ಪ್ರೀ ಸ್ಕೂಲ್ ಪಾಠದ ಮನೆ ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು. ಆದರೆ ಈಗ ಮನೆ ಎಂಬ ಪಾಠಶಾಲೆಯಲ್ಲಿ ಗುರು ಎಂಬ ಅಮ್ಮನೆಲ್ಲಿ? ಅವಳಿಗೀಗ ನೂರು ಕೆಲಸ. ಕಚೇರಿ ಹಾಗೂ ಮನೆಗೆಲಸದ ನಡುವೆ ದಣಿದು ಹೈರಾಣಾಗುವ ಅಮ್ಮನಿಗೆ ಮಗುವಿನ ಕೈಹಿಡಿದು ನಡೆಸುವ, ತೊದಲು ನುಡಿಗಳನ್ನು ತಿದ್ದಿ ತೀಡುವ ಪುರುಸೊತ್ತಿಲ್ಲ. ಕಥೆ ಹೇಳಿ ಮಲಗಿಸುವ, ಚಂದಮಾಮನನ್ನು ತೋರಿಸುತ್ತ ಊಟ ಮಾಡಿಸುವ ತಾಳ್ಮೆಯೂ ಇಲ್ಲ. ಅಂತೆಯೇ ಮನೆಯಲ್ಲಿ ಕಲಿಯಬೇಕಾದ ಸಂಗತಿಗಳನ್ನೂ ಮನೆಯಿಂದ ಹೊರಗೆ ಹುಡುಕಬೇಕಾದ ಅನಿವಾರ್ಯತೆ ಮಕ್ಕಳಿಗೆ ಬಂದಿದೆ. ಅದೇ ತಾನೆ ಎರಡು ವರ್ಷಕ್ಕೆ ಕಾಲಿಟ್ಟ ಮಕ್ಕಳಿಗಿಂದು ಶಾಲೆಯ ಮೆಟ್ಟಿಲೇರಬೇಕಾದ ಅನಿವಾರ್ಯತೆ. ಈ ಮಕ್ಕಳ ಭವಿಷ್ಯ ಹಾಗೂ ಬದುಕು ಎರಡನ್ನೂ ರೂಪಿಸುವ ಹೊಣೆ ಈಗ ನರ್ಸರಿ ಅಥವಾ ಪ್ರೀ ಸ್ಕೂಲ್‌ಗಳ ಪಾಲಿಗಿದೆ. ಅಂತೆಯೇ ಪೂರ್ವಪ್ರಾಥಮಿಕ ಶಾಲೆಗಳ ಮಹತ್ವ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಮಕ್ಕಳಿಗೆ ಹೆಚ್ಚಿನ ಸಮಯ ಕೊಡಲು ಇಂದಿನ ತಂದೆ-ತಾಯಿಗಳಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ತಮ್ಮ ಪಾಲಿನ ಪಾತ್ರವನ್ನೂ ಈ ಶಿಕ್ಷಣ ಸಂಸ್ಥೆಗಳೇ ಪೂರೈಸಲಿ, ಹಣ ಎಷ್ಟೇ ಖರ್ಚಾದರೂ ಸರಿ ಎಂಬ ನಿಲುವಿಗೆ ಬಂದಿದ್ದಾರೆ. ಅಂತೆಯೇ ತೊದಲು ಮಾತು ತಿದ್ದುವ, ಕೈಹಿಡಿದು ನಡೆಸುವ, ಕಥೆ ಹೇಳಿ ಮಲಗಿಸುವ ಕೆಲಸವನ್ನೂ ನಿರ್ವಹಿಸಲು ಅನೇಕ ಖಾಸಗಿ ಪ್ರಿ ಸ್ಕೂಲ್‌ಗಳು ತಲೆ ಎತ್ತಿವೆ. ಯಾಕಿಷ್ಟು ಬೇಡಿಕೆ...! ಈ ಹಂತದಲ್ಲಿ ಮಕ್ಕಳ ಮನಸ್ಸು ಹಸಿಗೋಡೆ ಇದ್ದಂತೆ. ನಾವೇನು ಹೇಳುತ್ತೇವೆಯೋ ಅದನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ. ಅಪ್ಪ-ಅಮ್ಮ, ಶಿಕ್ಷಕರು ಹೇಳುವುದನ್ನು ಥಟ್ಟನೇ ಗ್ರಹಿಸುವ ಶಕ್ತಿ ಇರುವುದರಿಂದ ಈ ಹಂತ ಅವರ ಭವಿಷ್ಯದ ಶಿಕ್ಷಣಕ್ಕೆ ಮತ್ತು ಭಾವಿ ಜೀವನವನ್ನು ಸುಭದ್ರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮಕ್ಕಳ ಉತ್ತಮ ಭವಿಷ್ಯಕ್ಕೆ ಇದುವೇ ಅಡಿಪಾಯ. ಅವರ ಭವಿಷ್ಯಕ್ಕೆ ಬೇಕಾದ ಭದ್ರ ಬೇರುಗಳನ್ನು ರೂಪುಗೊಳಿಸುವ ಪರ್ವ ಕಾಲವಿದು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ 2ನೇ ವರ್ಷಕ್ಕೇ ಮಕ್ಕಳ ಮೇಲೆ ಜವಾಬ್ದಾರಿಯ ಹೊರೆ ಬೀಳುತ್ತದೆ. ಸರಿಯಾಗಿ ಮಾತೂ ಬಾರದ ಈ ಅವಧಿಯಲ್ಲಿ ಮುಂಬರುವ ಶೈಕ್ಷಣಿಕ ವಲಯದಲ್ಲಿ ಈಜುವ ತಯಾರಿ ನಡೆಯಬೇಕು. ವ್ಯವಸ್ಥಿತ ಶೈಕ್ಷಣಿಕ ಹಂತ ತಲುಪುವ ಮೊದಲೇ ಮಕ್ಕಳನ್ನು ಸಜ್ಜುಗೊಳಿಸಲು ಇಂತಹ ಸಂಸ್ಥೆಗಳಲ್ಲಿ 30 ಸಾವಿರ ರೂಪಾಯಿಯಿಂದ ಹಿಡಿದು ಲಕ್ಷ ರೂಪಾಯಿವರೆಗೂ ಶುಲ್ಕವನ್ನು ವಿಧಿಸಲಾಗುತ್ತದೆ. ಪಾಲಕರಿಂದ ಇಷ್ಟೊಂದು ಭಾರೀ ಪ್ರಮಾಣದ ಶುಲ್ಕ ವಸೂಲು ಮಾಡುವ ಸಂಸ್ಥೆಗಳು ಮಕ್ಕಳಿಂದಲೂ ಅಷ್ಟೇ ಪ್ರಮಾಣದ ಶ್ರಮವನ್ನು ನಿರೀಕ್ಷಿಸುತ್ತವೆ. ಪೂರ್ವ ಪ್ರಾಥಮಿಕ ಅಥವಾ ನರ್ಸರಿ ಶಾಲೆಗಳ ಪಠ್ಯದಲ್ಲಿ ಈ ಕೆಳಗಿನ ಅಂಶಗಳು ಸಾಮಾನ್ಯವಾಗಿ ಅಡಕವಾಗಿರುತ್ತವೆ. -ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು. -ಅಜ್ಜಿ ಹೇಳುವ ನೀತಿಕಥೆಗೆ ಅವಕಾಶ. -ಮಕ್ಕಳು ಕೇಳುವ ಯಾವ ಪ್ರಶ್ನೆಗೂ ಹಾರಿಕೆಯ ಉತ್ತರ ನೀಡದಿರುವುದು -ಮನೆಗೆ ಬರುವ ಅತಿಥಿಗಳ ಜೊತೆ ಹೇಗೆ ಮಾತನಾಡಬೇಕು, ಹೇಗೆ ವರ್ತಿಸಬೇಕು ಎಂಬ ತಿಳಿವಳಿಕೆ -ಸಾಕು ಪ್ರಾಣಿಗಳೊಂದಿಗೆ ಕಾಯ್ದುಕೊಳ್ಳಬೇಕಾದ ಅಂತರ -ಅಪಾಯಕಾರಿ ಸ್ಥಳ ಹಾಗೂ ಸಂಗತಿಗಳ ಬಗ್ಗೆ ತಿಳಿವಳಿಕೆ -ಸ್ನೇಹಿತರೊಂದಿಗೆ ಪರಸ್ಪರ ಪ್ರೀತಿ, ಸಹಾಯ ಸಹಕಾರದಿಂದ ವರ್ತಿಸುವುದು -ಮುಂದಿನ ಹಂತದ ಓದಿಗೆ ಪೂರಕವಾಗುವಂತಹ ಜ್ಞಾನದ ಕಲಿಕೆ. -ಇಂದಿನ ಸ್ಪರ್ಧಾ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಮಾನಸಿಕವಾಗಿ ಸಜ್ಜುಗೊಳಿಸುವಿಕೆ. `ಈ ದಿನಗಳಲ್ಲಿ ಪ್ರಿಸ್ಕೂಲ್ ಕ್ಲಾಸ್‌ಗಳ ಮಹತ್ವವನ್ನು ಅಲ್ಲಗಳೆಯುವಂತಿಲ್ಲ. ನಮಗಂತೂ ಯಾವುದಕ್ಕೂ ಸಮಯ ಇಲ್ಲ. ಶಾಲೆಗಳಾದರೂ ಎಲ್ಲವನ್ನು ಹೇಳಿಕೊಡಲಿ ಎಂಬ ನಿರೀಕ್ಷೆ~ ಎನ್ನುತ್ತಾರೆ ವಿನಯ್ ಹೆಗಡೆ. ಮಕ್ಕಳ ಎಳೆ ಮನಸ್ಸಿಗೆ ಭಾರವಾಗದಂತಹ ಶಿಕ್ಷಣದ ಅಗತ್ಯವಿದೆ. ಈ ಶಾಲೆಗಳು ಶಿಸ್ತಿನ ಮನೆಯಂತಹ ವಾತಾವರಣವನ್ನು ಕಲ್ಪಿಸಿಕೊಡಬೇಕು ಎನ್ನುತ್ತಾರೆ `ಲಿಟ್ಲ್ ಕಿಡ್ಸ್~ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಸಂಪತ್‌ಕುಮಾರ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.