ಶುಶ್ರೂಷಾ ಕ್ಷೇತ್ರದಲ್ಲಿ ಭಾರೀ ಬೇಡಿಕೆ ಆರೋಗ್ಯ ರಕ್ಷಣೆ ಮತ್ತು ಉಪಚಾರದಲ್ಲಿ ಶುಶ್ರೂಷಕಿಯರ (ನರ್ಸ್) ಪಾತ್ರವನ್ನು ಕಡೆಗಣಿಸುವಂತೆಯೇ ಇಲ್ಲ. ಒಂದು ಅಂದಾಜಿನ ಪ್ರಕಾರ ವಿಶ್ವಮಟ್ಟದಲ್ಲಿ ಈ ವಲಯದಲ್ಲಿ ಶೇ 45- 50ರಷ್ಟು ವೃತ್ತಿಪರ ಶುಶ್ರೂಷಕರ ಕೊರತೆಯಿದೆ. ಹೀಗಾಗಿ ಶುಶ್ರೂಷಕಿಯರಿಗೆ, ಶುಶ್ರೂಷೆಗೆ ಹಾಗೂ ಇತರ ಸೇವೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಇಷ್ಟೊಂದು ಸಂಖ್ಯೆಯಲ್ಲಿ ಶುಶ್ರೂಷಕಿಯರನ್ನು ತಯಾರು ಮಾಡಲು ಯಾವ ರಾಷ್ಟ್ರದಿಂದಲೂ ಸಾಧ್ಯವಾಗದು. ಅದಕ್ಕಾಗಿ ಟೆಲಿ-ಶುಶ್ರೂಷೆ ಸೇವೆ ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಶುಶ್ರೂಷಾ ತರಬೇತಿ ಕೇಂದ್ರಗಳು ಬೇಕು ಎನ್ನುತ್ತಾರೆ ನಿಮ್ಹೋನ್ಸ್ ರಿಜಿಸ್ಟ್ರಾರ್ ಡಾ. ವಿ. ರವಿ. ಸದ್ಯದ ಪರಿಸ್ಥಿತಿಯಲ್ಲಿ ದೇಶದ ಮುಂಚೂಣಿಯ ಹಲವು ಆಸ್ಪತ್ರೆಗಳಲ್ಲಿ ಶೇ 40-50ರಷ್ಟು ಶುಶ್ರೂಷಕಿಯರ ಕೊರತೆ ಇದೆ. ಹೀಗಾಗಿ ಮುಂದಿನ ಐದು ವರ್ಷಗಳಲ್ಲಿ ನಾವು ಮುಟ್ಟಬೇಕಾದ ಗುರಿಯ ದಾರಿಯನ್ನು ಸಿದ್ಧಪಡಿಸಬೇಕಿದೆ. ಒಂದು ಲೆಕ್ಕದ ಪ್ರಕಾರ ಪ್ರತಿಯೊಬ್ಬ ರೋಗಿಗೂ ಒಬ್ಬ ಶುಶ್ರೂಷಕಿಯ ಅಗತ್ಯವಿದೆ. ಅದೇ ರೀತಿ ಮಾನಸಿಕ ರೋಗದಿಂದ ಬಳಲುವ ಒಬ್ಬ ವ್ಯಕ್ತಿಗೆ ಐವರು ಶುಶ್ರೂಷಕಿಯರ ಅಗತ್ಯವಿದೆ. ವಯಸ್ಸಾದವರ ಸಂಖ್ಯೆ ಜಗತ್ತಿನಲ್ಲಿ ಹೆಚ್ಚುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿನ ಸಾಕಷ್ಟು ಆವಿಷ್ಕಾರ, ಅತ್ಯಂತ ಅಪಾಯಕಾರಿ ಏಡ್ಸ್, ಕ್ಯಾನ್ಸರ್ ಇತ್ಯಾದಿಗಳಿಗೂ ಸುಲಭವಾಗಿ ದೊರೆಯುತ್ತಿರುವ ಚಿಕಿತ್ಸೆಗಳಿಂದಾಗಿ ಮನುಷ್ಯನ ಆಯಸ್ಸು ಹೆಚ್ಚುತ್ತಿದೆ. ಇದರಿಂದ ಶುಶ್ರೂಷಕರಿಗೆ ಬೇಡಿಕೆ ಈಗ ಇನ್ನೂ ಹೆಚ್ಚಾಗಿದೆ ಎಂದು ಕ್ಯಾಲಿಫೋರ್ನಿಯಾ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಮರ್ಲಿನ್ ಸ್ಟೊನಾರ್ ಹೇಳುತ್ತಾರೆ. ಅಮೆರಿಕದಲ್ಲಿ ಶುಶ್ರೂಷಕರು ಹಾಗೂ ರೋಗಿಗಳ ವಯಸ್ಸು ಏರುತ್ತಲೇ ಇದೆ. ಈಗ ಇರುವ 2.50 ಲಕ್ಷ ಶುಶ್ರೂಷಕಿಯರು ಇಡೀ ದೇಶದ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ಇವರಲ್ಲಿ ಪ್ರತೀ 10 ಮಂದಿಯಲ್ಲಿ ಮೂವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಅಮೆರಿಕ ಸರ್ಕಾರದ ಮಾನದಂಡದ ಪ್ರಕಾರ ತೀವ್ರ ನಿಗಾ ಘಟಕಗಳಲ್ಲಿ ಪ್ರತಿಯೊಬ್ಬ ರೋಗಿಗೆ ಇಬ್ಬರು ಶುಶ್ರೂಷಕರು ಇರಬೇಕು. ಅಂತೆಯೇ ಹಗಲಿನಲ್ಲಿ ನಾಲ್ಕರಿಂದ ಐವರು, ರಾತ್ರಿ ವೇಳೆ ಆರು ಶುಶ್ರೂಷಕರು ಇರಬೇಕು ಎಂದು ಅವರು ವಿವರಿಸುತ್ತಾರೆ. ಫಿನ್‌ಲ್ಯಾಂಡ್‌ನ ಸೆಂಟ್ರಲ್ ಓಸ್ಟ್ರೋಬೋತ್ನಿಯಾ ವಿಶ್ವವಿದ್ಯಾಲಯದ ಅನ್ವಯಿಕ ವಿಜ್ಞಾನ ವಿಭಾಗದ ಶುಶ್ರೂಷೆ ಉಪನ್ಯಾಸಕ ಪ್ರೊ. ಪಿಯಾ ಹಖ್ವಿಸ್ಟ್ ಹೇಳುವಂತೆ, ಫಿನ್‌ಲ್ಯಾಂಡ್‌ನ ಅನೇಕ ವಿದ್ಯಾರ್ಥಿಗಳು ಭಾರತ ವಿವಿಧ ಶುಶ್ರೂಷಾ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. ಕ್ಯಾಲಿಫೋರ್ನಿಯಾ ವಿವಿಯ ಸ್ಯಾನ್ ಬರ್ನಾರ್ಡಿನೊ ಹಾಗೂ ಸಾಗರ್ ಆಸ್ಪತ್ರೆ ಸಹಯೋಗದಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಈ ಅಂಶಗಳ ಮೇಲೆ ಬೆಳಕು ಚೆಲ್ಲಲಾಯಿತು. ಆದ್ದರಿಂದ ಯುವಜನರು ಶುಶ್ರೂಷಾ ಕ್ಷೇತ್ರದಲ್ಲಿ ತರಬೇತಿ ಪಡೆದು ಲಭ್ಯ ಅವಕಾಶಗಳನ್ನು ಬಳಸಿಕೊಳ್ಳುವುದು ಉತ್ತಮ, ಅಪೇಕ್ಷಣೀಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.