ಪ್ರಿ ಸ್ಕೂಲ್ ಆಯ್ಕೆ ಹೇಗೆ? ಮಗುವಿಗೆ 2 ವರ್ಷ ಆಗುತ್ತಿದ್ದಂತೆ ಪ್ರೀ ಸ್ಕೂಲ್ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತದೆ. ಶೇ.50ರಷ್ಟು ಮೆದುಳಿನ ಬೆಳವಣಿಗೆಯು 2-4 ವರ್ಷಗಳ ವಯಸ್ಸಿನಲ್ಲಿ ನಡೆಯುತ್ತದೆ, ಅದು ನಿಮ್ಮ ಮಗುವು ಜೀವನದ ಸರಿಯಾದ ಅಡಿಪಾಯ ಪಡೆಯುವ ಕಾಲಘಟ್ಟ. ಆದ್ದರಿಂದ ನೀವು ಸರಿಯಾದ ನಿರ್ಧಾರ ತೆಗೆದುಕೊಂಡು ಮುಂದುವರಿಯುವುದು ನಿರ್ಣಾಯಕವಾಗುತ್ತದೆ. ಈಗ ವಿವಿಧ ಸೌಕರ್ಯಗಳನ್ನು ಒದಗಿಸುತ್ತಿರುವ ಹಲವಾರು ಪ್ರಿ ಸ್ಕೂಲ್‌ಗಳು ಬಹಳ ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ ಆಯ್ಕೆಯಲ್ಲಿ ಗೊಂದಲ ಆಗುತ್ತದೆ. ಇಲ್ಲಿ ಆಯ್ಕೆ ಮಾಡುವಾಗ ಪರಿಗಣನೆಗೆ ತೆಗೆದುಕೊಳ್ಳಬೇಕಾದ ಪ್ರಮುಖ ಅಂಶಗಳು ಇಂತಿವೆ: ದೂರ: ಮೊದಲನೆಯದಾಗಿ, ಪ್ರಯಾಣದ ಸಮಯ, ರಸ್ತೆಗಳಲ್ಲಿ ಮಾಲಿನ್ಯ, ಸುರಕ್ಷತೆ ಮತ್ತು ಮಕ್ಕಳ ಮೇಲೆ ಇದರಿಂದ ಉಂಟಾಗಬಹುದಾದ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಪ್ರಿ ಸ್ಕೂಲ್‌ಗಳು ನಿಮ್ಮ ಮನೆಗೆ ಹತ್ತಿರದಲ್ಲಿ ಇರಬೇಕು. ಆದ್ದರಿಂದ, ಮಗುವಿಗೆ ಅಂತಹ ಸಣ್ಣ ವಯಸ್ಸಿನಲ್ಲಿ ದೂರದ ಪ್ರಯಾಣ ಉತ್ತಮವಲ್ಲ. ಆಡಳಿತಮಂಡಳಿ ಹಿನ್ನೆಲೆ: ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಯಾವುದೇ ಸಂಸ್ಥೆಯ ಬೆನ್ನೆಲುಬಾಗಿದೆ. ಹೀಗಾಗಿ ನೀವು ಪ್ರಿ ಸ್ಕೂಲ್‌ನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ಬಗ್ಗೆ ವಿಚಾರಿಸಿ. ಮಕ್ಕಳಿಗೆ ಪ್ರೀತಿಯಿಂದ ಚೆನ್ನಾಗಿ ಶಿಕ್ಷಣ ನೀಡಬಲ್ಲ, ವಿದ್ಯಾವಂತ, ಪ್ರಾಜ್ಞ ವೃತ್ತಿಪರ ತಂಡವು ಅಲ್ಲಿದೆಯೇ ಎಂಬುದನ್ನು ಗಮನಿಸಿ. ಹೆಚ್ಚು ಅರ್ಹತೆ ಇರುವ, ಹೆಚ್ಚು ಅನುಭವಿ ಶಿಕ್ಷಕರ ತಂಡ ಇರುವ ಸ್ಕೂಲ್ ಉತ್ತಮ. ಒಂದು ಒಳ್ಳೆಯ ವಿನ್ಯಾಸ, ಒಳ್ಳೆಯ ಸಂಘಟನೆ, ಮತ್ತು ಯೋಜಿತ ವ್ಯವಸ್ಥೆ ಇರಬೇಕು. ನಂಬಲರ್ಹವಾಗಿರುವಿಕೆ: ಒಂದು ಉತ್ತಮ ಶಿಕ್ಷಣ ವ್ಯವಸ್ಥೆಯ ಬ್ರ್ಯಾಂಡ್ ಉತ್ತಮ. ಅಪರಿಚಿತ ಪ್ರಿ ಸ್ಕೂಲ್‌ಗಿಂತ ಅದು ಒಳ್ಳೆಯದು. ಪ್ರಿ ಸ್ಕೂಲ್‌ನ ಪರಿಸರ: ಪ್ರಿ ಸ್ಕೂಲ್‌ಗೆ ಭೇಟಿ ಮಾಡಿದಾಗ ಮಕ್ಕಳು ಸಂತೋಷದಿಂದ, ಲವಲವಿಕೆಯಿಂದ ಇರುವುದನ್ನು ಗಮನಿಸಿ. ಸಿಬ್ಬಂದಿ/ ಶಿಕ್ಷಕರು ಮಕ್ಕಳ ಜೊತೆ ಪ್ರಾಮಾಣಿಕವಾಗಿ ಸ್ನೇಹ ಸಂಬಂಧ ಇಟ್ಟುಕೊಂಡಿದ್ದಾರೆಯೇ ಎಂದು ನೋಡಿ. ಅದು ಒಂದು ಪ್ರಶಾಂತ ವಾತಾವರಣವನ್ನು ಹೊಂದಿರಬೇಕು. ಉತ್ತಮ ಸೌಲಭ್ಯಗಳನ್ನು ಒಳಗೊಂಡಿರಬೇಕು. ಪರಿಸರ, ಪೀಠೋಪಕರಣ, ವರ್ಣರಂಜಿತ ಆಟಿಕೆ ಹಾಗೂ ಅಚ್ಚುಕಟ್ಟಾದ ಸ್ವಚ್ಛ ಕೊಠಡಿ ಮುಖ್ಯ. ಮಗುವಿಗೆ ಆಹ್ಲಾದಕರವಾದ ಪರಿಸರ ಅಲ್ಲಿರಬೇಕು. ಜೊತೆಗೆ ಸುರಕ್ಷಿತವಾಗಿದೆಯೇ ಎಂದು ನೋಡಿ. ಮಕ್ಕಳ ಸ್ನೇಹಿಯಾದ ಒಳಾಂಗಣ ಇರಬೇಕು. ಪ್ರಿ ಸ್ಕೂಲ್‌ನ ವ್ಯವಸ್ಥೆ, ಪಠ್ಯಕ್ರಮ, ಸಾರಿಗೆ, ಸಮವಸ್ತ್ರ, ಊಟದ ತಯಾರಿಕೆಯ ವಿಧಾನ ಇತ್ಯಾದಿ ಬಗ್ಗೆ ಕೇಳಿ ತಿಳಿದುಕೊಳ್ಳಿ. ಮಧ್ಯಾಹ್ನದ ಊಟ ಕೊಡುವುದರ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಲ್ಲಿ ಕೇಳಿ. ಅಲ್ಲದೆ ಸಾಂಸ್ಕೃತಿಕ ಕಾರ್ಯಗಳು, ಕ್ರೀಡೆ ಇತ್ಯಾದಿ ಚಟುವಟಿಕೆಗಳು ಇರುತ್ತವೆಯೇ ಎಂದು ಗಮನಿಸಿ. ಮತ್ತು ಯಾವುದೇ ಹೆಚ್ಚುವರಿ ಶುಲ್ಕವನ್ನು ಇದಕ್ಕಾಗಿ ತೆಗೆದುಕೊಳ್ಳುತ್ತಾರೆಯೇ ಎಂದು ಗಮನಿಸಿ. ಕೆಲವು ಪ್ರಿ ಸ್ಕೂಲ್‌ನಲ್ಲಿ ಸ್ಟೇಷನರಿ, ಫೋಟೋ ಆಲ್ಬಮ್, ಕೈಚೀಲಗಳು, ಉಡುಗೊರೆ, ಪಿಕ್ನಿಕ್ ಮತ್ತು ಇತರ ಸೌಲಭ್ಯಗಳಿಗೆ ಹಣ ಕೇಳುತ್ತಾರೆ. ವಿದ್ಯಾರ್ಥಿ ಸಾಮರ್ಥ್ಯ ಪ್ರಿ ಸ್ಕೂಲ್‌ನ ಮಕ್ಕಳ ಸಂಖ್ಯೆ ಬಗ್ಗೆ ವಿಚಾರಿಸಿ. ಮಕ್ಕಳ ಸಂಖ್ಯೆ ಕಡಿಮೆ ಇರುವಲ್ಲಿ ಮುಖ್ಯೋಪಾಧ್ಯಾಯಿನಿ ವೈಯಕ್ತಿಕವಾಗಿ ನಿಮ್ಮ ಮಗುವಿನ ಬಗ್ಗೆ ಕಾಳಜಿ ವಹಿಸುವ ಸಾಧ್ಯತೆ ಹೆಚ್ಚು ಇರುತ್ತದೆ. ಮತ್ತು ನಿಮ್ಮ ಮಗು ಶಾಲೆಯ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸುವ ಅವಕಾಶ ಪಡೆಯುತ್ತದೆ. ಹಳೆಯ ವಿದ್ಯಾರ್ಥಿಗಳು ಪ್ರಿ ಸ್ಕೂಲ್‌ನ ಹಳೆ ವಿದ್ಯಾರ್ಥಿಗಳ ಪ್ರದರ್ಶನ, ಅನುಭವದ ಬಗ್ಗೆ ವಿಚಾರಿಸಿದರೆ ಒಳಿತು. ಅವರಿಗೆ ಶಾಲೆಯ ಬಗ್ಗೆ ತೃಪ್ತಿ ಇದೆಯೇ ಎಂದು ತಿಳಿದುಕೊಂಡರೆ ಉತ್ತಮ. ಅಲ್ಲದೆ ಶಿಕ್ಷಕರಿಂದ ಈ ಬಗ್ಗೆ ಮಾಹಿತಿ ಪಡೆಯಬಹುದು. ಇದರಿಂದ ನಿಮ್ಮ ಮಗುವಿಗೆ ಉತ್ತಮ ಪ್ರಿ ಸ್ಕೂಲ್ ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಕೊನೆಯಲ್ಲಿ ನಿಮ್ಮ ಮಗುವಿಗೆ ಈ ಪ್ರೀ ಸ್ಕೂಲ್‌ನಲ್ಲಿ ಉತ್ತಮ ಶಿಕ್ಷಣ, ಭವಿಷ್ಯದ ಅಡಿಪಾಯ ದೊರೆಯಬಹುದೇ, ಅದು ಅಲ್ಲಿ ಸಂತೋಷದಿಂದ ಇರವುದೆ ? ಎಂಬುದನ್ನು ನಿಮಗೆ ನೀವೇ ಕೇಳಿಕೊಳ್ಳಿ. ಉತ್ತರ ಹೌದು ಎಂದಾದರೆ ನಿಮಗೆ ಸಮಸ್ಯೆ ಬಗೆಹರಿದಂತೆಯೇ. (ಲೇಖಕರು ಕಾರ್ಯನಿರ್ವಾಹಕ ನಿರ್ದೇಶಕರು - ಶೆಮ್‌ಕಾಕ್ ಆ್ಯಂಡ್ ಶೆಮ್‌ಫೋರ್ಡ್ ಗ್ರೂಪ್ ಆಫ್ ಸ್ಕೂಲ್ಸ್) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.