ಗಾಬರಿ ಪರೀಕ್ಷೆಯ ಕಡುವೈರಿ `ಕಾಲೇಜು ಸೇರುವಾಗ ಹಾಲೋಗರ ಉಂಡಂತೆ. ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯಿತ್ತಾಗ ಕಿಬ್ಬದಿಯ ಕೀಲು ಮುರಿದಂತೆ...~ ಎಂದು ಆಧುನಿಕ ಅಣಕು ಕವಿಯೊಬ್ಬರು ವಚನ ಹೊಸೆದಿದ್ದಾರೆ. ವಾಸ್ತವವಾಗಿ ಹಾಗೆ ಆಗಬೇಕಾದ್ದಿಲ್ಲ; ಆಗಲೂಬಾರದು. ಆದರೂ ಪರೀಕ್ಷೆ ಸಮೀಪಿಸುತ್ತಿದ್ದರೆ ಏನೋ ಒಂದು ಬಗೆಯ ಭಯ, ಆತಂಕ ವಿದ್ಯಾರ್ಥಿಗಳನ್ನು ಕಾಡಲಾರಂಭಿಸುತ್ತದೆ. ಪೋಷಕರ ಒತ್ತಡ ಆ ತಳಮಳವನ್ನು ಇಮ್ಮಡಿಗೊಳಿಸುತ್ತದೆ. ನೀವು ತೇರ್ಗಡೆ ಹೊಂದಲೇಬೇಕು ಅಂತ ಅಧ್ಯಾಪಕರೂ ಒತ್ತಾಯಿಸುತ್ತಾರೆ ಬೇರೆ. ಏಕೆಂದರೆ ಆಯಾ ವಿಷಯಗಳಲ್ಲಿ ನಪಾಸಿನ ಸಂಖ್ಯೆ ಹೆಚ್ಚಾದರೆ ಆಡಳಿತ ವರ್ಗದವರು, ಇಲಾಖೆಯ ಮೇಲಾಧಿಕಾರಿಗಳು ಮಾಸ್ತರರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಬಡ್ತಿಗೂ ಸಂಚಕಾರ ಒದಗಬಹುದು. ಇದು ಹೇಗೂ ಇರಲಿ. `ಪರೀಕ್ಷಾ ಜ್ವರ~ ಏಕಾದರೂ ಬಾಧಿಸುತ್ತದೆ, ಅದರಿಂದ ಮುಕ್ತಿ ಹೇಗೆ? ಈ ಕುರಿತು ಆಲೋಚಿಸೋಣ. ವಿದ್ಯಾರ್ಥಿಯ ಪಾಲಿಗೆ ಪರೀಕ್ಷೆ ಎನ್ನುವುದು ಕತ್ತಿ, ಗುರಾಣಿ ಹಿಡಿದು ಎದುರಿಸಬೇಕಾದ ಸಮರ ಅಲ್ಲ. ಪಾಸು, ನಪಾಸು ಮುಖ್ಯ ಅಲ್ಲವೇ ಅಲ್ಲ. ಪರೀಕ್ಷೆಯಲ್ಲಿ ಸೋಲು ಜೀವನದ ಸೋಲೆಂದು ಭಾವಿಸುವವರಿಗೆ ಸಹಜವಾಗಿಯೆ ನಿರಾಸೆ, ಖಿನ್ನತೆ ಕಾಡುತ್ತದೆ. ಅದು ಆತ್ಮಹತ್ಯೆಯ ಹಂತಕ್ಕೆ ಹೋಗುವುದನ್ನೂ ನಾವು ಕಾಣುತ್ತೇವೆ. ಪರೀಕ್ಷೆಯಲ್ಲಿನ ಅನುತ್ತೀರ್ಣತೆಗಿಂತಲೂ ಬದುಕಿನಲ್ಲಿ ತೀವ್ರತರವಾದ ಪರಾಭವಗಳು ಎದುರಾಗುತ್ತವೆ ಎನ್ನುವುದು ಗೊತ್ತಿರಲಿ. ಅಸಲಿಗೆ, ಪರೀಕ್ಷೆ ಬದುಕಿನ ಒಂದು ಭಾಗ, ಘಟ್ಟ. ಓದಿನಲ್ಲಿ ಶಿಸ್ತು ಮುಖ್ಯ ಪರಿಶ್ರಮದ ಓದಿಗೆ ಪರ್ಯಾಯವಿಲ್ಲ. ಸ್ವಯಂಶಿಸ್ತು, ವರ್ಷದುದ್ದಕ್ಕೂ ಕ್ರಮಬದ್ಧವಾಗಿ ಆಯಾ ವಿಷಯ, ಅಧ್ಯಾಯಗಳ ಕೂಲಂಕಷ ಅಧ್ಯಯನ, ಆಕರ ಗ್ರಂಥಗಳ ಪರಾಮರ್ಶೆ, ಪುನರಾವಲೋಕನ, ಆಗಿಂದಾಗ್ಗೆ ಮೂಡುವ ಸಂದೇಹಗಳನ್ನು ಸಂಬಂಧಪಟ್ಟ ಅಧ್ಯಾಪಕರೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳುವ ಪ್ರವೃತ್ತಿ. ಇವು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ವೃದ್ಧಿಸುವ ಅಂಶಗಳು. ಅನೇಕ ವಿದ್ಯಾರ್ಥಿಗಳಲ್ಲಿ ಒಂದು ಸಲ್ಲದ ರೂಢಿಯಿದೆ. ಡಿಸೆಂಬರ್-ಜನವರಿ ಬಂತೆಂದರೆ ತರಗತಿಗಳಿಗೆ ಟಾ ಟಾ ಹೇಳುತ್ತಾರೆ. ಮನೆಯಲ್ಲಿ ಓದಲು ಸಮಯ ಬೇಕು ಎನ್ನುವುದು ಅವರ ಸಮರ್ಥನೆ. ಆದರೆ ತರಗತಿ ಎನ್ನುವುದು ನಿಸ್ಸಂದೇಹವಾಗಿ ತಾಯಿಯ ಹಾಲಿದ್ದಂತೆ. ಖಾಸಗಿ ಪಾಠ (ಟ್ಯೂಶನ್) ಏನಿದ್ದರೂ ಡಬ್ಬ ಹಾಲು. ನಾಳೆ ಪರೀಕ್ಷೆಯಿದೆ ಎನ್ನುವಾಗಲೂ ತರಗತಿಗೆ ಹಾಜರಾದರೆ ಲಾಭವೇ ಹೊರತು ಖಂಡಿತವಾಗಿ ಸಮಯದ ಪೋಲಲ್ಲ. `ನಾನು ನಪಾಸಾದರೆ ಏನು ಗತಿ? ಮನೆಯಲ್ಲಿ ಏನೆಂದಾರು? ಅಕ್ಕಪಕ್ಕದವರು ನನ್ನ ಬಗ್ಗೆ ಏನಂತ ಗುಸುಗುಸು ಮಾತನಾಡಿಕೊಂಡಾರು? ನೆಂಟರಿಷ್ಟರು ನನ್ನನ್ನು ಹೇಗೆ ಕಾಣಬಹುದು? ಸಹಪಾಠಿಗಳೊಂದಿಗೆ ನಾನು ಬೆರೆಯುವುದಾದರೂ ಎಂತು?~ ಮುಂತಾದ ಅರ್ಥಹೀನ ಕಲ್ಪನೆಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಕಸಿಯುತ್ತವೆ. ಅದಕ್ಕಾಗಿಯೇ, `ಅಂಕ ಗಳಿಕೆಗಾಗಿ ಓದು~ ಎಂಬ ನಿಲುವುನಿಂದ ಹೊರಬಂದು `ಜ್ಞಾನ ವೃದ್ಧಿಗಾಗಿ, ಓದಿಗಾಗಿ ಓದು~ ಎಂಬ ಪರಿಕಲ್ಪನೆ ಬೆಳೆಸಿಕೊಳ್ಳಬೇಕು. ಯಾವುದೇ ಅಂಶ, ಸೂತ್ರ, ನಕ್ಷೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದರೆ ಉರು ಹೊಡೆಯಬಾರದು. ಬದಲಿಗೆ ಅವುಗಳ ಹಿನ್ನೆಲೆ, ಅನ್ವಯಗಳನ್ನು ಚೆನ್ನಾಗಿ ಗ್ರಹಿಸಿದರೆ ತಾನೇ ತಾನಾಗಿ ಅವು ಹಿಡಿತಕ್ಕೆ ದಕ್ಕಿಯಾವು. ನಿಮ್ಮದೇ ಭಾಷೆ, ಒಕ್ಕಣೆಯಲ್ಲಿ ಅವನ್ನು ನೀವು ಅಭಿವ್ಯಕ್ತಿಸಬಹುದು. ಪರೀಕ್ಷಾ ದೃಷ್ಟಿಯ ಅಧ್ಯಯನ ನೈಜ ಜ್ಞಾನಾರ್ಜನೆಯಲ್ಲ. ಪರೀಕ್ಷೆ ಸಮೀಪಿಸುತ್ತಿದ್ದರೆ ಅಲ್ಪಸ್ವಲ್ಪ ಭಯವಿರಬೇಕಾದ್ದೇ ಹೌದು. ಅದು ಓದಿನಲ್ಲಿ ಮಗ್ನವಾಗದಷ್ಟು ಗಾಬರಿಯ ರೂಪ ತಳೆಯಬಾರದಲ್ಲವೆ? ಈಗಾಗಲೇ ಕಲಿತ ಅಂಶಗಳನ್ನೂ ಅತಿಯಾದ ಆತಂಕ, ಕುತೂಹಲ ಮರೆಸುವಂತಾದರೆ ಏನು ಪ್ರಯೋಜನ? ಇಲ್ಲಸಲ್ಲದ ಉದ್ವೇಗಗಳು ಕಲಿಕೆಯನ್ನು ತಬ್ಬಿಬ್ಬುಗೊಳಿಸುತ್ತವೆ. ಪೂರ್ವ ತಯಾರಿ ಪರೀಕ್ಷೆ ಸಮೀಪಿಸುವ ದಿನಗಳಲ್ಲಿ ಮೂರು ಹೊತ್ತೂ ಪುಸ್ತಕ ಹಿಡಿದು ಕೂರಬೇಕೆಂದೇನಿಲ್ಲ. ಓದಿದ್ದು ಮಿದುಳಿನಲ್ಲಿ ಸಂಸ್ಕರಣೆಗೊಳ್ಳಲು ಸಮಯ ಅಗತ್ಯ. ನಡುನಡುವೆ ವಿಶ್ರಾಂತಿ, ವ್ಯಾಯಾಮ, ಆಟೋಟ ಮುಂತಾದವು ಬೇಕು. ಅನಿವಾರ್ಯವಾದಾಗ ಮಾತ್ರ ಮೊಬೈಲ್ ಬಳಸುವುದು ಯುಕ್ತ. ಟಿವಿಯಿಂದ ದೂರವಿದ್ದಷ್ಟೂ ಒಳಿತು. ನಿದ್ರೆಗೆಡುವುದು ಮತ್ತಷ್ಟು ಒತ್ತಡವನ್ನು ಬರಮಾಡಿಕೊಂಡಂತೆಯೇ ಸರಿ. ಬೇಗ ಮಲಗಿ ಬೇಗ ನಸುಕಿನಲ್ಲಿ ಏಳುವುದು ಉತ್ತಮ. ಪ್ರಶಾಂತ ಪರಿಸರವೂ ಲಭ್ಯವಾಗಿ ಸರಾಗ ಮನನಕ್ಕೆ ಪೂರಕವಾದೀತು. ಕಿರುಪರೀಕ್ಷೆ, ಸಿದ್ಧತಾ ಪರೀಕ್ಷೆಗಳು ವಿದ್ಯಾರ್ಥಿಗಳ ಜ್ಞಾನದ ಮಾಪನಕ್ಕಿಂತ ಹೆಚ್ಚಾಗಿ ಅವರ ಸಂಯಮ, ಪ್ರಶ್ನೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಅಳೆಯುತ್ತವೆ. `ಕಳೆದ ಬಾರಿ ಈ ಪ್ರಶ್ನೆ ಕೇಳಿದ್ದರು. ಈಗ ಅದು ಬಿಟ್ಟು ಬೇರೆ ಓದಿಕೊಳ್ಳೋಣ. ಖಂಡಿತ ಈ ಬಾರಿ ಇಂಥ ಲೆಕ್ಕ ಕೊಟ್ಟೇ ಕೊಡ್ತಾರೆ~ ಇವೇ ಮುಂತಾಗಿ ಅಂದಾಜಿಸುವುದು ಕೆಲವರ ಜಾಯಮಾನ. ಪರೀಕ್ಷೆ ಪಾಸಾಗುವುದೇ ಶಿಕ್ಷಣ ಎಂದು ಭಾವಿಸುವ ಮನಸ್ಸುಗಳು ಮಾತ್ರ ಹೀಗೆ `ಅದೃಷ್ಟ ಪರೀಕ್ಷೆ~ಗೆ ಜೋತು ಬೀಳುವುದು ಸಾಧ್ಯ. ಆದ್ದರಿಂದ ಎಲ್ಲ ಸಂಭಾವ್ಯ ಪ್ರಶ್ನೆಗಳಿಗೂ ತಯಾರಾಗಿರಿ. ಓದನ್ನು ಆನಂದಿಸಬೇಕೇ ಹೊರತು ಅದು ಅಂಕಗಳನ್ನು ದೋಚುವ ಹಾದಿ ಅಂತ ತಿಳಿಯಬಾರದು. ಒತ್ತಡದಲ್ಲಿ ಮಕ್ಕಳು ಏನನ್ನೂ ಕಲಿಯರು ಎನ್ನುವುದು ವಾಸ್ತವ. ಪೋಷಕರು ಇದನ್ನು ಸದಾ ಅರಿತಿರಬೇಕು. ಹಾಗಾಗಿ `ನೀನು ಈ ಬಾರಿ ಪಾಸಾಗಲೇಬೇಕು, ನೂರಕ್ಕೆ ಎಂಬತ್ತು ಅಂಕಗಳನ್ನಾದರೂ ತೆಗೆದುಕೊಳ್ಳಬೇಕು. ಫೇಲಾದರೆ ತಕ್ಕ ಶಾಸ್ತಿ~ ಹೀಗೆಲ್ಲ ಹೆದರಿಸಿ ಬೆದರಿಸುವುದು ಅರ್ಥಹೀನ, ಎಲ್ಲ ಮಕ್ಕಳಲ್ಲೂ ಒಂದಲ್ಲೊಂದು ಪ್ರತಿಭೆ, ಕೌಶಲ್ಯ ಇದ್ದೇ ಇರುತ್ತದೆ. ಒಂದು ಪ್ರಸಂಗ ಇಲ್ಲಿ ನೆನಪಾಗುತ್ತದೆ. ಎಂಟು ವರ್ಷದ ಬಾಲಕನೊಬ್ಬ ತಬಲಾ ಕಲಿಯಲು ಆಸೆಪಟ್ಟಿದ್ದ. ಅದನ್ನು ತಂದೆ, ತಾಯಿಯಲ್ಲಿ ಹೇಳಿಕೊಳ್ಳಲು ಭಯ. ಆದರೆ ಸಿಕ್ಕ ಸಿಕ್ಕ ಪಾತ್ರೆ, ಪಡಗ, ಮೇಜು, ಪೆಟ್ಟಿಗೆ ಮೇಲೆ ಶಿಸ್ತುಬದ್ಧವಾಗಿ ಆತ ಸದ್ದು ಮಾಡುತ್ತಿದ್ದ. ಅವನಲ್ಲಿದ್ದ ಕಲಾವಿದನನ್ನು ತಂದೆ, ತಾಯಿ ಗುರುತಿಸದೆ ಹೋದರು. ಸದಾ ಅವನಿಗೆ `ಹೋಂವರ್ಕ್ ಆಯಿತೆ? ಇವೊತ್ತು ಯಾಕೆ ನೋಟ್ಸ್ ಬರೆದುಕೊಂಡಿಲ್ಲ? ಪರೀಕ್ಷೆ ನಾಳೆಯಲ್ಲ. ಯಾಕೆ ಏನೂ ಓದುತ್ತಿಲ್ಲ?~ ಮುಂತಾಗಿ ತರಾಟೆಗಳು ಮಾತ್ರ ಅವ್ಯಾಹತ. ಒಂದು ದಿನ ಮಾಸ್ತರರು ಮನೆಗೆ ಬಂದು ಪೋಷಕರ ಬಳಿ `ಅವನಿಗೆ ಲೆಕ್ಕ ತಲೆಗೆ ಹತ್ತೊಲ್ಲ. ಬಾಕಿ ವಿಷಯಗಳಲ್ಲಿ ಆಸಕ್ತಿ ಅಷ್ಟಿಲ್ಲ. ನನಗನ್ನಿಸುತ್ತೆ. ತಬಲಾ ಕಲಿಸಿ. ನಿಸ್ಸಂದೇಹವಾಗಿ ಪಕ್ವವಾಗಿ ಕಲಿತಾನು~ ಎಂದು. ಗೊಣಗುತ್ತಲೆ ಪೋಷಕರು ಮಾಸ್ತರರ ಮಾರ್ಗದರ್ಶನದಂತೆ ನಡೆದುಕೊಂಡರು. ಬಾಲಕ ಮುಂದೆ ಹೆಸರಾಂತ ತಬಲಾ ವಾದಕನಾದ. ದೇಶ ವಿದೇಶಗಳಲ್ಲಿ ಖ್ಯಾತಿ ಗಳಿಸಿದ. ಪೋಷಕರಿಗೆ, ಶಾಲೆಗೆ ಹೆಸರು ತಂದ. ಹೀಗೆ ಯಾವುದರಲ್ಲಿ ಎಳೆಯರಿಗೆ ಆಸಕ್ತಿ ಚಿಗುರೊಡೆಯುವುದೊ ಆ ಶಿಕ್ಷಣ ಫಲಪ್ರದ. ವಿಜ್ಞಾನಕ್ಕೆ ಸಾವಿರಾರು ಆವಿಷ್ಕಾರಗಳನ್ನು ಕೊಟ್ಟ ಥಾಮಸ್ ಆಲ್ವ ಎಡಿಸನ್, ಶಾಲೆಯಲ್ಲಿ ಕಲಿಯುತ್ತಿದ್ದಾಗ ಶತದಡ್ಡನೆಂದೇ ಮಾಸ್ತರರು ಭಾವಿಸಿದ್ದರು! ಆತನನ್ನು ಅಪ್ರಯೋಜಕ ಎಂದು ಶಾಲೆಯಿಂದ ಹೊರಗೆ ಹಾಕಲಾಯಿತೆನ್ನುವುದು ನಿಮಗೆ ಗೊತ್ತೆ? ಆದರೆ ಈ ಮಹಾನ್ ಸೃಜನಶೀಲ ಪೋರ ತನ್ನ ಹತ್ತನೆಯ ವಯಸ್ಸಿಗೇ ಸ್ವಂತ ಪ್ರಯೋಗಾಲಯ ಸ್ಥಾಪಿಸಿಕೊಂಡು ಪ್ರಯೋಗಗಳನ್ನು ಆರಂಭಿಸಿಬಿಟ್ಟ. ಮುಂದೆ ನಡೆದ ಇತಿಹಾಸ ನಿಮಗೆ ತಿಳಿದಿದ್ದೇ. ಧ್ವನಿಮುದ್ರಣ ಯಂತ್ರ, ಸಿನಿಮಾ, ವಿದ್ಯುತ್ ಬಲ್ಬ್... ಹೀಗೆ ಆವಿಷ್ಕಾರಗಳ ಮೆರವಣಿಗೆ ಎಡಿಸನ್ನನ ಹಿಂದೆ ಸಾಗಿದ್ದೇ ಸಾಗಿದ್ದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.