರುವುದು ಈ ಹಂತದಲ್ಲಿಯೇ. ಪ್ರಶ್ನೆಪತ್ರಿಕೆ ರಚನೆಕಾರರ ಅಧ್ಯಯನಕ್ಕೆಂದೇ ಪ್ರತ್ಯೇಕ ಪುಸ್ತಕ ರಚಿಸಲಾಗಿರುತ್ತದೆಯೇ?, ಅಥವಾ ಪ್ರಶ್ನೆ ಪತ್ರಿಕೆ ತಯಾರುಮಾಡಲು ಪ್ರತ್ಯೇಕ ಪುಸ್ತಕಗಳು ರಚನೆಯಾಗಿರುತ್ತವೆಯೇ ಎಂಬುದು ಚರ್ಚಿತ ವಿಷಯ ವಸ್ತು. ಇದಕ್ಕೆ ಸಿದ್ಧ ಉತ್ತರ ಖಂಡಿತ ಇಲ್ಲ. ಆ ರೀತಿಯ ಯಾವುದೇ ಪ್ರತ್ಯೇಕ ಪುಸ್ತಕಗಳ ಅಸ್ತಿತ್ವ ಕಡ್ಡಾಯವಾಗಿ ಇಲ್ಲವೇ ಇಲ್ಲ. ಅವರು ಕೂಡ ಸಾಮಾನ್ಯ ಪಠ್ಯಕ್ರಮದ ಪುಸ್ತಕವನ್ನು ಅಧ್ಯಯನ ಮಾಡುತ್ತಾರೆಂಬುದು ನೈಜ ಸಂಗತಿ. ನನಗೆ ಪರಿಚಯವಿರುವ ಒಬ್ಬರು ಮಾಜಿ ಯುಪಿಎಸ್‌ಸಿ ಪ್ರಶ್ನೆಪತ್ರಿಕೆ ರಚನೆಕಾರರ ಪ್ರಕಾರ, ಆ ಪ್ರಶ್ನೆ ಪತ್ರಿಕೆಯಲ್ಲಿ ಅಸ್ತಿತ್ವ ಕಾಣುವ ಒಂದು ಪ್ರಶ್ನೆ ಸಿದ್ಧಪಡಿಸಲು ಸಾಮಾನ್ಯವಾಗಿ 6-8 ಘಂಟೆ ಅಥವಾ 10 ಗಂಟೆಗಳ ಕಾಲ ಅಭ್ಯಾಸ ವಿಶ್ಲೇಷಣೆ, ಅಗತ್ಯವಿದೆಯಂತೆ, ಅಂದ ಮೇಲೆ ಅವರು ಬಳಸುವ ಅಧ್ಯಯನ ಸಾಮಗ್ರಿಗಳ ವ್ಯಾಪ್ತಿ (ಕ್ವಾಂಟಿಟಿ) ಮತ್ತು ಗುಣಮಟ್ಟ (ಕ್ವಾಲಿಟಿ)ಗಳನ್ನು ಮೌಲ್ಯಮಾಪನ ಮಾಡುವ ಅಗತ್ಯವಿದೆ. ನಿಮಗೆ ಯುಪಿಎಸ್‌ಸಿ ನೀಡಿರುವ ಪಠ್ಯಕ್ರಮ (ಸಿಲಬಸ್)ದ ಅನ್ವಯವೇ ಪ್ರಶ್ನೆಪತ್ರಿಕೆ ಸಿದ್ಧವಾಗುತ್ತದೆ. ಅದರಲ್ಲಿ ಸಂದೇಹ ಬೇಡ. ಸಿಲಬಸ್‌ನ ಒಳಗಡೆ ಅಸ್ತಿತ್ವ ಕಂಡಿರುವ ಅಷ್ಟು ವಿಷಯಗಳ ಬಗ್ಗೆ, ಪ್ರತಿ ವಿಷಯದ ವಿಷಯ ತಜ್ಞರಿಂದ ಪ್ರಶ್ನೆಗಳನ್ನು ಸಂರಚಿಸಲಾಗುತ್ತದೆ. ಉದಾ: ಇತಿಹಾಸವು ಕೂಡ ನಿಮ್ಮ ಪರೀಕ್ಷಾ ಪಠ್ಯದ ಒಂದು ಭಾಗ. ಈ ಭಾಗದ ಎಲ್ಲ ಪ್ರಶ್ನೆಗಳು, ಇತಿಹಾಸ ವಿಭಾಗದ ಶ್ರೇಷ್ಠ ಉಪನ್ಯಾಸಕರಿಂದ, ಪ್ರೊಫೆಸರ್‌ಗಳಿಂದ ರಚಿತವಾಗುತ್ತವೆ. ಇಲ್ಲಿ ಕರ್ನಾಟಕ ಇತಿಹಾಸವು ಒಂದು ಭಾಗ. ಇದರ ಬಗ್ಗೆ ಪ್ರಶ್ನೆಪತ್ರಿಕೆ ರಚನೆಕಾರರು ಕಡ್ಡಾಯವಾಗಿ ಪ್ರಶ್ನೆ ಕೇಳಲೇಬೇಕು. ಪ್ರಶ್ನೆಪತ್ರಿಕೆ ರಚನೆಕಾರರ ಜವಾಬ್ದಾರಿ * ಸಾಮಾನ್ಯವಾಗಿ ಪ್ರಶ್ನೆಪತ್ರಿಕೆ ರಚನೆಕಾರರು ಪ್ರಶ್ನೆ ಕೇಳುವಾಗ, ಒಟ್ಟಾರೆ ಇತಿಹಾಸ ವಿಭಾಗದ ಪ್ರಶ್ನೆಗಳ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡಿರಬೇಕು. * ಜೊತೆಗೆ ಈ ಪ್ರಶ್ನೆ ಸಾಮಾನ್ಯ ಸಂರಚನೆಯ ನಾಲ್ಕು ಹಂತಗಳಲ್ಲಿ ಯಾವ ಹಂತಕ್ಕೆ ಸೇರಬೇಕೆಂಬುದನ್ನು ಖಚಿತಪಡಿಸಿಕೊಂಡಿರಬೇಕು. * ಪ್ರಶ್ನೆಗಳು ಪುನರಾವರ್ತನೆಯಾಗಬಾರದು. ಈ ಹಿನ್ನೆಲೆಯಲ್ಲಿ ಪ್ರಶ್ನೆಪತ್ರಿಕೆ ರಚನಕಾರರು ಅತ್ಯಂತ ತಳಸ್ತರದ ಅಧ್ಯಯನ ಕೈಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಪ್ರಶ್ನೆಪತ್ರಿಕೆ ರಚನೆಕಾರರ ಮುಂದಿರುವ ಆಯ್ಕೆಗಳು ಕರ್ನಾಟಕ ಇತಿಹಾಸದ ಬಗ್ಗೆ ಪ್ರಶ್ನೆ ಕೇಳುವಾಗ, ಅವರು ಏನೇನು ಅಧ್ಯಯನ ಮಾಡಲು ಅವಕಾಶಗಳಿವೆ. * ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟ ಅಧಿಕೃತ ಮತ್ತು ವಸ್ತುನಿಷ್ಠ ಬರಹಗಾರರ ಪುಸ್ತಕ. * ಕರ್ನಾಟಕ ಸರ್ಕಾರದ ಗೆಜೆಟ್ * ಕೇಂದ್ರ ಮತ್ತು ಕರ್ನಾಟಕ ಸರ್ಕಾರದ ಪ್ರಾಚ್ಯವಸ್ತು ಇಲಾಖೆಯ ಅಧಿಕೃತ ಪ್ರಕಟಣೆಗಳು * ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟ ಇಲಾಖಾ ವರದಿಗಳು. ಇಲ್ಲಿ ಪ್ರತಿಯೊಬ್ಬ ಪರೀಕ್ಷಾರ್ಥಿಯು ಗಮನಿಸಬೇಕಾದ ಅಂಶವೆಂದರೆ, ಪ್ರಶ್ನೆಪತ್ರಿಕೆ ರಚನೆಕಾರರ ಮುಂದೆ ಇದಕ್ಕಿಂತ ವಿಭಿನ್ನ ಆಯ್ಕೆಗಳು ಇರಲು ಸಾಧ್ಯವೇ ಇಲ್ಲವೆಂಬುದು. ಇದನ್ನು ಹೊರತುಪಡಿಸಿದ ಅವರ ಸಿದ್ಧತೆ ಇಲ್ಲಿ ಅನಧಿಕೃತವೆನಿಸುತ್ತದೆ. ಇಷ್ಟರ ಜೊತೆಗೆ ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟ ಪ್ರಚಲಿತ ಘಟನೆಗಳ ಅಧ್ಯಯನ. ಅಂದ ಮೇಲೆ ಒಬ್ಬ ಜವಾಬ್ದಾರಿಯುತ ಪರೀಕ್ಷಾರ್ಥಿಯ ಆದ್ಯ ಕರ್ತವ್ಯ, ಮೇಲಿನ ಅಷ್ಟೂ ಆಧಾರಗಳ ಬಗೆಗೆ ಸೂಕ್ತ ಅಧ್ಯಯನ ಕೈಗೊಳ್ಳುವುದು. ಇದೇ ಕ್ರಮವನ್ನು ಅವರು ಮಧ್ಯಕಾಲೀನ ಇತಿಹಾಸ, ರಾಷ್ಟ್ರೀಯ ಚಳವಳಿ, ಯೂರೋಪ್ ಇತಿಹಾಸ, ಹೀಗೆ ಇತಿಹಾಸದ ಎಲ್ಲ ಪಠ್ಯಕ್ರಮ ಅನುಸರಿಸುತ್ತಾರೆ. ಇದೇ ಮಾದರಿ ಇನ್ನುಳಿದ ವಿಜ್ಞಾನ, ಭಾರತ ಸಂವಿಧಾನ ಭೂಗೋಳಶಾಸ್ತ್ರ ಹೀಗೆ 18 ವಿಷಯ ವಸ್ತುಗಳಿಗೂ ಅನ್ವಯವಾಗುತ್ತದೆ. ಆದ್ದರಿಂದ ಮೇಲಿನ ಆಧಾರ ಅಧ್ಯಯನ ಕ್ರಮ ಔಚಿತ್ಯವೆನಿಸುತ್ತದೆ. ಆದರೆ ಬಹುತೇಕರು ಅಣ್ಣ ಓದಿದ ಪುಸ್ತಕ, ಅಥವಾ ಅತ್ತಿಗೆ 1996 ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅಧ್ಯಯನ ಮಾಡಿದ್ದು, ಇನ್ನು ಕೆಲವರು, ತಾತ್ಕಾಲಿಕ ಲೇಖಕರ ಪುಸ್ತಕವನ್ನು ಅವಲಂಬಿಸುತ್ತಾರೆ. ಈ ಪ್ರಮಾದವೇ ಅವರ ಅಧ್ಯಯನಕ್ಕೂ, ಪ್ರಶ್ನೆ ಪತ್ರಿಕೆಯಲ್ಲಿನ ಸಂರಚನೆಗೂ ನಡುವೆ ದೊಡ್ಡದೊಂದು ಅಂತರವನ್ನು ಸೃಷ್ಟಿ ಮಾಡಿಬಿಡುತ್ತದೆ. ಪ್ರಚಲಿತ ವಿದ್ಯಮಾನಗಳು ಪ್ರಚಲಿತ ಘಟನೆಗಳು ಮಾತ್ರ ಸಾಮಾನ್ಯ ಅಧ್ಯಯನದ ಸಂಪೂರ್ಣ ಭಾಗವೇ ? ಸಾಕಷ್ಟು ಪರೀಕ್ಷಾರ್ಥಿಗಳಲ್ಲಿ ಮನೆ ಮಾಡಿರುವ ಅನಧಿಕೃತ ಅಂಶವೆಂದರೆ, ಪ್ರಚಲಿತ ಘಟನೆಗಳು ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಚಿತವಾಗುತ್ತವೆ ಎಂಬುದು. ಇದು ತೀರ ಅಪಾಯಕಾರಿಯಾದ್ದು. ಏಕೆಂದರೆ ನಾವು ಈ ಹಿಂದೆ ಚರ್ಚಿಸಿದಂತೆ. 18 ವಿಷಯ ವಸ್ತುಗಳ ಮೇಲೆ ಪ್ರಶ್ನೆಗಳು ಸಂರಚಿತವಾಗುತ್ತವೆ. ಅದರಲ್ಲಿ ಈ ಪ್ರಚಲಿತ ಘಟನೆಗಳು ಕೇವಲ ಒಂದು ಭಾಗವಷ್ಟೇ . ಆದರೆ ಬಹುತೇಕ ಮಂದಿ ತಮ್ಮ ಅಧ್ಯಯನದ ಅವಧಿಯನ್ನು ಇದರೊಟ್ಟಿಗೆ ಮೀಸಲಿಟ್ಟು ತಮ್ಮ ಭವಿಷ್ಯವನ್ನು ಅಂಧಕಾರದಲ್ಲಿಟ್ಟುಕೊಳ್ಳುತ್ತಿದ್ದಾರೆ. ಇಂತಹವರು ಖಂಡಿತ ಯಶಸ್ಸು ಕಾಣಲು ಸಾಧ್ಯವೇ ಇಲ್ಲ. ಸುಮಾರು 100 ಅಂಕಗಳ ಪ್ರಶ್ನೆಪತ್ರಿಕೆಯಲ್ಲಿ ಕನಿಷ್ಠ 10, ಗರಿಷ್ಠ 18-20 ಪ್ರಚಲಿತ ಘಟನೆಗಳಿಗೆ ಸಂಬಂಧಪಟ್ಟ ಪ್ರಶ್ನೆಗಳು ಮಾತ್ರ ಬರಲು ಅವಕಾಶವಿರುವುದರಿಂದ, ಅದಕ್ಕೆ ಹೆಚ್ಚು ಒಲವು ತೋರುವುದು ಒಳಿತಲ್ಲ. ಎಷ್ಟು ಅವಧಿಯ ಸಿದ್ಧತೆ ಅಗತ್ಯ? ನಮ್ಮಲ್ಲಿ ಬಹುತೇಕ ಮಂದಿಗೆ ಇಂತಹ ದೊಡ್ಡ ಪ್ರಮಾಣದ ಹುದ್ದೆ ಬೇಕು. ಆದರೆ, ಅದಕ್ಕೆ, ತಕ್ಕಷ್ಟು ಸಿದ್ಧತೆ ಮಾಡಿಕೊಳ್ಳುವ ತಾಳ್ಮೆ ಇರುವುದಿಲ್ಲ. ನಾವು ಒಂದು ಸಾಮಾನ್ಯ ಪದವಿ ಪಡೆಯಲು ಮೂರು ವರ್ಷಗಳ ಕಾಲ ಅಭ್ಯಾಸ ಮಾಡುತ್ತೇವೆ. ಆದರೆ, ರಾಷ್ಟ್ರಮಟ್ಟದಲ್ಲಿ ನಮ್ಮ ಬದುಕನ್ನು ಬೆಳಗಬಲ್ಲ ಹಿರಿದಾದ ಹುದ್ದೆಗೆ ಸಿದ್ಧತೆ ಮಾಡಿಕೊಳ್ಳುವಲ್ಲಿ ಜಿಪುಣತನ ಮಾಡುವುದು ಉಚಿತವಲ್ಲ. ಈಗ ಉದಾ: 18 ವಿಷಯ ವಸ್ತುಗಳಿವೆ. ಪರೀಕ್ಷೆಯಲ್ಲಿ ಯಶಸ್ಸು ಪಡೆಯಬೇಕಾದರೆ ಅಷ್ಟು ವಿಷಯಗಳಲ್ಲಿ ವಸ್ತುನಿಷ್ಠತೆ ಗಳಿಸುವುದು ಅನಿವಾರ್ಯ. ಈಗ ಭಾರತ ಸಂವಿಧಾನವೂ ಕೂಡ ಒಂದು ಪಠ್ಯ. ಇದಕ್ಕೆ ಎಷ್ಟು ದಿವಸಗಳ ಅಧ್ಯಯನ ಸಕ್ರಮವೆನಿಸುತ್ತದೆ ಎಂದು ವಿಶ್ಲೇಷಿಸಹೊರಟರೆ, ನಮ್ಮ ಸಂವಿಧಾನವನ್ನು ರಚಿಸಲು 2 ವರ್ಷ 11 ತಿಂಗಳು 18 ದಿವಸಗಳು ಘಟಿಸಿವೆ. ಅದನ್ನು ರಚಿಸಬೇಕಾದರೆ ಇಷ್ಟು ಸಮಯ ಹಿಡಿದ ಮೇಲೆ, ಅದನ್ನು ಅನುಕ್ರಮವಾಗಿ ಅರ್ಥೈಸಿಕೊಳ್ಳಲು ಇನ್ನು ಒಂದು ವರ್ಷ ಹೆಚ್ಚುಕಾಲ ಬೇಕಾಗಬಹುದು. ಅಂದರೆ, ಹತ್ತಿರ ಹತ್ತಿರ ನಾಲ್ಕು ವರ್ಷಗಳು, ಒಟ್ಟಾರೆ 18 4=72 ವರ್ಷಗಳು ಈ ಅಂಕಿಅಂಶಗಳನ್ನು ಗಮನಿಸಿದರೆ, ನೀವು ಹೌಹಾರುವುದು ಸತ್ಯ. ಆದರೆ ಅಂಕಿ ಅಂಶವು ಸತ್ಯವಾದದ್ದೇ. ಅವಧಿ ಕ್ರಮಬದ್ಧಗೊಳಿಸಿಕೊಳ್ಳುವುದು ಹೇಗೆ? ಪರೀಕ್ಷಾರ್ಥಿಗಳೆ ಆ 18 ವಿಷಯವಸ್ತುಗಳ ಮೌಲ್ಯವನ್ನು ಮೊದಲು ಪತ್ತೆಹಚ್ಚಿಕೊಳ್ಳಬೇಕು. ಅಂದರೆ 18 ವಿಷಯಗಳಲ್ಲಿ ವಿಜ್ಞಾನದ ವಿಷಯಕ್ಕೆ ಎಷ್ಟು ಮಹತ್ವ ನೀಡಬೇಕು, ಅರ್ಥಶಾಸ್ತ್ರ ಎಷ್ಟು ಪ್ರಮುಖವಾಗುತ್ತದೆ, ಮೆಂಟಲ್ ಎಬಿಲಿಟಿಗೆ ಎಷ್ಟು ಪ್ರಾತಿನಿಧ್ಯತೆ ದೊರೆಯಬಹುದು ಎಂಬ ಸೂಕ್ಷ್ಮ ನೆಲೆಗಟ್ಟನ್ನು ಪತ್ತೆಹಚ್ಚಿಕೊಳ್ಳಬೇಕು. ಪ್ರಾತಿನಿಧ್ಯ ಪತ್ತೆಹಚ್ಚಿಕೊಳ್ಳುವುದು ಹೇಗೆ? ಈ ಬಾರಿಯ ಪರೀಕ್ಷೆಯಲ್ಲಿ ಯಾವ ವಿಷಯಕ್ಕೆ ಸಂಬಂಧಪಟ್ಟ ಹೆಚ್ಚು ಪ್ರಶ್ನೆಗಳನ್ನು ಸಂರಚಿಸುತ್ತಾರೆ ಎಂದು ಕನಸು ಕಾಣಲು ಸಾಧ್ಯವಿಲ್ಲ, ಶಾಸ್ತ್ರ ಕೇಳಲು ಸಾಧ್ಯವಿಲ್ಲ. ಆದರೆ, ಹಿಂದಿನ ಪ್ರಶ್ನೆ ಪತ್ರಿಕೆಗಳ ಮೊರೆ ಹೋಗಿ ಸೂಕ್ಷ್ಮಾಧ್ಯಯನ ಕೈಗೊಂಡರೆ, ನಮಗೆ ಪ್ರಾತಿನಿಧ್ಯದ ಸೂಕ್ತ ಚಿತ್ರಣ ದೊರಕುವುದರಲ್ಲಿ ಸಂದೇಹವಿಲ್ಲ. ತದನಂತರ ಯಾವ ಯಾವ ಸಬ್‌ಜೆಕ್ಟ್‌ಗಳು ಆಯಕಟ್ಟಿನಲ್ಲಿ ಉಳಿಯುತ್ತವೆ ಎಂಬುದು ಗೋಚರವಾಗುತ್ತದೆ. ಆಗ ನಾವು ಯಾವ ವಿಷಯಗಳನ್ನು ಎಷ್ಟು ಅಧ್ಯಯನ ಕೈಗೊಳ್ಳಬೇಕೆಂಬ ವಾಸ್ತವ ಚಿತ್ರಣ ದೊರಕುತ್ತದೆ. ಉದಾ : ನಾನೊಬ್ಬ ಸಂವಿಧಾನ ತರಬೇತುದಾರನಾಗಿ ಹೇಳುವುದಾದರೆ, 2002ರಿಂದ 2009ರವರೆಗೆ ಯುಪಿಎಎಸ್‌ಸಿ ಪ್ರಾಥಮಿಕ ಹಂತದ ಪರೀಕ್ಷೆಯಲ್ಲಿ ರಚನೆಯಾದ ಭಾರತ ಸಂವಿಧಾನದ ಪ್ರಶ್ನೆಗಳ ಪಟ್ಟಿ ಕೆಳಗಿನಂತಿದೆ. 2002 16 ಪ್ರಶ್ನೆಗಳು 2003 17 ಪ್ರಶ್ನೆಗಳು 2004 18 ಪ್ರಶ್ನೆಗಳು 2005 10 ಪ್ರಶ್ನೆಗಳು 2006 12 ಪ್ರಶ್ನೆಗಳು 2007 11 ಪ್ರಶ್ನೆಗಳು 2008 10 ಪ್ರಶ್ನೆಗಳು 2009 13 ಪ್ರಶ್ನೆಗಳು ಇಲ್ಲಿ ನಾವು ಸೂಕ್ಷ್ಮತೆಯಿಂದ ಅಡಿ ಇಟ್ಟರೆ ಒಂದು ಅಂಶ ಸ್ಪಷ್ಟವಾಗುತ್ತದೆ. ಗರಿಷ್ಠ ಭಾರತದ ಸಂವಿಧಾನದ ಪ್ರಶ್ನೆಗಳನ್ನು ನಿಖರವಾಗಿ ಅಂದಾಜು ಮಾಡಲು ಸಾಧ್ಯವಿಲ್ಲದಿದ್ದರೂ, ಕನಿಷ್ಠ ಪ್ರಶ್ನೆಗಳನ್ನು ಬಹಳ ವಸ್ತುನಿಷ್ಠವಾಗಿ ಗುರುತಿಸಬಹುದು. ಮೇಲಿನ ಪಟ್ಟಿಯ ಆಧಾರದ ಮೇಲೆ ಕನಿಷ್ಠ 10 ಕ್ಕೆ ಕಡಿಮೆ ಇಲ್ಲದ ಪ್ರಶ್ನೆಗಳು ರಚನೆಯಾಗಿಯೇ ತೀರುತ್ತವೆ. ಅಂದಮೇಲೆ 18 ವಿಷಯಗಳಲ್ಲಿ ಭಾರತ ಸಂವಿಧಾನ ಒಂದು ಮಹತ್ವದ ಭಾಗ ಎನ್ನುವುದರಲ್ಲಿ ಉತ್ಪ್ರೇಕ್ಷೆ ಇಲ್ಲ. ಈ ಹಿನ್ನೆಲೆಯಲ್ಲಿ ಭಾರತ ಸಂವಿಧಾನವನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಿದರೆ, 10 ಪ್ರಶ್ನೆಗಳಿಗೆ ಸಮರ್ಥ ಉತ್ತರ ಬರೆಯಬಹುದು. ಈ ನಿಟ್ಟಿನ ಎ್ಲ್ಲಲಾ ವಿಷಯಗಳ ಪ್ರಬುದ್ಧ ಅಧ್ಯಯನಕ್ಕೆ ಪ್ರತಿ ಮುಖ್ಯ ವಿಷಯಕ್ಕೆ ಮೂರು ತಿಂಗಳು ಅಂದುಕೊಂಡರು ಮತ್ತು ಎರಡನೇ ಹಂತದ ವಿಷಯಗಳಿಗೆ ಎರಡು ತಿಂಗಳು ಎಂದು ವಿಂಗಡಿಸಿಕೊಂಡಾಗ ಬಹುತೇಕ 10x3 = 30, 8x2 = 16 = 46 ತಿಂಗಳು ಅಂದರೆ 3 ರಿಂದ 4 ವರ್ಷಗಳ ಅಧ್ಯಯನ ಅತ್ಯಂತ ಸೂಕ್ತವೆನಿಸುತ್ತದೆ. ಬಹುತೇಕ ಮಂದಿ ಐಎಎಸ್, ಐಪಿಎಸ್ ಹುದ್ದೆಗಳನ್ನು ಪಡೆಯಲು, 2,3 ಅಟೆಮ್ಟಗಳನ್ನು ತೆಗೆದುಕೊಳ್ಳುತ್ತಾರೆ. ಏಕೆಂದರೆ, ಮೇಲ್ಕಂಡಂತೆ, ಕಡ್ಡಾಯವಾಗಿ 3-4 ವರ್ಷಗಳ ಅಧ್ಯಯನ ಅನಿವಾರ್ಯ. ಒಟ್ಟಿನಲ್ಲಿ ಭೂಮಿಯ ಮೇಲಿನ ಸ್ವರ್ಗಕ್ಕೆ ಸಮಾನದ ಹುದ್ದೆ ಪಡೆಯ ಬಯಸುವವರು, ಕಠಿಣ ಹಾದಿ ಸವೆಸಬೇಕಾಗಿರುವುದು ವಾಸ್ತವ. ಕೇವಲ ಒಂದು ಅಥವಾ ಎರಡು ಪುಸ್ತಕಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡುತ್ತೇನೆ, ಎಂಬ ಮೂಢನಂಬಿಕೆಯಿಂದ ಹೊರಬನ್ನಿ. ಕ್ರಮಬದ್ಧತೆ ಮತ್ತು ಸೂಕ್ಷ್ಮತೆ ಇಲ್ಲದೇ 10 ವರ್ಷಗಳ ಕಾಲ ಶ್ರಮಿಸಿದರೂ, ಹುದ್ದೆ ಪಡೆಯಲು ಸಾಧ್ಯವೇ ಇಲ್ಲ. ಆದ್ದರಿಂದ ಹಾರ್ಡ್‌ವರ್ಕ್ ಬದಲು ಸ್ಮಾರ್ಟ್‌ವರ್ಕ್‌ಗೆ ಸಜ್ಜಾಗುವುದು ಒಳಿತು. (ಲೇಖಕರು ರಾಜ್ಯಮಟ್ಟದ ತರಬೇತುದಾರರು ಹಾಗೂ ಮುಖ್ಯಸ್ಥರು, ರಾಜ್ಯಶಾಸ್ತ್ರ ವಿಭಾಗ, ಸೋಮಾನಿ ಕಾಲೇಜು, ಮೈಸೂರು ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.