ಸರ್ಕಾರಿ ಕಾಲೇಜು ಸುಧಾರಣೆಗೆ ಮದ್ದು ಯುವಜನರ ಮನೋಭಾವ ಬದಲಾಗುತ್ತಿರುವುದಕ್ಕೆ ಬಹುತೇಕ ಎಲ್ಲರೂ ದೂರುವುದು `ಶಿಕ್ಷಣದಲ್ಲಿ ಗುಣಮಟ್ಟವೇ ಕಾಣುತ್ತಿಲ್ಲ~ ಎಂದು. ಪದವಿ ಮುಗಿಸಿದರೂ ಲೋಕಜ್ಞಾನವೇ ಗೊತ್ತಿಲ್ಲ ಎಂದು ಹಿರಿಯರು ಆಗಾಗ ಹಳಿಯುವುದಿದೆ. ಒಟ್ಟಿನಲ್ಲಿ ಶಿಕ್ಷಣದ ಗುಣಮಟ್ಟದ ಬಗ್ಗೆ ಎಲ್ಲ ಕಡೆ ಚರ್ಚೆ ನಡೆಯುತ್ತಿದೆ. ರಾಷ್ಟ್ರೀಯ ಮಟ್ಟದ `ನ್ಯಾಕ್~ ಸಮಿತಿ ಕಾಲೇಜುಗಳ ಶಿಕ್ಷಣ ಗುಣಮಟ್ಟ ಪರಿಶೀಲನೆ ಕಾರ್ಯ ಕೈಗೊಂಡು ಐದು ವರ್ಷಕ್ಕೊಮ್ಮೆ `ಗ್ರೇಡ್~ ಕೊಡುವ ಕಾರ್ಯ ಮಾಡುತ್ತಿದೆ. ಇದರಿಂದ ಗುಣಮಟ್ಟದ ಬಗ್ಗೆ ಕಾಲೇಜುಗಳು ಗಮನ ಕೊಡಲಾರಂಭಿಸಿವೆ. ಅಲ್ಲದೇ ಗ್ರೇಡ್ ಪಡೆಯುವಲ್ಲಿ ಪೈಪೋಟಿ ಕಂಡುಬರುತ್ತಿದೆ. ಆದರೆ ಐದು ವರ್ಷಗಳ ನಡುವಿನ ಅವಧಿಯಲ್ಲಿ ಕಾಲೇಜುಗಳು ಮತ್ತೆ ನಿರ್ಲಕ್ಷ್ಯ ಮನೋಭಾವ ತಾಳುವ ಸಾಧ್ಯತೆಯೂ ಇದೆಯಲ್ಲವೇ. ಇದನ್ನೇ ಯೋಚಿಸಿ ರಾಜ್ಯ ಕಾಲೇಜು ಶಿಕ್ಷಣ ಇಲಾಖೆಯು ಹೊಸ ಮಾರ್ಗ ಕಂಡುಕೊಂಡಿದೆ. ನ್ಯಾಕ್ ಐದು ವರ್ಷಗಳಿಗೊಮ್ಮೆ ಕಾಲೇಜುಗಳಿಗೆ ಭೇಟಿ ನೀಡಿದರೆ, ರಾಜ್ಯ ಕಾಲೇಜು ಶಿಕ್ಷಣ ಇಲಾಖೆಯ ಗುಣಮಟ್ಟ ಭರವಸೆ ಕೋಶ ನೇಮಕ ಮಾಡಿದ `ಸಿಇಕ್ಯೂಇ~ ಎಂಬ ಸಮಿತಿ ಪ್ರತಿ ಆರು ತಿಂಗಳಿಗೊಮ್ಮೆ ಕಾಲೇಜಿಗೆ ಹಾಜರಾಗಲಿದೆ. ವರ್ಷಕ್ಕೊಮ್ಮೆ `ಲೆವಲ್ 1 ರಿಂದ `ಲೆವಲ್ 5~ರವರೆಗೆ ಗ್ರೇಡ್ ನೀಡಲಿದೆ. ಪ್ರತಿ ವರ್ಷವೂ ಹಿಂದಿನ ಮಟ್ಟಕ್ಕಿಂತ ಕಾಲೇಜನ್ನು ಮೇಲೆತ್ತುವುದೇ ಈ ಗ್ರೇಡ್ ಪದ್ಧತಿಯ ಮೂಲ ಉದ್ದೇಶ. ಕಾಲೇಜು ಶಿಕ್ಷಣ ಇಲಾಖೆಯ ಗುಣಮಟ್ಟ ಭರವಸೆ ಕೋಶವು ಇದಕ್ಕಾಗಿ ರೂಪಿಸಿರುವ ಯೋಜನೆ `ಗುಣಮಟ್ಟದ ಸಾಧನೆ ಮತ್ತು ಉತ್ಕೃಷ್ಟತೆಗಾಗಿ ನಿರಂತರ ಮೌಲ್ಯಮಾಪನ~ (ಕಂಟಿನ್ಯೂಯಸ್ ಇವಾಲ್ಯೂ ಯೇಶನ್ ಫಾರ್ ಕ್ವಾಲಿಟಿ ಅಂಡ್ ಎಕ್ಸಲನ್ಸ್). ಈ ಯೋಜನೆ ಇದೇ ವರ್ಷದ ಜನವರಿಯಿಂದ ಜಾರಿಗೆ ಬಂದಿದೆ. ಈ ಸಮಿತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಗುಣಮಟ್ಟದ ಬಗ್ಗೆ ಮೌಲ್ಯಮಾಪನ ಮಾಡಲಿದೆ. ಬರೀ ತಪ್ಪು ಹುಡುಕುವುದಷ್ಟೇ ಅಲ್ಲ; ಸುಧಾರಿಸಿಕೊಳ್ಳುವ ಉಪಾಯಗಳನ್ನೂ ಹೇಳಿಕೊಡಲಿದೆ ಈ ಸಮಿತಿ. ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತ ತುಷಾರ್ ಗಿರಿನಾಥ್ ಅವರು ಇಂಥ ಯೋಜನೆಯನ್ನು ಮೊದಲಿಗೆ ಆಲೋಚಿಸಿದ್ದರು. ಈಗ ಅದನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿರುವವರು ಆಯುಕ್ತ ಶಶಿಧರ್ ಹಾಗೂ ನಿರ್ದೇಶಕಿ ಡಾ.ವಿ.ಕಮಲಮ್ಮ ಅವರು. ಮೌಲ್ಯಮಾಪನ ಮಾಡಲು ಸಿಇಕ್ಯುಇ ಸಮಿತಿ `ಕ್ವಾಲಿಟಿ ಫೆಸಿಲಿಟೇಟರ್~ಗಳನ್ನು ನೇಮಕ ಮಾಡಿದೆ. ರಾಜ್ಯದ ಆರು ಪ್ರಾದೇಶಿಕ ಕೇಂದ್ರಗಳಿಗೆ ತಲಾ 10 ರಂತೆ ಒಟ್ಟು 60 ಪ್ರಾಧ್ಯಾಪಕರು ಕ್ವಾಲಿಟಿ ಫೆಸಿಲಿಟೇಟರ್‌ಗಳಾಗಿದ್ದು, ಅವರಿಗೆ ಅಗತ್ಯ ತರಬೇತಿಯನ್ನೂ ನೀಡಲಾಗಿದೆ. ಪ್ರತಿ ಕಾಲೇಜಿಗೆ ಇಬ್ಬರು ಕ್ವಾಲಿಟಿ ಫೆಸಿಲಿಟೇಟರ್‌ಗಳು ಭೇಟಿ ನೀಡಿ ವಿಶ್ಲೇಷಣೆ ನಡೆಸುವರು. ಆರು ತಿಂಗಳಿಗೊಮ್ಮೆಯಂತೆ ವರ್ಷದಲ್ಲಿ ಎರಡು ಬಾರಿ ಕಾಲೇಜು ಶಿಕ್ಷಣ ಇಲಾಖೆಗೆ ಕಾಲೇಜುಗಳ ಬಗ್ಗೆ ವರದಿ ಹೋಗುತ್ತದೆ. ಇದಕ್ಕಾಗಿ ಎಸ್‌ಕ್ಯೂಎಸಿ ವಿಭಾಗವು `ವಾಸ್ತವ ಸ್ಥಿತಿ ಮೌಲ್ಯಮಾಪನ~ ಎಂಬ ಯೋಜನಾ ಪಟ್ಟಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ಅರ್ಧವಾರ್ಷಿಕ ಹಾಗೂ ವಾರ್ಷಿಕ ಎಂದು ಎರಡು ವರದಿಗಳನ್ನು ಸಿದ್ಧಪಡಿಸಲಾಗುತ್ತದೆ. ಮೌಲ್ಯಮಾಪನದ ನಂತರ ಪ್ರತಿ ಕಾಲೇಜಿಗೂ ಲೆವಲ್-1 ದಿಂದ ಲೆವಲ್-5ರವರೆಗೆ ಗ್ರೇಡ್ ನೀಡಲಾಗುತ್ತದೆ. ಕೇವಲ ಅಂಕ ನೀಡಲಿಕ್ಕೆಂದೇ ಈ ಮೌಲ್ಯಮಾಪನವಲ್ಲ. ಕೊರತೆಗಳನ್ನು ಗುರುತಿಸಿ ನಿವಾರಣೋಪಾಯದ ಸಲಹೆಯೂ ಲಭ್ಯ. ಇಲಾಖೆ ಸಿದ್ಧಪಡಿಸಿರುವ ಯೋಜನಾಪಟ್ಟಿ * ಕಾಲೇಜುಗಳ ವಾಸ್ತವ ಸ್ಥಿತಿಯ ವರದಿ ತಯಾರಿಸುವುದು. * ವಸ್ತುಸ್ಥಿತಿ ಅನ್ವಯ ಕ್ವಾಲಿಟಿ ಫೆಸಿಲಿಟೇಟರ್‌ಗಳು ಹಾಗೂ ಎಸ್‌ಕ್ಯುಎಸಿ ಪ್ರತಿನಿಧಿಗಳು ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ಹಾಗೂ ವಿಶ್ಲೇಷಣೆ ನಡೆಸುವುದು. * ಕಾಲೇಜಿನ ಎಲ್ಲ ಪಾಲುದಾರರೊಂದಿಗೆ ಎರಡು ದಿನಗಳ ಭೇಟಿಯ ನಂತರ ಸಮಾಲೋಚನೆ ಹಾಗೂ ವಸ್ತುಸ್ಥಿತಿಯ ವಿಶ್ಲೇಷಣೆ ವರದಿ ಸಿದ್ಧಪಡಿಸುವುದು. * ಕಾಲೇಜಿನ ಸಾಮರ್ಥ್ಯ ಮತ್ತೂ ಉತ್ತಮಗೊಳಿಸಬೇಕಾದ ಅಂಶಗಳು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸಾಧಿಸಬಹುದಾದ ಮಾರ್ಗೋಪಾಯಗಳನ್ನು ಪಟ್ಟಿ ಮಾಡುವುದು. * ಈ ಎಲ್ಲ ಅಂಶಗಳ ಆಧಾರದ ಮೇಲೆ ಕಾಲೇಜು ಅರ್ಧ ವಾರ್ಷಿಕ ವರದಿ ಸಿದ್ಧಪಡಿಸಿ `ಎಸ್‌ಕ್ಯುಎಸಿ~ಗೆ ಸಲ್ಲಿಸುವುದು. * ವಾರ್ಷಿಕ ವರದಿ ಸಿದ್ಧಪಡಿಸುವುದು. * ಕ್ವಾಲಿಟಿ ಫೆಸಿಲಿಟೇಟರ್‌ಗಳು ಅರ್ಧವಾರ್ಷಿಕ ಹಾಗೂ ವಾರ್ಷಿಕ ವಾಸ್ತವ ವರದಿಯನ್ನಾಧರಿಸಿ ಮೌಲ್ಯಮಾಪನ ನಡೆಸುವುದು. * ಈ ವರದಿಯನ್ನಾಧರಿಸಿ ಕಾಲೇಜು ಶಿಕ್ಷಣ ಇಲಾಖೆಯ ರಾಜ್ಯ ಗುಣಮಟ್ಟ ಭರವಸೆ ಕೋಶವು ಪ್ರತಿ ಕಾಲೇಜಿಗೆ ಲೆವನ್-1ದಿಂದ ಲೆವಲ್-2ವರೆಗೆ ಗ್ರೇಡ್ ನೀಡುವುದು. ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಈ ಆಂತರಿಕ ಮೌಲ್ಯಮಾಪನ ಯೋಜನೆ ಜಾರಿಗೊಂಡಿದೆ. ವಾಸ್ತವ ಪರಿಸ್ಥಿತಿ ವಿಶ್ಲೇಷಣೆ (ಆ್ಯಸ್ ಈಸ್ ಅನಾಲಿಸಿಸ್) ಪ್ರಕ್ರಿಯೆ ಆರಂಭಗೊಂಡಿದ್ದು, ಜೂನ್‌ನಲ್ಲಿ ಗ್ರೇಡ್ ನೀಡಲಾಗುತ್ತದೆ ಎಂದು ಯೋಜನೆಯ ತರಬೇತುದಾರ ಪ್ರೊ.ಶೇಷಗಿರಿ ಹೇಳುತ್ತಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಫಲಿತಾಂಶ, ಬೋಧನಾ ವಿಧಾನ, ವಿದ್ಯಾರ್ಥಿಗಳ ಕಲಿಕಾ ಮಟ್ಟ, ಸಮುದಾಯ ಕಾರ್ಯಚಟುವಟಿಕೆ, ಶಿಕ್ಷಕರ ಸಾಮರ್ಥ್ಯ ಆಧರಿಸಿ ಗುಣಮಟ್ಟವನ್ನು ನಿರ್ಧರಿಸಲಾಗುತ್ತದೆ. ಗ್ರೇಡ್ ನೀಡಿದ ನಂತರ ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಕ್ಷಕ ಸಿಬ್ಬಂದಿಯೊಂದಿಗೆ ಕ್ವಾಲಿಟಿ ಫೆಸಿಲಿಟೇಟರ್‌ಗಳು ಸಭೆ ನಡೆಸಿ ಗುಣಮಟ್ಟ ಸುಧಾರಣೆಗೆ ಅಗತ್ಯವಾದ 10 ಕ್ರಮಗಳನ್ನು ತಿಳಿಸುತ್ತಾರೆ. ಆರು ತಿಂಗಳೊಳಗೆ ಆ ಕ್ರಮಗಳನ್ನು ಅಳವಡಿಸಲಾಗಿದೆಯೇ ಎಂದು ಮುಂದಿನ ಭೇಟಿಯಲ್ಲಿ ಪರಿಶೀಲಿಸಲಾಗುತ್ತದೆ. ಪ್ರತಿ ಕಾಲೇಜಿಗೂ ಈ ಗ್ರೇಡ್ ಕಡ್ಡಾಯ. ಗುಣಮಟ್ಟದ ಸುಧಾರಣೆಗೆ ಎದುರಾಗುತ್ತಿರುವ ನೈಜ ಸವಾಲುಗಳೇನು ಎಂದು ತಿಳಿದುಕೊಂಡು ನಿರಂತರವಾಗಿ ಕಾಲೇಜು ಶಿಕ್ಷಣದಲ್ಲಿ ಸುಧಾರಣೆ ತರುವ ಅಗತ್ಯವಿದೆ. ಆದ್ದರಿಂದ ಕಾಲೇಜು ಶಿಕ್ಷಣ ಇಲಾಖೆಯ ರಾಜ್ಯ ಗುಣಮಟ್ಟ ಭರವಸೆ ಕೋಶವು `ಸಿಇಕ್ಯೂಇ~ ಎಂಬ ಕಾರ್ಯಕ್ರಮದ ಮೂಲಕ ವರ್ಷಕ್ಕೊಮ್ಮೆ ಕಾಲೇಜು ಮೌಲ್ಯಮಾಪನ ಪದ್ಧತಿ ಜಾರಿಗೆ ತಂದಿದೆ ಎಂದು ಹೇಳುತ್ತಾರೆ ಕಾಲೇಜು ಶಿಕ್ಷಣ ಇಲಾಖೆಯ ಶೈಕ್ಷಣಿಕ ಹಾಗೂ ಗುಣಮಟ್ಟ ವಿಭಾಗದ ರಾಜ್ಯ ಜಂಟಿ ನಿರ್ದೇಶಕಿ ಡಾ.ಬಿ.ಎಲ್ ಭಾಗ್ಯಲಕ್ಷ್ಮಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.